Site icon Vistara News

ಎಲೆಕ್ಷನ್‌ ಹವಾ | ಹುಬ್ಬಳ್ಳಿ-ಧಾರವಾಡ ಪಶ್ಚಿಮ | ಮೂರನೇ ಬಾರಿಯೂ ʻಬೆಲ್ಲದʼ ಸಿಹಿ ಸವಿಯುವರೇ ಅರವಿಂದ?

Dharawad west

ಪರಶುರಾಮ್ ತಹಶೀಲ್ದಾರ್, ಹುಬ್ಬಳ್ಳಿ
ವಿದ್ಯಾಕಾಶಿ, ಸಾಹಿತಿಗಳ ತವರೂರು, ಪೇಡಾ ನಗರಿ ಎಂದೆಲ್ಲ ಕರೆಸಿಕೊಳ್ಳುವ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರ ವಿಶೇಷ ಮತ್ತು ಭಿನ್ನವಾಗಿದೆ. ಪ್ರಜ್ಞಾವಂತ ಪ್ರಜೆಗಳಿರುವ ಕ್ಷೇತ್ರ ಅಂತಲೇ ಗುರುತಿಸಿಕೊಂಡಿರುವ ಈ ಪಶ್ಚಿಮ ಕ್ಷೇತ್ರ ಹಲವು ವಿಶಿಷ್ಟಗಳಿರುವ ಕ್ಷೇತ್ರವಾಗಿದೆ. ಹಿರಿಯ ಸಾಹಿತಿಗಳು, ಚಿಂತಕರು, ಹಾಗೂ ಧಾರ್ಮಿಕವಾಗಿ ಈ ಕ್ಷೇತ್ರ ರಾಜ್ಯದಲ್ಲಿ ಬಹಳ ಹೆಸರುವಾಸಿಯಾಗಿದೆ. ಇಂತಹ ಕ್ಷೇತ್ರದಲ್ಲಿ ಉತ್ತಮ ನಾಯಕನನ್ನು ಆರಿಸುತ್ತಾ ಬಂದಿರುವ ಜನರು ಕಾಮಗಾರಿಗಳು ನಡೆಯದೆ ಇದ್ದಾಗ ಆ ವ್ಯಕ್ತಿಗೆ ಮನೆಯ ದಾರಿಯನ್ನೂ ಅಷ್ಟೇ ನಿಷ್ಠೆಯಿಂದ ತೋರಿಸಿದ್ದಾರೆ.

ಬೆಲ್ಲದ್ ಓಟಕ್ಕೆ ಬ್ರೇಕ್‌ ಹಾಕುವ ಪ್ರಯತ್ನ

ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ಹಾಲಿ ಶಾಸಕ ಅರವಿಂದ ಬೆಲ್ಲದ ಎರಡನೆಯ ಬಾರಿಗೆ ಆಯ್ಕೆಯಾಗಿದ್ದಾರೆ. ಅರವಿಂದ ಬೆಲ್ಲದ ವಿರುದ್ಧ ಈಗಾಗಲೇ 2013 ರಲ್ಲಿ ಇಸ್ಮಾಯಿಲ್ ತಮಟಗಾರ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿ ಸೋತಿದ್ದಾರೆ. 2018 ರಲ್ಲಿ ಕಾಂಗ್ರೆಸ್ ನಿಂದ ಬೆಲ್ಲದ್ ವಿರುದ್ಧ ಸ್ಪರ್ದಿಸಿದ ಇಸ್ಮಾಯಿಲ್ ತಮಟಗಾರ ಎರಡನೇ ಬಾರಿಯೂ ಮುಖಭಂಗ ಅನುಭವಿಸಿದ್ದಾರೆ.

ಸಿಎಂ ಆಗಿಯೇಬಿಟ್ಟರು ಎನ್ನುವ ಹಾಗೆ ನಡೆದುಕೊಂಡು ಹೈಕಮಾಂಡ್ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅರವಿಂದ್ ಬೆಲ್ಲದ್ ಸದ್ಯ ಹುಬ್ಬಳ್ಳಿ ಧಾರವಾಡದ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿರುವುದು ಮಾತ್ರ ಸುಳ್ಳಲ್ಲ. ಸಿಎಂ ಆಗಿದ್ದ ಯಡಿಯೂರಪ್ಪ 2021ರಲ್ಲಿ ರಾಜೀನಾಮೆ ಕೊಡುತ್ತಿದ್ದಂತೆಯೇ ಇತ್ತ ಮುಂದಿನ ಸಿಎಂ ಯಾರು ಎನ್ನುವ ಪ್ರಶ್ನೆ ಜೋರಾಗಿಯೇ ಚರ್ಚೆಗೆ ಬಂದಿತ್ತು. ಇದರ ನಡುವೆಯೇ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಅರವಿಂದ್ ಬೆಲ್ಲದ್ ನಾನೇ ಸಿಎಂ ಎನ್ನುವ ಹಾಗೆ ಬಿಂಬಿಸಿಕೊಂಡಿದ್ದರು. ಅಲ್ಲದೆ ಅವರ ಭೇಟಿಗಳು ಮತ್ತು ಹೈಕಮಾಂಡ್ ಜತೆಗಿನ ನಿರಂತರ ಸಂಪರ್ಕ ಇಲ್ಲಿನ ನಾಯಕರ ನಿದ್ದೆಗೆಡಿಸಿತ್ತು. ಇದೀಗ ಮತ್ತದೇ ಚುನಾವಣೆ ಎದುರಾಗುತ್ತಿದ್ದು ಈ ವೇಳೆಯಲ್ಲಿ ಮತ್ತೆ ಗೆಲುವು ಸಾಧಿಸಿದ್ದೆ ಆದಲ್ಲಿ ಅರವಿಂದ್ ಬೆಲ್ಲದ್ ಬಹು ಎತ್ತರಕ್ಕೆ ಬೆಳೆಯುವ ಸಾಧ್ಯತೆ ಇದೆ ಎಂದು ಧಾರವಾಡದ ಬಿಜೆಪಿ ನಾಯಕರಿಗೆ ಅರಿವಾಗಿದೆ. ಹೀಗಾಗಿ ಸ್ವಪಕ್ಷದಿಂದಲೇ ಅವರ ಪ್ರಚಾರ ಕಾರ್ಯ ಸೇರಿದಂತೆ ಅವರ ಜತೆ ಮುಂದಿನ ದಿನಗಳಲ್ಲಿ ನಾಯಕರು ಕಾಣಿಸಿಕೊಳ್ಳುವುದು ಕಷ್ಟ ಎಂದೇ ಹೇಳಲಾಗುತ್ತಿದೆ.

2023ರ ಮುಖಾಮುಖಿ

ಬಿಜೆಪಿ ಹಾಲಿ ಶಾಸಕ ಅರವಿಂದ್ ಬೆಲ್ಲದ್ ಮುಂದಿನ ಬಾರಿಯೂ ಟಿಕೆಟ್ ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ಸತತ ಎರಡು ಬಾರಿ ಆಯ್ಕೆಯಾಗಿದ್ದು, ಪಶ್ಚಿಮ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ. ಆದರೆ 2023ರ ಚುನಾವಣೆಯ ಮೇಲೆ ಅದರಲ್ಲೂ ಪಶ್ಚಿಮ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಹೇಗಾದರೂ ಮಾಡಿ ಈ ಕ್ಷೇತ್ರವನ್ನು ವಶಪಡಿಸಿಕೊಳ್ಳುವ ತವಕದಲ್ಲಿದೆ. ಹೀಗಾಗಿ ಡಿಕೆಶಿ ಆಪ್ತ ನಾಗರಾಜ್ ಗೌರಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ದೀಪಕ್ ಚಿಂಚೋರೆ ನಡುವೆ ನೇರ ಪೈಪೋಟಿ ಆರಂಭವಾಗಿದೆ. ಹಿರಿಯ ಮತ್ತು ಹೈಕಮಾಂಡ್‌ ಜತೆ ನೇರ ಸಂಪರ್ಕ ಹೊಂದಿರುವ ದೀಪಕ್ ಚಿಂಚೋರೆ ಈಗಾಗಲೇ ತಮಗೆ ಟಿಕೆಟ್ ಫೈನಲ್ ಆಗಿದೆ ಎನ್ನುವ ರೀತಿ ಓಡಾಟ ಮಾಡುತ್ತಿದ್ದು, ಇತ್ತ ನಾಗರಾಜ್ ಗೌರಿ ಸಹ ಟಿಕೆಟ್ ತಮಗೇ ಸಿಗುತ್ತದೆ ಎನ್ನುವ ಕಾನ್ಫಿಡೆನ್ಸ್‌ನಲ್ಲಿದ್ದಾರೆ. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಇಸ್ಮಾಯಿಲ್ ತಮಟಗಾರ ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ದಿಸಿ ಸೋಲು ಕಂಡಿದ್ದರು. ಹೀಗಾಗಿ ಜೆಡಿಎಸ್‌ನಲ್ಲಿ ಪ್ರಬಲ ಅಭ್ಯರ್ಥಿಗಳೇ ಇಲ್ಲದಂತಾಗಿದೆ.

ಇದನ್ನೂ ಓದಿ | ಎಲೆಕ್ಷನ್‌ ಹವಾ | ನಾಗಮಂಗಲ | ಒಕ್ಕಲಿಗರ ಪ್ರಾಬಲ್ಯದ ನಡುವೆ ʻಗೌಡʼರ ಕುಟುಂಬದ ಪ್ರತಿಷ್ಠೆಯ ಕಣ

ಸೋಲು ಗೆಲುವಿನ ಲೆಕ್ಕಾಚಾರ

2023 ರ ಧಾರವಾಡದ ಪಶ್ಚಿಮ ಕ್ಷೇತ್ರದ ವಿಧಾನಸಭಾ ಚುಣಾವಣೆಯ ನಿರ್ಣಾಯಕ ಪಾತ್ರವನ್ನು ನೋಡುವುದಾದರೆ, 2018 ರ ಹಿಂದಿನ ಸಾಲಿನಲ್ಲಿ ಶಾಸಕ ಅರವಿಂದ ಬೆಲ್ಲದ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ಕೆಲಸ, ಮತ್ತು ಅವರನ್ನು ಸೋಲಿಸುವ ತಂತ್ರವೂ ಕೂಡಾ ಬಿಜೆಪಿಯಲ್ಲಿ ಒಂದು ಹಂತದ ಚರ್ಚೆಯಾಗಿದೆ. ಏಕೆಂದರೆ ಮೊದಲಿನಿಂದಲೂ ಅರವಿಂದ ಬೆಲ್ಲದ ಯಾರ ಕೈಗೂ ಸಿಗದೆ ಸಿಎಂ ಅಭ್ಯರ್ಥಿ ನಾನೇ ಎನ್ನುವ ನಂಬಿಕೆಯಲ್ಲಿ ನೇರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅವರ ಜತೆ ನಂಟು ಇಟ್ಟುಕೊಂಡವರು. ಹೀಗಾಗಿ ಕೇಂದ್ರದಿಂದ ಬರುವ ಅನುದಾನ ಮತ್ತು ರಾಜ್ಯ ಸರ್ಕಾರದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವ ಎಲ್ಲ ಅನುಭವ ಅರವಿಂದ್ ಬೆಲ್ಲದರಿಗಿದೆ.

ಜಾತಿ ಲೆಕ್ಕಾಚಾರ

ಪಶ್ಚಿಮ ವಿಧಾನ ಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕವಾಗಲಿದ್ದು, ಲಿಂಗಾಯತ ಮತಗಳು ಯಾರಿಗೆ ಒಲಿಯುತ್ತವೆಯೋ ಅವರೇ ಗೆಲುವಿನ ನಗೆ ಬೀರಲಿದ್ದಾರೆ. ಇವರನ್ನು ಹೊರತುಪಡಿಸಿ ಪ.ಜಾತಿ ಪ.ಪಂಗಡ ಸೇರಿದಂತೆ ಮುಸ್ಲಿಂ ಮತಗಳು ಸಹ ಒಂದಾಗಿ ನಿಂತರೆ ಯಾರು ಬೇಕಾದರೂ ಗೆಲ್ಲಬಹುದು. ಲಿಂಗಾಯತ ಒಳಪಂಗಡಗಳು ಹೆಚ್ಚಿದ್ದು, ಕುರುಬ ಜನಾಂಗವೂ ಈ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ..

2023 ರ ಸಂಭಾವ್ಯ ಅಭ್ಯರ್ಥಿಗಳು
1. ಅರವಿಂದ್ ಬೆಲ್ಲದ್ (ಬಿಜೆಪಿ)
2. ದೀಪಕ್ ಚಿಂಚೋರೆ (ಕಾಂಗ್ರೆಸ್)
3. ಗುರುರಾಜ್ ಹುಣಸಿಮರದ (ಜೆಡಿಎಸ್)

ಇದನ್ನೂ ಓದಿ | ಎಲೆಕ್ಷನ್‌ ಹವಾ | ನವಲಗುಂದ | ಮುನೇನಕೊಪ್ಪ ಎರಡನೇ ಅವಕಾಶ ಪಡೆದರೆ ದಾಖಲೆ

Exit mobile version