Site icon Vistara News

Self Harming: ಮಾಜಿ ಶಾಸಕ‌ ಮೊಯ್ದೀನ್ ಬಾವಾ ಸಹೋದರನ ಮೃತದೇಹ ಪತ್ತೆ; ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದವರ ವಿರುದ್ಧ ಎಫ್‌ಐಆರ್‌

Self harming

ಮಂಗಳೂರು: ಮಾಜಿ ಶಾಸಕ ಮೊಯ್ದೀನ್ ಬಾವಾ ಸಹೋದರ ಮುಮ್ತಾಜ್ ಅಲಿ (52) ಎಂಬುವವರು ಸಾಯುವುದಾಗಿ ಕುಟುಂಬಸ್ಥರಿಗೆ ಮಸೇಜ್‌ ಕಳಿಸಿ ಮಂಗಳೂರು ಹೊರವಲಯದ ಕೂಳೂರು ಬ್ರಿಡ್ಜ್‌ನಲ್ಲಿ ಕಾರು ನಿಲ್ಲಿಸಿ ನಾಪತ್ತೆ (Missing Case) ಆಗಿದ್ದರು. ಇದೀಗ ಇಪ್ಪೆತ್ತೆಂಟು ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಮುಮ್ತಾಜ್ ಅವರ ಮೃತದೇಹ (Self Harming) ಸಿಕ್ಕಿದೆ. ತಣ್ಣೀರುಬಾವಿ ಮುಳುಗುಗಾರರು ಮೃತದೇಹ ಪತ್ತೆ ಮಾಡಿ ಹೊರತೆಗೆದಿದ್ದಾರೆ. ಮೃತದೇಹ ಕಂಡು ಮಾಜಿ ಶಾಸಕ ಮೊಯಿದ್ದೀನ್ ಬಾವ ಗೋಳಾಡಿದರು.

ನಿನ್ನೆ ಭಾನುವಾರ ಬೆಳಗಿನ ಜಾವ ಮೂರು ಗಂಟೆಗೆ ಮನೆಯಿಂದ ಹೊರಟ್ಟಿದ್ದ ಮುಮ್ತಾಜ್ ಆಲಿ, ಬೆಳಗ್ಗೆ 5 ಗಂಟೆಗೆ ಕೂಳೂರು ಸೇತುವೆ ಮೇಲೆ ಡ್ಯಾಮೇಜ್‌ ಆದ ಸ್ಥಿತಿಯಲ್ಲಿ ಬಿಎಂಡಬ್ಲ್ಯೂ ಕಾರು ಪತ್ತೆಯಾಗಿತ್ತು. ಬಳಿಕ ನಿನ್ನೆ ದಿನವಿಡೀ ಹುಡುಕಿದರೂ ಮುಮ್ತಾಜ್ ಆಲಿ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಸೋಮವಾರ ಮತ್ತೆ ನದಿಯಲ್ಲಿ ಶೋಧ ಕಾರ್ಯ ಆರಂಭಿಸಲಾಗಿತ್ತು.

ಸಹೋದರನ ನೆನೆದು ಕಣ್ಣೀರು

ಸಹೋದರನನ್ನು ನೆನೆದು ಮಾಜಿ ಶಾಸಕ ಮೋಹಿಯುದ್ದೀನ್ ಬಾವ ಕಣ್ಣೀರು ಹಾಕಿದರು. ಬ್ಲ್ಯಾಕ್‌ ಮೇಲ್‌ನಿಂದಲೇ ನನ್ನ ಸಹೋದರ ಈ ನಿರ್ಧಾರಕ್ಕೆ ಬಂದಿದ್ದಾನೆ. ನನ್ನ ಸಹೋದರ ಶೈಕ್ಷಣಿಕವಾಗಿ, ಧಾರ್ಮಿಕ ಕಾರ್ಯಗಳಿಂದ ಹೆಸರು ಗಳಿಸಿದ್ದ. ಆತನ ಪ್ರಚಾರವನ್ನು ಸಹಿಸದ ಕೆಲವು ಶಕ್ತಿಗಳು ಕುತಂತ್ರ ಮಾಡಿದ್ದಾರೆ. ಈ ಕಾರಣದಿಂದಲೇ ನನ್ನ ಸಹೋದರ ಈ ನಿರ್ಧಾರಕ್ಕೆ ಬಂದಿದ್ದಾನೆ. ಆತನ ಫೋನ್ ಹಾಗೂ ವಾಟ್ಸ್ ಅಪ್ ಪರಿಶೀಲನೆ ಮಾಡುತ್ತಿದ್ದಾರೆ. ನನ್ನ ಸಹೋದರನ ಈ ಸ್ಥಿತಿಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಲಿ. ರಾಜಕೀಯ ರಹಿತವಾಗಿ ಕೆಲಸ ಮಾಡಿದ್ದ ಆತನನ್ನು ಪ್ರಚೋದನೆ ನೀಡಿ ಮುಗಿಸಿದ್ದಾರೆ ಎಂದು ಕಣ್ಣೀರು ಹಾಕಿದರು.

ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಮಹಿಳೆ ಗ್ಯಾಂಗ್‌ ಅರೆಸ್ಟ್‌

ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಜ್ ಆಲಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಆರು ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮುಮ್ತಾಜ್ ಆಲಿ ಸಹೋದರ ಹೈದರ್ ದೂರಿನ ಮೇರೆಗೆ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮಹಿಳೆಯನ್ನು ಬಳಸಿಕೊಂಡು ದುರುದ್ದೇಶದಿಂದ ಆತ್ಮಹತ್ಯೆ ಪ್ರಚೋದನೆ ದೂರು ನೀಡಿರುವ ಸಂಬಂಧ ಮಹಿಳೆ ರೆಹಮತ್ ಹಾಗೂ ಅಬ್ದುಲ್ ಸತ್ತಾರ್, ಶಾಫಿ, ಮುಸ್ತಾಫ, ಶೋಯೆಬ್ ಹಾಗೂ ಸಿರಾಜ್ ವಿರುದ್ಧ ದೂರು ದಾಖಲಾಗಿದೆ. ಸಹೋದರ ಮುಮ್ತಾಜ್ ಆಲಿ ಸಮಾಜದ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ಅವರ ಗೌರವ ಹಾಳು ಮಾಡಲು ಮಹಿಳೆಯ ಬಳಸಿಕೊಂಡು ಷಡ್ಯಂತ್ರ ಮಾಡಿರುವ ಆರೋಪವಿದೆ. ರೆಹಮತ್ ಅಕ್ರಮ ಸಂಬಂಧ ಇದೆ ಎಂದು ಸುಳ್ಳು ಪ್ರಚಾರದ ಬೆದರಿಕೆ ಹಾಕಿದ್ದಾರೆ.

2024ರ ಜುಲೈನಿಂದ ಈವರೆಗೆ 50 ಲಕ್ಷ ವಸೂಲಿ ಮಾಡಿದ್ದಾರೆ. 25 ಲಕ್ಷ ಹಣವನ್ನು ಚೆಕ್ ಮೂಲಕವೂ ಮಹಿಳೆ ಪಡೆದಿದ್ದಾಳೆ. ಸತ್ತಾರ್ ಎಂಬಾತ ಮುಮ್ತಾಜ್ ಆಲಿಯ ರಾಜಕೀಯ ವಿರೋಧಿಯಾಗಿದ್ದಾನೆ. ಅಕ್ರಮ ಸಂಬಂಧ ಇದೆ ಎಂದು ಇವರು ನಿರಂತರ ಬ್ಲ್ಯಾಕ್ ಮೇಲ್ ಮಾಡಿದ್ದರು. ಜೀವ ಬೆದರಿಕೆ ಜತೆಗೆ ಮುಮ್ತಾಜ್ ಆಲಿ ಕುಟುಂಬಕ್ಕೂ ಬೆದರಿಸಿದ್ದರು. ಹೀಗಾಗಿಯೇ ಸಹೋದರ ಮುಮ್ತಾಜ್ ಆಲಿ ಮೆಸೇಜ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version