ಬಾಗಲಕೋಟೆ: ಚಂದ್ರಯಾನ-3ರ ಬಗ್ಗೆ ವ್ಯಂಗ್ಯಭರಿತ ಟ್ವೀಟ್ ಮಾಡಿದ್ದಕ್ಕೆ ಎಲ್ಲೆಡೆ ನಟ ಪ್ರಕಾಶ್ ರಾಜ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ನಟ ಪ್ರಕಾಶ್ ರಾಜ್ (Prakash Raj) ಅವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶ್ರೀರಾಮಸೇನೆಯಿಂದ ಜಿಲ್ಲೆಯ ಬನಹಟ್ಟಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಶ್ರೀರಾಮಸೇನೆ ಮುಖಂಡ ಶಿವಾನಂದ ಗಾಯಕವಾಡ್ ಅವರು ದೂರು ನೀಡಿದ್ದು, ಚಂದ್ರಯಾನ-3 ಹಾಗೂ ಇಸ್ರೋ ವಿಜ್ಞಾನಿಗಳ ಬಗ್ಗೆ ವ್ಯಂಗ್ಯಭರಿತ ಟ್ವೀಟ್ ಮಾಡಿರುವ ನಟ ಪ್ರಕಾಶ್ ರಾಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಪ್ರಕಾಶ್ ರಾಜ್ ಎಂಬ ಅರೆ ಹುಚ್ಚ ಮಾನಸಿಕ ಸ್ಥಿಮಿತತೆ ಕಳೆದುಕೊಂಡವರ ರೀತಿ ಟ್ವಿಟರ್‌ನಲ್ಲಿ ದೇಶದ ಹೆಮ್ಮೆಯ ಚಂದ್ರಯಾನ 3 ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ವಿಜ್ಞಾನಿಗಳಿಗೆ ಅಪಮಾನ ಮಾಡುವ ಮೂಲಕ ವಿಕೃತಿ ಮೆರೆದಿರುವ ನಟನನ್ನು ಬಂಧಿಸಿ ಸಮಾಜಕ್ಕೆ ಒಂದೊಳ್ಳೆಯ ಸಂದೇಶ ನೀಡಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಆ.23ರಂದು ಚಂದ್ರನ ಮೇಲೆ ಇಳಿಯಲಿದೆ ವಿಕ್ರಮ್ ಲ್ಯಾಂಡರ್
ಜುಲೈ 14 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಇದೀಗ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ 25 ರಿಂದ 150 ಕಿಲೋಮೀಟರ್ ದೂರದಲ್ಲಿ ಸುತ್ತುತ್ತಿದ್ದು, ಆಗಸ್ಟ್ 23ರಂದು ಸಂಜೆ 6.04ಕ್ಕೆ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಇಸ್ರೋ ನಿರ್ಧರಿಸಿದೆ. ಒಂದು ವೇಳೆ ಬುಧವಾರ ಸಾಧ್ಯವಾಗದೆ ಇದ್ದರೆ ಆಗಸ್ಟ್ 27ರಂದು ಮತ್ತೊಮ್ಮೆ ಪ್ರಯತ್ನಿಸುವುದಾಗಿ ಇಸ್ರೋ ತಿಳಿಸಿದೆ.
ಚಂದ್ರಯಾನ 3 ಮಿಷನ್ ಯಶಸ್ವಿಯಾದರೆ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿದ ವಿಶ್ವದ ನಾಲ್ಕನೇ ದೇಶ ಎಂಬ ಖ್ಯಾತಿಯನ್ನು ಭಾರತ ಗಳಿಸಲಿದೆ. ಇದಕ್ಕೂ ಮೊದಲು ಅಮೆರಿಕ, ರಷ್ಯಾ ಮತ್ತು ಚೀನಾ ಈ ಸಾಧನೆ ಮಾಡಿವೆ. ಆದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದರೆ ಈ ಸಾಧನೆ ಮಾಡಿದ ಮೊದಲ ದೇಶವೆಂಬ ಹೆಗ್ಗಳಿಕೆ ಭಾರತ ಪಡೆಯಲಿದೆ.
ಇದನ್ನೂ ಓದಿ | Chandrayaan 3: ಚಂದ್ರನ ಕೂಗಳತೆ ದೂರದಿಂದ ಸೆರೆಸಿಕ್ಕವು ಫೋಟೊಗಳು; ಇತಿಹಾಸಕ್ಕೆ ಬಾಕಿ ಇವೆ ಕೆಲವೇ ಗಂಟೆಗಳು
ಚಂದ್ರಯಾನ 3 ಯಶಸ್ಸಿಗೆ ಪ್ರಾರ್ಥನೆ ಬೆನ್ನಲ್ಲೇ ಪ್ರಕಾಶ್ ರಾಜ್ ವ್ಯಂಗ್ಯ; ರೋಗಿಷ್ಟ ಮನಸ್ಥಿತಿ ಅಂದ್ರು ಜನ
ಬೆಂಗಳೂರು: ನಟನೆಗಿಂತ ಇತ್ತೀಚೆಗೆ ವಿವಾದಗಳಿಂದಲೇ ಜಾಸ್ತಿ ಸುದ್ದಿಯಲ್ಲಿರುವ ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಅವರೀಗ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಚಂದ್ರಯಾನ 3 (Chandrayaan 3) ಮಿಷನ್ ಕಳುಹಿಸಿದ ಫೋಟೊ ಎಂದು ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್ (K Sivan) ಅವರನ್ನು ಅಣಕ ಮಾಡಲು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ (X) ಫೋಟೊ ಹಂಚಿಕೊಂಡ ಕಾರಣ ಜನ ಅವರಿಗೆ ಟೀಕೆಗಳ ಮೂಲಕ ಚಳಿ ಬಿಡಿಸಿದ್ದಾರೆ.
ಇಸ್ರೋ ಮಾಜಿ ಅಧ್ಯಕ್ಷ ಕೆ. ಶಿವನ್ ಅವರ ಕುರಿತ ವ್ಯಂಗ್ಯಚಿತ್ರವನ್ನು ಪ್ರಕಾಶ್ ರಾಜ್ ಹಂಚಿಕೊಂಡಿದ್ದು, ಇದರಲ್ಲಿ ಚಾಯ್‌ವಾಲಾ ಎಂಬುದಾಗಿ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ವ್ಯಂಗ್ಯ ಮಾಡಿದಂತಿದೆ. “ತಾಜಾ ಸುದ್ದಿ; ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ” ಎಂದು ಅವರು ಬರೆದುಕೊಂಡಿದ್ದಾರೆ. ಚಂದ್ರಯಾನ 3 ಮಿಷನ್ ಯಶಸ್ಸಿಗೆ ದೇಶವೇ ಪ್ರಾರ್ಥಿಸುವ ಹೊತ್ತಿನಲ್ಲಿ ಪ್ರಕಾಶ್ ರಾಜ್ ಅವರು ಇಂತಹ ಫೋಟೊ ಶೇರ್ ಮಾಡಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕಾಶ್ ರಾಜ್ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಕಾಶ್ ರಾಜ್ ಅವರನ್ನು ತರಾಟೆಗೆ ತೆಗೆದುಕೊಂಡ ವ್ಯಕ್ತಿಯೊಬ್ಬರು, “ಇದು ರೋಗಿಷ್ಟ ಮನಸ್ಥಿತಿಯ ಪರಮಾವಧಿ” ಎಂದಿದ್ದಾರೆ. ರಾಮ್ ಎಂಬುವವರು ಪ್ರತಿಕ್ರಿಯಿಸಿ, “ಇಸ್ರೋ ಉನ್ನತ ಭಾರತವನ್ನು ಪ್ರತಿನಿಧಿಸುತ್ತದೆ. ಸಂಪನ್ಮೂಲ ಕೊರತೆ, ಪ್ರತಿಕೂಲ ಪರಿಸ್ಥಿತಿಗಳ ಮಧ್ಯೆಯೂ ಇಸ್ರೋ ಮಹತ್ತರವಾದುದನ್ನು ಸಾಧಿಸಲು ಹೊರಟಿದೆ. ಆದರೆ, ಈ ವ್ಯಕ್ತಿಯು ಭಾರತದ ಬಗ್ಗೆ ಕೆಟ್ಟದ್ದನ್ನೇ ಹೇಳುತ್ತಾನೆ” ಎಂದು ಕುಟುಕಿದ್ದಾರೆ.
ಇದನ್ನೂ ಓದಿ: Prakash Raj: ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದುಕೊಂಡಿರಲಿಲ್ಲ; ಸುದೀಪ್‌ಗೆ ಪ್ರಕಾಶ್ ರಾಜ್ ಮತ್ತೆ ಕ್ಲಾಸ್
“ಆತ್ಮವಿಶ್ವಾಸವನ್ನು ಕಳೆದುಕೊಂಡು ನಿಸ್ತೇಜನಾದ ವ್ಯಕ್ತಿ ಮಾತ್ರ ಹೀಗೆ ಬೇರೆಯವರ ಬಗ್ಗೆ ವೈಯಕ್ತಿಕವಾಗಿ ಹೀಗಳಿಯಲು ಸಾಧ್ಯ” ಎಂದು ಮತ್ತೊಬ್ಬರು ಟೀಕಿಸಿದ್ದಾರೆ. ಅಷ್ಟೇ ಅಲ್ಲ, “ಪ್ರಕಾಶ್ ರಾಜ್ ನಿಮಗೆ ನಾಚಿಕೆಯಾಗಬೇಕು”, “ನಿನಗೆ ಸ್ವಲ್ಪವಾದರೂ ನಾಚಿಕೆಯಾಗಬೇಕು”, “ದೇಶದ ಇಸ್ರೋ ಬಗ್ಗೆ ಹೆಮ್ಮೆಪಡಬೇಕು, ದ್ವೇಷವಲ್ಲ”, “ನಿಮಗೇಕೆ ಅಷ್ಟು ಹೊಟ್ಟೆ ಉರಿ” ಎಂಬುದು ಸೇರಿ ಸಾವಿರಾರು ಜನ ಹಲವು ರೀತಿಯಲ್ಲಿ ಪ್ರಕಾಶ್ ರಾಜ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.