ಚಿತ್ರದುರ್ಗ: ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣದ (POCSO case) ವಿಚಾರಣೆಯನ್ನು ಜೂನ್ 3ಕ್ಕೆ ಮುಂದೂಡಿ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ಹೈಕೋರ್ಟ್ ಆದೇಶದಂತೆ ಪೊಕ್ಸೋ ವಿಚಾರಣೆಯನ್ನು ನ್ಯಾಯಾಲಯ ಮತ್ತೆ ಕೈಗೆತ್ತಿಕೊಂಡಿದ್ದು, ಸಾಕ್ಷಿ ವಿಚಾರಣೆಗೆ ಆರೋಪಿ ಪರ ವಕೀಲ ಕೆ.ಬಿ.ಕೆ.ಸ್ವಾಮಿ ಎರಡು ದಿನಗಳ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಿದೆ.
ಸಾಕ್ಷಿ ವಿಚಾರಣೆಗೆ ಸರ್ಕಾರಿ ಅಭಿಯೋಜಕ ಜಗದೀಶ್ ಅವಕಾಶ ಕೇಳಿದಾಗ, ಆರೋಪಿ ಪರ ವಕೀಲ ಕೆ.ಬಿ.ಕೆ.ಸ್ವಾಮಿ ಎರಡು ದಿನಗಳ ಕಾಲಾವಕಾಶ ಕೇಳಿದರು. ಹೀಗಾಗಿ ಉಭಯ ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಜಿ.ಸಿ ಹಡಪದ ಅವರು ಸಾಕ್ಷಿ ವಿಚಾರಣೆಯನ್ನು ಜೂನ್ 3ಕ್ಕೆ ಮುಂದೂಡಿದ್ದಾರೆ.
ಪೋಕ್ಸೊ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಮುರುಘಾ ಶ್ರೀಗಳನ್ನು, ಶುಕ್ರವಾರ ನಗರದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ಏ.29ರಂದು ಮುರುಘಾ ಶರಣರು ನ್ಯಾಯಾಲಯಕ್ಕೆ ಶರಣಾಗಿದ್ದರು. ಮುರುಘಾ ಶ್ರೀಗಳಿಗೆ (Murugha Seer) ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಏ.23ರಂದು ರದ್ದು ಮಾಡಿ, ಶರಣಾಗತಿಯಾಗುವಂತೆ ಸೂಚಿಸಿತ್ತು. ಹೀಗಾಗಿ ಶ್ರೀಗಳು ಚಿತ್ರದುರ್ಗ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಮುಂದೆ ಶರಣಾಗಿದ್ದರು. ಅವರಿಗೆ ಮೇ 27ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶ ಎಸ್.ಎನ್.ಕಲ್ಕಣಿ ಆದೇಶ ನೀಡಿದ್ದರು.
ಪೋಕ್ಸೋ ಕೇಸ್ ವಿಚಾರಣೆ ಮುಗಿದು ತೀರ್ಪು ಬರುವವರೆಗೂ ಮುರುಘಾ ಶ್ರೀಗಳನ್ನು ನ್ಯಾಯಾಂಗ ಬಂಧನದಲ್ಲಿಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿ, ಒಂದು ವಾರದೊಳಗೆ ಶರಣಾಗತಿ ಆಗುವಂತೆ ಶ್ರೀಗಳಿಗೆ ಸೂಚಿಸಿತ್ತು. ಹೀಗಾಗಿ ಶ್ರೀಗಳು ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗಿದ್ದರು. ಮೇ 27ರಂದು ನ್ಯಾಯಾಂಗ ಬಂಧನ ಮುಗಿದ ಹಿನ್ನೆಲೆಯಲ್ಲಿ ಶ್ರೀಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ, ಪ್ರಕರಣದ ಅಧಿಕೃತ ಚಾರ್ಜ್ ಶೀಟ್ ಲಭ್ಯವಿಲ್ಲದ ಕಾರಣ ಇಂದಿಗೆ (ಮೇ 31) ವಿಚಾರಣೆ ಮುಂದೂಡಲಾಗಿತ್ತು.
2022 ಆಗಸ್ಟ್ 31 ರಂದು ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್ 1ರಂದು ಶ್ರೀಗಳ ಬಂಧನವಾಗಿತ್ತು. ಸುಮಾರು 14 ತಿಂಗಳ ಕಾಲ ಜೈಲಿನಲ್ಲಿದ್ದ, ಶ್ರೀಗಳು 2023 ನವೆಂಬರ್ 16ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಆದರೆ, ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದ್ದರಿಂದ ಶ್ರೀಗಳು ಮತ್ತೆ ಜೈಲು ಸೇರುವಂತಾಗಿತ್ತು.
ನಾಲ್ಕು ತಿಂಗಳಲ್ಲಿ ವಿಚಾರಣೆ ಮುಗಿಸಲು ಚಿತ್ರದುರ್ಗದ ಕೋರ್ಟ್‌ಗೆ ಸುಪ್ರೀಂ ಕೋರ್ಟ್ ಈಗಾಗಲೇ ಸೂಚನೆ ನೀಡಿದ್ದು, ಸಾಕ್ಷಿಗಳ ವಿಚಾರಣೆ ಮುಗಿಯುವ ತನಕ ಶ್ರೀಗಳು ನ್ಯಾಯಾಂಗ ಬಂಧನದಲ್ಲಿರಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು.
ಇದನ್ನೂ ಓದಿ | Self Harming: ಕಂಟ್ರಾಕ್ಟರ್ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ, ಮತ್ತೊಂದು ಸರ್ಕಾರಿ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಯಲಿಗೆ!