ಚಿತ್ರದುರ್ಗ, ಕರ್ನಾಟಕ: ಕರ್ನಾಟಕ ವಿಧಾಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಗ್ಯಾರಂಟಿ ಕಾರ್ಡ್‌ಗಳ ಮೂಲಕ ಭಾರೀ ಸದ್ದು ಮಾಡುತ್ತಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ಇಡೀ ದೇಶದಲ್ಲೇ ಕಾಂಗ್ರೆಸ್‌ನ ವಾರಂಟಿ ಮುಗಿದಿರುವಾಗ, ಆ ಪಕ್ಷ ನೀಡುವ ಗ್ಯಾರಂಟಿಗಳಿಗೆ ಬೆಲೆಯೇ ಇಲ್ಲ ಎಂದು ಲೇವಡಿ ಮಾಡಿದ್ದಾರೆ(Karnataka Election 2023).
ಮಂಗಳವಾರ ಚಿತ್ರದುರ್ಗದಲ್ಲಿ ಆಯೋಜಿಸಲಾಗಿದ್ದ ಬಿಜೆಪಿಯ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಾರುಕಟ್ಟೆಯಲ್ಲಿ ಯಾವುದೇ ಕಂಪನಿ ತನ್ನ ವಸ್ತುಗಳನ್ನು ಮಾರಾಟ ಮಾಡುವಾಗ ವಾರಂಟಿ ನೀಡುತ್ತದೆ. ಒಂದಿಷ್ಟು ಸಮುಯದ ಬಳಿಕ ವಾರಂಟಿ ಮುಗಿಯುತ್ತದೆ. ಆಗ ಕಂಪನಿಗೂ ಹಾಗೂ ಆ ವಸ್ತುವಿಗೆ ಸಂಬಂಧವೇ ಇರುವುದಿಲ್ಲ. ಕಾಂಗ್ರೆಸ್ ಪಕ್ಷ ಕೂಡ ಹಾಗೆ ಆಗಿದೆ. ದೇಶಾದ್ಯಂತ ಕಾಂಗ್ರೆಸ್ ಪಕ್ಷದ ವಾರಂಟಿ ಮುಗಿದಿದೆ. ವಿಶ್ವಾಸರ್ಹತೆಯನ್ನು ಕಳೆದುಕೊಂಡಿದೆ. ವಾರಂಟಿ ಇಲ್ಲದ ಕಾಂಗ್ರೆಸ್ ನೀಡುವ ಗ್ಯಾರಂಟಿಗಳಿಗೆ ಬೆಲೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಚಿತ್ರದುರ್ಗ ಪ್ರಧಾನಿ ನರೇಂದ್ರ ಮೋದಿ ಭಾಷಣ
ಸುಳ್ಳು ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಟ್ರ್ಯಾಕ್ ರೆಕಾರ್ಡ್ ಇದೆ. 2012ರ ಸಮಯ. ಗುಜರಾತ್‌ನ ಎಲೆಕ್ಷನ್ ಟೈಮ್‌ನಲ್ಲಿ ಕಾಂಗ್ರೆಸ್ ಇದೇ ರೀತಿ ಗ್ಯಾರಂಟಿ ಬಗ್ಗೆ ಭಾರೀ ಪ್ರಚಾರ ಮಾಡುತ್ತಿತ್ತು. ಪ್ರಚಾರಕ್ಕೆ ಹೋದ ಕಡೆ ಮಾದರಿ ಮನೆಯೊಂದನ್ನು ತೋರಿಸುತ್ತಿತ್ತು ಮತ್ತು ಅಂಥ ಮನೆಗಳ ನಿರ್ಮಾಣ ಅಗತ್ಯವಿರುವವರು ಫಾರ್ಮ್ ಭರ್ತಿ ಮಾಡಿಕೊಳ್ಳುತ್ತಿತ್ತು. ಆದರೆ, ಈ ಫಾರ್ಮ್ ಭರ್ತಿ ಮಾಡಿಕೊಳ್ಳುವಾಗ ಕಾಂಗ್ರೆಸ್‌ವರು 200 ರೂ. 500 ರೂ. ಲಂಚ ಸ್ವೀಕರಿಸುತ್ತಿದ್ದರು. ಹಾಗೆಯೇ, ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡುತ್ತಿದೆ. ಇಲ್ಲೂ ಭ್ರಷ್ಟಾಚಾರ ನಡೆಯುತ್ತಿದೆಯೇ ಎಂಬ ಬಗ್ಗೆ ತನಿಖೆ ನಡಿಸಬೇಕು ಎಂದು ವ್ಯಂಗ್ಯವಾಗಿ ಹೇಳಿದರು.
ಕರ್ನಾಟಕದ ಖಜಾನೆ ಖಾಲಿ ಆದೀತು…
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲು ಖಚಿತವಾಗಿದೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ದೊಡ್ಡ ದೊಡ್ಡ ಸುಳ್ಳುಗಳ ಭರವಸೆಯನ್ನು ನೀಡುತ್ತಿದೆ. ಒಂದು ವೇಳೆ, ಕಾಂಗ್ರೆಸ್ ಪಕ್ಷ ಘೋಷಿಸಿರುವ ಯೋಜನೆಗಳ ಜಾರಿಗೆ ಮುಂದಾದರೆ ಕರ್ನಾಟಕದ ಖಜಾನೆಯೇ ಖಾಲಿಯಾಗಿ ಬಿಡುತ್ತದೆ. ರಾಜ್ಯದಲ್ಲಿನ ಎಲ್ಲ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಬೇಕಾಗುತ್ತದೆ. ನಿಮ್ಮ ಹಾಗೂ ನಿಮ್ಮ ಮಕ್ಕಳ ಭವಿಷ್ಯದ ಗತಿ ಏನು? ಬಿಜೆಪಿ ಜಾರಿ ಮಾಡಿರುವ ಎಲ್ಲ ಅಭಿವೃದ್ಧಿ ಯೋಜನೆಗಳಿಗೆ ಬ್ರೇಕ್ ಬೀಳಲಿದೆ. ಹಾಗಾಗಿ ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಮಾರುಹೋಗಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಕಾಂಗ್ರೆಸ್ ಉದ್ದೇಶವೇ ಬೇರೆಯಾಗಿದೆ. ಬಿಜೆಪಿಯದ್ದು ಅಭಿವೃದ್ಧಿ ಉದ್ದೇಶವಾದರೆ, ಕಾಂಗ್ರೆಸ್ ದುರುದ್ದೇಶವನ್ನು ಇಟ್ಟುಕೊಂಡಿದೆ. ಕಾಂಗ್ರೆಸ್ ಲಿಂಗಾಯತರಿಗೆ ಅವಮಾನ ಮಾಡುತ್ತಿದೆ. ಹಿಂದುಳಿದ ವರ್ಗಗಳಿಗೆ ಅವಮಾನ ಮಾಡುತ್ತಿದೆ. ವೈಯಕ್ತಿಕವಾಗಿ ನನಗಂತೂ ಬೈಗುಳಗಳ ಮಳೆಯನ್ನು ಸುರಿಸುತ್ತಿದ್ದಾರೆ. ಬಹುಶಃ ಅವರ ಬೈಗುಳಗಳು ಶೀಘ್ರವೇ ಸೆಂಚ್ಯೂರಿ ಬಾರಿಸಲಿದೆ. ಕರ್ನಾಟಕದಲ್ಲಿ ಜಲಿಂಗಪ್ಪ ಅವರಿಗೂ ಕಾಂಗ್ರೆಸ್ ಅವಮಾನ ಮಾಡಿತ್ತು. ಹಾಗಾಗಿ, ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಪಕ್ಷವನ್ನು ತೊಡೆದು ಹಾಕಲು ಬಿಜೆಪಿಗೆ ಆಶೀರ್ವಾದ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಇದನ್ನೂ ಓದಿ: Karnataka Election 2023: ಏಳು ಸುತ್ತಿನ ಕೋಟೆಯಂತೆ ಬಿಜೆಪಿಯ ಏಳು ಸುರಕ್ಷತೆಯ ಯೋಜನೆಗಳು; ಪ್ರಧಾನಿ ಮೋದಿ ಬಣ್ಣನೆ
ಭದ್ರಾ ಮೇಲ್ದಂಡೆ ಯೋಜನೆ
ಚಿತ್ರದುರ್ಗಕ್ಕೆ ನೀರಾವರಿ ಕಲ್ಪಿಸಲಿರುವ ಭದ್ರಾ ಮೇಲ್ದಂಡೆ ಕಾಲುವೆ ಯೋಜನೆಯ ನಿರ್ಲಕ್ಷ್ಯವು ಕಾಂಗ್ರೆಸ್ ಮತ್ತು ಜೆಡಿಎಸ್ ದುರಾಡಳಿತದ ಪ್ರತೀಕವಾಗಿದೆ. ಆದರೆ, ಬಿಜೆಪಿ ಈಯೋಜನೆಗೆ ಆದ್ಯತೆ ನೀಡಿ, 5 ಸಾವಿರ ಕೋಟಿ ರೂಪಾಯಿಯನ್ನು ಒದಗಿಸಿದೆ. ಅಲ್ಲದೇ ಕಾಲಮಿತಿಯಲ್ಲಿ ಯೋಜನೆಯನ್ನು ಪೂರ್ತಿ ಮಾಡಲಿದೆ. ಇದರಿಂದ ಚಿತ್ರದುರ್ಗ ಹಾಗೂ ಈ ಭಾಗದ ರೈತರಿಗೆ ನೆರವು ದೊರೆಯಲಿದೆ. ಅಲ್ಲದೇ ಜಿಲ್ಲೆಯ ವಾಣಿ ವಿಲಾಸ ಸಾಗರವನ್ನು ಆಧುನೀಕರಣಕ್ಕಾಗಿ ಕೋಟ್ಯಂತರ ರೂಪಾಯಿ ಮೀಸಲಿಟ್ಟಿದೆ. ಈ ಎರಡೂ ಕಾರ್ಯಗಳಿಂದ ಭಾಗದ ರೈತರಿಗೆ ನೀರಾವರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.