Site icon Vistara News

Karnataka Election: ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿರುವ ನನಗೆ ಕಾಂಗ್ರೆಸ್ ಧಮ್ಕಿ ಹಾಕುತ್ತಿದೆ; ಪ್ರಧಾನಿ ನರೇಂದ್ರ ಮೋದಿ

Congress is threatening me for fighting against corruption Says PM Narendra Modi

ಕೋಲಾರ, ಕರ್ನಾಟಕ: ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಇದಿರಂದ ಹೆಚ್ಚು ತೊಂದರೆಯಾಗುತ್ತಿರುವುದು ಕಾಂಗ್ರೆಸ್‌ಗೆ. ಹಾಗಾಗಿ, ನನ್ನ ವಿರುದ್ಧ ಅವರ ದ್ವೇಷ ಕೂಡ ಹೆಚ್ಚುತ್ತಿದೆ. ಅವರೀಗ ನನಗೆ ಧಮ್ಕಿ ಹಾಕುತ್ತಿದ್ದಾರೆ. ಮೋದಿ ನಿನಗೆ ಸಮಾಧಿ ನಿರ್ಮಾಣ ಮಾಡುತ್ತೇವೆ ಎನ್ನುತ್ತಿದ್ದಾರೆ ಎಂದು ನರೇಂದ್ರ ಮೋದಿ (PM Narendra Modi) ಅವರು ಹೇಳಿದರು.(Karnataka election 2023).

ಕೋಲಾರದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕರ್ನಾಟಕದಲ್ಲಿ ಚುನಾವಣಾ ವಸ್ತು ಹಾವು ಆಗಿದೆ. ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿರುವ ನನ್ನನ್ನು ವಿಷದ ಸರ್ಪಕ್ಕೆ ಹೋಲಿಸಿದ್ದಾರೆ. ಆ ಮೂಲಕ ಜನರಿಂದ ಮತ ಕೇಳುತ್ತಿದ್ದಾರೆ. ಪರಮಾತ್ಮ ಶಂಕರನ ಕುತ್ತಿಗೆಯಲ್ಲಿ ಹಾವು ಇರುವುದು ಒಂದು ಶೋಭೆ. ನನಗೆ ಜನರೇ ಈಶ್ವರ ಸ್ವರೂಪಿಗಳು. ಹಾಗಾಗಿ, ಈ ಜನರ ಕೊರಳಲ್ಲಿ ಹಾವಾಗಿರಲು ನನಗೆ ಮಂಜೂರು ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೋಲಾರದಲ್ಲಿ ಮೋದಿ ಚುನಾವಣಾ ಪ್ರಚಾರ

ಸಂತರು, ಸುಂಸ್ಕೃತರ ನಾಡಾಗಿರುವ ಕರ್ನಾಟಕದಲ್ಲಿನ ಜನರು ಮೇ 10ರಂದು ಕಾಂಗ್ರೆಸ್ ಈ ಬೈದಾಟ ರಾಜಕೀಯಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಮೋದಿಯನ್ನು ಹಾವಿಗೆ ಹೋಲಿಸಿದ ಜನರಲ್ಲಿ ಸಿಟ್ಟು ಇದೆ. ಆ ಆಕ್ರೋಶವು ಮೇ 10ರಂದು ಕಾಂಗ್ರೆಸ್ ವಿರುದ್ಧ ಬಿಜೆಪಿಯ ಪರವಾಗಿ ಮತವನ್ನು ನೀಡುವ ಮೂಲಕ ಹೊರ ಹಾಕಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಕಾಂಗ್ರೆಸ್ ಎಂದಿಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವುದಿಲ್ಲ, ತನಿಖೆಯನ್ನು ಕೈಗೊಳ್ಳುವುದಿಲ್ಲ. ಈವರೆಗೂ, ಭ್ರಷ್ಟಾಚಾರಕ್ಕೆ ಆಸ್ಪದ ಇಲ್ಲದಂಥ ಒಂದೇ ಒಂದು ಯೋಜನೆಯನ್ನು ಅದು ಜಾರಿಗೆ ತಂದಿಲ್ಲ. ಕಾಂಗ್ರೆಸ್ ರಾಜ ಪರಿವಾರದ ನಾಯಕರು ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ. ಜಾಮೀನು ಮೇಲೆ ಜೈಲಿನಿಂದ ಹೊರಗೆ ಇದ್ದಾರೆ. ಅಂಥವರು ಕಾಂಗ್ರೆಸ್ ಜನರಿಗೆ ಉಪದೇಶ ನೀಡುತ್ತಿದ್ದಾರೆ. 2014ಕ್ಕಿಂತ ಮುಂಚೆ 9 ವರ್ಷಗಳಲ್ಲಿ 5 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿಯಾಗಿತ್ತು. ಅದೇ ಬಿಜೆಪಿ ಸರ್ಕಾರ ಬಂದ ಮೇಲೆ 9 ವರ್ಷಗಳಲ್ಲಿ ಲೂಟಿಯಾದ 1 ಲಕ್ಷ ಕೋಟಿ ರೂ.ಗೂ ಅಧಿಕ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಬಿಜೆಪಿ ಭ್ರಷ್ಟಾಚಾರದ ವಿರುದ್ದ ಪ್ರಹಾರ ನಡೆಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು..

2005ರಲ್ಲಿ ಕಾಂಗ್ರೆಸ್ ಒಂದು ಗ್ಯಾರಂಟಿ ನೀಡಿತ್ತು. 2009ರ ಹೊತ್ತಿಗೆ ಎಲ್ಲ ಮನೆಗಳಿಗೆ ವಿದ್ಯುತ್ ನೀಡುವ ಗ್ಯಾರಂಟಿ ಅದು. ಆದರೆ, ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದರೂ ಆ ಗ್ಯಾರಂಟಿಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ. 2014ರಲ್ಲಿ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದಾಗ ಈ ವಿಷಯ ಕೇಳಿ ಆಶ್ಚರ್ಯವಾಯಿತು. ಮನೆಗೆ ವಿದ್ಯುತ್ ಬಿಡಿ, 18 ಸಾವಿರ ಊರುಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಆದರೆ, ಬಿಜೆಪಿ ಸರ್ಕಾರವು ಕೇವಲ ಸಾವಿರ ದಿನಗಳಲ್ಲಿ 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿತು. 2.5 ಕೋಟಿ ಜನರಿಗೆ ವಿದ್ಯುತ್ ಲಾಭವಾಗುವಂತೆ ಮಾಡಿತು. ಕಾಂಗ್ರೆಸ್ ಜನರಿಗೆ ವಂಚನೆ ಮಾಡಿತ್ತು. ಬಿಜೆಪಿ ತನ್ನ ಮಾತು ಉಳಿಸಿಕೊಂಡಿತು ಎಂದು ಮೋದಿ ಹೇಳಿದರು.

ಇದನ್ನೂ ಓದಿ: Karnataka Election 2023: ಕಾಂಗ್ರೆಸ್ ಗ್ಯಾರಂಟಿ ಬೋಗಸ್; ಅವರ ಭರವಸೆ ಈಡೇರಿಸಿದ್ದು ಬಿಜೆಪಿ ಎಂದ ಮೋದಿ

ಮನೆ ಮನೆಗೆ ನನ್ನ ನಮಸ್ಕಾರ ತಿಳಿಸುವಿರಾ?

ಭಾಷಣದ ಕೊನೆಯಲ್ಲಿ ನೆರೆದಿದ್ದ ಕೋಲಾರ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟಾಸ್ಕ್ ನೀಡಿದರು. ಈ ಟಾಸ್ಕ್ ಜನರೂ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿ, ನೀವೆಲ್ಲ ನನ್ನ ಕೆಲಸ ಮಾಡಬೇಕು. ಏನೆಂದರೆ, ಪ್ರಧಾನಿ ನರೇಂದ್ರ ಮೋದಿ ಅವರು ಕೋಲಾರಕ್ಕೆ ಬಂದಿದ್ದರು. ನಿಮಗೆ ನಮಸ್ಕಾರ ತಿಳಿಸಿದ್ದಾರೆ ಮತ್ತು ಆಶೀರ್ವಾದ ಬೇಡಿದ್ದಾರೆಂದು ಕೈ ಮುಗಿದು ಹೇಳಬೇಕು ಎಂದು ಮೋದಿ ಹೇಳಿದರು. ಇದಕ್ಕೆ ಜನರು ತಮ್ಮ ಕೈಗಳನ್ನು ಮೇಲಕ್ಕೆ ಎತ್ತುವ ಮೂಲಕ ಒಪ್ಪಿಗೆ ಸೂಚಿಸಿದರು.

Exit mobile version