ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗಾಗಿ ಕಾಂಗ್ರೆಸ್ ಬೃಹತ್ ಸಮಾವೇಶಕ್ಕೆ ಮುಂದಾದ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಕೋವಿಡ್ ನಿಯಮ ಉಲ್ಲಂಘನೆ ಅಸ್ತ್ರ ಪ್ರಯೋಗ ಮಾಡಿತ್ತು. ಇದೀಗ ಕಾಂಗ್ರೆಸ್ ನಾಯಕರು ರಾಜಭವನ(Rajbhavan) ಚಲೋ ನಡೆಸುತ್ತಿದ್ದು (Congress protest) ಮತ್ತೆ ಅಂತದ್ದೇ ಅಸ್ತ್ರ ಪ್ರಯೋಗಕ್ಕೆ ರಾಜ್ಯ ಸರಕಾರ ಚಿಂತನೆ ನಡೆಸಿದೆ.
ಇದನ್ನೂ ಓದಿ | ರಾಜಭವನ ಚಲೋಗೆ ಕಾಂಗ್ರೆಸ್ ರೆಡಿ, ತಡೆಯಲು ಪೊಲೀಸ್ ತಂಡಗಳೂ ಸಿದ್ಧ
ಈ ಕುರಿತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಮುಖಂಡರ ರಾಜಭವನ ಚಲೋ ಹೋರಾಟದಿಂದ ರಾಜ್ಯದಲ್ಲಿ ಕೋವಿಡ್ ಹೆಚ್ಚಳವಾದರೆ ಅವರೇ ನೈತಿಕ ಹೊಣೆ ಹೊರಬೇಕು. ಕಾಂಗ್ರೆಸಿಗರು ಪ್ರತಿಭಟನೆ ಮಾಡುವುದಾದರೆ ಫ್ರೀಡಂ ಪಾರ್ಕ್‌ನಲ್ಲಿ ಮಾಡಲಿ, ಅದು ಬಿಟ್ಟು ಜನರನ್ನು ಸೇರಿಸಿಕೊಂಡು ರಸ್ತೆಯಲ್ಲಿ ಪ್ರತಿಭಟನೆ ಮಾಡೋದು ಸರಿಯಲ್ಲ. ಇವತ್ತಿನ ಹೋರಾಟಕ್ಕೆ ಕೋವಿಡ್ ಉಲ್ಲಂಘನೆ ಅಡಿ ಕೇಸ್ ದಾಖಲಿಸುವ ಸಂಬಂಧ ಮುಖ್ಯಮಂತ್ರಿಗಳ ಜೊತೆ ಮಾತಾನಾಡಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಮುಂದುವರಿದು,ಕಾಂಗ್ರೆಸ್ ನಾಯಕರ ನಡೆ ನಾಚಿಕೆ ತರಿಸುವಂತದ್ದು. ಒಂದು ಕಡೆ ಸಂವಿಧಾನದ ಬಗ್ಗೆ ಸಾಕಷ್ಟು ಭಾಷಣ ಮಾಡಿ, ಇನ್ನೊಂದು ಕಡೆ ಸಂವಿಧಾನಕ್ಕೆ ಅಗೌರವ ತೋರುವ ಕೆಲಸವನ್ನೂ ಮಾಡುತ್ತಾರೆ. ಈ ಹಿಂದೆ ಮಾಜಿ ಪ್ರಧಾನಿ ಪಿ.ವಿ ನರಂಸಿಹರಾವ್, ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೀತಾರಾಮ್ ಕೇಸರಿಯವರ ವಿರುದ್ದವೂ ವಿಚಾರಣೆ ನಡೆದಿತ್ತು. ಮಲ್ಲಿಕಾರ್ಜುನ ಖರ್ಗೆಯವರ ವಿಚಾರಣೆ ಕೂಡ ನಡಿಯಿತು. ಆಗ ಯಾರು ಚಕಾರವು ಎತ್ತಿಲ್ಲ, ಪ್ರತಿಭಟನೆಗೆ ಮುಂದಾಗಿಲ್ಲ. ಕಾಂಗ್ರೆಸ್ ನಾಯಕರು ಮಾಡುತ್ತಿರುವುದು ಸರಿಯಲ್ಲ, ಈ ರೀತಿ ಮಾಡುವುದರಿಂದ ತಪ್ಪು ಸಂದೇಶ ಹೋಗುತ್ತಿದೆ. ಏನೇ ಇದ್ದರೂ ವಿಚಾರಣೆ ಆಗಲಿ,ಸತ್ಯ ಹೊರಗಡೆ ಬರಲಿ ಎಂದು ಹೇಳಿದರು.
ಇದನ್ನೂ ಓದಿ | ಇ.ಡಿ. ವಿಚಾರಣೆ ಖಂಡಿಸಿ ಕಾಂಗ್ರೆಸ್‌ನಿಂದ ರಾಜಭವನ ಮುತ್ತಿಗೆ: ಡಿಕೆಶಿ, ಸಿದ್ದರಾಮಯ್ಯ ತುರ್ತು ಸುದ್ದಿಗೋಷ್ಠಿ