ರಾಮನಗರ: ಹೋದಲ್ಲಿ ಬಂದಲ್ಲಿ ಸಿದ್ದರಾಮಯ್ಯ ಅವರದ್ದೇ ಧ್ಯಾನ ಮಾಡುತ್ತಿರುವ ಶಾಸಕ ಜಮೀರ್ ಅಹ್ಮದ್ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೆಂಗಣ್ಣು ಬಿದ್ದಿದಿಯೇ? ಇಂಥದ್ದೊಂದು ಅನುಮಾನ ಸ್ವತಃ ಡಿಕೆಶಿ ಅವರ ಹೇಳಿಕೆಯಿಂದ ವ್ಯಕ್ತವಾಗಿದೆ. ಶಾಸಕ ಜಮೀರ್ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಬಹುದು ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಪ್ರಾರಂಭವಾಗಿದೆ.
ಕನಕಪುರದಲ್ಲಿ ಶನಿವಾರ ಕೆಡಿಬಿ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಧಕ್ಕೆಯಾಗುವ ಹೇಳಿಕೆ ನೀಡುವವರು ಯಾರೇ ಆಗಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರವನ್ನು ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿಗೆ ತಿಳಿಸಲಾಗುವುದು. ಯಾವ ರೀತಿ ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಡಿಕೆಶಿ ಹೀಗೆ ಹೇಳಲು ಕಾರಣವೇನು?
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸಿಎಂ ಯಾರು ಆಗುತ್ತಾರೆ ಎಂಬ ಒಳಜಗಳ ಈ ಹಿಂದಿನಿಂದಲ್ಲೂ ಕಾಂಗ್ರೆಸ್‌ನೊಳಗೆ ಇದೆ. ಈ ಮಧ್ಯೆ ಎಲ್ಲರಿಗೂ ಸಿಎಂ ಆಗುವ ಆಸೆ ಇದ್ದು, ಮುಸ್ಲಿಂ ಸಮುದಾಯದವರೂ ಸಿಎಂ ಆಗಬೇಕೆಂದು ಶಾಸಕ ಜಮೀರ್ ಅಹ್ಮದ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಅಲ್ಲದೆ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೂ ಸಹ ಬಹಿರಂಗವಾಗಿಯೇ ಈ ಬಗ್ಗೆ ಹೇಳಿಕೊಂಡಿದ್ದರು. ಅವರವರ ಬೆಂಬಲಿಗರ ಮೂಲಕವೂ ಮುಂದಿನ ಸಿಎಂ ಹೇಳಿಕೆಗಳು ಬರುತ್ತಲೇ ಇವೆ. ಈ ಮಧ್ಯೆ ಜಮೀರ್ ಪದೇಪದೆ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಹೇಳಿಕೆ ನೀಡುತ್ತಿರುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರು ಕೇಳಿದ್ದ ಪ್ರಶ್ನೆಗೆ ತುಸು ಖಾರವಾಗಿಯೇ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ | ಸಿಎಂ ಅಭ್ಯರ್ಥಿ ಘೋಷಣೆ ಆದ ದಿನವೇ ರಾಜ್ಯದಲ್ಲಿ ಕಾಂಗ್ರೆಸ್ ಫಿನಿಶ್ ಎಂದ ಶೆಟ್ಟರ್