ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು, ಗ್ರಾಮ ಪಂಚಾಯತಿ ಚುನಾವಣೆಯಲ್ಲೂ ಗೆಲ್ಲದವರುʼ ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.
ಇತ್ತೀಚೆಗೆ ಯಲಹಂಕದ ರೆಸಾರ್ಟ್‌ನಲ್ಲಿ ಬಿಜೆಪಿ ಚಿಂತನ ಸಭೆ ಆಯೋಜಿಸಿತ್ತು. ಈ ಸಭೆಯಲ್ಲಿ ರಾಜ್ಯದ ಎಲ್ಲ ಸಚಿವರು, ಬಿಜೆಪಿ ಶಾಸಕರೂ ಭಾಗವಹಿಸಿದ್ದರು. ಬೆಂಗಳೂರಿನ ಇಬ್ಬರು ಸಚಿವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಸಂತೋಷ್ ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿತ್ತು. ಸರಿಯಾಗಿ ಕೆಲಸ ಮಾಡಿ ಎಂದು ಸೂಚನೆ ನೀಡಿದ್ದರು ಎಂಬ ಸುದ್ದಿ ಹರಿದಾಡಿತ್ತು.
ಈ ಕುರಿತು ಕೆಪಿಸಿಸಿ ಟ್ವಿಟರ್ ಮೂಲಕ ಟೀಕಿಸಿದೆ. ಗ್ರಾಮ ಪಂಚಾಯತಿ ಚುನಾವಣೆಯನ್ನೂ ಗೆಲ್ಲದ, ಗೆಲ್ಲಲಾಗದ ಬಿ.ಎಲ್. ಸಂತೋಷ್ ಎಂಬ ವ್ಯಕ್ತಿ ಸಂಪುಟ ಸಚಿವರಿಗೆ ಹೆಡ್‌ಮಾಸ್ಟರ್‌ನಂತೆ ಕ್ಲಾಸ್ ತೆಗೆದುಕೊಳ್ಳುವುದು ಬಿಜೆಪಿಯ ದುರಂತ ! ಈ ರಾಜ್ಯದ ಸಿಎಂ ಬೊಮ್ಮಾಯಿ ಅವರೋ, ಬಿ.ಎಲ್. ಸಂತೋಷ್ ಅವರೋ ಎಂದು ಸ್ಪಷ್ಟಪಡಿಸಿಕೊಂಡು ಬಿಜೆಪಿ ಆಡಳಿತ ನಡೆಸಲಿ. ಬೊಮ್ಮಾಯಿ ಅವರು ಕೇವಲ ಬೊಂಬೆಯೇ ಹೇಳಲಿ! ಎಂದು ಟೀಕಿಸಲಾಗಿದೆ.
ರಾಷ್ಟ್ರೀಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಬಿಜೆಪಿಯ ಪೂರ್ಣಾವಧಿ ಕಾರ್ಯಕರ್ತರಾಗಿದ್ದು, ಕರ್ನಾಟಕ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿ ಅನೇಕ ವರ್ಷ ಕಾರ್ಯನಿರ್ವಹಿಸಿದ್ದಾರೆ. ಮುಖ್ಯವಾಗಿ, ಬಿ.ಎಸ್. ಯಡಿಯೂರಪ್ಪ ಅವರು ಪಕ್ಷದಿಂದ ಹೊರಹೋಗಿ ಕೆಜೆಪಿ ಸ್ಥಾಪಿಸಿ 2013ರ ಚುನಾವಣೆ ಸೆಣೆಸಿದಾಗ ಬಿಜೆಪಿಯನ್ನು ಸಂತೋಷ್ ಮುನ್ನಡೆಸಿದರು. ಬಿಜೆಪಿಯನ್ನು ಸೋಲಿಸಬೇಕು ಎಂದೇ ಕೆಜೆಪಿ ಸತತ ಪ್ರಯತ್ನ ನಡೆಸಿದಾಗ, ಪಕ್ಷದ ಗೌರವವನ್ನು ಕಾಪಾಡುವಷ್ಟಾದರೂ ಶಾಸಕರನ್ನು ಗೆಲ್ಲಿಸಿಕೊಳ್ಳುವಲ್ಲಿ ಸಂತೋಷ್ ಶ್ರಮ ಇದೆ ಎಂದು ಪಕ್ಷದಲ್ಲಿ ಹೇಳಲಾಗುತ್ತದೆ.
ಸಂತೋಷ್ ಇಲ್ಲಿವರೆಗೆ ಯಾವುದೇ ಚುನಾವಣೆಯನ್ನು ಎದುರಿಸಿಲ್ಲ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಟ್ವಿಟರ್ ಮೂಲಕ ಈಗ ಟೀಕೆ ಮಾಡಿದೆ.
ಇದನ್ನೂ ಓದಿ | ಯಡಿಯೂರಪ್ಪ ಸರ್ಜಿಕಲ್ ಸ್ಟ್ರೈಕ್ ಫೇಲ್: ಬಿಜೆಪಿಯಲ್ಲಿ ಸಂತೋಷ್ ಮೇಲುಗೈ