Site icon Vistara News

ಬಿಜೆಪಿಯ ಗೋಬ್ಯಾಕ್‌ ‌ವಿರುದ್ಧ ಸಿದ್ದರಾಮಯ್ಯ ಗರಂ, ಆ. 26ರಂದು ಕೊಡಗಿನಲ್ಲಿ ಕಾಂಗ್ರೆಸ್‌ ಪ್ರತಿಭಟನೆ

kodagu pretest

ಚಿಕ್ಕಮಗಳೂರು: ಕೊಡಗಿನಲ್ಲಿ ನನ್ನ ವಿರುದ್ಧ ಪ್ರತಿಭಟನೆ ಮಾಡಲು ಬಿಜೆಪಿ ಸರಕಾರವೇ ಕುಮ್ಮಕ್ಕು ನೀಡಿದೆ. ಇಲ್ಲವಾದರೆ ಪೊಲೀಸರು ಯಾಕೆ ಪ್ರತಿಭಟನೆ ವೇಳೆ ಸುಮ್ಮನಿದ್ದರು ಎಂದು ಪ್ರಶ್ನಿಸಿದ್ದಾರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ಅವರು ಚಿಕ್ಕಮಗಳೂರು ತಾಲೂಕಿನ ಬಾಸಪುರದಲ್ಲಿ ಪ್ರತಿಕ್ರಿಯೆ ನೀಡಿದರು.

ಗುರುವಾರ ಕೊಡಗಿನ ಅತಿವೃಷ್ಟಿ ಪ್ರದೇಶಗಳ ಸಮೀಕ್ಷೆಗೆ ತೆರಳಿದ್ದ ವೇಳೆ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆಯಲಾಗಿತ್ತು. ಜತೆಗೆ ಗೋ ಬ್ಯಾಕ್‌ ಘೋಷಣೆಗಳನ್ನು ಕೂಗಲಾಗಿತ್ತು. ಈ ವೇಳೆ ಪೊಲೀಸರು ಅವರನ್ನು ತಡೆಯಲಿಲ್ಲ ಎಂದು ಆರೋಪಿಸಲಾಗಿದೆ. ಇದೇ ಕಾರಣಕ್ಕಾಗಿ ಸಿದ್ದರಾಮಯ್ಯ ಅವರು ಈ ಪ್ರಶ್ನೆಯನ್ನು ಎತ್ತಿದ್ದಾರೆ.

ʻʻಈ ಬಾರಿ ಕೊಡಗಿನಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳನ್ನು ಗೆಲ್ಲುವ ಸಂಭವ ಇದೆ. ಈ ಹತಾಶೆಯಿಂದ ನನ್ನ ವಿರುದ್ಧ ಪ್ರತಿಭಟನೆ ಮಾಡಿಸಲಾಗಿದೆʼʼ ಎಂದು ಹೇಳಿದರು ಸಿದ್ದರಾಮಯ್ಯ.

ʻʻಗೋ ಬ್ಯಾಕ್ ಅಂದ್ರೆ ಎಲ್ಲಿಗೆ ಹೋಗಲಿ. ಹಾಗಿದ್ದರೆ ಮುಖ್ಯಮಂತ್ರಿಗಳು ಬಂದಾಗ ನಮ್ಮವರೂ ಗೋ ಬ್ಯಾಕ್ ಸಿಎಂ ಎಂದು ಪ್ರತಿಭಟನೆ ಮಾಡುತ್ತಾರೆ ಎಂದಿಟ್ಟುಕೊಳ್ಳಿ.. ಪೊಲೀಸರು ಇದೇ ರೀತಿ ನಡೆದುಕೊಳ್ಳುತ್ತಾರಾʼʼ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ʻʻಸೆಕ್ಯೂರಿಟಿ ನೀಡುವುದು ಪೊಲೀಸರ ಜವಾಬ್ದಾರಿ. ಮೂರು ನಾಲ್ಕು ಕಡೆ ಪ್ರತಿಭಟನೆ ಮಾಡೋದು ಗೊತ್ತಿದ್ದೂ ಪೊಲೀಸರು ಸುಮ್ಮನಾಗಿದ್ದರು. ಅದೇ ಸಿಎಂ ಬಂದಿದ್ರೆ, ಅವರಿಗೆ ಹೀಗೆ ಮಾಡಿದ್ರೆ ಪೊಲೀಸರು ಸುಮ್ಮನಿರುತ್ತಿದ್ದರಾ?ʼ ಎಂದು ಪ್ರಶ್ನಿಸಿದ್ದಾರೆ.

ಆಗಸ್ಟ್‌ ೨೬ರಂದು ಪ್ರತಿಭಟನೆ
ಈ ನಡುವೆ ಪೊಲೀಸರ ವರ್ತನೆ, ಬಿಜೆಪಿ ಕಾರ್ಯಕರ್ತರ ನಡವಳಿಕೆ ವಿರುದ್ಧ ಆಗಸ್ಟ್‌ ೨೬ರಂದು ಕೊಡಗಿನಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು. ಜತಗೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಪ್ರಕಟಿಸಿದರು.

ಸಾವರ್ಕರ್‌ ಹೇಳಿಕೆಗೆ ಆಕ್ಷೇಪ
ಶಿವಮೊಗ್ಗದಲ್ಲಿ ನಡೆದ ಗಲಭೆ ವಿಚಾರದಲ್ಲಿ ಸಿದ್ದರಾಮಯ್ಯ ಆಡಿದ ಮಾತು ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿದೆ. ಶಿವಮೊಗ್ಗದ ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್‌ ಫ್ಲೆಕ್ಸ್‌ ಹಾಕುವ ಅಗತ್ಯ ಏನಿತ್ತು? ಗಲಭೆ ಸೃಷ್ಟಿಸಲೆಂದೇ ಈ ರೀತಿ ಕಿತಾಪತಿ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದರಿಂದ ಕೆರಳಿದ ಬಿಜೆಪಿ ಸಿದ್ದರಾಮಯ್ಯ ಹೋದಲ್ಲೆಲ್ಲ ಪ್ರತಿಭಟನೆಗೆ ಮುಂದಾಗಿದೆ. ಗುರುವಾರ ಕೊಡಗಿನಲ್ಲಿ ಪ್ರತಿಭಟನೆ ನಡೆದಿದ್ದರೆ, ಸಂಜೆ ಹಾಸನದಲ್ಲಿ ಬಳಿಕ ಚಿಕ್ಕಮಗಳೂರಿನಲ್ಲೂ ಆಕ್ರೋಶ ಎದುರಾಗಿತ್ತು. ಶುಕ್ರವಾರವೂ ಗೋ ಬ್ಯಾಕ್‌ ಸಿದ್ದರಾಮಯ್ಯ ಪ್ರತಿಭಟನೆ ಮುಂದುವರಿಯಲಿದೆ ಎಂದು ಬಿಜೆಪಿ ಹೇಳಿದೆ.

Exit mobile version