ಬೆಂಗಳೂರು: ಮುಡಾ ಹಗರಣದಲ್ಲಿ (Muda Scam) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ (High Court) ಶನಿವಾರ (ಆ.31) ಸುದೀರ್ಘವಾಗಿ ಮುಂದುವರಿದಿತ್ತು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಿತು. ಮೊದಲಿಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಲಾ ಪಾಯಿಂಟ್‌ಗಳನ್ನು ಹಾಕಿ ತಮ್ಮ ವಾದ ಮಂಡಿಸಿದ್ದರು.
ಬಳಿಕ ಸ್ನೇಹಮಯಿಕೃಷ್ಣ ಪರ ಹಿರಿಯ ವಕೀಲ ಮಣೀಂಧರ್ ಸಿಂಗ್ ವಾದ ಆರಂಭಿಸಿ, ಸರ್ಕಾರದ ಬದಲು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಯಬೇಕಿದ್ದು ಮನವಿ ಮಾಡಿದರು. 1992 ಲ್ಯಾಂಡ್ ಅಕ್ವಿಜೇಷನ್ ಪ್ರಕ್ರಿಯೆ ಶುರುವಾಗಿದೆ. ಅಂತಿಮ ನೋಟಿಫಿಕೇಷನ್ 1997ರಲ್ಲಿ ಮುಗಿದಿದೆ. ಲ್ಯಾಂಡ್ ಅಕ್ವಿಜೇಷನ್, ಪರಿಹಾರದ ಹಣ, ನಂತರದ ಬೆಳವಣಿಗೆಗಳನ್ನು ಉಲ್ಲೇಖಿಸಿ ಮಣೀಂದರ್ ಸಿಂಗ್ ವಾದ ಶುರು ಮಾಡಿದರು. ಆಕ್ಷೇಪಾರ್ಹವಾದ 3.16 ಎಕರೆ ಭೂಮಿ ವರ್ಗಾವಣೆಯ ಕುರಿತು ವಿವರಣೆ ನೀಡಿದರು. 1997ರಲ್ಲಿ ಅಂತಿಮ ನೋಟಿಫಿಕೇಷನ್ ಆಗಿದ್ದು ವಶಕ್ಕೆ ಪಡೆಯಲಾಗಿದೆ.
1998ರಲ್ಲಿ ಈ ಭೂಮಿ ಮುಡಾ ವಶದಲ್ಲಿ ಇತ್ತು. ಇದು ರೆವಿನ್ಯೂ ರೆಕಾರ್ಡ್‌ನಲ್ಲಿ ಎಂಟ್ರಿ ಆಗಿದೆ. ಎಲ್ಲ ಪ್ರಕ್ರಿಯೆಗಳು ಕಾನೂನು ಬಾಹಿರವಾಗಿದೆ. ಇದೆಲ್ಲಾ ತನಿಖೆಯಿಂದ ಹೊರಬರಬೇಕಿದೆ. 2001-02 ರಲ್ಲಿ ಬಡಾವಣೆ ಅಭಿವೃದ್ಧಿ ಪಡಿಸಲಾಗಿದೆ. ಸೈಟ್‌ಗಳನ್ನು ಮಾರಾಟ ಮಾಡಲಾಗಿದೆ. ಸ್ವಾಧೀನವಾದ ಜಮೀನಿನಲ್ಲಿ 2001, 2004 ನಡುವೆ ಮುಡಾ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಕ್ಯಾಬಿನೆಟ್ ನೋಟ್‌ನಲ್ಲಿ ರಿಟ್ ಅರ್ಜಿ ಎಂದು ಉಲ್ಲೇಖಿಸಲಾಗಿದೆ. ಸಿಎಂ ಪತ್ನಿಗೆ 14 ನಿವೇಶನ ಹಂಚಲು ಬೇರೆ ಕೇಸ್ ಗಳ ಹೈಕೋರ್ಟ್ ಆದೇಶ ಉಲ್ಲೇಖಿಸಿದ್ದಾರೆ. ಆದರೆ ರಿಟ್ ಅರ್ಜಿಗಳ ಸಂಪೂರ್ಣ ವಿವರಗಳೇ ಇದರಲ್ಲಿ ಇಲ್ಲ.
1998ರಲ್ಲಿ ಭೂಮಿ ಸ್ವಾಧೀನ ಬಳಿಕ ಮುಡಾ ಮಾಲೀಕತ್ವದಲ್ಲಿತ್ತು. ಭೂಸ್ವಾಧೀನವನ್ನು ಯಾರೂ ಪ್ರಶ್ನಿಸಿ ಕೋರ್ಟ್‌ಗೆ ಹೋಗಿಲ್ಲ. ಪರಿಹಾರವನ್ನೂ ನಿಗದಿಪಡಿಸಿ ಆದೇಶ ಮಾಡಲಾಗಿತ್ತು. ಇದಾದ ಮೇಲಿನ ಡಿನೋಟಿಫಿಕೇಷನ್ ಭೂಮಿ ಕಬಳಿಸಲು ಮಾಡಿದ ವಂಚನೆ ಯಾಗಿತ್ತು. ಆಗ ಆ ಜಮೀನಿನ ಮೌಲ್ಯ ಕೇವಲ 3 ಲಕ್ಷ 24 ಸಾವಿರ ಮೌಲ್ಯವಾಗಿತ್ತು ಎಂದು ಮಣೀಂದರ್ ಸಿಂಗ್ ವಾದಿಸಿದರು. ನಮ್ಮ ವಾದ ಈ ಮುಡಾ ಹಗರಣದ ಕುರಿತು ತನಿಖೆ ನಡೆಸಬೇಕು ಎಂಬುದಕಷ್ಟೇ. ಪ್ರಕರಣದ ಪ್ರೈಮಾಫಸಿಯನ್ನು ಪರಿಗಣಿಸಿ ತನಿಖೆಗೆ ಅವಕಾಶ ಕೊಡುವಂತೆ ಮನವಿ ಮಾಡಿದರು.
ರೆವಿನ್ಯು ಭೂಮಿ ಹೇಗಾಯಿತು?
ಈ ವೇಳೆ ಲಿಖಿತ ವಾದವನ್ನು ಮಂಡಿಸುತ್ತಿದ್ದೀರಾ ಎಂದು ಮಣೀಂದರ್ ಸಿಂಗ್‌ಗೆ ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದರು. ಅಭಿವೃದ್ಧಿಪಡಿಸಿದ ಭೂಮಿ, ರೆವಿನ್ಯು ಭೂಮಿ ಹೇಗಾಯಿತು?ಎಂದು ಜಡ್ಜ್ ಪ್ರಶ್ನಿಸಿದಾಗ, ಅದು ಮ್ಯಾಜಿಕ್.. ಹೇಗೆ ಆಯಿತು ಎಂಬುದು ತನಿಖೆಯಿಂದ ತಿಳಿಯಬೇಕು ಎಂದು ಮಣೀಂದರ್ ಸಿಂಗ್ ಉತ್ತರಿಸಿದರು. ಭೂಮಿಯ ಪ್ರಾಥಮಿಕ ಅಧಿಸೂಚನೆಯಾಗದೆ ಕೇಸ್‌ನ ತೀರ್ಪನ್ನು ಈ ಕೇಸ್‌ಗೆ ಬಳಸಲಾಗಿದೆ. ಸ್ವಾಧೀನವೇ ಆಗದೇ ಜಮೀನು ಬಳಸಿಕೊಳ್ಳುವುದಕ್ಕೂ, ಪ್ರಕ್ರಿಯೆ ಪಾಲಿಸಿ ಸ್ವಾಧೀನಕ್ಕೂ ವ್ಯತ್ಯಾಸವಿದೆ. ಅಲ್ಲಿ ಬಳಸಿದ ಮಾನದಂಡವನ್ನು ಈ ಕೇಸ್‌ಗೆ ಬಳಸಿಕೊಳ್ಳಲಾಗಿದೆ ಎಂದು ಮಣೀಂದರ್ ಸಿಂಗ್ ವಾದಿಸಿದ್ದರು.
ತನಿಖಾಧಿಕಾರಿ ಸಮರ್ಥವಾಗಿದ್ದರೆ ಕಂಡುಹಿಡಿಯಬಹುದು. ಕ್ಯಾಬಿನೆಟ್ ಇಂತಹ ಕೃತ್ಯಕ್ಕೆ ಸಮರ್ಥನೆ ನೀಡುತ್ತಿದೆ.
ತನಿಖೆ ನಡೆಯದಿದ್ದರೆ ಇದು ದೊಡ್ಡ ದುರಂತವಾಗಲಿದೆ. 2004 ರಲ್ಲಿ 3.24 ಲಕ್ಷ ರೂ. ಇದ್ದ ಜಮೀನಿನ ಮೌಲ್ಯ ಈಗ 55 ಕೋಟಿ ರೂ. ಇದೆ. ಹೀಗಾಗಿ ಅಕ್ರಮವೆಸಗಲು ಸಂಚು ನಡೆದಿದೆ. ಜನರ ಹಣವನ್ನು ಜನಸೇವಕನೇ ಲೂಟಿ ಮಾಡುವ ಸಂಚು ನಡೆದಿದೆ ಎಂದು ಕಟುವಾಗಿ ವಾದ ಮಂಡಿಸಿದರು.
ಮುಲಾಯಂ ಸಿಂಗ್ ಪ್ರಕರಣದ ತೀರ್ಪು ಸೇರಿದಂತೆ ಹಲವು ತೀರ್ಪುಗಳ ಉಲ್ಲೇಖಿಸಿದ ಮಣೀಂದರ್ ಸಿಂಗ್ ವಾದ ಮಂಡನೆ ಮುಂದುವರಿಸಿದರು. ಸರ್ಕಾರ ಈಗಾಗಲೇ ಈ ಕೇಸ್ ಸಂಬಂಧ ಒಂದು ನಿಲುವು ತೆಗೆದುಕೊಂಡಿದೆ. ಹೀಗಾಗಿ ರಾಜ್ಯ ಸರ್ಕಾರದ ಅಡಿಯ ತನಿಖಾಧಿಕಾರಿಯಿಂದ ಈ ಕೇಸ್ ತನಿಖೆ ನಡೆಸುವುದು ಸಾಧ್ಯವೇ? ಸ್ವತಂತ್ರ ತನಿಖೆ ನಡೆಯಬೇಕಾದಷ್ಟು ಅಂಶಗಳು ಈ ಕೇಸಿನಲ್ಲಿವೆ. ಜನಸಾಮಾನ್ಯರೂ ಕೂಡಾ ಭೂಸ್ವಾಧೀನದಿಂದ ಬಿಡಿಸಿಕೊಳ್ಳಲು ಪರದಾಡುತ್ತಾರೆ. ಶಾಲೆ ಇದ್ದರೂ ಭೂಸ್ವಾಧೀನದಿಂದ ಬಿಡುಗಡೆ ಮಾಡುವುದಿಲ್ಲ. ಆದರೆ ಈ ಕೇಸಿನಲ್ಲಿ ಮೂಡಾ ಬಡಾವಣೆ ಅಭಿವೃದ್ದಿಯಾಗಿದ್ದರೂ ಸ್ವಾಧೀನದಿಂದ ಕೈಬಿಟ್ಟಿದ್ದಾರೆ. ಒಂದು ಬಾರಿ ಭೂಸ್ವಾಧೀನ ಅಂತಿಮಗೊಂಡಾಗ ಬದಲಿ ಜಮೀನಿಗೆ ಅವಕಾಶವಿಲ್ಲ. ಪರಿಹಾರದ ಹಣಕ್ಕೆ 9 ಪರ್ಸೆಂಟ್ ಬಡ್ಡಿ ಪಡೆಯಲು ಮಾತ್ರ ಅವಕಾಶವಿದೆ ಎಂದು ಇಂದೋರ್ ಡೆವಲಪ್ಮೆಂಟ್ ಕೇಸ್ ಉಲ್ಲೇಖಿಸಿ ಮಣೀಂದರ್ ಸಿಂಗ್ ಮಾತಿಗಿಳಿದರು.
ಬಳಿಕ ಮಣೀಂದರ್ ಸಿಂಗ್ ಮುಂದಿನ ವಾದ ಸೋಮವಾರ ಮಂಡಿಸುವುದಾಗಿ ಮನವಿ ಮಾಡಿದರು. ಹೀಗಾಗಿ ಮುಂದಿನ ವಿಚಾರಣೆಯನ್ನೂ ಹೈಕೋರ್ಟ್ ಮಧ್ಯಾಹ್ನ 2.30 ಕ್ಕೆ ಮುಂದೂಡಿತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ