ಹೊಸದಿಲ್ಲಿ: ಹಣ ಲೇವಾದೇವಿ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆಯನ್ನು ರದ್ದು ಮಾಡಬೇಕು ಎಂದು ಕೋರಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರದಲ್ಲಿ ದಿಲ್ಲಿ ಹೈಕೋರ್ಟ್ ಇ.ಡಿಗೆ ನೋಟಿಸ್ ಜಾರಿಗೊಳಿಸಿದೆ. ಎಲ್ಲ ವಿಚಾರಣೆಗಳು ಮುಗಿದಿದ್ದರೂ ಅನಗತ್ಯವಾಗಿ ಮತ್ತೊಮ್ಮೆ ವಿಚಾರಣೆಯ ನೆಪ ಹೂಡಿ ಈಗ ಚುನಾವಣೆಯ ಸಂದರ್ಭದಲ್ಲಿ ಬಂಧನಕ್ಕೆ ಸಂಚು ಹೂಡಲಾಗಿದೆ. ಇಂಥ ತಂತ್ರಗಳಿಗೆ ಅವಕಾಶ ನೀಡಬಾರದು ಎಂದು ಡಿ.ಕೆ.ಶಿವಕುಮಾರ್ ಅವರು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಳೆದ ತಿಂಗಳು ಜಾರಿ ನಿರ್ದೇಶನಾಲಯವು ಡಿ.ಕೆ.ಶಿ ಮತ್ತು ಅವರ ಸಹೋದರ, ಸಂಸದ ಡಿ.ಕೆ. ಸುರೇಶ್ ಅವರನ್ನು ಹಣ ಲೇವಾದೇವಿ ಹಗರಣದ ವಿಚಾರಣೆಗೆ ಕರೆದಿತ್ತು. ಅಲ್ಲಿ ಮುಖ್ಯವಾಗಿ ಸೋನಿಯಾ ಗಾಂಧಿ-ರಾಹುಲ್ ಗಾಂಧಿ ಒಡೆತನದ ನ್ಯಾಷನಲ್ ಹೆರಾಲ್ಡ್ ಸಂಸ್ಥೆಗೆ ನೀಡಿದ ದೇಣಿಗೆಗೆ ಸಂಬಂಧಿಸಿ ಪ್ರಧಾನವಾಗಿ ವಿಚಾರಣೆ ನಡೆದಿತ್ತು. ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆದು ಅಧಿಕಾರಿಗಳು ಹಲವು ಪ್ರಶ್ನೆಗಳನ್ನು ಕೇಳಿದ್ದರು.
ಅಂದು ವಿಚಾರಣೆ ಮುಗಿಸಿ ಹೊರಬಂದು ಮಾತನಾಡಿದ್ದ ಡಿ.ಕೆ.ಶಿವಕುಮಾರ್ ಅವರು, ʻʻನ್ಯಾಷನಲ್ ಹೆರಾಲ್ಡ್‌ನ ಮಾತೃ ಸಂಸ್ಥೆಯಾಗಿರುವ ಯಂಗ್ ಇಂಡಿಯನ್ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು. ನನ್ನ ಕುಟುಂಬದ ಸದಸ್ಯರು, ಸಂಸ್ಥೆಗೂ ತನಗೂ ಇರುವ ಸಂಬಂಧದ ಬಗ್ಗೆ ಕೇಳಿದರುʼʼ ಎಂದಿದ್ದರು. ʻʻʻನಾನು ಯಾವುದೇ ದಾಖಲೆಗಳನ್ನು ತಂದಿರಲಿಲ್ಲ. ಹಾಗಾಗಿ ಶೀಘ್ರದಲ್ಲೇ ಅವುಗಳನ್ನು ಮೇಲ್ ಮೂಲಕ ಕಳುಹಿಸುವುದಾಗಿ ಅಧಿಕಾರಿಗಳಿಗೆ ಹೇಳಿದ್ದೇನೆʼʼ ಎಂದು ತಿಳಿಸಿದ್ದರು.
ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರು ಈ ಹಿಂದೆ ಯಂಗ್ ಇಂಡಿಯನ್ ಸಂಸ್ಥೆಗೆ ನೀಡಿದ ಮೊತ್ತದ ಬಗ್ಗೆ ಅಂದು ಇ.ಡಿ. ಅಧಿಕಾರಿಗಳು ಪ್ರಶ್ನೆ ಮಾಡಿದ್ದರು. ಹಣಕಾಸು ವ್ಯವಹಾರದ ವಿವರಗಳನ್ನು ನೀಡುವಂತೆ ಸೂಚಿಸಿದ್ದರು ಎನ್ನಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿರುವ ಜೆ. ಗೀತಾ ರೆಡ್ಡಿ ಮತ್ತು ಇತರ ಕೆಲವು ನಾಯಕರ ವಿಚಾರಣೆಯೂ ನಡೆದಿತ್ತು.
ಈ ನಡುವೆ, ಡಿ.ಕೆ. ಶಿವಕುಮಾರ್ ಅವರು ನ್ಯಾಷನಲ್ ಹೆರಾಲ್ಡ್ ಕೇಸಿಗೆ ಸಂಬಂಧಿಸಿ ವಿಚಾರಣೆಯನ್ನು ಮುಂದುವರಿಸದಂತೆ ಇ.ಡಿ.ಗೆ ಆದೇಶ ನೀಡಬೇಕು ಎಂದು ಕೋರಿ ದಿಲ್ಲಿ ಹೈಕೋರ್ಟ್ ಮೊರೆ ಹೊಕ್ಕಿದ್ದಾರೆ. ಕೋರ್ಟ್ ಈಗ ಇ.ಡಿ.ಗೆ ನೋಟಿಸ್ ನೀಡಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ ೧೫ಕ್ಕೆ ನಿಗದಿಪಡಿಸಿದೆ. ನ್ಯಾಯಮೂರ್ತಿಗಳಾದ ಮುಕ್ತಾ ಗುಪ್ತಾ ಮತ್ತು ಅನೀಶ್ ದಯಾಳ್ ಅವರ ಪೀಠದಲ್ಲಿ ವಿಚಾರಣೆ ನಡೆದಿದೆ. ಡಿ.ಕೆ.ಶಿವಕುಮಾರ್ ಅವರ ಪರವಾಗಿ ಹಿರಿಯ ನ್ಯಾಯವಾದಿ ಕಪಿಲ್ ಸಿಬಾಲ್ ವಾದ ಮಂಡಿಸಿದರು.
ಡಿ.ಕೆ.ಶಿವಕುಮಾರ್ ಅವರ ಪಾದವೇನು?
-ಇದೇ ಪ್ರಕರಣಕ್ಕೆ ಸಂಬಂಧಿಸಿ ೨೦೧೮ರಲ್ಲಿ ಒಮ್ಮೆ ವಿಚಾರಣೆ ನಡೆಸಲಾಗಿತ್ತು. ಒಮ್ಮೆ ತನಿಖೆ ನಡೆಸಲಾದ ಪ್ರಕರಣವನ್ನು ಅನಗತ್ಯವಾಗಿ ಮತ್ತೊಮ್ಮೆ ವಿಚಾರಣೆ ನಡೆಸಲಾಗುತ್ತಿದೆ. ಹೀಗಾಗಿ ಈಗ ನಡೆಯುತ್ತಿರು ವಿಚಾರಣೆ ಮತ್ತು ಇ.ಡಿ. ನೀಡಿರುವ ಸಮನ್ಸನ್ನು ರದ್ದುಪಡಿಸಬೇಕು.
– ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ ೧೩ನ್ನು ಹಣ ಲೇವಾದೇವಿ ತಡೆ ಕಾನೂನಿಗೆ ಸೇರ್ಪಡೆ ಮಾಡಲಾಗಿದೆ. ಹಾಗಿರುವಾಗ ಪಿಎಂಎಲ್‌ಎ ಕಾಯಿದೆಯ ಸೆಕ್ಷನ್ ೧೩ಕ್ಕೆ ಈಗ ಮಾನ್ಯತೆ ಇಲ್ಲ. ಹೀಗಾಗಿ ಎರಡು ಏಜೆನ್ಸಿಗಳು ಒಂದೇ ಸೆಕ್ಷನ್‌ನಡಿ ತನಿಖೆ ನಡೆಸುವುದು ಸಾಧುವಲ್ಲ.
– ಹಣ ಲೇವಾದೇವಿ ಕಾಯಿದೆಗೆ ಸಂಬಂಧಿಸಿ ಹಿಂದಿನ ಸಾರಿಯೇ ಎಲ್ಲ ವಿಚಾರಣೆಗಳನ್ನು ಮುಕ್ತಾಯಗೊಳಿಸಲಾಗಿದೆ. ಈಗ ಚುನಾವಣೆಗಳನ್ನು ಎದುರಾಗಿರುವುದರಿಂದ ಮತೊಮ್ಮೆ ಬಂಧನ ಮಾಡಲು ಅನುಕೂಲವಾಗುವಂತೆ ಈ ತಂತ್ರ ಹೆಣೆಯಲಾಗಿದೆ.