Site icon Vistara News

CM ಬಸವರಾಜ ಬೊಮ್ಮಾಯಿ ತಲೆ ಮೇಲೆ ಜೂನ್‌ 27ರ ತೂಗುಗತ್ತಿ !

basavaraj bommai again in trouble regarding 2A reservation

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಚುನಾವಣಾ ವರ್ಷದಲ್ಲಿ ಮತ್ತೊಂದು ತೂಗುಗತ್ತಿ ಎದುರಾಗುವ ಎಲ್ಲಸ ಆಧ್ಯತೆ ಗೋಚರಿಸಿದೆ. ಜೂನ್‌ 27ರಿಂದ ಮತ್ತೆ ಹೋರಾಟಕ್ಕೆ ಚಾಲನೆ ನೀಡುವುದಾಗಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿರುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ.

ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬಹುದೊಡ್ಡ ಹೋರಾಟ ಇದಕ್ಕಾಗಿಯೇ ನಡೆದಿತ್ತು. ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಬಸವಜಯಮೃತ್ಯುಂಜಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌ ಸೇರಿ ಅನೇಕರು ಪಾದಯಾತ್ರೆ ನಡೆಸಿದ್ದರು. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಿರಂತರ ಪ್ರತಿಭಟನೆಗಳನ್ನೂ ನಡೆಸಲಾಗಿತ್ತು. ಕೊನೆಗೆ, ಮೀಸಲಾತಿಯನ್ನು ಸೆಪ್ಟೆಂಬರ್‌ 15ರೊಳಗೆ ಕಲ್ಪಿಸುವುದಾಗಿ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಗಿತ್ತು.

ಇದನ್ನೂ ಓದಿ | ಲಿಂಗಾಯತ ಧರ್ಮ ನಾವು ರಾಜಕೀಯಕ್ಕೆ ಬಳಸುವುದಿಲ್ಲ: ಎಂ.ಬಿ.ಪಾಟೀಲ್

ನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗಲೂ ಈ ಕುರಿತು ನೆನಪಿಸಿ ಎಚ್ಚರಿಕೆ ನೀಡಲಾಗಿತ್ತು. ಕೂಡಲಸಂಗಮದಿಂದ ಬೆಂಗಳೂರು ಪಾದಯಾತ್ರೆಗೆ ಒಂದು ವರ್ಷವಾದ ಸಂದರ್ಭದಲ್ಲಿ ಜನವರಿಯಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು. ಏಪ್ರಿಲ್‌ 15ರೊಳಗೆ ಮೀಸಲಾತಿ ನೀಡುವುದಾಗಿ ಬೊಮ್ಮಾಯಿ ಹೇಳಿದ್ದರು. ಆದರೆ ಆಗಲೂ ಈಡೇರದಿರುವ ಕಾರಣಕ್ಕೆ ಮುಂದಿನ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಸ್ವಾಮೀಜಿ ತಿಳಿಸಿದ್ದರು.

ಇದೀಗ ಮುಂದಿನ ಹಂತದ ಹೋರಾಟವನ್ನು ಘೋಷಣೆ ಮಾಡಿದ್ದಾರೆ. ಮೀಸಲಾತಿ ನೀಡುವ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಾಗೂ ಸಿಎಂ ಮನೆ ಮುಂದೆ ಜೂನ್ 27ರಂದು ಪ್ರತಿಭಟನೆ ಮಾಡಲಾಗುವುದೆಂದು ಬಸವಜಯಮೃತ್ಯುಂಜಯ ಸ್ವಾಮಿಜಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಂಗಳವಾರ ಪ್ರತಿಕ್ರಿಯೆ ನೀಡಿದ್ದ ಬೊಮ್ಮಾಯಿ, ಅವರು ನಮ್ಮ ಸ್ವಾಮೀಜಿ. ಅವರ ಜತೆಗೆ ಈಗಾಗಲೆ ಮಾತನಾಡಿದ್ದೇನೆ. ಮತ್ತೂ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದಿದ್ದರು. ಆದರೆ ಸ್ವಾಮೀಜಿಯವರು ತಮ್ಮ ಮಾತಿನಿಂದ ಹಿಂದೆ ಸರಿಯುವಂತೆ ಕಾಣುತ್ತಿಲ್ಲ. ಈ ಕುರಿತು ಬುಧವಾರ ಶಿಗ್ಗಾಂವಿಯಲ್ಲಿ ಮತ್ತೆ ಮಾತನಾಡಿದ್ದಾರೆ.

ಶಿಗ್ಗಾಂವಿಯ ಬಸವಣ್ಣ ದೇವಸ್ಥಾನದಲ್ಲಿ ನಡೆದ ಪಂಚಮಸಾಲಿ ಸಮಾಜದ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, ಈಗಾಗಲೇ ಹೋರಾಟ ಸಮಿತಿ ಪದಾಧಿಕಾರಿಗಳು ಸೋಮವಾರ ಮೀಸಲಾತಿ ವಿಷಯ ಕುರಿತು ಬಹಿರಂಗ ಪತ್ರವನ್ನು ಮಾಜಿ ಸಚಿವ ವಿನಯ ಕುಲಕರ್ಣಿ, ರಾಷ್ಟ್ರೀಯ ಅಧ್ಯಕ್ಷ ಕಾಶಪ್ಪನವರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸಲ್ಲಿಸಲಾಗಿದೆ.

ಇದನ್ನೂ ಓದಿ | ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ನಿರ್ವಹಣೆ ಕುರಿತು ಪರಿಶೀಲನೆ: ಸಿಎಂ ಬಸವರಾಜ ಬೊಮ್ಮಾಯಿ

ಈ ಹಿಂದೆ ಸಹ ಪಾದಯಾತ್ರೆ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗಿದೆ. ಈಗ ಜೂನ್ 27ರಂದು ಶಿಗ್ಗಾಂವಿಯ ಮುಖ್ಯಮಂತ್ರಿ ನಿವಾಸದೆದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯ ಪೂರ್ವಬಾವಿಯಾಗಿ ಜಿಲ್ಲೆಯಾದ್ಯಂತ ಜೂನ್ 22 ರಿಂದ ಹಳ್ಳಿಗಳಿಗೆ ತೆರಳಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಜನರ ಸಹಕಾರ ಕೋರುತ್ತೇವೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಗಟ್ಟಿ ನಿರ್ಧಾರ ಕೈಗೊಳ್ಳಲಿ ಎಂದರು.

ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿರುವ ಸ್ವಾಮೀಜಿ, ಸತ್ಯಾಗ್ರಹದಲ್ಲಿ ಅನಾಹುತ ಘಟಿಸಿದರೆ ಮುಖ್ಯಮಂತ್ರಿಗಳೆ ಹೊಣೆಯಾಗಲಿದ್ದಾರೆ. ಪಂಚಮಸಾಲಿ ಸಮಾಜದ ಋಣ ತೀರಿಸಲು ಮೀಸಲಾತಿ ಕೊಡುವ ದಿನಾಂಕವನ್ನ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಕೊಡುವುದಿಲ್ಲವೆಂದು ಸ್ಪಷ್ಟಪಡಿಸಬೇಕು. ಜೂನ್ 11 ರಂದು ಜಿಲ್ಲೆಯ ಎಲ್ಲಾ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ ಅಭಿಯಾನ ಕೈಗೊಳ್ಳಲಾಗಿದೆ ಎಂದರು.

ಈಗಾಗಲೆ ಎರಡು ಬಾರಿ 2ಎ ಮೀಸಲಾತಿ ಅಸ್ತ್ರದಿಂದ ಪಾರಾಗಿರುವ ಸರ್ಕಾರ ಮೂರನೇ ಬಾರಿ ಹೇಗೆ ನಿಭಾಯಿಸುತ್ತದೆ ಕಾದುನೋಡಬೇಕಿದೆ. ಚುನಾವಣೆ ವರ್ಷದಲ್ಲಿ ಈಂತಹ ಸೂಕ್ಷ್ಮ ವಿಚಾರ ನಿರ್ವಹಣೆ ಕಷ್ಟವಾಗಬಹುದು.

ಇದನ್ನೂ ಓದಿ | ಡಿ.ಕೆ. ಶಿವಕುಮಾರ್ ಬಾಯಲ್ಲಿ ನಿತ್ಯನಿರಂತರ ʼನಾರಾಯಣ ಜಪʼ

Exit mobile version