ಬೆಂಗಳೂರು: ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ನಡೆದ ಅಗ್ನಿ ಅವಘಡದಲ್ಲಿ 9 ಮಂದಿ ಗಾಯಗೊಂಡಿದ್ದಾರೆ. ಆದರೆ, ಈ ಪ್ರಕರಣ ರಾಜಕೀಯ ತಿರುವು ಪಡೆದಿದೆ. ಪ್ರಕರಣವು (Fire Accident) ಆಕಸ್ಮಿಕವಲ್ಲ, ಇದು ಬಿಜೆಪಿಯ ಷಡ್ಯಂತ್ರ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಬಿಬಿಎಂಪಿ ಕಚೇರಿಯ ಕಾಮಗಾರಿಗಳ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಕಾಮಗಾರಿಗಳ ದಾಖಲೆ ಇದ್ದಂತಹ ಕೊಠಡಿಗೆ ಬೆಂಕಿ ಬಿದ್ದಿರುವುದು ಆಕಸ್ಮಿಕವಲ್ಲ, ಷಡ್ಯಂತ್ರ. 40 ಪರ್ಸೆಂಟ್ ಕಮಿಷನ್‌ನ ಕಳಪೆ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸಿದ ಬೆನ್ನಲ್ಲೇ ದಾಖಲೆಗಳಿದ್ದ ಕೊಠಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಇದರ ಹಿಂದೆ ಬಿಜೆಪಿ ಕೈವಾಡವಿದೆ. ಭ್ರಷ್ಟರನ್ನು ಹೆಡೆಮುರಿ ಕಟ್ಟುವುದು ನಿಶ್ಚಿತ ಎಂದು ತಿಳಿಸಿದೆ.
ಇದನ್ನೂ ಓದಿ | Fire Accident: ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಬೆಂಕಿ; 9 ಮಂದಿಗೆ ಗಾಯ, ನಾಲ್ವರು ಗಂಭೀರ
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವಾಗಲಿ: ಎಂಎಲ್‌ಸಿ ಎನ್.ರವಿಕುಮಾರ್
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಗ್ನಿ ಅವಘಡ ಪ್ರಕರಣದ ಬಗ್ಗೆ ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್ ಪ್ರತಿಕ್ರಿಯಿಸಿ, ಕಚೇರಿಗೆ ಬೆಂಕಿ ಬಿದ್ದಿದ್ದೋ ಅಥವಾ ಹಚ್ಚಿರುವುದೋ ಎಂಬುವುದು ಗೊತ್ತಾಗಬೇಕಿದೆ. ಯಾವುದಾದರೂ ಕಡತ ನಾಶಮಾಡಲು ಈ ರೀತಿ ಮಾಡಿದ್ದಾರಾ ಎಂಬುವುದರ ಬಗ್ಗೆ ತನಿಖೆ ಮಾಡಬೇಕಿದೆ. ಒಂದೊಮ್ಮೆ ಬೆಂಕಿ ಹಚ್ಚಿದ್ದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಡಿ.ಕೆ.ಶಿವಕುಮಾರ್ ನೇರ ಹೊಣೆ
ಬಿಬಿಎಂಪಿ ಆವರಣದಲ್ಲಿ ಅಗ್ನಿ ಅವಘಡದ ಬಗ್ಗೆ ಎಎಪಿ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ,
ನಮಗೆ ದುಃಖಕ್ಕಿಂತ ಅನುಮಾನಗಳೇ ಹೆಚ್ಚಾಗುತ್ತಿವೆ. ಬಿಬಿಎಂಪಿಯಲ್ಲಿ ಈ ರೀತಿ ಆಗುವುದು ಹೊಸದೇನಲ್ಲ. ಸಾವಿರಾರು ಜನ ಓಡಾಟ ಮಾಡುವ ಜಾಗದಲ್ಲೇ ಈ ರೀತಿಯಾಗಿದೆ. ಕನಿಷ್ಠ ಮುಂಜಾಗ್ರತೆ ಸಹ ಇಲ್ಲಿ ಇರಲಿಲ್ಲ ಎಂದು ಗೊತ್ತಾಗುತ್ತದೆ. ಗಾಯಾಳುಗಳನ್ನು ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದಕ್ಕೆ ಸಂಬಂಧ ಪಟ್ಟಂತೆ ಉನ್ನತ ಮಟ್ಟದ ತನಿಖೆಯಾಗಬೇಕು. ಇದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ನೇರ ಹೊಣೆಯಾಗಬೇಕು ಎಂದು ಹೇಳಿದ್ದಾರೆ.
ಬೆಂಗಳೂರಿಗೆ ಹೋಗಿ ಪರಿಶೀಲನೆ ಮಾಡುವೆ ಎಂದ ಸಿದ್ದರಾಮಯ್ಯ
ಬೆಳಗಾವಿ: ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಅವಘಡದ ಬಗ್ಗೆ ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಬಿದ್ದಿದೆ ಎಂದು ಹೇಳುತ್ತಿದ್ದಾರೆ. ಘಟನೆಯಲ್ಲಿ ಕೆಲವರಿಗೆ ಗಾಯ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೋಗಿ ಪರಿಶೀಲನೆ ಮಾಡುತ್ತೇನೆ. ಕಾಮಗಾರಿಗಳ ತನಿಖೆಗೆ ಆದೇಶ ನೀಡಿದ ಬೆನ್ನಲ್ಲೆ ಬೆಂಕಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಅಲ್ಲಿ ಹೋಗಿ ನೋಡಿದ ಮೇಲೆ ಎಲ್ಲಾ ಗೊತ್ತಾಗುತ್ತದೆ ಎಂದು ತಿಳಿಸಿದರು.
ದಾಖಲೆ ಇಲ್ಲದೆ ಏನನ್ನೂ ಹೇಳಲ್ಲ ಎಂದ ಡಿಕೆಶಿ
ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, ನಮಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯಾಕೆ, ಏನು ಎಂಬುದರ ಬಗ್ಗೆ ತನಿಖೆ ಮಾಡಬೇಕು. ಯಾವುದೇ ದಾಖಲೆ ಇಲ್ಲದೇ ಏನನ್ನೂ ಹೇಳಲ್ಲ. ಬೆಂಗಳೂರಿಗೆ ಹೋದ ಮೇಲೆ ವಿಕ್ಟೋರಿಯಾ ಆಸ್ಪತ್ರೆಗೆ ಹೋಗುತ್ತೇನೆ. ನೌಕರರಿಗೆ ಏನಾಗಿದೆ ಎಂಬುವುದನ್ನು ನೋಡುತ್ತೇನೆ. ಬೈರತಿ ಸುರೇಶ್‌ಗೆ ಆಸ್ಪತ್ರೆಗೆ ಭೇಟಿ ನೀಡುವಂತೆ ಹೇಳಿದ್ದೇನೆ ಎಂದು ತಿಳಿಸಿದರು.
ಏನಿದು ಘಟನೆ?
ನಗರದ ಬಿಬಿಎಂಪಿ ಮುಖ್ಯ ಕಚೇರಿಯ ಅಗ್ನಿ ಅವಘಡ ಸಂಭವಿಸಿದ್ದರಿಂದ 9 ಮಂದಿ ಗಾಯಗೊಂಡಿದ್ದು, ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಬಿಬಿಎಂಪಿ ಗುಣ ನಿಯಂತ್ರಣ ವಿಭಾಗದ ಪ್ರಯೋಗಾಲಯ ಮತ್ತು ಕಚೇರಿ ಕಟ್ಟಡದಲ್ಲಿ ಶುಕ್ರವಾರ ಬೆಂಕಿ (Fire Accident) ಹೊತ್ತಿಕೊಂಡಿದೆ.
ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡ ಹಿನ್ನೆಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ 9 ಮಂದಿಯನ್ನು ಪೊಲೀಸ್ ವಾಹನದಲ್ಲಿ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿತು. ಸ್ಥಳೀಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Electric Shock : ರೋಡ್ ಡಿವೈಡರ್ ದಾಟುವ ವೇಳೆ ಕರೆಂಟ್ ಶಾಕ್: ಬೈಕ್ ಸವಾರ ಸ್ಥಳದಲ್ಲೇ ಸಾವು
ಘಟನೆ ನಡೆದ ಕಟ್ಟಡದಲ್ಲಿಯೇ ಬಿಬಿಎಂಪಿಯ ಮಹತ್ವದ ದಾಖಲೆಗಳಿದ್ದ ರೆಕಾರ್ಡ್ಸ್ ರೂಮ್ ಇದೆ. ಆದರೆ, ಅದೃಷ್ಟವಶಾತ್ ರೆಕಾರ್ಡ್ಸ್ ರೂಮ್‌ಗೆ ಯಾವುದೇ ಹಾನಿ ಆಗಿಲ್ಲ. ಬೆಂಜೀನ್ ಎನ್ನುವ ಕೆಮಿಕಲ್ ಸ್ಫೋಟವಾಗಿರುವುದು ಬೆಂಕಿ ಅವಘಡಕ್ಕೆ ಕಾರಣವಾಗಿದೆ. ಬೆಂಜಿನ್ ಕೆಮಿನಲ್ ಅನ್ನು ಬಿಟುಮಿನ್ ಟೆಸ್ಟ್‌ಗೆ ಬಳಸಲಾಗುತ್ತದೆ. ಬೆಂಜೀನ್ ಕೆಮಿಕಲ್ ಟೆಸ್ಟ್ ಮಾಡುವ ಹೇಳೆ ಓವನ್ ಬ್ಲಾಸ್ಟ್ ಆಗಿ ಅವಘಡ ನಡೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.