Site icon Vistara News

Karnataka Election 2023: ದಿಲ್ಲಿ ಕುಟುಂಬದ ಮುಂದೆ ಅಡ್ಡಡ್ಡ ಬೀಳುತ್ತಾರೆ ಕಾಂಗ್ರೆಸ್ ನಾಯಕರು; ಪ್ರಧಾನಿ ಮೋದಿ ಲೇವಡಿ

Congress leaders kneel Down in front of Delhi Gandhi family Says PM Modi

ಬೇಲೂರು, ಕರ್ನಾಟಕ: ಕರ್ನಾಟಕದ ಮಟ್ಟಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಂದು ಸಾಮ್ಯತೆ ಇದೆ. ಏನೆಂದರೆ, ಈ ಎರಡೂ ಪಕ್ಷಗಳು ಕುಟುಂಬದ ಪಕ್ಷಗಳಾಗಿವೆ. ಇಲ್ಲಿನ ಕರ್ನಾಟಕದ ಕಾಂಗ್ರೆಸ್ ನಾಯಕರು ಯಾವುದೇ ನಿರ್ಧಾರಕ್ಕೂ ದಿಲ್ಲಿಯ ತಮ್ಮ ಕುಟುಂಬದ ಎದುರು ಮಂಡಿಯೂರಿ ಕುಳಿತುಕೊಳ್ಳುತ್ತಾರೆ. ಜೆಡಿಎಸ್ ಪಕ್ಷವೇ ಒಂದು ಕೌಟುಂಬಿಕ ಪಕ್ಷವಾಗಿದೆ. ತಮ್ಮ ಪರಿವಾರದ ಹಿತ ಕಾಯುವುದಕ್ಕಾಗಿ ಎಲ್ಲ ಪ್ರಯತ್ನಗಳನ್ನು ಮಾಡುತ್ತದೆ. ಅವರಿಗೆ ತಮ್ಮ ಕುಟುಂಬದ ಉದ್ದಾರವೇ ಮುಖ್ಯವೇ ಹೊರತು ಜನರಲ್ಲ. ಅವರ ಬಳಿ ಜನರಿಗಾಗಿ ಯಾವುದೇ ಅಜೆಂಡಾಗಳಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ವಾಗ್ದಾಳಿ ನಡೆಸಿದರು (Karnataka Election 2023).

ಹಾಸನ ಜಿಲ್ಲೆಯ ಬೇಲೂರಿನಲ್ಲಿ ಆಯೋಜಿಸಲಾಗಿದ್ದ ಬೃಹತ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ದ ತೀವ್ರ ಟೀಕೆ ಮಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್ ಎರಡೂ ಪಕ್ಷಗಳ ಜತೆಗೆ ಒಂದು ಮಾತು ಸೇರಿಕೊಂಡಿದೆ. ಕರ್ನಾಟಕ ಕಾಂಗ್ರೆಸ್ ಘಟಕಕ್ಕೆ 24 ಗಂಟೆ ದಿಲ್ಲಿಯ ಕುಟುಂಬದ ಸೇವೆ ಮಾಡಬೇಕಾಗುತ್ತದೆ. ಅಭ್ಯರ್ಥಿ ನಿರ್ಧಾರ, ಸಿಎಂ ನಿರ್ಧಾರ ಹೀಗೆ ಯಾವುದೇ ನಿರ್ಧಾರ ಕೈಗೊಳ್ಳುವುದಿದ್ದರೂ ದಿಲ್ಲಿ ಕುಟುಂಬವನ್ನು ಕೇಳಬೇಕಾಗುತ್ತದೆ ಎಂದು ಗಾಂಧಿ ಕುಟುಂಬವನ್ನು ಹೆಸರಿಸದೇ ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದರು. ಅದೇ ರೀತಿ, ಕರ್ನಾಟಕ ಪಾರ್ಟಿ ಜೆಡಿಎಸ್‌ನಲ್ಲಿ ಕುಟುಂಬವೇ ಹೈಕಮಾಂಡ್. ಜೆಡಿಎಸ್ ಒಂದು ಕುಟಂಬ ಪ್ರೈವೇಟ್ ಪಾರ್ಟಿಯಾಗಿದೆ. ಈ ಪಕ್ಷದ ಮುಖವೊಂದು ತನ್ನ ಕುಟುಂಬವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದೆ ಎಂದು ದೇವೇಗೌಡರನ್ನು ಹೆಸರಿಸದೇ ಟೀಕಿಸಿದರು.

ಸಾಮಾನ್ಯರ ಕುಟುಂಬವೇ ಬಿಜೆಪಿ ಕುಟುಂಬ

ಆದರೆ, ಬಿಜೆಪಿ ಮಾತ್ರವೇ ಅಂಥ ಒಂದು ಪಕ್ಷವಾಗಿದೆ; ಕರ್ನಾಟಕದ ಸಾಮಾನ್ಯರ ಕುಟುಂಬವನ್ನು ತನ್ನ ಕುಟುಂಬ ಎಂದು ಭಾವಿಸುತ್ತದೆ. ಈ ಬಡವರ ಕುಟುಂಬಗಳಿಗೆ ಕಾಳಜಿ ವಹಿಸುತ್ತದೆ. ನಿಮ್ಮ ಕುಟುಂಬಗಳ ಮುಕ್ತ, ನಿಸ್ವಾರ್ಥ ಸೇವಾಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಬಿಜೆಪಿ ತನ್ನ ಕುಟುಂಬಗಳಿಗೆ ಮುಕ್ತವಾಗಿ ಕೋರೋನಾ ಚುಚ್ಚು ಮುದ್ದು ನೀಡಿದೆ. ಬಿಜೆಪಿಗೆ ಮಾತ್ರವೇ ಬಡವರ ಕುಟುಂಬಗಳ ಬಗ್ಗೆ ಮಾತ್ರ ಕಾಳಜಿ ಇರುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಬಿಜೆಪಿ ಕರ್ನಾಟಕದ ಸಂಸ್ಕೃತಿ, ಸಂಪ್ರದಾಯಗಳನ್ನು ಗೌರವಿಸಿ, ಗುರುತಿಸುತ್ತಿದೆ. ಆದರೆ ಕಾಂಗ್ರೆಸ್ ಯಾವತ್ತೂ ಕರ್ನಾಟಕದ ಸಾಂಸ್ಕೃತಿಕ ಬೆಳವಣಿಗೆಗೆ ಸಹಾಕರಿ ಆಗಿಲ್ಲ. ಕೇಂದ್ರ ಸರ್ಕಾರವು ಬೇಲೂರು ಚನ್ನಕೇಶವ, ಹಳೇಬೀಡು ಹೊಯ್ಸಳ ದೇವಾಲಯಗಳನ್ನು ಯುನೇಸ್ಕೊ ಪಟ್ಟಿಗೆ ಸೇರಿಸಲು ಯತ್ನಿಸಿದೆ. ಕಾಂಗ್ರೆಸ್ ಯಾವತ್ತೂ ಈ ರೀತಿಯ ಕೆಲಸ ಮಾಡಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ಕಾಂಗ್ರೆಸ್‌ನಿಂದ 85 ಪರ್ಸೆಂಟ್ ಲೂಟಿ

ಕಾಂಗ್ರೆಸ್ ಸರ್ಕಾರವು ಯಾವುದೇ ಪರಿಸ್ಥಿತಿಯಲ್ಲೂ 85 ಪರ್ಸೆಂಟ್ ಲೂಟಿ ಮಾಡುತ್ತಿತ್ತು. ಈ ವಿಷಯವು ಕರ್ನಾಟಕದ ಜನರಿಗೂ ಗೊತ್ತು. ಆದರೆ, ಇಂದು ಬಿಜೆಪಿಯ ಸರ್ಕಾರದಿಂದಾಗಿ ಕೇಂದ್ರ ಸರ್ಕಾರದಿಂದ ಎಲ್ಲ ಯೋಜನೆಗಳು ಫಲಾನುಭವಿಗಳಿಗೆ ಯಾವುದೇ ಭ್ರಷ್ಟಾಚಾರವಿಲ್ಲದೇ ತಲುಪುತ್ತಿವೆ. ಬಿಜೆಪಿ ಸರ್ಕಾರದ ಆಡಳಿತದಿಂದ ಕರ್ನಾಟಕದಲ್ಲಿ ಹೂಡಿಕೆಗೆ ಅನುಕೂಲವಾಗಿದೆ. ದೇಶದಲ್ಲೇ ಮಾದರಿ ರಾಜ್ಯವಾಗಲು ಸಹಕಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಅಸ್ಥಿರ ರಾಜಕಾರಣವನ್ನು ಕರ್ನಾಟಕವು ಈ ಬಾರಿ ಅಂತ್ಯಗೊಳಿಸಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಸ್ಥಿರ ಸರ್ಕಾರದ ಪ್ರತೀಕಗಳಾಗಿವೆ. ದೇಶದಲ್ಲಿ ಯಾವೆಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಉಳಿದಿದೆಯೋ ಅಲ್ಲೆಲ್ಲ, ನಾಯಕರ ಒಳ ಜಗಳವೇ ಪ್ರಧಾನವಾಗಿದೆ. ರಾಜಸ್ಥಾನ, ಛತ್ತೀಸ್‌ಗಢದಲ್ಲಿ ನಾವು ಕಾಣಬಹುದು. ಅಲ್ಲಿನ ಜನರಿಗೆ ಪ್ರಾಮಾಣಿಕ ಅಭಿವೃದ್ಧಿ ಕೆಲಸಗಳೇ ಆಗುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳೆಲ್ಲ ಬೋಗಸ್ ಆಶ್ವಾಸನೆಗಳಾಗಿವೆ. ಚುನಾವಣೆ ವೇಳೆ ನೀಡಿದ್ದ ಎಲ್ಲ ಗ್ಯಾರಂಟಿಗಳು ಶುದ್ಧ ಸುಳ್ಳಿನ ಕಂತೆಗಳಾಗಿವೆ. ಹಾಗೆಯೇ ಕರ್ನಾಟಕದಲ್ಲಿ ಜೆಡಿಎಸ್ ಕೂಡ 15, 20 ಸೀಟುಗಳನ್ನು ಗೆದ್ದು ಅಧಿಕಾರದ ಕನಸು ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜರಿದರು.

ಇದನ್ನೂ ಓದಿ: Karnataka Election: ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿರುವ ನನಗೆ ಕಾಂಗ್ರೆಸ್ ಧಮ್ಕಿ ಹಾಕುತ್ತಿದೆ; ಪ್ರಧಾನಿ ನರೇಂದ್ರ ಮೋದಿ

ಜೆಡಿಎಸ್‌ಗೆ ನೀಡುವ ಪ್ರತಿ ಮತ ಕಾಂಗ್ರೆಸ್‌ಗೆ ಹಾಕಿದಂತೆ…

ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್ ಒಂದಕ್ಕೊಂದು ವಿರೋಧಿಯಾಗಿವೆ. ಆದರೆ, 2018 ಚನಾವಣೆಯಲ್ಲಿ ಕಾಂಗ್ರೆಸ್ ನಾಯಕರು, ಜೆಡಿಎಸ್ ನಾಯಕರ ಘೋಷಣೆಗಳು, ಅವರ ವಿಡಿಯೋಗಳನ್ನು ತೆಗೆದು ನೋಡಿ. ಒಬ್ಬರಿಗೊಬ್ಬರು ಬೇಯುತ್ತಿದ್ದರು, ಟೀಕೆ ಮಾಡುತ್ತಿದ್ದರು. ಚುನಾವಣೆ ಮುಗಿಯುತ್ತಿದ್ದಂತೆ ಎರಡೂ ಪಕ್ಷಗಳು ಒಂದಕ್ಕೊಂದು ಕೈ ಜೋಡಿಸಿದ್ದವು. ಕಾಂಗ್ರೆಸ್ ಜೆಡಿಎಸ್ ಮಧ್ಯೆ ಈಗಲೂ ಟೀಕೆ ಟಿಪ್ಪಣಿಗಳು ಕೇವಲ ತೋರಿಕೆ ಮಾತ್ರ. ಜೆಡಿಎಸ್ ಕಾಂಗ್ರೆಸ್ ಎಲ್ಲ ವಿಷಯದಲ್ಲೂ ಒಂದಾಗಿ ಇರುತ್ತವೆ. ನೀವು ನೆನಪಿಡಬೇಕು. ಜೆಡಿಎಸ್‌ಗೆ ನೀಡುವ ಪ್ರತಿ ಮತವು ಕಾಂಗ್ರೆಸ್‌ಗೆ ಹೋಗುವುದು. ಕಾಗ್ರೆಸ್‌ಗೆ ಮತ ನೀಡುವುದು ಎಂದರೆ ಕರ್ನಾಟಕ ಅಭಿವೃದ್ಧಿಗೆ ಬ್ರೇಕ್ ಹಾಕಿದ ಹಾಗೆ, ರಿವರ್ಸ್ ಗೇರ್‌ನಲ್ಲಿ ಹೋದ ಹಾಗೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

Exit mobile version