ಹುಬ್ಬಳ್ಳಿ: ರಾಜ್ಯ ಸರ್ಕಾರದ ವಿವಿಧ ಗುತ್ತಿಗೆಗಳ ಬಿಲ್ ಪಾವತಿಸಲು 40% ಲಂಚ ಪಡೆಯಲಾಗುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಆರೋಪ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಯ ಬೆನ್ನಿಗೆ ಇದೀಗ ಮತ್ತೊಬ್ಬ ಗುತ್ತಿಗೆದಾರ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
ದಯಾಮರಣಕ್ಕೆ ಅವಕಾಶ ನೀಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿರುವುದು ಹುಬ್ಬಳ್ಳಿಯ ಗುತ್ತಿಗೆದಾರ ಬಸವರಾಜ ಅಮರಗೋಳ. ರಾಷ್ಟ್ರಪತಿ ಜತೆಗೆ ಪ್ರಧಾನ ಮಂತ್ರಿ, ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳಿಗೆ ಪತ್ರವನ್ನು ರವಾನೆ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ಮತ್ತು ಮೂಡಗೆರೆ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಕೊವಿಡ್ -19 ಸಮಯದಲ್ಲಿ ಪಿಪಿಇ ಕಿಟ್, ಫೇಸ್ ಶೀಲ್ಡ್, ಏಪ್ರಾನ್ ಸರಬರಾಜು ಮಾಡಿದ್ದೆ. ಮೂಡಗೆರಿ ತಾಲೂಕಿಗೆ 27ಲಕ್ಷ ರೂ. ಹಾಗೂ ಕಡೂರು ತಾಲೂಕಿಗೆ 85 ಲಕ್ಷ ರೂ. ಮೊತ್ತದ ಪರಿಕರ ಪೂರೈಕ ಮಾಡಲಾಗಿತ್ತು.
2020-21ರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶ ಪತ್ರದ ಅನುಸಾರ ಪರಿಕರ ಪೂರೈಕೆ ಮಾಡಲಾಗಿತ್ತು. ಸರಬರಾಜು ಮಾಡಿ 2ವರ್ಷ ಕಳೆದರೂ ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಿಲ್ ಪಾವತಿ ಮಾಡಿಲ್ಲ. ಬಿಲ್ ಪಾವತಿ ಮಾಡಲು ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ದೇವರಾಜ್ ನಾಯಕ್ ವಿರುದ್ಧ ಆರೋಪ ಮಾಡಲಾಗಿದೆ.
ಶಾಸಕರ ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್ ಇಡಲಾಗಿದೆ ಎಂದು ಬಸವರಾಜ ಆರೋಪ ಮಾಡಿದ್ದು, ಬಿಲ್ ಮೊತ್ತದ 30-40% ನೀಡುವಂತೆ ಕೇಳಿದ್ದಾರೆ. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಮನವಿ ಮಾಡಲಾಗಿದೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ.
ಬಿಲ್ ಪಾವತಿಸುವಂತೆ ಪ್ರದಾನಮಂತ್ರಿ ಮತ್ತು ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಸೂಚನೆ ಬಂದರೂ ಅಧೀಕಾರಿಗಳು ಕಿಮ್ಮತ್ತು ನೀಡಿಲ್ಲ. ಇದೆಲ್ಲದರಿಂದ ಸಾಕಷ್ಟು ಹಣಕಾಸಿನ ತೊಂದರೆ ಆಗಿದೆ. ಮನೆ ಬಾಡಿಗೆ, ಸಾಲ, ತೆರಿಗೆಯನ್ನೂ ಕಟ್ಟಲಾಗದೆ ಸಂಕಷ್ಟಕ್ಕೆ ಸಿಲುಕಿದ್ದೇನೆ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧಾರ ಮಾಡಿದ್ದೇನೆ. ಇಲ್ಲದಿದ್ದರೆ ದಯಾಮರಣಕ್ಕಾದರೂ ಅನುಮತಿ ನೀಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | BJP ಸರ್ಕಾರದ 40% ಜತೆಗೆ ಸಿದ್ದರಾಮಯ್ಯ ಸರ್ಕಾರದ 100% ಅವಧಿಯ ಚರ್ಚೆ: ಗುರುವಾರ ಜಂಗೀಕುಸ್ತಿ ನಿರೀಕ್ಷೆ