ಮಂಡ್ಯ/ರಾಮನಗರ: ಕಸಾಯಿ ಖಾನೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ಒಂದರ ಮೇಲೆ ಶುಕ್ರವಾರ ರಾತ್ರಿ ಗೋರಕ್ಷಕರ ಹೆಸರಲ್ಲಿ ತಂಡವೊಂದು ದಾಳಿ ಮಾಡಿ ವಾಹನದಲ್ಲಿದ್ದ ಇದ್ರಿಷ್ ಪಾಷಾನನ್ನು ಕೊಲೆ ಮಾಡಿದೆ. ಈ ಕೃತ್ಯ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮತ್ತು ಟೀಮ್‌ನದ್ದು ಎಂದು ಆಪಾದಿಸಿರುವ ಬಂಧುಗಳು ಇದೀಗ ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಇತ್ತ ರಾಮನಗರ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಶುಕ್ರವಾರ ರಾತ್ರಿ 11.40ರ ಸುಮಾರಿಗೆ ಪುನೀತ್ ಕೆರೆಹಳ್ಳಿ ಟೀಮ್ ಸಾತನೂರು ಪೊಲೀಸ್ ಠಾಣೆಯ ಎದುರು ಕ್ಯಾಂಟರನ್ನು ಅಡ್ಡಗಟ್ಟಿತ್ತು. ಈ ವೇಳೆ ಕ್ಯಾಂಟರ್‌ನಲ್ಲಿ ಮೂವರಿದ್ದರು. ಇಬ್ಬರು ವಾಹನ ಬಿಟ್ಟು ಓಡಿಹೋಗಿದ್ದರು. ಒಬ್ಬಾತನನ್ನು ಕೂಡಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದಾದ ಬಳಿಕ ಪುನೀತ್ ಕೆರೆಹಳ್ಳಿ ಟೀಮ್‌ನವರು ತಾವು 16 ಗೋವುಗಳನ್ನು ರಕ್ಷಿಸಿರುವುದಾಗಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅದರ ನಡುವೆ ಮರುದಿನ ಮುಂಜಾನೆ ಇದ್ರಿಸ್ ಪಾಷಾನ ಶವ ಘಟನಾ ಸ್ಥಳದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ.
ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮತ್ತು ತಂಡವೇ ಇದ್ರಿಸ್ ಪಾಷಾನನ್ನು ಕೊಲೆ ಮಾಡಿದೆ ಎಂದು ಆತನ ಕುಟುಂಬಿಕರು ಆರೊಪಿಸಿದ್ದು ಶನಿವಾರವೇ ಸಾತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರತಿಭಟನೆಯನ್ನೂ ನಡೆಸಿದ್ದರು.
ಪುನೀತ್ ಕೆರೆಹಳ್ಳಿ ವಿರುದ್ದ ಭುಗಿಲೆದ್ದ ಆಕ್ರೋಶ
ಈ ನಡುವೆ, ಭಾನುವಾರ ಇದ್ರಿಷ್ ಪಾಷಾ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಂಡ್ಯದಲ್ಲಿ ನಡೆದ ವೇಳೆ ಮತ್ತೆ ಆಕ್ರೋಶ ಭುಗಿಲೆದ್ದಿದೆ. ಇದ್ರಿಸ್ ಪಾಶಾ ಮಂಡ್ಯದ ಗುತ್ತಲು ನಿವಾಸಿಯಾಗಿದ್ದು, ಮಂಡ್ಯದ ಗುತ್ತಲು ಬಡಾವಣೆಯಿಂದ ಈದ್ಗಾ ಮೈದಾನದ ಖಬರಸ್ಥಾನ್ ವರೆಗೆ ಮೃತದೇಹ ಮೆರವಣಿಗೆ ನಡೆಯಿತು.
ಮೆರವಣಿಗೆ ಮೈಸೂರು-ಬೆಂಗಲೂರು ಹೆದ್ದಾರಿಯ ಸಂಜಯ್ ವೃತ್ತದ ಮೂಲಕ ಸಾಗಿದ್ದು, ಲಾರಿಯಲ್ಲಿ ಇಟ್ಟು ಸಾಗಿಸಲಾಯಿತು. ಈ ವೇಳೆ ಪುನೀತ್ ಕೆರೆಹಳ್ಳಿ ವಿರುದ್ದ ಮುಸ್ಲಿಂರು ಆಕ್ರೋಶ ವ್ಯಕ್ತಪಡಿಸಿದರು. ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಶೀಘ್ರವೇ ಆರೋಪಿಗಳ ಬಂಧನಕ್ಕೆ ಮುಸ್ಲಿಂ ಸಮುದಾಯ ಆಗ್ರಹಿಸಿದೆ.
ಈಗಾಗಲೇ ಪುನೀತ್ ಕೆರೆಯಲ್ಲಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಬಂಧಿಸುವಂತೆ ಒತ್ತಾಯಿಸಲಾಗಿದೆ. ಬಂಧಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಲಾಗಿದೆ.
ಹಾಗಿದ್ದರೆ ಶುಕ್ರವಾರ ರಾತ್ರಿ ನಡೆದಿದ್ದೇನು? ಎಲ್ಲಿಗೆ ಸಾಗಿಸಲಾಗುತ್ತಿತ್ತು ದನಗಳನ್ನು?
ಜಾನುವಾರು ಸಾಗಾಟ ಮತ್ತು ಆವತ್ತು ನಡೆದ ಘಟನೆಯ ಬಗ್ಗೆ ಆವತ್ತು ಕ್ಯಾಂಟರ್‌ನಲ್ಲೇ ಇದ್ದು ದಾಳಿಯ ವೇಳೆ ತಪ್ಪಿಸಿಕೊಂಡಿದ್ದ ಸಯ್ಯದ್ ಮತ್ತು ಇರ್ಫಾನ್ ವಿವರಣೆ ನೀಡಿದ್ದಾರೆ.
ಸಯೀದ್ ಝಹೀರ್, ಇದ್ರಿಷಾ ಪಾಷಾ ಮತ್ತು ಇರ್ಫಾನ್ ಜಾನುವಾರುಗಳನ್ನು ರಾಮನಗರದಿಂದ ತಮಿಳುನಾಡು ಮತ್ತು ಕೇರಳಕ್ಕೆ ಸಾಗಿಸುತ್ತಿದ್ದರು. ಅಲ್ಲಿ ಪ್ರತಿ ವಾರವೂ ನಡೆಯುವ ದನಗಳ ಜಾತ್ರೆಗೆ ಈ ರೀತಿ ಒಯ್ಯುವುದು ವಾಡಿಕೆ ಎನ್ನುತ್ತಾರೆ ಸಯೀದ್.
ʻʻಶುಕ್ರವಾರ ರಾತ್ರಿ ಸುಮಾರು 11.40 ಆಗಿತ್ತು. ನಾವು ಈಚರ್ ಲಾರಿಯಲ್ಲಿ 16 ಗೋವುಗಳನ್ನು ಹಿಡಿದುಕೊಂಡು ಹೋಗುತ್ತಿದ್ದೆವು. ಆಗ ಸಾತನೂರು ಪೊಲೀಸ್ ಠಾಣೆಯ ಎದುರು ಗೋರಕ್ಷಕರೆಂದು ಹೇಳಿಕೊಂಡ ಕೆಲವರು ನಮ್ಮನ್ನು ತಡೆದರು. ಜಾನುವಾರು ಸಾಗಾಟ ಎಂದು ತಿಳಿದ ಕೂಡಲೇ ಪಾಕಿಸ್ತಾನಕ್ಕೆ ಹೋಗಿ ಎನ್ನುವುದೂ ಸೇರಿದಂತೆ ಬೈದರು. ಬಳಿಕ ದಾಳಿ ನಡೆಸಿದರು. ಪಾಶಾ ಮತ್ತು ಇರ್ಫಾನ್ ಓಡಿ ಹೋದರು. ನಾನು ಅಲ್ಲೇ ಉಳಿದೆ. ಅದೃಷ್ಟಕ್ಕೆ ಏನೋ ಜಗಳವಾಗುತ್ತಿದೆ ಎಂದು ಗಮನಿಸಿದ ಪೊಲೀಸರು ಅಲ್ಲಿಗೆ ಧಾವಿಸಿದರು. ನನ್ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರುʼʼ ಎಂದು ಸಯೀದ್ ವಿವರಿಸಿದ್ದಾರೆ.
ಶನಿವಾರ ಮುಂಜಾನೆವರೆಗೂ ನಾನು ಸ್ಟೇಷನ್‌ನಲ್ಲೇ ಇದ್ದೆ. ಆಗ ಒಬ್ಬ ಪೊಲೀಸರು ಬಂದು ಪಾಷಾನ ಫೋಟೊ ತೋರಿಸಿ ಇವನು ಗೊತ್ತಾ ಎಂದು ಕೇಳಿದರು. ನಾನು ನನ್ನ ಸಹೋದ್ಯೋಗಿ. ನಿನ್ನೆ ರಾತ್ರಿ ದಾಳಿ ನಡೆಯಿತಲ್ಲ ಅದೇ ವಾಹನದಲ್ಲಿದ್ದ ಎಂದು ಹೇಳಿದೆ. ಅವನು ಸತ್ತಿದ್ದಾನೆ ಎಂದು ಹೇಳಿದರು. ನಾನು ಅವನು ಅವನು ತಪ್ಪಿಸಿಕೊಂಡು ಓಡಿದ್ದಾನೆ ಎಂದುಕೊಂಡಿದ್ದೆ.
ಸಯೀದ್ ಹೇಳುವ ಪ್ರಕಾರ, ಈ ಜಾನುವಾರುಗಳು ಬೇರೆಯವರಿಗೆ ಸೇರಿದ್ದು. ಪಾಷಾ ಮತ್ತು ಸಯೀದ್ ವಾಹನಕ್ಕೆ ಚಾಲಕರು. ಇರ್ಫಾನ್ ಲೋಡ್ ಮತ್ತು ಅನ್‌ಲೋಡ್‌ನಲ್ಲಿ ಸಹಕಾರ ನೀಡುತ್ತಿದ್ದ. ಈ ವಾಹನದ ಮಾಲೀಕನ ಬಳಿಕ ದಾಖಲೆಗಳು ಸರಿಯಾಗಿಯೇ ಇವೆ. ದಾಳಿಗಳು ನಡೆದಾಗ ಪಾಶಾ ಮತ್ತು ಇರ್ಫಾನ್ ಯಾಕೆ ಓಡಿದ್ದು ಎಂಬ ಬಗ್ಗೆಯೂ ಸಯೀದ್ ವಿವರಣೆ ನೀಡಿದ್ದಾನೆ. ʻʻಇಂಥ ಪ್ರಕರಣಗಳಲ್ಲಿ ತಂಡಗಳು ಮೊದಲು ನಮಗೆ ಚೆನ್ನಾಗಿ ಹೊಡೆಯುತ್ತವೆ. ಬಳಿಕ ಪೊಲೀಸ್ ಠಾಣೆಗೆ ಒಯ್ಯಲಾಗುತ್ತದೆ. ಹೀಗಾಗಿ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಓಡುವುದು ಸಹಜʼʼ ಎಂದಿದ್ದಾನೆ.
ಸಾತನೂರು ಪೊಲೀಸರು ಜಾನುವಾರು ಸಾಗಾಟಗಾರರ ಮೇಲೆ ಗೋಹತ್ಯೆ ನಿಷೇಧ ಕಾಯಿದೆಯಡಿ ಮತ್ತು ಗೋರಕ್ಷಕರ ಮೇಲೆ ಕೊಲೆ ಕೇಸು ದಾಖಲಿಸಿಕೊಂಡಿದ್ದಾರೆ.
ರಾಮನಗರ ಜಿಲ್ಲಾಧಿಕಾರಿ ಕಾರ್ತಿಕ್ ರೆಡ್ಡಿ ಅವರು ಸಭೆಯೊಂದನ್ನು ನಡೆಸಿ ಘಟನೆಯ ವಿವರ ಪಡೆದಿದ್ದಾರೆ. ಘಟನಾ ಸ್ಥಳದಿಂದ ಕೆಲವೇ ಮೀಟರ್ ದೂರದಲ್ಲಿ ಇದ್ರಿಸ್ ಪಾಷಾ ಸತ್ತುಬಿದ್ದಿದ್ದ. ಈ ಸಾವು ಹೇಗೆ ಸಂಭವಿಸಿತು ಎಂಬ ಬಗ್ಗೆ ಮಾಹಿತಿ ಪಡೆಯಲು ಎಫ್‌ಎಸ್‌ಎಲ್ ತಂಡಗಳೂ ಆಗಮಿಸಿವೆ. ಪೋಸ್ಟ್ ಮಾರ್ಟಮ್ ವರದಿಯೂ ಇದೆ. ಇದನ್ನು ಆಧರಿಸಿ ಸಾವಿನ ನಿಜವಾದ ಕಾರಣ ಅರಿಯಲಾಗುತ್ತದೆ.
ಯಾರು ಈ ಪುನೀತ್ ಕೆರೆಹಳ್ಳಿ?
ವಾಹನದ ಮೇಲೆ ತಂಡ ಕಟ್ಟಿಕೊಂಡು ದಾಳಿ ಮಾಡಿದ ಪುನೀತ್ ಕೆರೆಹಳ್ಳಿ ರಾಷ್ಟ್ರ ರಕ್ಷಣಾ ಪಡೆ ಎಂಬ ಹೆಸರಿನ ಸಂಘಟನೆ ಕಟ್ಟಿಕೊಂಡಿದ್ದಾನೆ. ಹಲಾಲ್ ಕಟ್ ವಿರುದ್ಧದ ಆಂದೋಲನ ಮತ್ತು ದೇವಸ್ಥಾನಗಳ ಜಾತ್ರೆ ವೇಳೆ ಅನ್ಯ ಧರ್ಮೀಯ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂಬ ಹೋರಾಟದ ಮುಂಚೂಣಿಯಲ್ಲಿದ್ದ.
ಇದನ್ನೂ ಓದಿ : Mysterious death : 8 ವರ್ಷದ ಬಾಲಕನ ಸಾವಿನ ರಹಸ್ಯ ಬಯಲು, ಕೇವಲ ಐದು ರೂಪಾಯಿಗಾಗಿ ನಡೆಯಿತು ಕೊಲೆ!