Site icon Vistara News

Acid attack | ಆ್ಯಸಿಡ್‌ ದಾಳಿಗೆ ಒಳಗಾದ ಯುವತಿಗೆ ಸರಕಾರಿ ಉದ್ಯೋಗ, ಮನೆ: ಸಿಎಂ ಬೊಮ್ಮಾಯಿ ಭರವಸೆ

acid attack

ಬೆಂಗಳೂರು: ಸರ್ಕಾರಿ ಕೆಲಸ ಹಾಗೂ ಮನೆ ಮಂಜೂರು ಮಾಡಿಕೊಡ ಬೇಕೆಂಬ ಆ್ಯಸಿಡ್ ದಾಳಿಗೊಳಗಾದ (Acid attack) ಮಹಿಳೆಯ ಬೇಡಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಸ್ಪಂದಿಸಿ, ಮಹಿಳೆಗೆ ಸರ್ಕಾರಿ ಕೆಲಸ ನೀಡುವ ಭರವಸೆ ನೀಡಿದರು.

ಕಳೆದ ಏಪ್ರಿಲ್ 28ರಂದು ಕಾಮಾಕ್ಷಿಪಾಳ್ಯ ಪೋಲಿಸ್‌ ಠಾಣೆ ವ್ಯಾಪ್ತಿಯ ಸುಂಕದಕಟ್ಟೆಯ ಮುತ್ತೂಟ್‌ ಫೈನಾನ್ಸ್‌ ಬಳಿ ಭಗ್ನಪ್ರೇಮಿ ನಾಗೇಶ್‌ ಎಂಬಾತ ಯುವತಿಯೊಬ್ಬಳ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ. ಯುವತಿ ಗಂಭೀರವಾಗಿ ಗಾಯಗೊಂಡು ಬಳಿಕ ಹೇಗೋ ಜೀವ ಉಳಿಸಿಕೊಂಡಿದ್ದರು. ಆ್ಯಸಿಡ್ ನಾಗೇಶ್‌ ಅಲಿಯಾಸ್‌ ಆ್ಯಸಿಡ್ ನಾಗನನ್ನು ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿತ್ತು.

ಈ ಯುವತಿಗೆ ಸರಕಾರಿ ಉದ್ಯೋಗ ಕೊಡಲಾಗುತ್ತದೆ ಎಂದು ಸರಕಾರ ಭರವಸೆ ನೀಡಲಾಗಿತ್ತು. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಅವರು ತಮ್ಮ ತಾಯಿ ಜತೆ ಮುಖ್ಯಮಂತ್ರಿಗಳ ನಿವಾಸದ ಬಳಿ ಬಂದು ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರನ್ನು ಮಮತೆಯಿಂದ ಮಾತನಾಡಿಸಿದ ಮುಖ್ಯಮಂತ್ರಿಗಳು ಉದ್ಯೋಗದ ಭರವಸೆ ನೀಡಿದರು. ಇವರಿಗೆ ಕೂಡಲೇ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯ ಮಂತ್ರಿಗಳು ಮಾಧ್ಯಮದವರಿಗೆ ತಿಳಿಸಿದರು.

ಫ್ಲ್ಯಾ ಟ್ ನೀಡಲು ಕ್ರಮ
ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಮಾಸಾಶನವನ್ನು 10 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಆಕೆ ಒಂದು ಮನೆಗೂ ಬೇಡಿಕೆ ಸಲ್ಲಿಸಿದ್ದು, ವಸತಿ ಸಚಿವರ ಬಳಿ ಮಾತನಾಡಿ, ಈ ಭಾಗದಲ್ಲಿ ಬಡವರಿಗಾಗಿ ನಿರ್ಮಿಸಲಾಗುತ್ತಿರುವ 40 ಸಾವಿರ ಫ್ಲ್ಯಾ ಟ್ ಗಳಲ್ಲಿ ಒಂದು ಫ್ಲ್ಯಾ ಟ್ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕನ್ನಡ ಡಿಂಡಿಮ ಬಾರಿಸಬೇಕು
ಸಮಸ್ತ ಕನ್ನಡ ನಾಡಿನ ಜನತೆಗೆ 67 ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದ ಮುಖ್ಯ ಮಂತ್ರಿಗಳು, ಅತ್ಯಂತ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ಆಚರಣೆ ಕೇವಲ ಆಚರಣೆಯಾಗಿ ಉಳಿಯದೆ ಪ್ರತಿಯೊಬ್ಬ ಕನ್ನಡಿಗರ ಹೃದಯಗಳಲ್ಲಿ ಕನ್ನಡ ಡಿಂಡಿಮ ಬಾರಿಸಬೇಕು. ಕನ್ನಡಿಗರು ಶಿಕ್ಷಣ, ಉದ್ಯೋಗ ಮತ್ತು ಎಲ್ಲಾ ರಂಗಗಳಲ್ಲಿ ಮುಂದೆ ಬರಲು ಹಲವಾರು ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಅದರ ಲಾಭವನ್ನು ಕನ್ನಡಿಗರು ಪಡೆಯಬೇಕು. ವಿಶೇಷವಾಗಿ ಯುವಕರು ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳಬೇಕು. ಪ್ರತಿ ಕನ್ನಡಿಗನೂ ಕನ್ನಡ ದ ಅಸ್ಮಿತೆ, ಸ್ವಾಭಿಮಾನದ ಬಗ್ಗೆ ಜಾಗೃತಿ ಮೂಡಿಸಿ ಎಲ್ಲಿದ್ದರೂ ಕನ್ನಡಿಗರಾಗಿಯೇ ಇರಬೇಕೆಂದರು.

Exit mobile version