ಬೆಂಗಳೂರು: ಭ್ರಷ್ಟಚಾರ ಹಾಗೂ ಅಧಿಕಾರ ದುರ್ಬಳಕೆ ಆರೋಪದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ (Lokayukta) ಮತ್ತೊಂದು ದೂರು ದಾಖಲಾಗಿದೆ. ಕರ್ನಾಟಕ ಲೋಕಾಯುಕ್ತದಲ್ಲಿ ಸಿದ್ದರಾಮಯ್ಯ ವಿರುದ್ಧ ದಾಖಲಾದ 62ನೇ ದೂರು ಇದಾಗಿದೆ.
ಬಿಜೆಪಿ ನಾಯಕ ಎನ್.ಆರ್.ರಮೇಶ್ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ 1.3 ಕೋಟಿ ರೂಪಾಯಿ ಕಿಕ್ ಬ್ಯಾಕ್(ಲಂಚ) ಪಡೆದು, ಆಪ್ತ ಎಲ್.ವಿವೇಕಾನಂದಗೆ ಬೆಂಗಳೂರು ಟರ್ಫ್ ಕ್ಲಬ್‌ನ ಕಾರ್ಯಕಾರಿ ಸಮಿತಿ ಸದಸ್ಯ ಹುದ್ದೆಗೆ ಮೂರು ವರ್ಷಗಳ ಅವಧಿಗೆ ನೇಮಿಸಿದ್ದರು.
2018ರ ಚುನಾವಣೆಯಲ್ಲಿ ಆಸ್ತಿ ಘೋಷಣೆ ವೇಳೆ ಸಾಲದ ರೂಪದಲ್ಲಿ ಪಡೆದಿರುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಆದರೆ, ಸಾಲವನ್ನು ವಾಪಸ್ ನೀಡಿಲ್ಲ. ಹೀಗಾಗಿ ಭ್ರಷ್ಟಚಾರ ನಿಗ್ರಹ ಕಾಯ್ದೆ ಕಲಂ 7,8,9,10 ಮತ್ತು 13 ಅಡಿ ದೂರು ದಾಖಲಿಸಿಕೊಂಡು ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಎನ್.ಆರ್. ಮನವಿ ಮಾಡಿದ್ದಾರೆ.
ಇದನ್ನೂ ಓದಿ | H.D. ಕುಮಾರಸ್ವಾಮಿ ಕನಸಿನ ಯೋಜನೆಗೆ ಆರಂಭದಲ್ಲೇ ಅಡ್ಡಿ: ಪಂಚರತ್ನ ರಥಯಾತ್ರೆ ಮುಂದೂಡಿಕೆ
ಈ ಬಗ್ಗೆ ಎನ್.ಆರ್.ರಮೇಶ್ ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಯಾವುದೇ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರು ತಮ್ಮ ಸಂಬಂಧಿಕರಿಗೆ, ಆತ್ಮೀಯರಿಗೆ ಲಾಭದಾಯಕ ಹುದ್ದೆಗಳಿಗೆ ಶಿಫಾರಸು ಮಾಡುವುದು ಕಾನೂನುರೀತ್ಯಾ ಅಪರಾಧವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಕಳೆದ 40 ವರ್ಷಗಳಿಂದ ನನ್ನ ಆತ್ಮೀಯ ಗೆಳೆಯನಾಗಿರುವ ಎಲ್.ವಿವೇಕಾನಂದ ಅವರನ್ನು ಬೆಂಗಳೂರು ಟರ್ಫ್ ಕ್ಲಬ್‌ನ ಆಯಕಟ್ಟಿನ ಉಸ್ತುವಾರಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಗಳಿಗೆ ನೇಮಕ ಮಾಡಿದ್ದೆ. ಅಲ್ಲದೇ ನಿವೇಶನ ಕೊಂಡುಕೊಳ್ಳಲು ವಿವೇಕಾನಂದ ಅವರಿಂದ 1.3 ಕೋಟಿ ರೂ.ಗಳನ್ನು ಚೆಕ್ ಮೂಲಕ ಸಾಲವನ್ನಾಗಿ ಪಡೆದುಕೊಂಡಿದ್ದು, ಅದನ್ನು ಈವರೆಗೂ ವಾಪಸ್ ನೀಡಿಲ್ಲ ಎಂದು ಸ್ವತಃ ಸಿದ್ದರಾಮಯ್ಯ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿರುವುದಾಗಿ ತಿಳಿಸಿದ್ದಾರೆ.
ಎಲ್.ವಿವೇಕಾನಂದ ಅವರಿಂದ ಸಾಲ ಪಡೆದು 7 ವರ್ಷಗಳೇ ಮುಗಿದು ಹೋದರೂ ಸಿದ್ದರಾಮಯ್ಯ ಹಣ ಹಿಂತಿರುಗಿಸಿಲ್ಲ. ಹೀಗಿದ್ದಾಗ ಎಲ್.ವಿವೇಕಾನಂದ ಅವರಿಂದ ಪಡೆದ ಹಣ ಕಿಕ್ ಬ್ಯಾಕ್ ಅಲ್ಲದೇ ಮತ್ತೇನು ಎಂಬ ವಿಷಯಗಳನ್ನು ಲೋಕಾಯುಕ್ತರ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | Corruption | ಖಾಲಿ ಪೇಪರ್ ಇದ್ರೂ ಡಿವೈಎಸ್ಪಿ ಪೋಸ್ಟ್; ಎಂಟಿಬಿ ಬಳಿಕ ಈಗ ಚಿಂಚನಸೂರು ಹೇಳಿಕೆ, ಸರ್ಕಾರಕ್ಕೆ ಮುಜುಗರ!