ಬೆಂಗಳೂರು: ಜುಲೈ 21ಕ್ಕೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ಸಿಎಂ ಬೊಮ್ಮಾಯಿ ಆಗಮಿಸಿದಾಗ ಯಾವುದೇ ರೀತಿಯ ಲೋಪಗಳಗಾದಂತೆ ನೋಡಿಕೊಳ್ಳಲು ಕೆ.ಆರ್.ಪೇಟೆ ಶಾಸಕ, ಸಚಿವ ಕೆ.ಸಿ.ನಾರಾಯಣಗೌಡ ಅವರು ಜಿಲ್ಲಾಧಿಕಾರಿಗೆ ಸೂಚಿಸಿದ್ದು, ಪೂರ್ವಸಿದ್ಧತಾ ಕಾರ್ಯಗಳು ಭರದಿಂದ ನಡೆಯುತ್ತಿದೆ.
ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಅವರು ಸ್ವಕ್ಷೇತ್ರ ಕೆ.ಆರ್.ಪೇಟೆ ಜನರ ಮನ ಗೆಲ್ಲಲು ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಈಗಾಗಲೇ ಪ್ರತಿ ಹೋಬಳಿಯಲ್ಲೂ ಕಣ್ಣಿನ ತಪಾಸಣೆ, ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಿ ತಮ್ಮ ಮತದಾರರ ಗಮನ ಸೆಳೆಯುತ್ತಿದಾರೆ. ಜುಲೈ 21ಕ್ಕೆ ಕೆ.ಆರ್. ಪೇಟೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ ಸಭೆ ನಡೆಸಲಿದ್ದಾರೆ. ಈ ವೇಳೆ ವಿವಿಧ ಕಾಮಗಾರಿಗಳ ಉದ್ಘಾಟನೆ ಸೇರಿದಂತೆ ಅನೇಕ ಯೋಜನೆಗಳಿಗೆ ಅಡಿಪಾಯ ಹಾಕಲಾಗುತ್ತದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಅಶ್ವಥ್ ಅವರು ಸರಣಿ ಸಭೆ ನಡೆಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ 50 ಸಾವಿರಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಮಂಡ್ಯ ಮತ್ತು ಕೆ.ಆರ್.ಪೇಟೆಯಲ್ಲಿ ಸಭೆಗಳನ್ನು ನಡೆಸಿ ಸಿದ್ಧತೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಹೆಲಿಪ್ಯಾಡ್ ಹಾಗೂ ವೇದಿಕೆ ಸ್ಥಳಗಳ ಪರಿಶೀಲನೆಯನ್ನು ಸಹ ನಡೆಸಲಾಗುತ್ತಿದೆ.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ನಾರಾಯಣಗೌಡ ಅವರು ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದರು. ನಂತರ ಬಿಜೆಪಿ ಬೆಂಬಲಿಸಿದ್ದರಿಂದ ಅನರ್ಹತೆಗೊಳಪಟ್ಟು, ಬಳಿಕ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಈ ಪಕ್ಷಾಂತರದ ಪರಿಣಾಮ ಅವರು ಸಚಿವರಾಗಿದ್ದಷ್ಟೆ ಅಲ್ಲದೆ, ಸ್ವಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನವನ್ನು ತಂದಿದ್ದಾರೆ. ಇದೀಗ 1700 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆಸುತ್ತಿದ್ದಾರೆ.
ಇದನ್ನೂ ಓದಿ: ವಿಫಲವಾದ ಸಿಎಂ ಬೊಮ್ಮಾಯಿ ಸಭೆ: ಪೌರಕಾರ್ಮಿಕರ ಪ್ರತಿಭಟನೆ ಮುಂದುವರಿಕೆ