ಬೆಂಗಳೂರು: ಕೊಡಗು ಪ್ರವಾಸದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭದ್ರತಾ ವ್ಯವಸ್ಥೆಯಲ್ಲಿ ಆಗಿರುವ ಲೋಪವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಮತ್ತು ಈ ಬಗ್ಗೆ ಡಿಜಿ ಮತ್ತು ಐಜಿಪಿ ಆಗಿರುವ ಪ್ರವೀಣ್ ಸೂದ್ ಅವರನ್ನು ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಹಿಂದೂ ಸಂಘಟನೆಗಳಿಂದ ಬೆದರಿಕೆ ಇದೆ ಎಂದು ಅವರ ಪುತ್ರ ಯತೀಂದ್ರ ಅವರು ಕೂಡಾ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ-ಡಿಜಿಪಿ ಮಾತುಕತೆ ಮಹತ್ವ ಪಡೆದುಕೊಂಡಿದೆ.
ಕೊಡಗಿನಲ್ಲಿ ಅತಿವೃಷ್ಟಿ ಹಾನಿ ಪರಿಶೀಲನೆಗಾಗಿ ಪ್ರತಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಹೋಗಿದ್ದಾಗ ಅವರ ಕಾರಿನತ್ತ ಪ್ರತಿಭಟನಾಕಾರರು ಮೊಟ್ಟೆ ಎಸೆದಿದ್ದರು. ಕರಪತ್ರವನ್ನು ಕಾರಿನೊಳಗೆ ಹಾಕಲಾಗಿತ್ತು. ಜತೆಗೆ ಗೋಬ್ಯಾಕ್ ಸಿದ್ದರಾಮಯ್ಯ ಅವರ ಘೋಷಣೆಗಳನ್ನು ಕೂಗಲಾಗಿತ್ತು. ತಮ್ಮ ಕಾರಿನ ಮೇಲೆ ಮೊಟ್ಟೆ ಎಸೆದವರನ್ನು, ಪ್ರತಿಭಟನೆ ನಡೆಸಿದವರನ್ನು, ಕರಪತ್ರ ತಂದು ಹಾಕಿದವರನ್ನು ಪೊಲೀಸರು ತಡೆಯಲು ಯತ್ನಿಸಲೇ ಇಲ್ಲ ಎಂದು ಸ್ವತಃ ಸಿದ್ದರಾಮಯ್ಯ ಅವರೇ ಆರೋಪಿಸಿದ್ದರು.
ಜತೆಗೆ ಕಾಂಗ್ರೆಸ್ ಪಕ್ಷವೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಆಗಸ್ಟ್ ೨೬ರಂದು ಕೊಡಗಿನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲು ಮುಂದಾಗಿದೆ. ಅಂದು ಪೊಲೀಸ್ ವೈಫಲ್ಯದ ವಿರುದ್ಧ ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಲೂ ಕಾಂಗ್ರೆಸ್ ತೀರ್ಮಾನಿಸಿದೆ.
ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಅವರು ಪ್ರವೀಣ್ ಸೂದ್ ಅವರ ಜತೆ ಚರ್ಚೆ ನಡೆಸಿದ್ದಾರೆ.: ಸಿಎಂ ನಿವಾಸದಲ್ಲಿ ನಡೆದ ಸಭೆಗೆ ಬಂದಿದ್ದ ಪ್ರವೀಣ್ ಸೂದ್ ಅವರು ಸಭೆ ಮುಗಿಸಿ ಮರಳುವ ವೇಳೆ ಸಿಎಂ ಅವರು ಮರಳಿ ಅವರನ್ನು ಕರೆಸಿಕೊಂಡು ಚರ್ಚಿಸಿದರು.
ನಿವಾಸದಿಂದ ಹೊರಗೆ ಬಂದಿದ್ದ ಪ್ರವೀಣ್ ಸೂದ್ವರನ್ನು ಮತ್ತೆ ಕರೆಸಿ ಚರ್ಚಿಸುತ್ತಿರುವ ಸಿಎಂ
ಪ್ರವಾಸ ರದ್ದುಗೊಳಿಸಿದ ಎಂ.ಬಿ. ಪಾಟೀಲ್
ಈ ನಡುವೆ, ಕಾಂಗ್ರೆಸ್‌ನ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಅವರು ಆಗಸ್ಟ್ ೨೪ರಂದು ನಿಗಡಿಯಾಗಿರುವ ಶಿವಮೊಗ್ಗ ಜಿಲ್ಲಾ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಕಲಬುರಗಿಯಲ್ಲಿ ಶುಕ್ರವಾರ ಮೊದಲ ಹಂತದ ರಾಜ್ಯ ಪ್ರವಾಸ ಆರಂಭಗೊಂಡಿದೆ. ಶಿವಮೊಗ್ಗದಲ್ಲಿ ಆಗಸ್ಟ್ ೨೪ರಿಂದ ಪ್ರವಾಸವಿತ್ತು. ಆದರೆ, ಈಗ ಶಿವಮೊಗ್ಗದಲ್ಲಿ ಸೆಕ್ಷನ್ ೧೪೪ ಅಡಿ ನಿಷೇಧಾಜ್ಞೆ ಮುಂದುವರಿದಿರುವುದು, ಕೊಡಗಿನಲ್ಲಿ ಸಿದ್ದರಾಮಯ್ಯ ಅವರ ಕಾರಿನತ್ತ ಮೊಟ್ಟೆ ಎಸೆದಿರುವ ಘಟನೆಗಳ ಹಿನ್ನೆಲೆಯಲ್ಲಿ ಪ್ರವಾಸವನ್ನು ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರು ವಿಫಲರಾಗಬಾರದು ಎಂದ ರೆಡ್ಡಿ
ಸಿದ್ದರಾಮಯ್ಯ ಅವರ ಭದ್ರತೆ ವಿಚಾರದಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಬಾರದಿತ್ತು ಎಂಬ ಅಭಿಪ್ರಾಯವನ್ನು ಮಾಜಿ ಗೃಹ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ʻʻಗೃಹ ಇಲಾಖೆಗೆ ಮಂತ್ರಿಗಳು ಬರ್ತಾರೆ, ಹೋಗ್ತಾರೆ. ಪೊಲೀಸರು ಕಾಯಂ ಆಗಿ ಇರುತ್ತಾರೆ. ಕೊಡಗಿನ ವಿಚಾರದಲ್ಲಿ ಪೊಲೀಸ್ ಇಲಾಖೆಯಿಂದ ಭದ್ರತಾ ವೈಫಲ್ಯ ಆಗಿದೆ. ಮೊಟ್ಟೆ ಎಸೆದವರನ್ನು ಪೊಲೀಸರು ಸ್ಟೇಷನ್‌ಗೆ ಕರೆದುಕೊಂಡು ಹೋಗ್ತಾರೆ. ಆದರೆ, ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತದೆ. ಇಬ್ಬರು ಬಿಜೆಪಿ ಶಾಸಕರು ಸೇರಿ ಬಿಡಿಸಿಕೊಂಡು ಬರ್ತಾರೆ. ಅಂದರೆ ಲಾ ಅಂಡ್ ಆರ್ಡರ್ ನಡೆಯುತ್ತಿರುವುದು ಕಾನೂನಿನದ್ದಾ, ಬಿಜೆಪಿಯದ್ದಾ?ʼʼ ಎಂದು ಪ್ರಶ್ನಿಸಿದ್ದಾರೆ ರಾಮಲಿಂಗಾ ರೆಡ್ಡಿ.
ಇದನ್ನೂ ಓದಿ| ಬಿಜೆಪಿಯ ಗೋಬ್ಯಾಕ್ ವಿರುದ್ಧ ಸಿದ್ದರಾಮಯ್ಯ ಗರಂ, ಆ. 26ರಂದು ಕೊಡಗಿನಲ್ಲಿ ಕಾಂಗ್ರೆಸ್ ಪ್ರತಿಭಟನೆ