ರಾಜೇಶ್ ಪುತ್ತೂರು, ಮಂಗಳೂರು
ಕ್ಷೇತ್ರ ಪುನರ್ವಿಂಗಡಣೆಗೂ ಮೊದಲು ಮಂಗಳೂರು ಕ್ಷೇತ್ರವಾಗಿದ್ದ ಕ್ಷೇತ್ರ ಈಗ ಮಂಗಳೂರು ದಕ್ಷಿಣ ಕ್ಷೇತ್ರವಾಗಿ ಮರು ನಾಮಕರಣಗೊಂಡಿದೆ. ಮಂಗಳೂರು ದಕ್ಷಿಣ ಕ್ಷೇತ್ರ ಮಂಗಳೂರಿನ ಹೃದಯಭಾಗದಲ್ಲಿ ಇರುವ ಕ್ಷೇತ್ರವಾಗಿದ್ದು, ಗೌಡ ಸಾರಸ್ವತ ಬ್ರಾಹ್ಮಣ(ಜಿಎಸ್‌ಬಿ) ಹಾಗೂ ಕ್ರೈಸ್ತ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮಂಗಳಾದೇವಿ ಮೂಲಕ ಮಂಗಳೂರು ಎಂಬ ಹೆಸರು ಬಂದಿದ್ದು, ಮಂಗಳಾ ದೇವಿ ಇಲ್ಲಿನ ಗ್ರಾಮ ದೇವತೆ.
ಜಿಎಸ್‌ಬಿ ಸಮುದಾಯದವರು ಹೆಚ್ಚಾಗಿರುವ ಕಾರಣ ಇಲ್ಲಿನ ವೆಂಕಟರಮಣ ದೇವಸ್ಥಾನ ರಥಬೀದಿ, ಜಿಲ್ಲೆಯಲ್ಲಿ ಬಹಳ ಪ್ರಸಿದ್ಧ. ಪ್ರತಿಷ್ಠಿತ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಶಾಪಿಂಗ್ ಮಾಲ್‌ಗಳು, ಪ್ರತಿಷ್ಟಿತ ಹೋಟೆಲ್‌ಗಳು ಈ ಕ್ಷೇತ್ರಕ್ಕೆ ಇರುವ ಪ್ಲಸ್ ಪಾಯಿಂಟ್. ಜಿಲ್ಲಾಧಿಕಾರಿ ಕಚೇರಿ , ಜಿಲ್ಲಾ ನ್ಯಾಯಾಲಯ, ಜಿಲ್ಲಾ ಆಸ್ಪತ್ರೆ ಹೀಗೆ ಜಿಲ್ಲೆಯ ಸಂಪೂರ್ಣ ಆಡಳಿತ ಯಂತ್ರ ಇಲ್ಲೇ ಇದೆ.
ಇಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುವ ಅಭ್ಯರ್ಥಿಗಳಲ್ಲಿ ಜಿಎಸ್‌ಬಿ ಹಾಗೂ ಕ್ರೈಸ್ತ ಸಮುದಾಯದವರೇ ಹೆಚ್ಚು. ವಿಶೇಷ ಎಂದರೆ ಮಂಗಳೂರು ಎನ್ನುವುದು ಕನ್ನಡದಲ್ಲಿ ಕರೆಯುವ ಹೆಸರಾದರೆ, ವಿವಿಧ ಸಮುದಾಯಗಳು ಬೇರೆ ಬೇರೆ ಹೆಸರಿನಿಂದ ಕರೆಯುತ್ತವೆ. ತುಳುವಿನಲ್ಲಿ “ಕುಡ್ಲ” , ಜಿಎಸ್‌ಬಿ ಸಮುದಾಯದವರು “ಕೊಡಿಯಾಲ್”, ಮುಸ್ಲಿಂ ಸಮುದಾಯದವರು “ಮೈಕಾಲ” , ಕ್ರೈಸ್ತ ಸಮುದಾಯದವರು “ಕೊಡಿಯಾಲ್ ಘರೋನಿ” , ಕೇರಳದವರು “ಮಂಗಳಾಪುರಂ” ಎಂದು ಕರೆಯುತ್ತಾರೆ. ಇದು ಇಲ್ಲಿನ ಬಹು ಸಂಸ್ಕೃತಿಗೆ ನಿದರ್ಶನವಾಗಿದೆ.
ಭದ್ರ ಕೋಟೆಗೆ ಹೊಸ ಶಾಸಕ ವೇದವ್ಯಾಸ ಕಾಮತ್
ಈ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಅಭ್ಯರ್ಥಿಗಳು ಎರಡೇ ಸಮುದಾಯಕ್ಕೆ ಸೀಮಿತವಾಗಿದ್ದಾರೆ. ಬಿಜೆಪಿಗೆ ಜಿಎಸ್‌ಬಿ ಸಮುದಾಯದವರು ಅಭ್ಯರ್ಥಿಯಾದರೆ ಕಾಂಗ್ರೆಸ್‌ಗೆ ಕ್ರೈಸ್ತ ಸಮುದಾಯದವರು ಅಭ್ಯರ್ಥಿಗಳಾಗಿ ಆಯ್ಕೆಯಾಗುತ್ತಾರೆ. 1999 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಯೋಗಿಶ್ ಭಟ್ ಗೆದ್ದು ಬಂದಲ್ಲಿನಿಂದ ಹಿಡಿದು 2013 ರ ಚುನಾವಣೆವರೆಗೂ ಈ ಕ್ಷೇತ್ರ ಬಿಜೆಪಿಯ ಕೈಯಲ್ಲೇ ಇತ್ತು. ಯೋಗೀಶ್ ಭಟ್ ಇಲ್ಲಿ ನಿರಂತರ ಮೂರು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2013 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಗಿಟ್ಟಿಸಿಕೊಂಡು ಸ್ಪರ್ಧೆ ಮಾಡಿದ್ದ ಕೆಎಎಸ್ ಅಧಿಕಾರಿ, ಮಂಗಳೂರಿನವರೇ ಆಗಿರುವ, ಕ್ರೈಸ್ತ ಸಮುದಾಯದ ಜೆ.ಆರ್. ಲೋಬೋ ಗೆಲ್ಲುವ ಮೂಲಕ ಯೋಗೀಶ್ ಭಟ್ ಅವರ ಓಟಕ್ಕೆ ಕಡಿವಾಣ ಹಾಕಿದರು. ಈ ಸೋಲಿನ ಜತೆಗೆ ರಾಜಕೀಯವಾಗಿಯೂ ಯೋಗೀಶ್ ಭಟ್ ಮೂಲೆಗುಂಪಾದರು.
ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ, ಪಿಲಿಕುಳ ನಿಸರ್ಗದಾಮದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಜೆ.ಆರ್. ಲೋಬೋ ಅವರು ಪಡೆದಿದ್ದ ಪ್ರಸಿದ್ದಿ, ಅವರಿಗೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಲಭಿಸಲು ಕಾರಣವಾಗಿದ್ದು ಮಾತ್ರವಲ್ಲದೆ ಗೆಲುವನ್ನೂ ತಂದುಕೊಟ್ಟಿತ್ತು. ಮೂರು ಅವಧಿಗೆ ಶಾಸಕರಾಗಿದ್ದ ಯೋಗೀಶ್ ಭಟ್ ಸೌಮ್ಯ ಸ್ವಭಾವದ ವ್ಯಕ್ತಿಯಾಗಿ ಜನಸಾಮಾನ್ಯರ ಜತೆ ಬೆರೆಯುತ್ತಿದ್ದ ಶಾಸಕರಾಗಿದ್ದರು. ಆದರೆ ಅಭಿವೃದ್ದಿ ವಿಚಾರದಲ್ಲಿ ಅನುದಾನಗಳನ್ನು ತರುವಲ್ಲಿ ಯೋಗಿಶ್ ಭಟ್ ಬಹಳ ಹಿಂದೆ ಬಿದ್ದಿದ್ದರು. ಮೂರು ಅವಧಿಯಲ್ಲೂ ಭರವಸೆಯನ್ನಷ್ಟೇ ನೀಡಿ ಕೆಲವು ಶಂಕುಸ್ಥಾಪನೆ ಮಾಡಿದ್ದು ಮಾತ್ರ ಅವರ ಸಾಧನೆಯಾಗಿತ್ತು. ಹೀಗಾಗಿ ಉತ್ತಮ ಅಧಿಕಾರಿಯನ್ನು ಜನರು ಒಪ್ಪಿಕೊಂಡು ಶಾಸಕರನ್ನಾಗಿ ಮಾಡಿದರು. ಶಾಸಕರಾದ ಬಳಿಕ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದ ಜೆ.ಆರ್.ಲೋಬೋ, ಜನರ ವಿಶ್ವಾಸ ಗಳಿಸುವ ಮೂಲಕ 2018 ರಲ್ಲೂ ಸುಲಭವಾಗಿ ಗೆಲ್ಲುತ್ತಾರೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದರು. 2018 ರಲ್ಲಿ ಹೊಸ ಮುಖ ವೇದವ್ಯಾಸ ಕಾಮತ್ ಲೋಬೋ ಅವರ ಎದುರಾಳಿಯೇ ಅಲ್ಲ ಎನ್ನುವ ರೀತಿಯ ವಾತಾವರಣ ನಿರ್ಮಾಣವಾಗಿತ್ತು. ಆದರೂ ಕಾಂಗ್ರೆಸ್‌ನ ಜೆ.ಆರ್. ಲೋಬೋ ಬಿಜೆಪಿಯ ಯುವ ನಾಯಕ ವೇದವ್ಯಾಸ್ ಕಾಮತ್ ಎದರು ಸೋಲೊಪ್ಪಿಕೊಳ್ಳಬೇಕಾಯಿತು.
ಕೈ ಹಿಡಿದ ಮೋದಿ ಮಂತ್ರ
ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಉದ್ಯಮಿ ಶ್ರೀಕರ ಪ್ರಭು ಬಂಡಾಯವಾಗಿ ಸ್ಪರ್ಧೆ ಮಾಡಿದರೂ ಬಿಜೆಪಿ ಗೆಲುವಿಗೆ ಅಡ್ಡಿಯಾಗಲಿಲ್ಲ. ಜೆ.ಆರ್. ಲೋಬೋಗೆ ಯಾವುದೇ ಕಾರಣಕ್ಕೂ ಅಭಿವೃದ್ದಿ ವಿಚಾರವಾಗಿ ಮತ ಚಲಾಯಿಸಿದರೆ ಸೋಲಾಗಲು ಸಾದ್ಯವಿರಲಿಲ್ಲ. ಆದರೆ ಈ ಚುನಾವಣೆಯಲ್ಲಿ ವೇದವ್ಯಾಸ್ ಕಾಮತ್ ಅವರ ಕೈ ಹಿಡಿದಿದ್ದು ಮೋದಿ ಮಂತ್ರ ಅಲ್ಲದೆ ಬೇರೆನೂ ಅಲ್ಲ. ಪ್ರಧಾನಿ ಮೋದಿಯ ಹೆಸರನ್ನು ಮುಂದಿಟ್ಟು ಚುನಾವಣೆ ಎದುರಿಸಿದ್ದೇ ಇಲ್ಲಿ ಬಿಜೆಪಿಯ ಗೆಲುವಿಗೆ ಕಾರಣ.
2023ರಲ್ಲಿ ಅಭ್ಯರ್ಥಿಗಳು
2023ರ ಚುನಾವಣೆಯಲ್ಲಿ ಬಿಜೆಪಿಯಿಂದ ಮತ್ತೆ ಹಾಲಿ ಶಾಸಕ ವೇದವ್ಯಾಸ ಕಾಮತ್ ಕಣಕ್ಕಿಳಿಯುವ ಎಲ್ಲಾ ಸಾದ್ಯತೆಗಳಿದ್ದು, ಸದ್ಯಕ್ಕೆ ಯಾವುದೇ ಬಂಡಾಯದ ಸೂಚನೆ ಇಲ್ಲ. ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ನಾಲ್ಕು ಹೆಸರುಗಳಿ ಕೇಳಿ ಬರುತ್ತಿವೆ. ಜೆ.ಆರ್. ಲೋಬೋ ಹೆಸರು ಮುಂಚೂಣಿಯಲ್ಲಿದೆ. ಐವಾನ್ ಡಿʼಸೋಜಾ ಹೆಸರು ಲೋಬೋ ಬಳಿಕ ಕೇಳಿಬರುತ್ತಿದೆ, ಇವರಿಬ್ಬರ ಬದಲಿಗೆ ಬಿಲ್ಲವ ಸಮೂದಾಯದ ಪದ್ಮರಾಜ್ ಹಾಗೂ ಮಾಜಿ ಮೇಯರ್ ಶಶಿಧರ್ ಹೆಗ್ಡೆ ಅವರ ಹೆಸರೂ ಚರ್ಚೆಯಲ್ಲಿದೆ. ಬಹುತೇಕ ಜೆ.ಆರ್. ಲೋಬೋ ಈ ಕ್ಷೇತ್ರದ ಮುಂದಿನ ಅಭ್ಯರ್ಥಿಯಾಗುವ ಸಾದ್ಯತೆ ಹೆಚ್ಚು.
2023 ರ ಚುನಾವಣೆಯಲ್ಲಿ ವರ್ಕೌಟ್ ಆಗುವ ವಿಚಾರ
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ವೇದವ್ಯಾಸ್ ಕಾಮತ್‌ಗೆ ಪ್ಲಸ್ ಆಗಿರುವುದು ಮಂಗಳೂರಿನಲ್ಲಿ ನಡೆಯತ್ತಿರುವ ಸ್ಮಾರ್ಟ್‌ಸಿಟಿ ಪ್ರಾಜೆಕ್ಟ್. ಸ್ಮಾರ್ಟ್‌ಸಿಟಿ ಪ್ರಾಜೆಕ್ಟ್‌ನಲ್ಲಿ ನಗರದ ಪ್ರಮುಖ ಪ್ರದೇಶಗಳಲ್ಲಿ ರಸ್ತೆ ಸೇರಿದಂತೆ ಹಲವು ಅಭಿವೃದ್ದಿ ಕಾರ್ಯಗಳು ನಡೆದಿವೆ. ಆದರೆ ಕ್ಷೇತ್ರದ ಉಳಿದ ಪ್ರದೇಶಗಳಲ್ಲಿ ಅಷ್ಟಾಗಿ ಸಂಚಾರ ಮಾಡದೆ, ರಾಜ್ಯದ ಅನುದಾನಗಳನ್ನು ತರುವಲ್ಲಿ ವೇದವ್ಯಾಸ ಕಾಮತ್ ಹಿಂದೆ ಬಿದ್ದಿದ್ದಾರೆ ಎನ್ನುವ ಮಾತುಗಳಿವೆ. ಸ್ಮಾರ್ಟ್ ಸಿಟಿ ಕಾಮಗಾರಿಯೂ ಕೆಲವು ಕಡೆಗಳಲ್ಲಿ ಬೇಕಾಬಿಟ್ಟಿಯಾಗಿ ನಡೆದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಆಕ್ರೋಶ ಚುನಾವಣೆಯಲ್ಲಿ ವ್ಯಕ್ತವಾದರೆ ವೇದವ್ಯಾಸ್ ಕಾಮತ್‌ಗೆ ಗೆಲುವು ಕಷ್ಟಸಾಧ್ಯವಾಗುತ್ತದೆ. ಕಾಂಗ್ರೆಸ್‌ನಲ್ಲಿ ಜೆ.ಆರ್. ಲೋಬೊ ಅವರಿಗೆ ಟಿಕೆಟ್ ಸಿಕ್ಕರೆ ಉತ್ತಮ ಪೈಪೋಟಿ ನಿರೀಕ್ಷೆಯಿದೆ. ಆದರೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದು, ಲೋಬೋ ಅವರಿಗೆ ಟಿಕೆಟ್ ಸಿಕ್ಕರೆ ಬಂಡಾಯ ಏಳಬಹುದು. ಈ ರೀತಿ ಆದರೆ ವೇದವ್ಯಾಸ್ ಕಾಮತ್‌ಗೆ ಗೆಲುವು ಸುಲಭವಾಗಬಹುದು.
2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಡಿ. ವೇದವ್ಯಾಸ್ ಕಾಮತ್ (ಬಿಜೆಪಿ)
2. ಜೆ.ಆರ್. ಲೋಬೊ, ಐವಾನ್ ಡಿʼಸೋಜಾ, ಪದ್ಮರಾಜ್, ಶಶಿಧರ್ ಹೆಗ್ಡೆ (ಕಾಂಗ್ರೆಸ್)
ಇದನ್ನೂ ಓದಿ | ಎಲೆಕ್ಷನ್ ಹವಾ | ಮಂಗಳೂರು | ʼಖಾದರ್ʼ ಖಾನ್‌ದಾನ್ ಎದುರು ಬಿಜೆಪಿ ಭವಿಷ್ಯ ಮಂಕಾಗಿದೆ, ಪ್ರಯತ್ನ ಜಾರಿಯಲ್ಲಿದೆ