Site icon Vistara News

ʼಪ್ರತಾಪ್‌ ಸಿಂಹ ಅವರಿಗೆ ಮಾಹಿತಿ ಇರಲಿಲ್ಲ ಅದಕ್ಕೆ ಹೇಳಿದೆʼ: ಮೈಸೂರಲ್ಲಿ ಮತ್ತೆ ಶಾಸಕ VS ಸಂಸದ

Pratap simha vs ramdas clash

ಬೆಂಗಳೂರು: ಈಗಾಗಲೆ ಅನೇಕ ತಿಂಗಳುಗಳಿಂದ ನಡೆಯುತ್ತಿರುವ ಮೈಸೂರು ಶಾಸಕರು VS ಮೈಸೂರು-ಕೊಡಗು ಸಂಸದ ಜಟಾಪಟಿ ಪ್ರಧಾನಿ ಕಾರ್ಯಕ್ರಮವಾಗುವ ಸ್ಥಳದಲ್ಲೆ ಜಗಜ್ಜಾಹೀರಾಗಿದೆ. ಜೂನ್‌ 21ರಂದು ಮೈಸೂರು ಅರಮನೆ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಅಂತಾರಾಷ್ಟ್ರೀಯ ಯೋಗ ದಿಕನದ ಕಾರ್ಯಕ್ರಮದ ತಾಲೀಮಿನ ವೇಳೆ ಶಾಸಕ ಎಸ್‌.ಎ. ರಾಮದಾಸ್‌ ಹಾಗೂ ಸಂಸದ ಪ್ರತಾಪ್‌ ಸಿಂಹ ಪರಸ್ಪರರ ವಿರುದ್ಧ ಮಾತನಾಡಿದ್ದಾರೆ.

ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರತಿ ವರ್ಷ ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮವನ್ನು ಪ್ರತಿ ಬಾರಿ ಒಂದೊಂದು ಸ್ಥಳದಲ್ಲಿ ಆಚರಿಸಲಾಗುತ್ತದೆ. 2015ರಲ್ಲಿ ಮೊದಲ ಯೋಗ ದಿನವನ್ನು ನವದೆಹಲಿಯ ರಾಜಪಥದಲ್ಲಿ, 2016ರಲ್ಲಿ ಎಡನೇ ಯೋಗ ದಿನವನ್ನು ಚಂಡೀಗಢದಲ್ಲಿ, 2017ರಲ್ಲಿ ಮೂರನೇ ಯೋಗ ದಿನವನ್ನು ಲಖನೌನಲ್ಲಿ, 2018ರಲ್ಲಿ ನಾಲ್ಕನೇ ಯೋಗ ದಿನವನ್ನು ಡೆಹರಾಡೂನ್‌ನಲ್ಲಿ, ಹಾಗೂ 2019ರಲ್ಲಿ ಐದನೇ ಯೋಗದಿನವನ್ನು ರಾಂಚಿಯಲ್ಲಿ ಪ್ರಧಾನಿ ಆಚರಿಸಿದರು. ಕೋವಿಡ್‌ ಕಾರಣಕ್ಕೆ 2020 ಹಾಗೂ 2021ರಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ನಡೆಯಲಿಲ್ಲ. ಇದೀಗ ಮೂರು ವರ್ಷದ ನಂತರ ಮೈಸೂರಿನಲ್ಲಿ ಯೋಗ ದಿನ ನಡೆಯುತ್ತಿದೆ.

ಈ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿ ತಮ್ಮದೇ ಎಂದು ಸಂಸದ ಪ್ರತಾಪ್‌ ಸಿಂಹ ಓಡಾಡುತ್ತಿದ್ದಾರೆ. ಇತ್ತೀಚೆಗೆ ಯೋಗ ದಿನದ ಪರಿಶೀಲನೆ ವೇಳೆಯಲ್ಲೂ, ಯೋಗ ದಿನ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಪಾತ್ರ ಏನೂ ಇಲ್ಲ, ಎಲ್ಲವೂ ಕೇಂದ್ರ ಸರ್ಕಾರದ ಕಾರ್ಯಕ್ರಮ ಎಂದು ಹೇಳಿದ್ದರು.

ಈ ವರ್ಷ ಯೋಗ ದಿನಕ್ಕೆ ಮೈಸೂರು ಅರಮನೆ ಮೈದಾನವನ್ನು ಗುರುತಿಸಲಾಗಿದೆ. ಈ ಸ್ಥಳದಲ್ಲಿಯೇ ಪ್ರಧಾನಿ ಮೋದಿ ಭಾಗವಹಿಸುತ್ತಿದ್ದು, ಕಳೆದ ಅನೇಕ ದಿನಗಳಿಂದ ತಾಲೀಮು ನಡೆಯುತ್ತಿದೆ. ಸಾರ್ವಜನಿಕರು ಹಾಗೂ ಯೋಗ ಆಸಕ್ತರು ನೋಂದಣಿಯನ್ನೂ ಮಾಡುತ್ತಿದ್ದಾರೆ. ತಾಲೀಮಿನ ನಂತರ ಭಾನುವಾರ ಮಾಧ್ಯಮಗಳಿಗೆ ಹೇಳಿಕೆ ನೀಡುವ ಸಂದರ್ಭದಲ್ಲಿ ಪ್ರತಾಪ್‌ ಸಿಂಹ ಹಾಗೂ ರಾಂದಾಸ್‌ ನಡುವೆ ಭಿನ್ನಾಭಿಪ್ರಾಯ ಬಹಿರಂಗಗೊಂಡಿದೆ.

ತಾಲೀಮಿನ ಕುರಿತು ಪ್ರತಾಪ್‌ ಸಿಂಹ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದರು. ಒಬ್ಬ ಯೋಗಪಟು ನಿಲ್ಲಬೇಕಾದರೆ 6X6 ಅಡಿ ಸ್ಥಳಾವಕಾಶ ಬೇಕು. ಅದರ ಆಧಾರದಲ್ಲಿ 7-8 ಸಾವಿರ ಜನರು ಭಾಗವಹಿಸಬಹುದು ಎಂದು ತಿಳಿಸಿ ಮಾತನಾಡುತ್ತಿದ್ದರು. ಪಕ್ಕದಲ್ಲೆ ಇದ್ದ ರಾಮದಾಸ್‌ ಮಧ್ಯಪ್ರವೇಶಿಸಿ, ಈಗಾಗಲೆ 13 ಸಾವಿರ ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಲು ಮುಂದಾದರು. ತಕ್ಷಣವೇ ಕೋಪಗೊಂಡ ಪ್ರತಾಪ್‌ ಸಿಂಹ, “ರಾಮದಾಸ್‌ಜಿ, ನಾನು ಮಾತನಾಡುತ್ತಿದ್ದೇನೆ. ದಯವಿಟ್ಟು ಸಮಾಧಾನದಲ್ಲಿರಬೇಕು” ಎಂದು ಮಾತು ಮುಂದುವರಿಸಿದ್ದಾರೆ. ಇದು ಇಬ್ಬರ ನಡುವಿನ ಭಿನ್ನಾಭಿಪ್ರಾಯವನ್ನು ಬಹಿರಂಗಗೊಳಿಸಿತು. ನಂತರ ರಾಮದಾಸ್‌ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ | ಯೋಗ ದಿನಕ್ಕೆ ಮೋದಿ: ಸಿಎಂ ಬೊಮ್ಮಾಯಿ ಜತೆ ಪ್ರಧಾನಿ ಸಭೆ

“ನಾನು ಯಾಕೆ ಹಾಗೆ ಹೇಳಿದೆ ಎಂದರೆ, ಇವತ್ತು ಪ್ರತಾಪ್‌ ಸಿಂಹ ಅವರು ಕಾರ್ಯಕ್ರಮಕ್ಕೆ ಬಂದಿದ್ದಾರೆ. ನಮಗೆ ಈಗಾಗಲೆ ಎಷ್ಟು ಜನಕ್ಕೆ ಅವಕಾಶ ನೀಡಲು ಆದೇಶ ಸಿಕ್ಕಿದೆ ಎನ್ನುವುದು ಅವರಿಗೆ ಗೊತ್ತಿರಲಿಲ್ಲ. ಅದಕ್ಕೇ ನಾನು ಕ್ಲಾರಿಫೈ ಮಾಡಿದೆ. ಅದು ಬಿಟ್ಟು ನಾನು ಈ ವಿಚಾರದಲ್ಲಿ ಮಾಧ್ಯಮಗಳ ಮುಂದೆ ಬಂದಿಲ್ಲ. ಹಿಂದೆ ನಿಂತು ಕೆಲಸ ಮಾಡುವವರು ನಾವು. ಉಳಿದಂತೆ ಎಲ್ಲ ಮಾಹಿತಿಗಳನ್ನೂ ಜಿಲ್ಲಾ ಉಸ್ತುವಾರಿ ಸಚಿವರೇ ಕೊಡುತ್ತಾರೆ” ಎಂದು ರಾಮದಾಸ್‌ ಹೇಳಿದರು.

ಈ ಹಿಂದೆಯೂ ಅನೇಕ ಬಾರಿ ಸಂಸದ ಹಾಗೂ ಮೈಸೂರಿನ ಶಾಸಕರುಗಳ ನಡುವೆ ಜಟಾಪಟಿ ನಡೆದೇ ಇದೆ. ಇದೇ ವರ್ಷದ ಜನವರಿಯಲ್ಲಿ ಮೈಸೂರಿನಲ್ಲಿ ಕೊಳವೆ ಮೂಲಕ ಗ್ಯಾಸ್‌ ಸರಬರಾಜು ಮಾಡುವ ಯೋಜನೆ ಕುರಿತು ಜಟಾಪಟಿ ನಡೆದಿತ್ತು. ಕೇಂದ್ರ ಸರ್ಕಾರದ ಮನೆಗಳಿಗೆ ನೇರ ಗ್ಯಾಸ್ ಪೈಪ್‍ಲೈನ್ ಮತ್ತು ಕೇಬಲ್ ಅಳವಡಿಕೆಗೆ ಶಾಸಕ ರಾಮದಾಸ್ ವಿರೋಧಿಸಿದ್ದರು. ಕೆ.ಆರ್. ಕ್ಷೇತ್ರದಲ್ಲಿ ಉತ್ತಮ ರಸ್ತೆ ಮಾಡಿದ್ದೇವೆ. ಈಗ ಅದನ್ನು ಅಗೆದು ಅನಿಲ ಪೈಪ್‍ಲೈನ್ ಹಾಕುವುದು ಬೇಡ. ಜನರ ಹಿತದೃಷ್ಟಿಯಿಂದ ಗ್ಯಾಸ್ ಪೈಪ್‍ಲೈನ್‍ಗೆ ಅನುಮತಿ ಕೊಡಬಾರದು ಅಂತ ಮೈಸೂರು ಪಾಲಿಕೆ ಆಯುಕ್ತರಿಗೆ ರಾಮದಾಸ್ ಪತ್ರ ಬರೆದಿದ್ದರು. ಇದೇ ಅಭಿಪ್ರಾಐವನ್ನು ಬಿಜೆಪಿಯ ಮತ್ತೊಬ್ಬ ಶಾಸಕ ನಾಂಗೇಂದ್ರ ಸಹ ವ್ಯಕ್ತಪಡಿಸಿದ್ದರು.

ಇದಕ್ಕೆ ಕೋಪಗೊಂಡಿದ್ದ ಪ್ರತಾಪ್‌ ಸಿಂಹ, ಕಾಂಗ್ರೆಸ್-ಜೆಡಿಎಸ್‍ನವರೇ ವಿರೋಧಿಸಿಲ್ಲ. ನಮ್ಮದೇ ಶಾಸಕರು ವಿರೋಧಿಸ್ತಾರೆ. ರಾಮದಾಸ್ ಮೋದಿಗಿಂತ ಸೀನಿಯರ್ರಾ..? ಬುದ್ದಿವಂತರು, ಜ್ಞಾನಿಗಳಾ..? ಬ್ಯಾನರ್‌ನಲ್ಲಿ ಮೋದಿ ಫೋಟೋ ಹಾಕಿಕೊಂಡು ಉತ್ಸವ ಮಾಡಿದರೆ ಸಾಲುವುದಿಲ್ಲ ಎಂದು ಹೇಳಿದ್ದರು. ಕೌನ್ಸಿಲ್‌ ಸಭೆಯಲ್ಲೂ ಇದೇ ಜಟಾಪಡಿ ನಡೆದು ಸಭೆಯನ್ನು ಮುಂದೂಡಲಾಗಿತ್ತು. ಎಲ್ಲ ಕೆಲಸ ಬಿಟ್ಟು ಮೀಟಿಂಗ್‌ಗೆ ಬಂದರೆ ಕ್ಯಾನ್ಸಲ್‌ ಮಾಡುತ್ತೀರ ಎಂಬ ಪ್ರತಾಪ್‌ ಸಿಂಹ ಮಾತಿಗೆ ಮೇಯರ್‌ ಸುನಂದಾ ಫಾಲನೇತ್ರ ಕಣ್ಣೀರು ಸುರಿಸಿದ್ದರು.

ಮೈಸೂರು ಮಹಾರಾಜರನ್ನು ಬಿಟ್ಟರೆ ಅತಿ ಹೆಚ್ಚು ಮತಗಳಿಂದ ಗೆದ್ದಿರೋದು ನಾನು. ನನ್ನಿಂದಲೇ ಮೈಸೂರಿನ ಅಭಿವೃದ್ಧಿ ಆಗುತ್ತಿದೆ. ನಿಮ್ಮ ಕ್ಷೇತ್ರಗಳಲ್ಲೆ ಸಾಕಷ್ಟು ಸಮಸ್ಯೆಗಳಿವೆ. ಶಾಸಕರು ರಿಯಲ್‌ ಎಸ್ಟೇಟ್‌ ಮಾಡಲಿ, ಅದುಬಿಟ್ಟು ಕ್ಷೇತ್ರವೇ ತಮ್ಮದು ಎನ್ನುವುದು ಬೇಡ ಎಂದು ಸುದ್ದಿಗೋಷ್ಠಿ ನಡೆಸಿ ಹರಿಹಾಯ್ದಿದ್ದರು.

ಆನಂತರ ಕೆಲಕಾಲ ತಣ್ಣಗಾಗಿದ್ದ ಶೀತಲ ಸಮರ ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಕೆಲ ದಿನಗಳಿರುವಂತೆ ಬಹಿರಂಗಗೊಂಡಿದೆ.

ಇದನ್ನೂ ಓದಿ | ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜಾಗುತ್ತಿದೆ ಮೈಸೂರು; ಯೋಗಾಭ್ಯಾಸ ಪ್ರಾರಂಭ

Exit mobile version