Site icon Vistara News

D. S. Veeraiah: ಅರಸು ಟ್ರಕ್ ಟರ್ಮಿನಲ್ ಹಗರಣ;‌ ಡಿ.ಎಸ್‌.ವೀರಯ್ಯಗೆ ಜು.30ರವರೆಗೆ ನ್ಯಾಯಾಂಗ ಬಂಧನ

DS Veeraiah

ಬೆಂಗಳೂರು: ದೇವರಾಜ ಅರಸು ಟ್ರಕ್ ಟರ್ಮಿನಲ್‌ ಹಗರಣದಲ್ಲಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಎಂಎಲ್‌ಸಿ ಡಿ.ಎಸ್‌. ವೀರಯ್ಯ (D. S. Veeraiah) ಅವರಿಗೆ ಜುಲೈ 30ರವರೆಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 47 ಕೋಟಿ ರೂ. ಹಗರಣ ಆರೋಪದಲ್ಲಿ ಬಂಧನವಾಗಿದ್ದ ವೀರಯ್ಯರನ್ನು ಸಿಐಡಿ ಅಧಿಕಾರಿಗಳು ನಗರದ 42ನೇ ಎಸಿಎಂಎಂ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್‌ ನ್ಯಾಯಾಧೀಶರು, ವೀರಯ್ಯರನ್ನು ನ್ಯಾಯಾಂಗ ಬಂಧನ‌ಕ್ಕೆ ಒಪ್ಪಿಸಲು ಆದೇಶ ನೀಡಿದ್ದಾರೆ. ಮತ್ತೊಂದೆಡೆ ವೀರಯ್ಯ ಪರ ವಕೀಲ ವಕೀಲ ಶ್ಯಾಮಸುಂದರ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ದೇವರಾಜ ಅರಸು ಟರ್ಮಿನಲ್ ಬಹುಕೋಟಿ ಹಗರಣಕ್ಕೆ (Devaraja Arasu truck terminal scam) ಸಂಬಂಧಿಸಿ ಬಿಜೆಪಿ ಮಾಜಿ ಎಂಎಲ್‌ಸಿ ಡಿ.ಎಸ್‌. ವೀರಯ್ಯಋನ್ನು ಜುಲೈ 12ರಂದು ಬಂಧಿಸಲಾಗಿತ್ತು. 47 ಕೋಟಿ ರೂ. ಹಗರಣದ ಆರೋಪದಲ್ಲಿ ಮೈಸೂರಿನಲ್ಲಿ ವೀರಯ್ಯರನ್ನು ಸಿಐಡಿ ಬಂಧಿಸಿತ್ತು. ಈ ಹಿಂದೆ ವಾರ್ತಾ ಇಲಾಖೆಯ ಶಂಕರಪ್ಪ ಬಂಧನವಾಗಿತ್ತು, ಇದಾದ ಬೆನ್ನಲ್ಲೇ ಮೈಸೂರಿನಲ್ಲಿ ಮುಡಾ ಅಕ್ರಮ ವಿರೋಧಿಸಿ ಪ್ರತಿಭಟನೆಗೆ ತೆರಳಿದ್ದಾಗ ವೀರಯ್ಯರನ್ನು ಬಂಧಿಸಲಾಗಿತ್ತು.

2021ರಿಂದ 2023ರವರೆಗೆ ಡಿ.ಎಸ್.ವೀರಯ್ಯ ಅವರು ಡಿ.ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ನಿಗಮದ ಅಧ್ಯಕ್ಷರಾಗಿದ್ದಾಗ ನಡೆದಿದ್ದ ಸುಮಾರು 47 ಕೋಟಿ ರೂ. ಅಕ್ರಮದ ಬಗ್ಗೆ ಹಾಲಿ ವ್ಯವಸ್ಥಾಪಕ ನಿರ್ದೇಶಕ ಸಿಎನ್​ ಶಿವಪ್ರಸಾದ್ ವಿಲ್ಸನ್​​ ಗಾರ್ಡ್​ನ್​ ಠಾಣೆಗೆ ದೂರು ನೀಡಿದ್ದರು. ತುಂಡು ಗುತ್ತಿದೆ ಆಧಾರದಲ್ಲಿ ಅಕ್ರಮ ನಡೆದಿದೆ ನೀಡಿದ್ದ ದೂರಿನ ಮೇರೆಗೆ 2023ರ ಸೆಪ್ಟೆಂಬರ್​ 23ರಂದು ಎಫ್​ಐಆರ್ ದಾಖಲಾಗಿತ್ತು. ಬಳಿಕ ವೀರಯ್ಯ ಅವರಿಗೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್​ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು.

ಇದನ್ನೂ ಓದಿ | Hit And Run Case: ಮುಂಬೈ ಹಿಟ್‌ ಆ್ಯಂಡ್‌ ರನ್‌ ಕೇಸ್‌; ತನಗೆ ಕುಡಿಯುವ ಅಭ್ಯಾಸ ಇದೆ ಎಂದು ಒಪ್ಪಿಕೊಂಡ ಆರೋಪಿ

ಏನಿದು ಹಗರಣ?

2021ರ ಅಕ್ಟೋಬರ್ 25ರಂದು ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ 194ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ಟ್ರಕ್ ಟರ್ಮಿನಲ್‌ಗಳ ದುರಸ್ತಿ ಹಾಗೂ ನಿರ್ವಹಣೆಗೆ 10 ಕೋಟಿ ರೂ.ಗಳವರೆಗೆ ತುಂಡು ಗುತ್ತಿಗೆ ನೀಡಲು ಅನುಮೋದನಾ ನಿರ್ಣಯ ಮಾಡಲಾಗಿತ್ತು. ಆನಂತರ ಕಾಮಗಾರಿ ನಡೆಸದೆ ನಕಲಿ ದಾಖಲೆ ಸೃಷ್ಟಿಸಿ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನಿಗಮದ ಹಾಲಿ ಎಂಡಿ, ಬಳಿಕ ವಿಲ್ಸನ್ ಗಾರ್ಡನ್ ಠಾಣೆಗೆ ತುಂಡು ಗುತ್ತಿಗೆ ಕಾಮಗಾರಿಯಲ್ಲಿ 47.10 ಕೋಟಿ ಅಕ್ರಮ ನಡೆದಿದೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿತ್ತು.

Exit mobile version