Site icon Vistara News

ಎಲೆಕ್ಷನ್‌ ಹವಾ | ಕಲಘಟಗಿ‌ | ಸಂತೋಷ್ ಲಾಡ್ ಯಾವ ಪಾರ್ಟಿ ಟಿಕೆಟ್ ತರುತ್ತಾರೆ ಎನ್ನುವುದೇ ಚರ್ಚೆ

Kalaghatagi

ಪರಶುರಾಮ್‌ ತಹಶೀಲ್ದಾರ್‌, ಹುಬ್ಬಳ್ಳಿ
ಕಲಘಟಗಿ‌ ಎಂದರೆ ಧಾರವಾಡ ಜಿಲ್ಲೆಯ ಮಲೆನಾಡು. ಕಲಘಟಗಿ ವಿಧಾನಸಭಾ ಕ್ಷೇತ್ರ ಧಾರವಾಡ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ. ಸಾಕ್ಷರತೆಯ ಪ್ರಮಾಣ ಇಲ್ಲಿ ಶೇ.62 ಇದ್ದರೂ, ಮಹಿಳಾ ಸಾಕ್ಷರತೆಯ ವಿಷಯದಲ್ಲಿ ಸಾಕಷ್ಟು ಹಿಂದಿದೆ. ಕೃಷಿಯನ್ನೇ ಮುಖ್ಯ ಕಸುಬನ್ನಾಗಿ ನಂಬಿರುವ ಇಲ್ಲಿ ಕಂದು ಬಣ್ಣ ಮಿಶ್ರಿತ ಮಸಾರಿ ಭೂಮಿಯಿದೆ. ಭತ್ತ- ಕಬ್ಬು ಇಲ್ಲಿಯ ಮುಖ್ಯ ಬೆಳೆ. ಕೃಷಿ ಬಿಟ್ಟರೆ ಕೈಗಾರಿಗೆಗಳನ್ನೆಲ್ಲ ನಂಬಿಕೊಂಡವರ ಸಂಖ್ಯೆ ಕಡಿಮೆಯೇ. ಇಲ್ಲಿನ ಅವಲಕ್ಕಿ ಚುರಮುರಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಮರದ ಬಣ್ಣದ ತೊಟ್ಟಿಲುಗಳು ತುಂಬ ಪ್ರಸಿದ್ಧಿ ಪಡೆದಿವೆ. ಇಲ್ಲಿ ಲಿಂಗಾಯತ, ಜೈನ್, ಮುಸ್ಲಿಮ್, ಕ್ರೈಸ್ತ, ಮರಾಠಾ, ಬ್ರಾಹ್ಮಣ, ದಲಿತ ಸಮುದಾಯಗಳು ಸೇರಿದಂತೆ ಎಲ್ಲ ಜಾತಿ- ಮತದ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ.

2018ರಲ್ಲಿ ತಿರುಗಿಬಿದ್ದಿದ್ದ ಮತದಾರರು

ಗಣಿ ಉದ್ಯಮಿ ಸಂತೋಷ್ ಲಾಡ್ ಈ ಕ್ಷೇತ್ರಕ್ಕೆ ಎಂಟ್ರಿ‌ ಕೊಡವ ತನಕ ಕ್ಷೇತ್ರ ಅಷ್ಟೊಂದು ಪ್ರಾಮುಖ್ಯತೆ ಪಡೆದಿರಲಿಲ್ಲ. ಸಂತೋಷ‌ ಲಾಡ್ ಇಲ್ಲಿ ತಮ್ಮ ರಾಜಕೀಯ ಸಾಮ್ರಾಜ್ಯ ಸ್ಥಾಪಿಸಿದ್ದಾರೆ. ಮರಾಠಾ ಸಮುದಾಯಕ್ಕೆ ಸೇರಿರುವ ಸಂತೋಷ್ ಲಾಡ್ ಈ ಕ್ಷೇತ್ರದಲ್ಲಿ ತಮ್ಮ ಸ್ವಂತ ಬಲದಿಂದ ಹಲವಾರು ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕೆಲಸಗಳನ್ನು ಮಾಡಿದ್ದಾರೆ. ಆದರೆ ಸಂತೋಷ ಲಾಡ್ ಗೆದ್ದ ಬಳಿಕ ಕ್ಷೇತ್ರದತ್ತ ಮುಖ‌ ಮಾಡಲಿಲ್ಲ‌, ಜನರ ಸಂಪರ್ಕಕ್ಕೆ ಸಿಗಲಿಲ್ಲ, ಪಿಎಗಳೇ ಎಮ್‌ಎಲ್‌ಎ ರೀತಿ ವರ್ತಿಸುತ್ತಿದ್ದಾರೆ ಎಂಬ ಅಸಮಾಧಾನದ ಕಾರಣಕ್ಕೆ 2018 ರ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ತಿರುಗಿ ಬೀಳಬೇಕಾಯಿತು‌.

ಅನುಕಂಪದಲ್ಲಿ ಬಂದಿದ್ದ ನಿಂಬಣ್ಣವರ್‌

2018ರಲ್ಲಿ ಸಂತೋಷ ಲಾಡ್ ಸೋಲಿಗೆ ಪ್ರಮುಖ ಕಾರಣ 2013 ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಹೋದ‌ ಬಳಿಕ‌ ಕ್ಷೇತ್ರದತ್ತ ಮುಖ‌‌ಮಾಡಲಿಲ್ಲ ಎಂಬ ಬೇಸರ, ಮತ್ತೊಂದು ಸಂತೋಷ ಲಾಡ್‌ ಬಳ್ಳಾರಿಯಿಂದ ಬಂದವರು, ಹೊರಗಿನವರನ್ನು ಗೆಲ್ಲಿಸಿದರೆ ಇದೇ ಆಗುವುದು ಎಂಬ ಭಾವನೆ. ಸಿ.ಎಮ್‌. ನಿಂಬಣ್ಣನವರ್ ಸತತ ಮೂರು ಬಾರೀ ಸೋತಿದ್ದರು. ಅವರ ಮೇಲಿನ‌ ಅನುಕಂಪ ಅವರ ಗೆಲುವಿನ ಕಾರಣವಾಯಿತು.

ಟಿಕೆಟ್‌ ತರುವುದೇ ಹರಸಾಹಸ

ಹೊರಗಿನ ಅಭ್ಯರ್ಥಿ ಬೇಡ ಎಂದು ಕಲಘಟಗಿ‌ ಜನ 2018ರಲ್ಲಿ ಬಿಜೆಪಿಯ ಸಿ.ಎಮ್‌. ನಿಂಬಣ್ಣವರ್ ಅವರನ್ನು ಗೆಲ್ಲಿಸಿದರು. ನಿಂಬಣ್ಣನವರ್ 25,997 ಮತಗಳ ಅಂತರದಿಂದ ಗೆದ್ದುಬಂದಿದ್ದರು. ಸಂತೋಷ ಲಾಡ್ ಗೆ ಬಾರಿ ಮುಖ ಭಂಗವಾಗಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಂತೋಷ ಲಾಡ್ ಈ ಬಾರಿ ಕಲಘಟಗಿ‌ ಕ್ಷೇತ್ರಕ್ಕೆ ಮತ್ತೆ ಪ್ರವೇಶಿಸಿದ್ದು, ತಮ್ಮ ಜನಪರ‌ ಕಾರ್ಯಗಳ‌ ಮೂಲಕ 2023ರ ವಿಧಾನಸಭಾ ಚುನಾವಣೆಗೆ ಅಖಾಡ ಸನ್ನದ್ಧ ಮಾಡುತ್ತಿದ್ದಾರೆ. ಆದರೆ 2018ರ ಚುನಾವಣೆಯಲ್ಲಿ ಸೋತ ಬಳಿಕ‌ ಕಲಘಟಗಿ ಕ್ಷೇತ್ರ ತೊರೆದು ಕೆಲ ಕಾಲ ಸಂತೋಷ್‌ ಲಾಡ್‌ ದೂರ ಉಳಿದಿದ್ದ ಸಮಯದಲ್ಲಿ, ಕಾಂಗ್ರೆಸ್‌ನಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ. ಈ ಬಾರಿ ಸಂತೋಷ ಲಾಡ್ ಕ್ಷೇತ್ರವನ್ನು ಗೆಲ್ಲುವುದಕ್ಕಲ್ಲ, ಟಿಕೆಟ್ ಗಿಟ್ಟಿಸಲು ಹರಸಾಹಸ ಪಡಬೇಕಿದೆ.

ಟೆಂಗಿನಕಾಯಿ ಏನು ಮಾಡುತ್ತಾರೆ?

ಬಿಜೆಪಿ‌ ಆರಂಭದಲ್ಲಿ ಸಿ.ಎಮ್‌. ನಿಂಬಣ್ಣನವರ್‌ಗೆ ಟಿಕೆಟ್ ತಪ್ಪಿಸಿ ಹುಬ್ಬಳ್ಳಿಯ ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ನೀಡಿತ್ತು.‌ ಮಹೇಶ್ ಟೆಂಗಿನಕಾಯಿ ನಾಮಪತ್ರ ಸಹ ಸಲ್ಲಿಸಿದ್ದರು. ಆಗ ಕಲಘಟಗಿ‌ ಜನ ಅಕ್ಷರಶಃ ರೊಚ್ಚಿಗೆದ್ದಿದ್ದರು. ಬಿಜೆಪಿ‌ ಕಾಂಗ್ರೆಸ್ ಎರಡೂ ಪಕ್ಷಗಳು ಹೊರಗಿನವರಿಗೆ ಮಣೆ ಹಾಕುತ್ತಿವೆ ಎಂದು ಹೋರಾಟಕ್ಕಿಳಿದರು. ಈ‌ ಹೋರಾಟದ ಕಿಚ್ಚು ತೀವ್ರಗೊಳ್ಳುತ್ತಿದ್ದಂತೆ ಬಿಜೆಪಿಯ ಮಹೇಶ್ ಟೆಂಗಿನಕಾಯಿಗೆ ನೀಡಿದ್ದ ಟಿಕೆಟ್ ಮರಳಿ ಪಡೆದು ಸಿ.ಎಮ್‌. ನಿಂಬಣ್ಣನವರ್‌ಗೆ ಅವಕಾಶ ಕಲ್ಪಿಸಲಾಯಿತು. ಜನರ ಸ್ವಾಭಿಮಾನದ ಹೋರಾಟ ಕೂಡ ಬಿಜೆಪಿಗೆ ಗೆಲುವಿಗೆ ಕಾರಣವಾಯಿತು.

2023ರ ಟಿಕೆಟ್‌ ಆಕಾಂಕ್ಷಿಗಳು

ಬಿಜೆಪಿಯಿಂದ ಹಾಲಿ ಶಾಸಕ ಸಿ.ಎಮ್‌. ನಿಂಬಣ್ಣನವರ್ ಪ್ರಬಲ ಆಕಾಂಕ್ಷಿ. ಇವರು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಆಪ್ತರೂ ಹೌದು. ಬಿಜೆಪಿಯಲ್ಲಿ‌ ಮತ್ತೊಬ್ಬ ಪ್ರಬಲ ಟಿಕೆಟ್ ಆಕಾಂಕ್ಷಿ‌ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ. ಕಳೆದ ಬಾರಿ ಟಿಕೆಟ್ ಕೊಟ್ಟು ಕಸಿದುಕೊಂಡಿರುವುದರಿಂದ ಮತ್ತೊಮ್ಮೆ ಅವಕಾಶ ನೀಡಿ ಎಂದು ಕೇಳಬಹುದು. ಈಗ ಗೆದ್ದು‌ ಬಂದಿರುವ ಶಾಸಕರ‌ ಬಗ್ಗೆ ಕ್ಷೇತ್ರದಲ್ಲಿ ಅಷ್ಟೊಂದು ಒಳ್ಳೆಯ ಅಭಿಪ್ರಾಯ ಉಳಿದಂತೆ ಕಾಣುತ್ತಿಲ್ಲ. ಬಿಜೆಪಿ ವಲಯದಲ್ಲಿ, ಕ್ಷೇತ್ರದ ಜನರಲ್ಲಿ ಶಾಸಕರ ಬಗ್ಗೆ ಹೆಚ್ಚೇನು ಒಲವಿಲ್ಲ. ಪಟ್ಟಣ ಪಂಚಾಯತ್‌ ಅಧ್ಯಕ್ಷರ ನೇತೃತ್ವದಲ್ಲಿ ಕೆಲವು ಸದಸ್ಯರು ಶಾಸಕರ ವಿರುದ್ಧ ರೆಬಲ್ ಆಗಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸುವುದಿಲ್ಲ, ದರ್ಪದಿಂದ ವರ್ತಿಸುತ್ತಾರೆ, ಸುತ್ತಲೂ ಇರುವವರು ಶಾಸಕರ ದಾರಿ ತಪ್ಪಿಸುತ್ತಾರೆ ಎನ್ನುವ ಆರೋಪ ಸಿ.ಎಮ್. ನಿಂಬಣ್ಣವರ್ ಮೇಲಿದೆ.

ಸಿ.ಎಮ್. ನಿಂಬಣ್ಣವರ್ 75 ವರ್ಷ ವಯಸ್ಸಾಗಿದ್ದು, ಪಕ್ಷ ಬೇರೆಯವರಿಗೆ ಟಿಕೆಟ್ ನೀಡುತ್ತದೆ ಎನ್ನುವ ಚರ್ಚೆ ಜೋರಾಗಿದೆ. ಹೀಗಾಗಿ ವಿಧಾನ ಪರಿಷತ್ ಸದಸ್ಯ  ಪ್ರದೀಪ್ ಶೆಟ್ಟರ್ ಸಹ ಪ್ರಬಲ ಆಕಾಂಕ್ಷಿ. ಹುಬ್ಬಳ್ಳಿ- ಧಾರವಾಡ‌ ಮಹಾನಗರ ಪಾಲಿಕೆ ಮಾಜಿ  ಮೇಯರ್ ಶಿವು ಹಿರೇಮಠ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಪ್ರಬಲ ಟಿಕೆಟ್ ಆಕಾಂಕ್ಷಿ ಮಾಜಿ‌ ಶಾಸಕ, ಗಣಿದಣಿ ಸಂತೋಷ ಲಾಡ್. ಈ‌ ಕ್ಷೇತ್ರದಿಂದ ಎರಡು ಬಾರಿ ಗೆದ್ದು ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಲಾಡ್‌ಗೆ ಕ್ಷೇತ್ರದ ಮೇಲೆ‌ ಹಿಡಿತವಿದೆ. ಚುನಾವಣೆಗೆ ಇನ್ನೂ ಎರಡು ವರ್ಷ ಇರುವಾಗಲೇ ಕ್ಷೇತ್ರದಲ್ಲಿ ಸುತ್ತಾಟ‌ ನಡೆಸಿ ಜನಪರ‌ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ. ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿ ಸಂತೋಷ ಲಾಡ್‌ಗೆ ಪ್ರಬಲ ಸ್ಪರ್ಧೆ ಒಡ್ಡುವವರು ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ. ಸಂತೋಷ ಲಾಡ್ 2018ರಲ್ಲಿ ಸೋತ ಬಳಿಕ‌ ಕ್ಷೇತ್ರದತ್ತ ಮುಖ‌ಮಾಡದಿದ್ದಾಗ, ಕಲಘಟಗಿ‌ ಕ್ಷೇತ್ರದಲ್ಲಿ ಸಕ್ರಿಯವಾಗಿ ಓಡಾಡಿ‌ ಪಕ್ಷ ಸಂಘಟನೆ, ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದು ನಾಗರಾಜ ಛಬ್ಬಿ. ಅಷ್ಟೇ ಅಲ್ಲದೆ ಕಾಂಗ್ರೆಸ್ ಹೈಕಮಾಂಡ್ ಜೊತೆ ನಿಕಟ ಸಂಪರ್ಕ ಹೊಂದಿರುವ ನಾಗರಾಜ ಛಬ್ಬಿಗೆ, ಡಿ.ಕೆ ಶಿವಕುಮಾರ್ ಸಪೋರ್ಟ್ ಸಹ ಇದೆ. ಇದೇ ಕಾರಣಕ್ಕೆ  ತಮಗೆ ಟಿಕೆಟ್ ನೀಡಬೇಕು ಎಂದು ಛಬ್ಬಿ ಪಟ್ಟುಹಿಡಿದು ಕ್ಷೇತ್ರ ಸುತ್ತುತ್ತಿದ್ದಾರೆ.

ನಿರ್ಣಾಯಕ ವಿಷಯ

ಈ ಬಾರಿ ಸಹ ಕಲಘಟಗಿ‌ ಕ್ಷೇತ್ರದಲ್ಲಿ ಜಾತಿ, ಅಭ್ಯರ್ಥಿ, ಪಕ್ಷ ಯಾವುದು‌ ಎಂಬುದು ನಿರ್ಣಾಯಕವಾಗಲಿದೆ. ಲಿಂಗಾಯತ ಮತ್ತು ಮರಾಠಾ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಇದು ಸಹ ಪ್ರಮುಖ‌ ಪಾತ್ರ ವಹಿಸುತ್ತದೆ. ಮತ್ತೆ ಲೋಕಲ್‌ ನಾನ್ ಲೋಕಲ್ ವಿಚಾರ ಪ್ರಸ್ತಾಪ ಆಗಬಹುದು. ಕಲಘಟಗಿ‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸಂತೋಷ್‌ ಲಾಡ್‌ ಅಥವಾ ನಾಗರಾಜ್‌ ಛಬ್ಬಿ, ಇಬ್ಬರಲ್ಲಿ ಯಾರಿಗೆ ಟಿಕೆಟ್‌ ಲಭಿಸಿದರೂ ಮತ್ತೊಬ್ಬರು ಬಂಡಾಯ ಏಳುವ ಸಾಧ್ಯತೆಯಿರುತ್ತದೆ. ಇದನ್ನು ಪಕ್ಷ ಹೇಗೆ ನಿಭಾಯಿಸುತ್ತದೆ ಎನ್ನುವುದು ಪ್ರಶ್ನೆ.

ಸಂತೋಷ ಲಾಡ್‌ಗೆ ಕಾಂಗ್ರೆಸ್‌ ಟಿಕೆಟ್‌ ಸಿಗದಿದ್ದರೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಜತೆ ಹೊಂದಿರುವ ನಿಕಟ ಸಂಪರ್ಕವನ್ನು ಬಳಸಿ ಬಿಜೆಪಿಗೆ ಜಿಗಿದರೂ ಅಚ್ಚರಿಯಿಲ್ಲ. ಆಗ ಕಲಘಟಗಿ‌ ಕ್ಷೇತ್ರದ ಮೇಲೆ‌ ಹಿಡಿತ ಹೊಂದಿರುವ ಸಂತೋಷ್ ಲಾಡ್ ಗೆಲುವು ಸುಲಭವಾಗಲಿದೆ ಎಂಬ ಮಾತು ಪಕ್ಷದ ವಲಯದಲ್ಲಿದೆ.

2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಸಿ.ಎಮ್. ನಿಂಬಣ್ಣವರ್, ಕಲಘಟಗಿ. ಮಹೇಶ್ ಟೆಂಗಿನಕಾಯಿ( ಬಿಜೆಪಿ)
2. ಸಂತೋಷ್ ಲಾಡ್ , ನಾಗರಾಜ್ ಛಬ್ಬಿ (ಕಾಂಗ್ರೆಸ್‌)

ಇದನ್ನೂ ಓದಿ | ಎಲೆಕ್ಷನ್‌ ಹವಾ | ಹುಬ್ಬಳ್ಳಿ ಧಾರವಾಡ ಪೂರ್ವ | ಹ್ಯಾಟ್ರಿಕ್‌ ಕನಸಿನಲ್ಲಿರುವ ಕಾಂಗ್ರೆಸ್‌ನ ಅಬ್ಬಯ್ಯಗೆ AIMIM ಆತಂಕ

Exit mobile version