ಚಿಕ್ಕೋಡಿ: ಜಮೀನಿನಲ್ಲಿ ರಸ್ತೆ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ಗಲಾಟೆ ನಡೆದಿದ್ದು, ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಹೊರವಲಯದ ನೇಜ – ಶಮನೇವಾಡಿ ರಸ್ತೆ ಬಳಿ ಘಟನೆ ನಡೆದಿದೆ. ಸುನೀಲ್ ಖೋತ್ (45) ಕೊಲೆಯಾದವನು.
ಸುನೀಲ್ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಮನೇವಾಡಿ ಗ್ರಾಮದ ನಿವಾಸಿಯಾಗಿದ್ದು, ಹಲವು ವರ್ಷಗಳಿಂದ ರಸ್ತೆ ವಿಚಾರವಾಗಿ ಕಲಹ ಇತ್ತು. ಇಂದು ದೂರು ನೀಡಲು ಪೊಲೀಸ್ ಠಾಣೆಗೆ ಅಣ್ಣ- ತಮ್ಮಂದಿರು ತೆರಳಿದ್ದರು. ಸಂಜೆ ರಾಜಿ ಪಂಚಾಯ್ತಿ ಮಾಡೋಣ ಎಂದೇಳಿ ಪೊಲೀಸರು ಕಳುಹಿಸಿದ್ದರು. ಸಂಜೆ ಮತ್ತೆ ಗಲಾಟೆ ಪ್ರಾರಂಭವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಪ್ರಕರಣ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ಥಳಕ್ಕೆ ಸದಲಗಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ