Site icon Vistara News

Corruption | ಖಾಲಿ ಪೇಪರ್‌ ಇದ್ರೂ ಡಿವೈಎಸ್ಪಿ ಪೋಸ್ಟ್‌; ಎಂಟಿಬಿ ಬಳಿಕ ಈಗ ಚಿಂಚನಸೂರು ಹೇಳಿಕೆ, ಸರ್ಕಾರಕ್ಕೆ ಮುಜುಗರ!

ಯಾದಗಿರಿ: ೭೦-೮೦ ಲಕ್ಷ ರೂ. ಕೊಟ್ಟು ಟ್ರಾನ್ಸ್‌ಫರ್‌ ಮಾಡಿಸಿಕೊಂಡು ಬಂದ್ರೆ ಇನ್ನೇನಾಗ್ತದೆ ಎಂಬ ಸಚಿವ ಎಂ.ಟಿ.ಬಿ. ನಾಗರಾಜ್‌ ಹೇಳಿಕೆಯಿಂದ ಆದ ಮುಜುಗರದಿಂದ ಹೊರಬರಲು ಸರ್ಕಾರ ಹರಸಾಹಸಪಡುತ್ತಿರುವಂತೆಯೇ ಇನ್ನೊಬ್ಬ ಹಿರಿಯ ಬಿಜೆಪಿ ನಾಯಕ ಯಡವಟ್ಟು ಹೇಳಿಕೆ ನೀಡಿದ್ದಾರೆ.

ಮಾಜಿ ಸಚಿವರೂ, ಹಿರಿಯ ಬಿಜೆಪಿ ನಾಯಕರೂ, ಹಾಲಿ ಮೇಲ್ಮನೆ ಸದಸ್ಯರೂ ಆಗಿರುವ ಬಾಬು ರಾವ್‌ ಚಿಂಚನಸೂರು ಅವರೇ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ರೀತಿಯಲ್ಲಿ ಹೇಳಿಕೆ ನೀಡಿದವರು. ಅವರು ಹೇಳಿದ್ದೇನೆಂದರೆ: ನಾಳೆ ಖಾಲಿ ಪೇಪರ್‌ನಲ್ಲೂ ಡಿವೈಎಸ್ಪಿ ಆಗಬಹುದು! ಅದೂ ಅಲ್ಲದೆ ಅವರು ದೀಪಾವಳಿ ಗಿಫ್ಟ್‌ ಬಗ್ಗೆಯೂ ಮಾತನಾಡಿದ್ದಾರೆ.

ಅಕ್ಟೋಬರ್ 31 ರಂದು ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ನಡೆದ ಎಸ್‌ಟಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಬಾಬುರಾವ್ ಚಿಂಚನಸೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಚಿಂಚನಸೂರು ಹೇಳಿದ್ದೇನು?
ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳದಿಂದ ಮುನ್ಸಿಪಾಲಿಟಿ, ಜಿಪಂ, ತಾಪಂ ನೌಕರಿ ಆಗುತ್ತದೆ. ಮೀಸಲಾತಿ ಕಲ್ಪಿಸಿದ್ದು ಸಣ್ಣ ಕೆಲಸವೇನಲ್ಲ. ಖಾಲಿ ಪೇಪರ್‌ನಲ್ಲಿ ಸಹಿತ ನಾಳೆ ಡಿವೈಎಸ್‌ಪಿ ಆಗಬಹುದು ಎನ್ನುವ ಚಿಂಚನಸೂರು ಅವರು ʻಕೇಳೋ ಚಂದ್ರಕಾಂತʼ ಎಂದು ನಗೆ ಚಟಾಕಿ ಹಾರಿಸುತ್ತಾರೆ.

ಚಿಂಚನಸೂರು ಅವರು ಇಲ್ಲಿಗೇ ನಿಲ್ಲಿಸುವುದಿಲ್ಲ. ʻʻದೀಪಾವಳಿ ಗಿಫ್ಟ್‌ ಅಂತ ಕೊಟ್ಟಿದ್ದಾರಲ್ಲ.. ಅದು ಗಿಫ್ಟ್‌ ಅಲ್ಲ. ದೀಪಾವಳಿ ಬೆಳಕು ಅದುʼ ಎಂದು ಹೇಳಿದ್ದಾರೆ. ಅವರು ಯಾವ ದೀಪಾವಳಿ ಗಿಫ್ಟ್‌ ಬಗ್ಗೆ ಮಾತನಾಡಿದ್ದಾರೆ ಎನ್ನುವುದು ಸ್ಪಷ್ಟವಿಲ್ಲ.

ಎಂಟ್ರಿ ಪಡೆದ ಪ್ರಿಯಾಂಕ್‌ ಖರ್ಗೆ
ಚಿಂಚನಸೂರು ಅವರ ಈ ಮಾತು ಸಮಾವೇಶಕ್ಕೆ ಸೀಮಿತವಾಗಿಲ್ಲ. ಅದರ ವಿಡಿಯೊ ವೈರಲ್‌ ಆಗಿದೆ. ಅದನ್ನೂ ಈಗ ಕಾಂಗ್ರೆಸ್‌ ಕೈಗೆತ್ತಿಕೊಂಡಿದೆ. ಎಂಟಿಬಿ ನಾಗರಾಜ್‌ ಅವರ ೭೦-೮೦ ಲಕ್ಷ ಹೇಳಿಕೆ, ಪತ್ರಕರ್ತರಿಗೆ ದೀಪಾವಳಿ ಗಿಫ್ಟ್‌ ಮೊದಲಾದ ವಿಚಾರಗಳನ್ನು ಸಾರ್ವಜನಿಕವಾಗಿಯೂ, ಕಾನೂನಾತ್ಮಕವಾಗಿಯೂ ಕೈಗೆತ್ತಿಕೊಂಡಿರುವ ಕೈ ಪಾಳಯ ಈಗ ಚಿಂಚನಸೂರು ಹೇಳಿಕೆಯನ್ನೂ ಪ್ರಶ್ನಿಸಿದೆ.

ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಎಂಟಿಬಿ ಮತ್ತು ಚಿಂಚನಸೂರು ಹೇಳಿಕೆಗಳನ್ನು ಇಟ್ಟುಕೊಂಡು ಸರಕಾರವನ್ನು ಪ್ರಶ್ನೆ ಮಾಡಿದ್ದಾರೆ.

80 ಲಕ್ಷ ಕೊಟ್ಟು ಪೋಸ್ಟಿಂಗ್ ಪಡೆಯುತ್ತಾರೆ: ಸಚಿವ MTB ನಾಗರಾಜ್‌
ಇಂದು ಖಾಲಿ ಪೇಪರ್ ಇದ್ದರು ಸಾಕು ಡಿವೈಎಸ್ಪಿ ಆಗಬಹುದು
ವ್ಯಾಪಾರ ಸೌಧದಲ್ಲಿನ ಭ್ರಷ್ಟಾಚಾರದ ವ್ಯವಹಾರಗಳನ್ನು ಸ್ವತ: ಬಿಜೆಪಿಗರೇ ಹೊರಗೆಡವಿದ್ದಾರ
ಭ್ರಷ್ಟಾಚಾರದ ಆಳ ಅಗಲ ತಿಳಿದಿರುವ ಇವರ ತನಿಖೆ ಇಲ್ಲವೇಕೆ? ನೋಟಿಸ್ ನೀಡಿಲ್ಲವೇಕೆ..?
ಎಂದು ಪ್ರಿಯಾಂಕ್‌ ಖರ್ಗೆ ಟ್ವೀಟ್‌ ಮಾಡಿದ್ದಾರೆ.

Exit mobile version