ಶ್ರೀಧರ್ ಮುಂಡರಗಿ, ಧಾರವಾಡ
ಧಾರವಾಡ ಗ್ರಾಮೀಣ ಕ್ಷೇತ್ರ ಇದೀಗ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಎರಡು ಬಾರಿ ಗೆಲುವು ಸಾಧಿಸಿ ಜೈಲು ವಾಸ ಅನುಭವಿಸಿರುವ ಕಾಂಗ್ರೆಸ್ ನ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಮತ್ತೊಮ್ಮೆ ಅದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಉತ್ಸಾಹ ಹೆಚ್ಚಿದೆ. ಇತ್ತ ಹಾಲಿ ಶಾಸಕ, ಬಿಜೆಪಿಯ ಅಮೃತ್ ದೇಸಾಯಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ರೆಡಿಯಾಗಿದ್ದಾರೆ. ಒಮ್ಮೆ ಜಯಿಸಿದ ಪಕ್ಷವನ್ನೇ ಮತ್ತೆ ಗೆಲ್ಲಿಸಿದ ಇತಿಹಾಸವೇ ಇಲ್ಲದ ಕ್ಷೇತ್ರವಿದು.
ದೇಸಾಯಿ ವರ್ಸಸ್ ಕುಲಕರ್ಣಿ
2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಿನಯ ಕುಲಕರ್ಣಿ 64,783 ಮತಗಳನ್ನು ಪಡೆದುಕೊಂಡಿದ್ದರು. ಲಿಂಗಾಯತ ಜಾತಿಗೆ ಸೇರಿದ ವಿನಯ ಕುಲಕರ್ಣಿ ವಿರುದ್ಧ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಅಮೃತ ದೇಸಾಯಿ 85,123 ಮತಗಳನ್ನು ಪಡೆದು 20,340 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಅಂದು ವಿನಯ ಕುಲಕರ್ಣಿ ಸೋಲಿಗೆ ನೇರವಾಗಿ ಕಾರಣವಾಗಿದ್ದು ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಕೇಸ್. ಯೋಗೀಶ್ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎನ್ನುವ ಆರೋಪದ ಮೂಲಕವೇ ವಿನಯ್ ಅವರನ್ನು ಕಟ್ಟಿಹಾಕುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಹೀಗಾಗಿ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಅಮೃತ್ ದೇಸಾಯಿ ಗೆಲುವು ಸಾಧಿಸಿದ್ದರು. ಇದೀಗ ಹತ್ಯೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಧಾರವಾಡ ಜಿಲ್ಲೆಯಿಂದ ಗಡಿಪಾರಾಗಿರುವ ವಿನಯ್ ಕುಲಕರ್ಣಿ ಮತ್ತೆ ಗ್ರಾಮೀಣ ಕ್ಷೇತ್ರದಿಂದ ನಿಲ್ಲುವ ಉತ್ಸಾಹ ಹೊಂದಿದ್ದಾರೆ. ಹೀಗಾಗಿಯೇ ಪದೇಪದೆ ಧಾರವಾಡ ಸುತ್ತಮುತ್ತ ಕಾರ್ಯಕರ್ತರ ಸಭೆ ಕರೆಯುತ್ತಿದ್ದು, ಟಿಕೆಟ್ ತಮಗೇ ಸಿಗುತ್ತದೆ ಎನ್ನುವಂತೆ ಬಿಂಬಿಸುತ್ತಾ ಓಡಾಟ ನಡೆಸಿದ್ದಾರೆ.
ಕಾಂಗ್ರೆಸ್ ನಲ್ಲಿ ಇಬ್ಬರಿಂದ ಟಿಕೆಟ್ ಫೈಟ್
2018 ರ ಸೋಲಿನ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಹುಡುಕಾಟ ನಡೆಸಿದೆಯಾದರೂ ಈ ಕ್ಷೇತ್ರದಲ್ಲಿ ವಿನಯ ಕುಲಕರ್ಣಿ ವರ್ಚಸ್ಸು ಮಾತ್ರ ಇಂದಿಗೂ ಹಾಗೆಯೇ ಇದೆ. ಕ್ಷೇತ್ರದ ಜನರು ಇದೀಗ ಮತ್ತೆ ವಿನಯ ಕುಲಕರ್ಣಿ ಪರ ಒಲವು ತೋರುತ್ತಿದ್ದು, ಕಾಂಗ್ರೆಸ್ ಹೈಕಮಾಂಡ್ ಸಹ ವಿನಯ ಕುಲಕರ್ಣಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ. ವಿನಯ ಕುಲಕರ್ಣಿ ಹೊರತುಪಡಿಸಿದರೆ ಮಾಜಿ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜಾತಿವಾರು ಲೆಕ್ಕಾಚಾರ ನೋಡುವುದಾದರೆ ಲಿಂಗಾಯತ ಮತಗಳು ಹೆಚ್ಚು ಇರುವುದರಿಂದ ವಿನಯ ಕುಲಕರ್ಣಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಯೋಗೀಶ್ ಹತ್ಯೆ ಪ್ರಕರಣದಲ್ಲಿ ಜಿಲ್ಲೆಯಿಂದ ಹೊರಗೆ ಇರುವ ವಿನಯ್ ಅವರನ್ನು ಯಾವ ರೀತಿ ಜಿಲ್ಲೆಗೆ ಕರೆತರಲಾಗುತ್ತದೆ ಎನ್ನುವುದೇ ಇರುವ ಪ್ರಶ್ನೆ.
ಬಿಜೆಪಿಯಲ್ಲೂ ಇದೆ ಟಿಕೆಟ್ ವಾರ್
ಹಾಲಿ ಶಾಸಕ ಅಮೃತ್ ದೇಸಾಯಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ ಮೊದಲ ಬಾರಿಯೇ ಗೆಲುವು ಸಾಧಿಸಿದ್ದರು. ಇದೀಗ ಗ್ರಾಮೀಣ ಕ್ಷೇತ್ರಕ್ಕೆ ಮತ್ತೆ ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಆದರೆ ಮುಂದಿನ ಚುನಾವಣೆಯಲ್ಲಿ ತವನಪ್ಪ ಅಷ್ಟಗಿ ಅವರಿಗೆ ಅಮೃತ ದೇಸಾಯಿ ಟಿಕೆಟ್ ಬಿಟ್ಟುಕೊಡಲು 2018ರ ಚುಣಾವಣೆಯ ವೇಳೆಯೇ ನಿರ್ಧಾರವಾಗಿತ್ತು ಎನ್ನಲಾಗಿದೆ. 2018ಕ್ಕೆ ಅಮೃತ ದೇಸಾಯಿ ಸ್ಪರ್ಧೆ, 2023ಕ್ಕೆ ತವನಪ್ಪ ಅಷ್ಟಗಿಗೆ ಟಿಕೆಟ್ ನೀಡುವುದು ಎಂದು ಮಾತುಕತೆ ನಡೆದಿತ್ತು ಎಂಬ ಮಾತುಗಳು ಬಿಜೆಪಿ ವಲಯದಲ್ಲಿವೆ.
ನಿರ್ಣಾಯಕ ಅಂಶಗಳು
ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಆದರೆ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ. ಪ್ರಕರಣ ಇನ್ನೂ ನಡೆಯುತ್ತಿರುವುದರಿಂದ ಟಿಕೆಟ್ ಸಿಗುವ ಬಗ್ಗೆ ಅನುಮಾನಗಳಿವೆ. 2018ರ ಚುನಾವಣೆಯಲ್ಲಿ ಶಾಸಕ ಅಮೃತ ದೇಸಾಯಿ ಆರಿಸಿ ಬಂದ ದಿನದಿಂದ ಕ್ಷೇತ್ರದಲ್ಲಿ ಜನರ ಜತೆ ಒಡನಾಟ ಅಷ್ಟಕ್ಕಷ್ಟೆ ಎನ್ನುವುದು ಕ್ಷೇತ್ರದಲ್ಲಿ ಕೇಳಿಬರುತ್ತಿರುವ ಮಾತು. ಅಭಿವೃದ್ಧಿ ಕುಂಠಿತವಾಗಿರುವುದರಿಂದ ಮತ್ತು ಬಿಜೆಪಿ ವಲಯದಲ್ಲಿ ಅಸಮಾಧಾನದ ಇರುವುದರಿಂದ ಕಾರ್ಯಕರ್ತರು ಮುನಿಸಿಕೊಂಡಿದ್ದಾರೆ.
ಇಸ್ಮಾಯಿಲ್ ತಮಟಗಾರ ಸದ್ಯ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರೆ. ಒಂದು ವೇಳೆ ಟಿಕೆಟ್ ಸಿಗದೆ ಹೋದರೆ ಜೆಡಿಎಸ್‌ನಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
2023ರ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಅಮೃತ್ ದೇಸಾಯಿ, ತವನಪ್ಪ ಅಷ್ಟಗಿ (ಬಿಜೆಪಿ)
2. ವಿನಯ್ ಕುಲಕರ್ಣಿ, ಇಸ್ಮಾಯಿಲ್ ತಮಟಗಾರ (ಕಾಂಗ್ರೆಸ್)
ಇದನ್ನೂ ಓದಿ | ಎಲೆಕ್ಷನ್ ಹವಾ | ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ | ಮೂವರೂ `ಪ್ರತಿಸ್ಪರ್ಧಿಗಳು’ ಬಿಜೆಪಿಯಲ್ಲೇ ಇದ್ದಾರೆ