Site icon Vistara News

ಸರ್.ಎಂ.ವಿ.ಗೆ ಸರ್ಕಾರದ ಗೌರವ: ಮುಂದಿನ ವರ್ಷದ ಆಚರಣೆ ಘೋಷಿಸಿದ ಸಿಎಂ ಬೊಮ್ಮಾಯಿ

engineers day cm bommai

ಬೆಂಗಳೂರು: ಎಂಜಿನಿಯರ್ಸ್‌ ದಿನದಂದು ಭಾರತರತ್ನ ಸರ್‌ ಎಂ. ವಿಶ್ವೇಶ್ವರಯ್ಯ ಅವರಿಗೆ ರಾಜ್ಯ ಸರ್ಕಾರ ವಿಶೇಷ ಗೌರವ ಘೋಷಣೆ ಮಾಡಿದೆ. ಮುಂದಿನ ವರ್ಷದಿಂದ ಸರ್ಕಾರದ ವತಿಯಿಂದ ಬೆಂಗಳೂರಿನಲ್ಲಷ್ಟೆ ಅಲ್ಲದೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಆಯೋಜನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕರ್ನಾಟಕ ಎಂಜಿನಿಯರಿಂಗ್ ಸೇವಾ ಸಂಘ ಹಾಗೂ ಕರ್ನಾಟಕ ಎಂನಿಯರುಗಳ ಸಂಘದ ಸಹಭಾಗಿತ್ವದಲ್ಲಿ ಕೆ.ಆರ್. ವೃತ್ತದ ಬಳಿ ಆಯೋಜಿಸಿದ್ದ ಅಭಿಯಂತರರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ ನಂತರ ಮಾತನಾಡಿದರು.

ಇದನ್ನೂ ಓದಿ | Engineers day | ಅರಣ್ಯಗಳ ಸಿವಿಲ್​ ಎಂಜಿನಿಯರ್​​ಗಳು ಯಾರೆಂದು ಗೊತ್ತಾ? ಅವರಿಗೂ ಶುಭ ಕೋರಬಹುದಾ?

ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನವನ್ನು ಎಂಜಿನಿಯರ್ಸ್ ದಿನವನ್ನಾಗಿ ಆಚರಿಸುತ್ತೇವೆ. ಈ ವರ್ಷ ಭಾರತ ಸರ್ಕಾರವೂ ಅಧ್ಯಯನ ಮಾಡಿ, ಎಲ್ಲ ರಾಜ್ಯಗಳಲ್ಲಿ ಸರ್ಕಾರವೇ ಅಭಿಯಂತರರ ದಿನಾಚರಣೆ ಆಚರಿಸಲು ಸೂಚಿಸಿದೆ. ನಮ್ಮ ರಾಜ್ಯದಲ್ಲಿ ಈಗಾಗಲೇ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.

ಸರ್.ಎಂ.ವಿಶ್ವೇಶ್ವರಯ್ಯ ಅವರು ಕನ್ನಡನಾಡಿನ ಅತ್ಯಂತ ಹೆಮ್ಮೆಯ ಪುತ್ರ. ಅವರು ಸದಾ ಕಾಲ ನಮಗೆ ಪ್ರೇರಣೆ. ಕನ್ನಡ ನಾಡು ಕಟ್ಟಿದ ಧೀಮಂತ ವ್ಯಕ್ತಿ. ಸರ್. ಎಂ.ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿಯೇ ಸ್ಫೂರ್ತಿ ಇದೆ. 90 ವರ್ಷಕ್ಕಿಂತ ಹೆಚ್ಚು ಕಾಲ ಬಾಳಿ, ಬದುಕಿದ ಅವರ ಬದುಕಿನ ಪ್ರತಿ ಕ್ಷಣವೂ ನಾಡಿನ, ದೇಶನ ಅಭಿವೃದ್ಧಿ, ಜನರ ಒಳಿತಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಇಷ್ಟು ವೈವಿಧ್ಯಮಯ ಜ್ಞಾನ ಮತ್ತು ಬದ್ಧತೆ ಇರುವ ವ್ಯಕ್ತಿಗಳು ಬಹಳ ಕಡಿಮೆ. ನಿಜವಾದ ದೇಶಭಕ್ತರು, ನಾಡು ಕಟ್ಟಿದವರು ಅವರು. ಕೇವಲ ಅಣೆಕಟ್ಟೆಗಳನ್ನು, ರಸ್ತೆಗಳನ್ನು ಮಾತ್ರ ನಿರ್ಮಾಣ ಮಾಡಲಿಲ್ಲ. ಇಂಧನ ಕ್ಷೇತ್ರದಲ್ಲಿಯೂ ಅವರ ಕೊಡುಗೆ ಅಪಾರ. ಬೃಹತ್ ಕಾರ್ಖಾನೆಗಳ ನಿರ್ಮಾಣವನ್ನು ಕೂಡ ಮಾಡಿದರು ಎಂದರು.

ಕರ್ನಾಟಕ ರಾಜ್ಯದ ಅಧೀನದಲ್ಲಿರುವ ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆ, ಸಿಮೆಂಟ್, ಕಾಗದ ಮುಂತಾದ ಕಾರ್ಖಾನೆಗಳನ್ನು ಮೈಸೂರು ಮಹಾರಾಜರ ಆಶ್ರಯದಲ್ಲಿ ಆರಂಭಿಸಿದರು. ಕೆ.ಆರ್.ಎಸ್ ಅಣೆಕಟ್ಟು ಕಟ್ಟಿ ನಮ್ಮ ಕಾವೇರಿ ಜಲಾನಯನ ಭಾಗದ ರೈತರಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಸಾಮಾಜಿಕ ಬದ್ಧತೆಯನ್ನು ಸಹ ಮೆರೆದ ಅವರು ಹೆಣ್ಣುಮಕ್ಕಳಿಗೆ ವಿಶೇಷವಾಗಿ ಕಾಲೇಜುಗಳ ನಿರ್ಮಾಣ, ಮೀಸಲಾತಿ, ಆರ್ಥಿಕ ವಲಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪ್ರಾರಂಭಿಸಿದರು. ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಕ್ರಿಯಾಶೀಲತೆ ಮೆರೆದಿದ್ದಾರೆ ಎಂದರು.

ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ಆನಂದ್ ಸಿಂಗ್, ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಕೆ.ಇ.ಎಸ್.ಎ. ಅಧ್ಯಕ್ಷ ಪೀತಾಂಬರಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ | Engineers Day | ನೀವು ನೆನಪಿನಲ್ಲಿಟ್ಟುಕೊಳ್ಳಲೇಬೇಕಾದ ವಿಶ್ವೇಶ್ವರಯ್ಯರ ಹತ್ತು ಹೇಳಿಕೆಗಳು ಇವು

Exit mobile version