ಮಡಿಕೇರಿ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಕಾರಿನತ್ತ ಮೊಟ್ಟೆ ಎಸೆದ ಸಂಪತ್ ಕಾಂಗ್ರೆಸ್ ಕಾರ್ಯಕರ್ತನೇ, ಬಿಜೆಪಿ ಬೆಂಬಲಿಗನೇ ಎಂಬ ಬಗ್ಗೆ ವಾದ ವಿವಾದ ತಾರಕಕ್ಕೇರಿದೆ. ಸೋಮವಾರಪೇಟೆ ಮೂಲದ ಸಂಪತ್‌ನನ್ನು ಕುಶಾಲನಗರ ನ್ಯಾಯಾಲಯದ ಮುಂದೆ ಪೊಲೀಸರು ಬಂಧಿಸಿದರು. ಈ ವೇಳೆ ಆತ ತಾನು ಕಾಂಗ್ರೆಸ್ ಕಾರ್ಯಕರ್ತ, ಸಿದ್ದರಾಮಯ್ಯ ಅವರ ನಡವಳಿಕೆಗೆ ಬೇಸತ್ತು ಮೊಟ್ಟೆ ಎಸೆದಿದ್ದೆ ಎಂದು ಹೇಳಿಕೊಂಡಿದ್ದ ಎನ್ನಲಾಗಿದೆ. ಇದೀಗ ಕಾಂಗ್ರೆಸ್ ಆತನಿಗೂ ಕಾಂಗ್ರೆಸ್‌ಗೂ ಸಂಬಂಧವೇ ಇಲ್ಲ ಎಂದು ವಾದ ಮಾಡಿದೆ. ಮತ್ತು ಆತ ಬಿಜೆಪಿ ಹಾಗೂ ಸಂಘ ಪರಿವಾರದ ಚಟುವಟಿಕೆಗಳಲ್ಲಿ ಸಕ್ರಿಯನಾಗಿರುವ ಭಾವಚಿತ್ರಗಳನ್ನು ಬಿಡುಗಡೆ ಮಾಡಿ ಸವಾಲು ಹಾಕಿದೆ. ಆತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮದಲ್ಲಿ ಗಣವೇಷಧಾರಿಯಾಗಿರುವ ಚಿತ್ರವೂ ಅದರಲ್ಲಿದೆ.
ʻʻಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಸಂಪತ್ ಕಾಂಗ್ರೆಸ್ ಕಾರ್ಯಕರ್ತ ಅಲ್ಲ. ಅದಕ್ಕೆ ಬೇಕಾದ ಎಲ್ಲಾ ಸಾಕ್ಷ್ಯಗಳನ್ನು ನಾವೀಗ ಬಿಡುಗಡೆ ಮಾಡಿದ್ದೇವೆʼʼ ಎಂದು ಮಡಿಕೇರಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಗೌಡ ಸ್ಪಷ್ಟನೆ ನೀಡಿದ್ದಾರೆ. ಅವರು ಬಿಡುಗಡೆ ಮಾಡಿರುವ ಚಿತ್ರ ದಾಖಲೆಗಳಲ್ಲಿ ಆತ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಗಣವೇಷಧಾರಿಯಾಗಿ ಭಾಗವಹಿಸಿರುವ ಚಿತ್ರವೂ ಇದೆ. ಜತೆಗೆ ಹಲವು ಪರಿವಾರ ನಾಯಕರ ಜತೆ ಫೋಟೊ ತೆಗೆಸಿಕೊಂಡಿದ್ದು ಕಂಡುಬಂದಿದೆ. ಪರಿವಾರದ ನಾಯಕರು ಮುಂಚೂಣಿಯಲ್ಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ, ಟ್ಯಾಬ್ಲೋಗಳಲ್ಲಿ ಆತ ಸಕ್ರಿಯವಾಗಿರುವುದು ಕಂಡುಬಂದಿದೆ.
ʻʻಅವನು ಕಾಂಗ್ರೆಸ್ ಕಾರ್ಯಕರ್ತ ಆಗಿದ್ದರೆ ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಸೋಮವಾರಪೇಟೆ ಮೂಲದ ಆತ. ನಾನೂ ಕೂಡ ಸೋಮವಾರಪೇಟೆಯವನು. ಎಂದೂ ಕೂಡ ಅವನು ನಮ್ಮ ಕಾರ್ಯಕ್ರಮದಲ್ಲಿ ಕಂಡಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ರೆ ಸಾಕ್ಷಿ ಕೊಡಿ. ಸಾಕ್ಷಿ ನೀಡಿದರೆ ಅವನು ಕಾಂಗ್ರೆಸ್ ಕಾರ್ಯಕರ್ತ ಅಂತ ಒಪ್ಪಿಕೊಳ್ಳೋಕೆ ರೆಡಿ ಇದ್ದೇವೆʼʼ ಎಂದು ಮಿಥುನ್ ಸವಾಲು ಹಾಕಿದರು. ನಾವು ಇಷ್ಟೊಂದು ದಾಖಲೆ ಕೊಟ್ಟಿದ್ದೇವೆ. ಇದಕ್ಕೆ ಉತ್ತರಿಸಿ ಎಂದಿದ್ದಾರೆ.
ʻʻಯಾವುದೋ ಒಂದು ಶಲ್ಯ ಹಾಕೊಂಡು ಫೋಟೊ ಹಿಡಿದ ತಕ್ಷಣ ಕೈ ಕಾರ್ಯಕರ್ತ ಆಗಲ್ಲ. ಬಿಜೆಪಿ ಶಾಸಕರು ಅವನ ಹೆಗಲ ಮೇಲೆ ಕೈ ಹಾಕಿಕೊಂಡ ಫೋಟೊ ಇದೆ. ಸೋಮವಾರ ಪೇಟೆ ಭಾಗದ ಜಿಲ್ಲಾ ಪಂಚಾಯಿತಿ ಕಾಮಗಾರಿಗಳನ್ನು ಆತ ಮಾಡಿದ ದಾಖಲೆಗಳಿವೆ. ಮೊನ್ನೆ ಆತನ ಬಂಧನವಾದಾಗ ಬಿಜೆಪಿ ನಾಯಕರೇ ಬಿಡಿಸಿದ್ದು. ಇವತ್ತು ಕೂಡಾ ಅವನಿಗೆ ಜಾಮೀನು ಕೊಡಿಸಲು ಯತ್ನಿಸಿದ್ದು ಬಿಜೆಪಿ ನಾಯಕರೇʼʼ ಎಂದು ಹೇಳಿದರು ಮಿಥುನ್ ಗೌಡ.
ಶಾಸಕರ ಆಮಿಷದಿಂದ ಸುಳ್ಳು ಹೇಳಿದ
ʻʻಬಿಜೆಪಿ ಶಾಸಕರು ಅವನ ಹೆಗಲ ಮೇಲೆ ಕೈ ಹಾಕಿಕೊಂಡ ಫೋಟೋ ಇದೆ. ಸೋಮವಾರಪೇಟೆ ಭಾಗದ ಜಿಲ್ಲಾ ಪಂಚಾಯತ್ ಕಾಮಗಾರಿಗಳನ್ನು ಸಂಪತ್ ಮಾಡ್ತಿದ್ದಾನೆ. ಶಾಸಕರ ಆಮಿಷಕ್ಕೆ ಒಳಗಾಗಿ ಸಂಪತ್ ತಾನು ಕಾಂಗ್ರೆಸ್ ಕಾರ್ಯಕರ್ತ ಅಂತ ಹೇಳಿದ್ದಾನೆʼʼ ಎಂದು ಹೇಳಿದ ಮಿಥುನ್ ಗೌಡ ಅವರು, ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಬ್ರಿಟಿಷರ ಸಂತತಿ ಎಂದಿದ್ದಾರೆ.
ಬಿಜೆಪಿಯವರೇಕೆ ಜಾಮೀನು ಕೊಡಿಸಿದರು?
ʻʻಸಂಪತ್ ಶಾಸಕರ ಜತೆ ಇರುವ ಫೋಟೊಗಳೇ ಇವೆ. ಅದೇ ಹೇಳುತ್ತದೆ ಆತ ಬಿಜೆಪಿ ಕಾರ್ಯಕರ್ತ ಅಂತ. ಕುಶಾಲನಗರದಲ್ಲಿ ಆತ ಅರೆಸ್ಟ್ ಆದಾಗ ಜಾಮೀನು ಕೊಟ್ಟು ಬಿಡಿಸಿದ್ಯಾರು?ʼʼ ಎಂದು ಪ್ರಶ್ನಿಸಿದ್ದಾರೆ ಕೆಪಿಸಿಸಿ ಕಾನೂನು ಘಟಕದ ಮುಖ್ಯಸ್ಥ ಎ ಎಸ್ ಪೊನ್ನಣ್ಣ.