ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ಅವರ ವಿರುದ್ಧದ ಅಪಪ್ರಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲೂ ಹಿನ್ನಡೆ ಅನುಭವಿಸಿದ ಸಾಮಾಜಿಕ ಕಾರ್ಯಕರ್ತ ಕೆ.ಸೋಮನಾಥ ನಾಯಕ್ ಸೋಮವಾರ ಮಂಗಳೂರು ಸೆಂಟ್ರಲ್ ಜೈಲು ಸೇರಿದ್ದಾರೆ. ತೀರ್ಪಿನನ್ವಯ ಮೂರು ತಿಂಗಳ ಸೆರೆವಾಸವನ್ನು ಅನುಭವಿಸಲಿದ್ದಾರೆ.
ಬೆಳ್ತಂಗಡಿ ಕೋರ್ಟ್ ವಿಧಿಸಿದ್ದ 3 ತಿಂಗಳ ಜೈಲು ಶಿಕ್ಷೆಯನ್ನು ಕಾಯಂಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದರಿಂದ ಕೆ.ಸೋಮನಾಥ ನಾಯಕ್ ಸೋಮವಾರ ಬೆಳ್ತಂಗಡಿ ಕೋರ್ಟ್‌ಗೆ ಬೆಂಬಲಿಗರ ಜತೆಗೆ ಬಂದು ಹಾಜರಾದರು.
ಡಾ. ವೀರೇಂದ್ರ ಹೆಗ್ಗಡೆ ಅವರು ಮಿತಿಗಿಂತ ಜಾಸ್ತಿ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಬೆಳ್ತಂಗಡಿಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಆರೋಪ ಮಾಡಿದ್ದರು. ಈ ಪ್ರಕರಣವು ಬೆಳ್ತಂಗಡಿ ಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಬೆಳ್ತಂಗಡಿ ಕೋರ್ಟ್, ಹೆಗ್ಗಡೆ ವಿರುದ್ಧ ಅಪಪ್ರಚಾರ ಮಾಡದಂತೆ ಪ್ರತಿಬಂಧಕಾಜ್ಞೆ ವಿಧಿಸಿತ್ತು. ಆದರೆ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮತ್ತೆ ಮಾನಹಾನಿ ಹೇಳಿಕೆಗಳನ್ನು ಮುಂದುವರಿಸಿದ್ದರಿಂದ ಸುದೀರ್ಘ ವಿಚಾರಣೆ ನಡೆದಿದೆ. ಬಳಿಕ ಸೋಮನಾಥ ನಾಯಕ್‌ಗೆ 3 ತಿಂಗಳು ಜೈಲು ಶಿಕ್ಷೆ ಹಾಗೂ ಧರ್ಮಸ್ಥಳ ಕ್ಷೇತ್ರಕ್ಕೆ 4.5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಬೆಳ್ತಂಗಡಿ ಕೋರ್ಟ್ ತೀರ್ಪು ನೀಡಿತ್ತು.
ಬೆಳ್ತಂಗಡಿ ಕೋರ್ಟ್ ನೀಡಿರುವ ತೀರ್ಪನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ನಾಯಕ್ ಅರ್ಜಿ ಸಲ್ಲಿಸಿದ್ದರು. ಆದರೆ, ಬೆಳ್ತಂಗಡಿ ಕೋರ್ಟ್ ನೀಡಿದ್ದ ಜೈಲು ಶಿಕ್ಷೆ ಕಾಯಂಗೊಳಿಸಿ ಹೈಕೋರ್ಟ್ ತೀರ್ಪು ನೀಡಿತ್ತು. ಇದಾದ ಬಳಿಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸೋಮನಾಥ ನಾಯಕ್, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸರ್ವೋಚ್ಚ ನ್ಯಾಯಾಲಯವೂ ಬೆಳ್ತಂಗಡಿ ಕೋರ್ಟ್‌ನ ಜೈಲು ಶಿಕ್ಷೆಯನ್ನು ಕಾಯಂಗೊಳಿಸಿ ತೀರ್ಪು ನೀಡಿದೆ. ಹೀಗಾಗಿ ಅಪಾರ ಬೆಂಬಲಿಗರ ಸಮ್ಮುಖದಲ್ಲಿ ಸೋಮನಾಥ ನಾಯಕ್ ಬೆಳ್ತಂಗಡಿ ಕೋರ್ಟ್‌ಗೆ ಶರಣಾದರು. ಹೀಗಾಗಿ ಅವರನ್ನು ಪೊಲೀಸರು ಬಂಧಿಸಿ ಮಂಗಳೂರು ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಿದ್ದಾರೆ.
ಇದನ್ನೂ ಓದಿ | ಎರಡನೇ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗಳ ಪೊಲೀಸ್ ಕಸ್ಟಡಿಗೆ ಮನವಿ