ಬೆಂಗಳೂರು: ಯೋಜನೆಗಳ ಚಾಲನೆ, ಕಾರ್ಯಾರಂಭ ನಿಮಿತ್ತ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಡೀ ನಗರದಲ್ಲಿ ಸಂಭ್ರಮ ಮುಗಿಲುಮುಟ್ಟಿದೆ.
ಮದ್ಯಾಹ್ನ 1.30ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಭಾಗವಹಿಸಲು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸಾವಿರಾರು ಕಾರ್ಯಕರ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.
ಮಳೆಯಿಂದ ಕಾರ್ಯಕ್ರಮಕ್ಕೆ ಯಾವುದೇ ತೊಂದರೆ ಆಗದಿರಲಿ ಎಂದು ಸುಮಾರು 70 ಸಾವಿರ ಜನರಿಗಾಗುವಷ್ಟು ಬೃಹದಾಕಾರದ ಪೆಂಡಾಲ್ ವ್ಯವಸ್ಥೆ ಮಾಡಲಾಗಿದೆ. ಬಿಗಿ ಬಂದೋಬಸ್ತ್ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಯೊಬ್ಬರನ್ನೂ ತೀವ್ರ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಪಾಸ್ ಇದ್ದವರಿಗೆ ಮುಂಬಾಗದ ಗೇಟ್‌ನಿಂದ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದಾರೆ.
ಪಾಸ್‌ನಲ್ಲಿ ಫೋಟೋ ಇಲ್ಲದಿದ್ದರೆ ಒಳಗೆ ಪ್ರವೇಶ ನಿರಾಕರಣೆ ಮಾಡಲಾಗುತ್ತಿದ್ದು, ಬ್ಯಾಗ್, ನೀರಿನ ಬಾಟಲ್, ನ್ಯೂಸ್‌ಪೇಪರ್ ಸೇರಿ ಎಲ್ಲ ವಸ್ತುಗಳಿಗೂ ನಿರ್ಬಧ ವಿಧಿಸಲಾಗುತ್ತಿದೆ. ವ್ಯಾನಿಟಿ ಬ್ಯಾಗ್ ಹಾಗೂ ಕುಡಿಯುವ ನೀರು ತಂದಿದ್ದ ಮಹಿಳೆಯರು ಒಳಗೆ ಹೋಗಲಾಗದೆ ಪರದಾಡುತ್ತಿದ್ದಾರೆ. ಅನೇಕರು ಒಳಗೆ ಪ್ರವೇಶಿಸಲಾರದೆ ವಾಪಸಾಗುತ್ತಿದ್ದಾರೆ. ಮೊಬೈಲ್, ವ್ಯಾಲೆಟ್ ಸೇರಿ ಅತ್ಯಗತ್ಯ ವಸ್ತುಗಳನ್ನು ಹೊರತುಪಡಿಸಿ ಸಂಪೂರ್ಣ ಬರಿಗೈಯಲ್ಲಿಯೇ ಒಳಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ.
ಭದ್ರತಾ ತಪಾಸಣೆ ಒಂದೆಡೆಯಾದರೆ, ಯಾವುದೇ ವಸ್ತುಗಳನ್ನು ವೇದಿಕೆಯತ್ತ ಬಿಸಾಡುವುದು, ಪ್ರತಿಭಟಿಸುವಂತಹ ಮುಜುಗರದ ಸನ್ನಿವೇಶಗಳನ್ನು ತಪ್ಪಿಸುವುದೂ ಪ್ರಮುಖ ಉದ್ದೇಶವಾಗಿದೆ. ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಕು ಎಂದು ಅನೇಕರು ತಾವು ತಂದ ವಸ್ತುಗಳನ್ನು ಹೊರಗೆ ಇಟ್ಟು ಒಳಹೋಗುತ್ತಿದ್ದಾರೆ.
ದೂರದ ಊರಿನಿಂದ ಬಂದವರಿಗೆ ಉಪಹಾರದ ವ್ಯವಸ್ತೆ ಮಾಡಲಾಗಿದ್ದು, ಪೆಂಡಾಲ್ ಒಳಗೆಯೇ ಸಾಕಷ್ಟು ಪ್ರಮಾಣದಲ್ಲಿ ಕುಡಿಯುವ ನೀರು ಕೌಂಟರ್ ತೆರೆಯಲಾಗಿದೆ.
ಪ್ರಧಾನಿ ಮೋದಿಯವರ ಕಾರ್ಯಕ್ರಮವನ್ನು ವೀಕ್ಷಿಸಲೆಂದೇ ಊರುಗೋಲು ಸಹಾಯದಿಂದ ಮಹಿಳೆಯೊಬ್ಬರು ಆಗಮಿಸಿದ್ದು ಗಮನ ಸೆಳೆಯಿತು. ಕಾಲು ನೋವಿನಿಂದ ಬಳಲುತ್ತಿದ್ದರೂ ಆಗಮಿಸಿದ ಮಹಿಳೆಯನ್ನು ಸಭಾಂಗಣದ ಹಿಂಬಾಗಲಿನಿಂದ ಒಳಗೆ ಬಿಟ್ಟ ಅಧಿಕಾರಿಗಳು ಕುರ್ಚಿ ನೀಡಿದರು.
2-55 ಗಂಟೆಗೆ ಮಂಗಳೂರಿಗೆ ಆಗಮಿಸಲಿರುವ ಪಿಎಂ ನರೇಂದ್ರ ಮೋದಿ, ಮಂಗಳೂರು ಬಂದರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ 4.30 ಗಂಟೆಗೆ ದೆಹಲಿಗೆ ವಾಪಸಾಗಲಿದ್ದಾರೆ.
ಮೋದಿ ಆಗಮನ ಮೇಲ್ನೋಟಕ್ಕೆ ಅಭಿವೃದ್ಧಿ ಯೋಜನೆಗಳ ಚಾಲನೆಗೆ ಎಂಬಂತೆ ಕಂಡರೂ, ಇದು ಕರಾವಳಿ ಜಿಲ್ಲೆಗಳಲ್ಲಿ ಸಂಘಟನೆ ಇನ್ನಷ್ಟು ಚುರುಕುಗೊಳಿಸಲು ಹೂಡಿದ ತಂತ್ರವೆಂದೂ ವಿಶ್ಲೇಷಿಸಲಾಗುತ್ತಿದೆ. 2023ರ ಚುನಾವನೆಗೆ ಟ್ರೆಂಡ್ ಸೆಟ್ ಮಾಡಲು ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯದ ಕಡೆ ಮುಖ ಮಾಡಿದ್ದಾರೆ ಎಂದೂ ತಿಳಿಯಲಾಗಿದೆ.
ಇದನ್ನೂ ಓದಿ | INS Vikrant | ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್ ಇಂದಿನಿಂದ ಕಾರ್ಯಾರಂಭ; ಪ್ರಧಾನಿ ಮೋದಿಯಿಂದ ಚಾಲನೆ