ಬೆಂಗಳೂರು: ಮೇಲ್ಮನೆ ಸದಸ್ಯರಾಗಿರುವ ಜೆಡಿಎಸ್ ನಾಯಕ ಸಿ.ಎನ್. ಮಂಜೇಗೌಡ (CN Manjegowda) ಅವರು ತಮ್ಮ ವಿರುದ್ಧ ನಕಾರಾತ್ಮಕ ಪರಿಣಾಮ ಬೀರಬಲ್ಲ ಯಾವುದೇ ಸುದ್ದಿ ಅಥವಾ ವಿಡಿಯೊವನ್ನು ಪ್ರಸಾರ ಮಾಡದಂತೆ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಮೂಲತಃ ಮೈಸೂರು ನಿವಾಸಿಯಾಗಿರುವ ೫೮ ವರ್ಷದ ಮಂಜೇಗೌಡರ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ ಅಥವಾ ವಿಡಿಯೊ ಪ್ರಸಾರ ಮಾಡಬಾರದು ಎಂದು ಬೆಂಗಳೂರಿನ ಪ್ರಧಾನ ನಗರ ಸಿವಿಲ್ ನ್ಯಾಯಾಧೀಶರ ಕೋರ್ಟ್ ಆದೇಶ ನೀಡಿದೆ.
ಸಿ.ಎನ್. ಮಂಜೇಗೌಡರು ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿದ್ದು, ಮೈಸೂರು-ಚಾಮರಾಜ ನಗರ ಕ್ಷೇತ್ರದಿಂದ ಸ್ಥಳೀಯಾಡಳಿತ ಸಂಸ್ಥೆಗಳಿಂದ ಮೇಲ್ಮನೆಗೆ ಆಯ್ಕೆಯಾದವರಾಗಿದ್ದಾರೆ. ಅವರು ಸಮಾಜದಲ್ಲಿ ಗೌರವಾನ್ವಿತರಾಗಿದ್ದು, ಪ್ರಸಿದ್ಧಿ ಮತ್ತು ಜನಪ್ರಿಯತೆಯನ್ನು ಹೊಂದಿದ್ದಾರೆ. ಇವರ ಗೌರವಕ್ಕೆ ಕುತ್ತು ತರುವ ಯಾವುದೆ ವಿಡಿಯೊ ಅಥವಾ ಸುದ್ದಿಯನ್ನು ಪ್ರಸಾರ ಮಾಡದಂತೆ ಎಲ್ಲಾ ಎಲೆಕ್ಟ್ರಾನಿಕ್ ಮಾಧ್ಯಮಗಳು ಮತ್ತು ಪತ್ರಿಕೆಗಳಿಗೆ ತಡೆಯಾಜ್ಞೆ ನೀಡಬೇಕು ಎಂದು ಸಿ.ಎನ್. ನಂಜೇಗೌಡರ ಪರವಾಗಿ ಕೋರಲಾಗಿತ್ತು. ಕೋರ್ಟ್ ಈ ನಿಟ್ಟಿನಲ್ಲಿ ನೀಡಿರುವ ತಡೆಯಾಜ್ಞೆಯ ಪ್ರತಿಗಳನ್ನು ವಕೀಲರಾದ ಗಿರೀಶ್ ಟಿ.ಆರ್ ಮತ್ತು ಲಕ್ಷ್ಮೀಮೂರ್ತಿ ಅವರು ಮಾಧ್ಯಮಗಳಿಗೆ ತಲುಪಿಸಿದ್ದಾರೆ.
ಏನಿದು ತಡೆಯಾಜ್ಞೆಯ ಮೂಲ?
ಕೋರ್ಟ್ ನೀಡಿರುವ ತಡೆಯಾಜ್ಞೆಯಲ್ಲಿರುವ ಮಾಹಿತಿಯ ಪ್ರಕಾರ, ಸಿ.ಎನ್. ಮಂಜೇಗೌಡರ ಖಾಸಗಿ ಭಾವಚಿತ್ರಗಳು ಮತ್ತು ವಿಡಿಯೊಗಳಿದ್ದು, ಅವುಗಳನ್ನು ಮಾಧ್ಯಮಗಳನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆಯಂತೆ. ನಂಜೇಗೌಡರು ಶುದ್ಧ ಚಾರಿತ್ರ್ಯವಂತರಾಗಿದ್ದು, ಇಂಥ ಯಾವುದೇ ಕೃತ್ಯಗಳಲ್ಲಿ ಭಾಗಿಯಾಗಿಲ್ಲ. ತಂತ್ರಾಂಶಗಳನ್ನು ಬಳಸಿಕೊಂಡು ಅವರ ಮಾನ ಕಳೆಯುವ ತಂತ್ರ ಇದಾಗಿರುವುದರಿಂದ ಯಾರೂ ಈ ತಂತ್ರಗಳಿಗೆ ಬಲಿ ಬೀಳಬಾರದು, ವಿಡಿಯೊ, ಚಿತ್ರಗಳನ್ನು ಪ್ರಸಾರ ಮಾಡಬಾರದು ಎಂದು ಕೋರಲಾಗಿತ್ತು.
ಕಳೆದ ಜನವರಿ ೯ರಂದು ಪರಿಚಿತನಾಗಿರುವ ರಾಜು ಎಂಬಾತ ಸಿ.ಎನ್. ಮಂಜೇಗೌಡರಿಗೆ ಕರೆ ಮಾಡಿ ಯೋಗೀಶ್ ಮತ್ತು ಮಹೇಶ್ ಎಂಬ ಇಬ್ಬರು ನಿಮ್ಮ ಜತೆ ಮಾತನಾಡಲು ಬಯಸುತ್ತಿದ್ದಾರೆ. ವಿಷಯ ತುಂಬ ಸೀರಿಯಸ್ ಆಗಿರುವಂತಿದೆ ಎಂದು ತಿಳಿಸಿದ್ದಾರೆ. ಅದೇ ದಿನ ಯೋಗೀಶ್ ಎಂಬಾತ ಪಕ್ಷದ ಕಾರ್ಯಕರ್ತರೊಬ್ಬರ ಮೂಲಕ ಮಂಜೇಗೌಡರಿಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾನೆ.
ಮಂಜೇಗೌಡರ ಕೆಲವು ಖಾಸಗಿ ಭಾವಚಿತ್ರಗಳು ಮತ್ತು ವಿಡಿಯೊಗಳು ನನ್ನ ಬಳಿ ಇವೆ. ವಿಡಿಯೊಗಳನ್ನು ಪ್ರಮುಖ ಟಿವಿ ಚಾನೆಲ್ ಗಳಲ್ಲಿ ಮತ್ತು ಭಾವಚಿತ್ರಗಳನ್ನು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು ಎಂದು ಆತ ಬೆದರಿಕೆಯೊಡ್ಡಿದ್ದಾನೆ. ಈ ನಡುವೆ ಮಾಧ್ಯಮಗಳಲ್ಲಿರುವ ಕೆಲವು ಮಂಜೇಗೌಡರ ಆಪ್ತರು ಕೂಡಾ ಮಾಧ್ಯಮ ಕಚೇರಿಗಳಿಗೆ ಸಿ.ಡಿ. ಬಂದಿರುವುದು ನಿಜ. ಅದರಲ್ಲಿ ನಿಮ್ಮ ಖಾಸಗಿ ಕ್ಷಣಗಳು ದಾಖಲಾಗಿವೆ. ಮಾಧ್ಯಮಗಳಲ್ಲಿ ಪ್ರಸಾರಕ್ಕಾಗಿಯೇ ಇವುಗಳನ್ನು ಕೊಡಲಾಗಿದೆ. ಇದೊಂದು ವೇಳೆ ಪ್ರಸಾರವಾದರೆ ನಿಮ್ಮ ಸ್ಥಾನಮಾನ, ಹೆಸರು ಹಾಗೂ ಪ್ರತಿಷ್ಠೆಗೆ ಧಕ್ಕೆ ಉಂಟಾಗಲಿದೆ. ಕೌಟುಂಬಿಕ ಮತ್ತು ಮದುವೆ ಸಂಬಂಧಗಳು ಮುರಿದು ಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದರೆನ್ನಲಾಗಿದೆ. ಜತೆಗೆ ಇಂಥ ವಿಡಿಯೊ ಮತ್ತು ಭಾವಚಿತ್ರಗಳು ಮಂಜೇಗೌಡರ ರಾಜಕೀಯ ಜೀವನದ ಮೇಲೂ ಪರಿಣಾಮ ಬೀರಬಹುದು ಎಂದು ಅಭಿಪ್ರಾಯಪಟ್ಟರೆನ್ನಲಾಗಿದೆ.
ʻʻಕೆಲವೊಂದು ಮಾಧ್ಯಮ ಸಂಸ್ಥೆಗಳು ಮಂತ್ರಿಗಳು, ಶಾಸಕರು, ಪ್ರಭಾವಿ ರಾಜಕಾರಣಿಗಳ ಲೈಂಗಿಕ ಹಗರಣದ ವಿಡಿಯೊ ಮತ್ತು ಭಾವಚಿತ್ರಗಳನ್ನು ಪ್ರಸಾರ ಮಾಡಿದ್ದನ್ನು ಗಮನಿಸಿದ್ದೇನೆ. ಮಂಜೇಗೌಡರ ಹೆಸರನ್ನು ಇದುವರೆಗೆ ಯಾರೂ ಪ್ರಸಾರ ಮಾಡಿಲ್ಲ. ಆದರೂ ಅವರ ಕ್ಷೇತ್ರದ ಕೆಲವರು ಕರೆ ಮಾಡಿ ಪ್ರಶ್ನೆ ಮಾಡುತ್ತಿದ್ದಾರೆ. ಮಂಜೇಗೌಡರ ಕುಟುಂಬವೂ ಮುಜುಗರದ ಸನ್ನಿವೇಶವನ್ನು ಎದುರಿಸುವಂತಾಗಿದೆ. ಇತ್ತೀಚೆಗೆ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಬರಾಕ್ ಒಬಾಮಾ, ರಾಣಿ ಎಲಿಜಬೆತ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ನಾಯಕರ ನಕಲಿ ವಿಡಿಯೊಗಳನ್ನು ಮಾಡಿ ವೈರಲ್ ಮಾಡಲಾಗಿದೆ. ಭಾರತದ ಕೆಲವು ರಾಜಕಾರಣಿಗಳದೂ ಅಂತಹುದೇ ವಿಡಿಯೊಗಳನ್ನು ಬಿಡುಗಡೆ ಮಾಡಲಾಗಿದೆ. ಇದೆಲ್ಲ ನಕಲಿ ಎಂದು ತಿಳಿಯದ ಅಮಾಯಕರು ಇದೇ ಸತ್ಯವೆಂದು ನಂಬುವ ಅಪಾಯವಿದೆ. ಹೀಗಾಗಿ ಅಂಥ ವಿಡಿಯೊಗಳನ್ನು, ಭಾವಚಿತ್ರಗಳನ್ನು ಪ್ರಸಾರ ಮಾಡಲು ಅವಕಾಶ ನೀಡಬಾರದುʼʼ ಎಂದು ಕೋರ್ಟ್‌ಗೆ ಮಾಡಿದ ಮನವಿಯಲ್ಲಿ ಕೋರಲಾಗಿತ್ತು.
ವಿಸ್ತಾರ ನ್ಯೂಸ್ ಕೂಡ ಕೋರ್ಟ್ ಆದೇಶಕ್ಕೆ ಬದ್ಧವಾಗಿದ್ದು, ಮಂಜೇಗೌಡರಿಗೆ ಸಂಬಂಧಿಸಿದ್ದು ಎನ್ನಲಾದ ಯಾವುದೇ ಅಸಭ್ಯ ವಿಡಿಯೊ, ಫೋಟೊಗಳನ್ನು ಪ್ರಕಟಿಸುತ್ತಿಲ್ಲ.
ಇದನ್ನೂ ಓದಿ | Santro Ravi case | ಸುಳ್ಳು ಕೇಸ್ ಹಾಕೋದ್ರಲ್ಲಿ ರವಿ Expert: ಮೊದಲ ಪತ್ನಿ ಕೊಲೆ ಬೆದರಿಕೆ ಹಾಕಿದ್ದಾಳೆಂದು FIR!