Site icon Vistara News

ಎಲೆಕ್ಷನ್‌ ಹವಾ | ಹುಬ್ಬಳ್ಳಿ ಧಾರವಾಡ ಪೂರ್ವ | ಹ್ಯಾಟ್ರಿಕ್‌ ಕನಸಿನಲ್ಲಿರುವ ಕಾಂಗ್ರೆಸ್‌ನ ಅಬ್ಬಯ್ಯಗೆ AIMIM ಆತಂಕ

ಪರಶುರಾಮ್ ತಹಶೀಲ್ದಾರ್, ಹುಬ್ಬಳ್ಳಿ
ಹುಬ್ಬಳ್ಳಿ ಧಾರವಾಡ ಪೂರ್ವ ಭೌಗೋಳಿಕವಾಗಿ ಈ‌ ಮೊದಲು ಕೆಲವು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿತ್ತು. ಆದರೆ 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಸಂಪೂರ್ಣ ನಗರ ಪ್ರದೇಶಕ್ಕೆ ಸೀಮಿತವಾಗಿದೆ. ಅದರಲ್ಲೂ ವಾಣಿಜ್ಯ ವಹಿವಾಟಿಗೆ ಹೆಸರುವಾಸಿ. ಎಸ್‌ಸಿ(ಪರಿಶಿಷ್ಟ ಜಾತಿ) ವರ್ಗದ ಮೀಸಲು ಕ್ಷೇತ್ರ ಇದು. ಛಲವಾದಿ ಸಮುದಾಯಕ್ಕೆ ಸೇರಿದ ಪ್ರಸಾದ ಅಬ್ಬಯ್ಯ ಕಳೆದ ಎರಡು ಅವಧಿಗೆ ಶಾಸಕರಾಗಿದ್ದಾರೆ. 2008ರಲ್ಲಿ  ಶಾಸಕರಾಗಿದ್ದ ಬಿಜೆಪಿಯ ವೀರಭದ್ರಪ್ಪ ಹಾಲಹರವಿ ಮಾದಿಗ ಜನಾಂಗದವರು. ಬಿಜೆಪಿ ಮತ್ತೆ ಕೆಜಿಪಿ ನಡುವೆ ಮತ ವಿಭಜನೆಯಾದ ಕಾರಣ ವೀರಭದ್ರಪ್ಪ ಹಾಲಹರವಿ ಸೋಲಬೇಕಾಯಿತು.

2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಚಂದ್ರಶೇಖರ ಗೋಕಾಕ 55,613 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ನ ಪ್ರಸಾದ್ ಅಬ್ಬಯ್ಯ 77,080ಮತ ಪಡೆದು 21,467 ಮತಗಳ ಅಂತರದಿಂದ ಜಯಿಸಿದ್ದರು. 2023ರ ಚುನಾವಣೆಗೆ ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಹಾಲಿ ಶಾಸಕ ಪ್ರಸಾದ್ ಅಬ್ಬಯ್ಯಗೆ ಟಿಕೆಟ್ ಫಿಕ್ಸ್ ಎನ್ನಬಹುದು. ಬಿಜೆಪಿಯಲ್ಲಿ ಈ ಬಾರಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಮಾಜಿ‌ ಶಾಸಕ ವೀರಭದ್ರಪ್ಪ ಹಾಲಹರವಿ, ಶಂಕ್ರಣ್ಣ ಬಿಜವಾಡ, ಚಂದ್ರಶೇಖರ್ ಗೋಕಾಕ್ ಪ್ರಭಲ ಆಕಾಂಕ್ಷಿಗಳು. ಸಂಘ ಪರಿವಾರದ ಹಿನ್ನೆಲೆಯಿಂದ ಬಂದ ಚಂದ್ರಶೇಖರ ಗೋಕಾಕ್ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದಾರೆ. ಆದರೆ ಮತ್ತೊಮ್ಮೆ ಕಣಕ್ಕೆ‌ ಧುಮುಕುವ ಇರಾದೆ‌ ಇದೆ. ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಸಹ ಕಳೆದ ಸಲ‌ ಟಿಕೆಟ್ ತಪ್ಪಿದಕ್ಕೆ ಬೇಸರಗೊಂಡಿದ್ದರು. ಬಹಿರಂಗವಾಗಿ ಅಸಮಾಧಾನ ಸಹ ತೋಡಿಕೊಂಡಿದ್ದರು. ಜಗದೀಶ್ ಶೆಟ್ಟರ್ ಆಪ್ತರು‌ಕೂಡ ಹೌದು. ಈ ಕಾರಣಕ್ಕೆ ಅವರು ಸಹ ಟಿಕೆಟ್ ಗಿಟ್ಟಿಸುವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ‌.

ನಿರ್ಣಾಯಕ ವಿಷಯಗಳು

2023ರ ಚುನಾವಣೆಯಲ್ಲಿ ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ನಿರ್ಣಾಯಕ ವಿಷಯಗಳು ಎಂದರೆ, ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಮಾಡಿದ ಅಭಿವೃದ್ಧಿ ಕಾರ್ಯಗಳ ಚರ್ಚೆ. ಎರಡು ಅವಧಿಗೆ ಶಾಸಕರಾದ ಪ್ರಸಾದ್ ಅಬ್ಬಯ್ಯ ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಸಾಕಷ್ಟು ಉತ್ತಮ ಅಭಿಪ್ರಾಯಗಳಿವೆ. ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಮತಗಳ ನಂತರ ಅತೀ ಹೆಚ್ಚು ನಿರ್ಣಾಯಕ ಮತಗಳು ಮುಸ್ಲಿಂಮರದ್ದು. ಮುಸ್ಲಿಂ ಮತದಾರರು ಪ್ರಸಾದ್ ಅಬ್ಬಯ್ಯ ವಿರುದ್ಧ ಮುನಿಸಿಕೊಂಡಂತೆ ಕಾಣಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ದಲಿತ ಮುಖಂಡರ ಬೆಂಬಲದೊಂದಿದೆ ಓವೈಸಿಯ ಎಐಎಮ್‌ಐಎಮ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಎರಡು ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಪ್ರಸಾದ್ ಅಬ್ಬಯ್ಯ ಬೆಂಬಲಿಗರನ್ನು ಎಐಎಮ್‌ಐಎಮ್ ಸೋಲಿಸಿದ್ದು ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ಭುಗಿಲೇಳುವಂತೆ ಮಾಡಿದೆ. ಹುಬ್ಬಳ್ಳಿ- ಧಾರವಾಡ ಪೂರ್ವ ಕ್ಷೇತ್ರದಲ್ಲಿ ಈ ಬಾರಿ ಎಐಎಂಐಎಂ ಪಕ್ಷದ ಅಭ್ಯರ್ಥಿ ಕಣಕ್ಕಿಳಿದರೆ ಕಾಂಗ್ರೆಸ್‌ ಗೆಲ್ಲುವ ಅವಕಾಶಗಳು ಕಡಿಮೆ ಆಗುತ್ತದೆ.

ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಈಗಾಗಲೇ ಹೊರಗುಳಿದಿರುವ ಮಾಜಿ ಕಾರ್ಪೋರೇಟ್ ಪ್ರಕಾಶ ಟಗರಗುಂಟಿ ಹಾಗೂ ಒಂದು ಕಾಲದಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ ಜತೆಗಿದ್ದ ಕೆಲವರು ಈಗಾಗಲೇ ಎಐಎಂಐಎಂಗೆ ಹೋಗಿದ್ದು, ಕಾಂಗ್ರೆಸ್‌ಗೆ ಮಗ್ಗಲು‌ಮುಳ್ಳಾಗುವ ಸಾದ್ಯತೆ ಇದೆ.

2013ರಲ್ಲಿ ಕೆಜೆಪಿ ಸ್ಪರ್ಧೆಯಿಂದ ಬಿಜೆಪಿ ಸೋತಿದೆ. ಮತ ವಿಂಗಡನೆಯಾಗಿ ಸೋಲು ಕಂಡ ಬಿಜೆಪಿ ಕಳೆದೆರಡು ಚುನಾವಣೆಗಳಲ್ಲಿ ಚೇತರಿಸಿಕೊಳ್ಳಲು ಹೆಣಗಾಡಿದೆ. ಈ ಬಾರಿ ಗೆಲ್ಲಲು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಆದರೆ ಬಿಜೆಪಿ ಟಿಕೆಟ್ ತಪ್ಪುವವರು ಒಳಪೆಟ್ಟು ಕೊಡುವುದು ಮಾತ್ರ ಖಚಿತ. ಹೀಗಾಗಿ ಬಿಜೆಪಿ ರಾಜ್ಯ ನಾಯಕರು ಕ್ಷೇತ್ರದಲ್ಲಿ ಒಗ್ಗಟ್ಟಿನಿಂದ ಚುನಾಚಣೆ ಎದುರಿಸಲು ಕಸರತ್ತು ಮಾಡುತ್ತಿದ್ದಾರೆ.

2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಪ್ರಸಾದ್ ಅಬ್ಬಯ್ಯ (ಕಾಂಗ್ರೆಸ್)
2. ಚಂದ್ರಶೇಖರ ಗೋಕಾಕ್, ವೀರಭದ್ರಪ್ಪ ಹಾಲಹರವಿ (ಬಿಜೆಪಿ)

ಇದನ್ನೂ ಓದಿ | ಎಲೆಕ್ಷನ್‌ ಹವಾ | ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ | ಮೂವರೂ `ಪ್ರತಿಸ್ಪರ್ಧಿಗಳು’ ಬಿಜೆಪಿಯಲ್ಲೇ ಇದ್ದಾರೆ

Exit mobile version