ಹುಬ್ಬಳ್ಳಿ/ಗದಗ: ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರನ್ನು ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ (Suicide) ಪ್ರಕರಣದಲ್ಲಿ ಪೊಲೀಸರು ಬಂಧನ ಮಾಡಿರಲಿಲ್ಲ. ಈಗ ಈಶ್ವರಪ್ಪ (Eshwarappa) ಅವರನ್ನು ಬಂಧಿಸಿ ಎಂದು ಕೇಳುವ ಯಾವುದೇ ನೈತಿಕತೆ ಕಾಂಗ್ರೆಸಿಗರಿಗಿಲ್ಲ ಎಂದು ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರರಕಣದ (Santosh Suicide Case) ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಸಂತೋಷ್ ಈ ಹಿಂದೆಯೂ ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದರು, ಇದೀಗ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಈಶ್ವರಪ್ಪ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಈಶ್ವರಪ್ಪ ವಿರುದ್ಧ ಎಫ್‌ಐಆರ್ ಸಹ ದಾಖಲಾಗಿದೆ. ರಾಜೀನಾಮೆ ನೀಡಿದರಷ್ಟೆ ಸಾಲದು, ಅವರನ್ನು ಬಂಧಿಸಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ನಾಯಕರಾದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಹುಬ್ಬಳ್ಳಿ ಹಾಗೂ ಗದಗದ ಪ್ರವಾಸ ಸಂದರ್ಭದಲ್ಲಿ ಬೊಮ್ಮಾಯಿ ಉತ್ತರ ನೀಡಿದ್ದಾರೆ.
ಪೊಲೀಸರಿಗೆ ತಮ್ಮ ಕೆಲಸ ಮಾಡಲು ಬಿಡಬೇಕು. ಪೊಲೀಸ್ ಆಗಲಿ, ಸಿಬಿಐ ಆಗಲಿ, ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಅಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರನ್ನು ಬಂಧಿಸಿರಲಿಲ್ಲ. ಕಾಂಗ್ರೆಸ್‌ನವರು ತಮ್ಮ ಮಂತ್ರಿಗಳನ್ನೇ ಬಂಧನ ಮಾಡಲಿಲ್ಲ ಎಂದ ಮೇಲೆ ನಮ್ಮನ್ನು ಕೇಳಲು ಏನು ನೈತಿಕತೆ ಅವರಿಗಿದೆ? ಏನು ಅವಶ್ಯಕತೆ ಇದೆ, ಏನು ಅವಶ್ಯಕತೆ ಇಲ್ಲ ಎನ್ನುವುದನ್ನು ಪೊಲೀಸರು ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್‌ನವರು ಏಕೆ ಗಾಬರಿಯಾಗುತ್ತಿದ್ದಾರೆ? ತನಿಖೆ ನಡೆದು ಸತ್ಯ ಹೊರಬರಲಿ. ಮುಕ್ತ ತನಿಖೆ ಆಗಲು ಅವಕಾಶ ನೀಡಬೇಕು. ಕಾಂಗ್ರೆಸ್‌ನವರೇ ವಕೀಲರು ಹಾಗೂ ನ್ಯಾಯಮೂರ್ತಿಗಳಾಗಲು ಹೋಗಬಾರದು ಎಂದರು.
ಹೆಚ್ಚಿನ ಓದಿಗಾಗಿ: ಅಂತ್ಯಕ್ರಿಯೆ ಬೇಡವೆಂದ ಕಾಂಗ್ರೆಸಿಗರನ್ನು ತಡೆದ ಗ್ರಾಮಸ್ಥರು
ಹಿನ್ನಡೆಯ ಪ್ರಶ್ನೆ ಉದ್ಭವಿಸುವುದಿಲ್ಲ
ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆ ಘೋಷಣೆಯಿಂದ ಸರ್ಕಾರಕ್ಕೆ ಹಿನ್ನಡೆ ಅಥವಾ ಮುಜುಗರ ತಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ತನಿಖೆಯಾದ ನಂತರ ತಾವು ಆರೋಪ ಮುಕ್ತರಾಗುವ ಬಗ್ಗೆ ಈಶ್ವರಪ್ಪ ಅವರಿಗೆ ವಿಶ್ವಾಸ ಇದೆ. ಇಲ್ಲಿ ಯಾರದೂ ವೈಯಕ್ತಿಕ ವಿಚಾರವಿಲ್ಲ. ಹಿನ್ನಡೆ, ಮುನ್ನಡೆ ಪ್ರಶ್ನೆ ಬರುವುದಿಲ್ಲ. ಎರಡು ದಿನದ ಹಿಂದೆಯೇ ಅವರು ರಾಜೀನಾಮೆ ನೀಡಲು ನಿರ್ಧರಿಸಿದ್ದರು. ಆದರೆ ಕೆಲವು ಹಿರಿಯರು ರಾಜೀನಾಮೆ ನೀಡಬೇಡಿ ಎಂದು ಹೇಳಿದ್ದರಿಂದ ಸುಮ್ಮನಾಗಿದ್ದರು. ಇದೀಗ ಸ್ವಯಿಚ್ಛೆಯಿಂದ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಕಾನೂನು ಪ್ರಕಾರ ತನಿಖೆ ನಡೆಯುತ್ತದೆ. ಪ್ರಕರಣ ಒಂದು ಷಡ್ಯಂತರವೇ ಎಂಬುದೂ ಸೇರಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯಲಿದ್ದು, ತನಿಖೆಯಲ್ಲಿ ಸತ್ಯಾಂಶ ಹೊರಬೀಳಲಿದೆ ಎಂದರು. ಸಚಿವ ಕೆ.ಎಸ್.ಈಶ್ವರಪ್ಪ ಅವರು ಇಂದು ಸಂಜೆ ರಾಜೀನಾಮೆ ನೀಡಲಿದ್ದಾರೆ. ತಮ್ಮ ನಿಲುವಿನ ಬಗ್ಗೆ ಅವರಿಗೆ ಸ್ಪಷ್ಟತೆ ಇದೆ ಎಂದರು.
ವಿಧಾನಸೌಧದಲ್ಲಿ ಡಿಕೆಶಿ ಧರಣಿ
ಸಚಿವ ಈಶ್ವರಪ್ಪ ರಾಜೀನಾಮೆ ನೀಡಿದರಷ್ಟೆ ಸಾಲದು, ಬಂಧಿಸಬೇಕು ಎಂದು ಆಗ್ರಹಿಸಿ ಡಿ.ಕೆ. ಶಿವಕುಮಾರ್ ಗುರುವಾರದಿಂದಲೇ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. “ಸಂತೋಷ್ ಪಾಟೀಲ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ, ಬಿಜೆಪಿ ಸರ್ಕಾರ ಹರಡಿರುವ ಭ್ರಷ್ಟಾಚಾರದ ಕ್ಯಾನ್ಸರ್ ನಿಂದ ಕರ್ನಾಟಕ ಮುಕ್ತವಾಗುವವರೆಗೂ, ಕಳಂಕಿತ ಈಶ್ವರಪ್ಪ ಅವರನ್ನು ಬಂಧಿಸುವವರೆಗೂ ಹೋರಾಟ ಮುಂದುವರಿಯಲಿದೆ” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.