Site icon Vistara News

ಚಿತ್ರದುರ್ಗದ ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದವರ ಬಂಧನ

ಗಾಂಜಾ

ಚಿತ್ರದುರ್ಗದಲ್ಲಿ ವಶಪಡಿಸಿಕೊಂಡ ಗಾಂಜಾದೊಂದಿಗೆ ಪೊಲೀಸರು

ಚಿತ್ರದುರ್ಗ: ಪ್ರವಾಸಿ ತಾಣ ಚಿತ್ರದುರ್ಗದಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಂಡರೂ ಗಾಂಜಾ ಮಾರಾಟ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಗಾಂಜಾ ಮಾರುತ್ತಿದ್ದ ಇಬ್ಬರ ಜತೆಗೆ, ಗಾಂಜಾ ಸೇವಿಸುತ್ತಿದ್ದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ‌. ಆಂಧ್ರದ ವಿಶಾಖಪಟ್ಟಣಕ್ಕೆ ಹೋಗಿ ಅಲ್ಲಿಂದ ಬಳ್ಳಾರಿ ಮಾರ್ಗವಾಗಿ ಗಾಂಜಾ ತರಲಾಗುತ್ತಿದ್ದು, ಮಾರಾಟ ಮಾಡುವಾಗ ಪೊಲೀಸರ ಅತಿಥಿಯಾಗಿದ್ದಾರೆ. ಸೋಮಶೇಖರ್ ಅಲಿಯಾಸ್ ಡೆಡ್ಲಿ ಸೋಮ, ಭರತ್ ಅಲಿಯಾಸ್ ಬೆಣ್ಣೆ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ | ಹುಲಿ ಉಗುರು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗ ಬಂಧನ

ಒಣ ಗಾಂಜಾ ಸೊಪ್ಪನ್ನು ಇವರು ಚಿತ್ರದುರ್ಗ ನಗರದ ಜಟ್ ಪಟ್ ನಗರ ಹಾಗೂ ಕುರುಬರ ಗುಡ್ಡದ ನಡುವಿನ ಸ್ಮಶಾನದ ನಿರ್ಜನ ಪ್ರದೇಶದಲ್ಲಿ ಮಾರುತ್ತಿದ್ದರು‌. ಖಚಿತ ಮಾಹಿತಿ ಮೇರೆಗೆ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ನಯೀಂ ಅಹ್ಮದ್ ನೇತೃತ್ವದ ತಂಡ ದಾಳಿ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿದೆ. ಮಾರುತ್ತಿದ್ದವರ ಜತೆಗೆ, ಗಾಂಜಾ ಸೇವಿಸುತ್ತಿದ್ದ ಆರು ಜನರನ್ನು ಸಹ ಬಂಧಿಸಲಾಗಿದೆ. ಬಂಧಿತರಿಂದ ₹80 ಸಾವಿರ ಮೌಲ್ಯದ 8 ಕೆ.ಜಿ. ಗಾಂಜಾ, ಒಂದು ಆಟೋ ಹಾಗೂ ₹2,000 ನಗದು ವಶಪಡಿಸಿಕೊಳ್ಳಲಾಗಿದೆ.

ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಆರೋಪಿತರು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಎಸ್‌ಪಿ ಕೆ. ಪರಶುರಾಮ್ ಪ್ರತಿಕ್ರಿಯಿಸಿ, ಈ ಘಟನೆಗೆ ಸಂಭಂದಿಸಿದಂತೆ ಆರೋಪಿತರಲ್ಲಿ ಒಬ್ಬನಾದ ಸೀನ ಅಲಿಯಾಸ್ ಜಪಾನ್ ಸೀನ ಪರಾರಿಯಾಗಿದ್ದಾನೆ ಎಂದಿದ್ದಾರೆ. ನಗರದಲ್ಲಿ ಗಾಂಜಾ ಹಾವಳಿ ಹೆಚ್ಚಾಗಿರುವುದು ಕಾಲೇಜು ವಿದ್ಯಾರ್ಥಿಗಳ ಪೋಷಕರನ್ನು ಚಿಂತೆಗೀಡು ಮಾಡಿದೆ.

ಇದನ್ನೂ ಓದಿ | Drug peddler ಬಂಧನ! ₹20 ಲಕ್ಷ ಮೌಲ್ಯದ ಡ್ರಗ್ಸ್‌ ವಶ

Exit mobile version