ಬೆಂಗಳೂರು: ಕಾಂಗ್ರೆಸ್ ಪಕ್ಷದೊಳಗೆ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಸ್ವಪಕ್ಷೀಯ ನಾಯಕರ ವಿರುದ್ಧವೇ ಕಿಡಿನುಡಿಗಳು ತೂರಿಬರುತ್ತಿವೆ. ಈಗ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರ ಸರದಿ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು “ಶಕುನಿ” ಎಂದು ಹರಿಹಾಯ್ದಿದ್ದಾರೆ.
ಪಕ್ಷದೊಳಗೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರ ಮುನಿಸು ಮುಂದುವರಿದಿದ್ದು, ಪಕ್ಷ ತೊರೆಯುವ ಸುದ್ದಿ ಹರಿದಾಡಿತ್ತು. ಇದಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಕೆ.ಎಚ್. ಮುನಿಯಪ್ಪ, ಕಳೆದ 28 ವರ್ಷಗಳಿಂದ ಸಂಸದನಾಗಿದ್ದು, 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನೆಂದು ಗುರುತಿಸಿಕೊಂಡಿದ್ದೇನೆ. ಅನೇಕರು ಪಕ್ಷ ಬಿಟ್ಟು ಮತ್ತೆ ಬಂದಿರುವ ಉದಾಹರಣೆಗಳಿವೆ. ಆದರೆ ನಾನು ಕಾಂಗ್ರೆಸ್ ಪಕ್ಷದಲ್ಲೇ ಗಟ್ಟಿಯಾಗಿ ನಿಂತಿದ್ದೇನೆ. ಯಾವುದೇ ಆತುರದ ನಿರ್ಧಾರವನ್ನು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಮೇಶ್ ಕುಮಾರ್ ಶಕುನಿ ಎಂದ ಮುನಿಯಪ್ಪ
ಕೆ.ಆರ್. ರಮೇಶ್ ಕುಮಾರ್ ಶಕುನಿ ಎಂಬುದನ್ನು ಮತ್ತೆ ಹೇಳುತ್ತೇನೆ. ಅವರು ಏಕಪಾತ್ರಾಭಿನಯ ಮಾಡುವುದರಲ್ಲಿ ಮೊದಲಿಗರು ಎಂದು ಮುನಿಯಪ್ಪ ವಾಗ್ದಾಳಿ ನಡೆಸಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಪಕ್ಷದಲ್ಲಿ ಹಿನ್ನೆಲೆಗೆ ಸರಿದಂತಿರುವ ಮುನಿಯಪ್ಪ, ಇದೀಗ ಹೈಕಮಾಂಡ್‌ಗೆ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ಗೆ ಎಲ್ಲವನ್ನೂ ಸರಿಪಡಿಸುವಂತೆ ಒಂದು ತಿಂಗಳ ಗಡವು ನೀಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್‌ಗೆ ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್ ಹಾಗೂ ಸುಧಾಕರ್ ಸೇರ್ಪಡೆಗೊಂಡಿದ್ದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಇತರೆ ಶಾಸಕು ಭಾಗಿಯಾಗಿದ್ದರು. ಆದರೆ ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಕಟ್ಟಿ ಬೆಳಸಿದ ನನಗೆ ಒಂದು ಮಾತನ್ನು ಕೇಳದೇ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ. ಇವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದರ ಬಗ್ಗೆ ನನಗೆ ಸ್ಪಷ್ಟೀಕರಣ ನೀಡಬೇಕು ಎಂದು ಮುನಿಯಪ್ಪ ತಾಕೀತು ಮಾಡಿದ್ದಾರೆ.
ಇದನ್ನೂ ಓದಿ | ರಾಜ್ಯದಲ್ಲಿ ಕಾಂಗ್ರೆಸ್-ಬಿಜೆಪಿ ಅಡ್ಜಸ್ಟ್‌ಮೆಂಟ್: ಮಾಜಿ ಸಚಿವ ಎಚ್.ಡಿ.ರೇವಣ್ಣ ಕಿಡಿ
ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮವಹಿಸುವುದಾದರೆ ಅವರು ಪಕ್ಷ ಸೇರಲಿ. ಪಕ್ಷ ಸೇರುವುದು ಬೇಡ ಎಂದು ನಾನು ಹೇಳುವುದಿಲ್ಲ. ಆದರೆ, ನನ್ನನ್ನು ಬಿಟ್ಟು ಪಕ್ಷಕ್ಕೆ ಸೇರಿಸಿಕೊಂಡಿದ್ದು ಯಾಕೆ? ಕಾಂಪ್ರಮೈಸ್ ಮಾಡಿಸುತ್ತೇವೆ. ಆಮೇಲೆ ಅವರನ್ನು ಸೇರಿಸಿಕೊಳ್ಳುತ್ತೇವೆ ಎಂದಿದ್ದರು. ಆದರೆ, ನನ್ನ ಗಮನಕ್ಕೆ ತಾರದೆ ರಾಜಿ ಮಾಡುವ ಮೊದಲೇ ಸೇರಿಸಿಕೊಂಡಿದ್ದು ಯಾಕೆ ಎಂದು ಮುನಿಯಪ್ಪ ಪ್ರಶ್ನೆ ಮಾಡಿದ್ದಾರೆ.
ಯಾವ ಪಾರ್ಟಿಗೂ ಹೋಗುವುದಿಲ್ಲ
ನಾನು ಯಾವುದೇ ಪಾರ್ಟಿಗೂ ಹೋಗುವುದಿಲ್ಲ. ಈ ಬಗ್ಗೆ ಯಾರೂ ಕೂಡ ಗೊಂದಲ ಸೃಷ್ಟಿಸುವ ಕೆಲಸ ಮಾಡಬಾರದು. ನಿಷ್ಠಾವಂತರನ್ನು ಕಾಂಗ್ರೆಸ್ ಕೈಬಿಡಲ್ಲ ಎಂದು ನಂಬಿದ್ದೇನೆ. ಸದ್ಯ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಅಲ್ಲದೆ, ಕ್ಷೇತ್ರದಲ್ಲಿ ನನಗೆ ಮತ ಹಾಕಿರುವ ಮತದಾರರಿಗೆ ಉತ್ತರ ಕೊಡಬೇಕಿದೆ. ನಾನು ಅವರ ಬಳಿಯೇ ತೆರಳಿ ಮುಂದೇನು ಮಾಡಬೇಕು ಎಂಬುದನ್ನು ಕೇಳುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ | Assembly 2023 | ಬಾದಾಮಿಯಿಂದ ಕೋಲಾರಕ್ಕೆ ಸಿದ್ದರಾಮಯ್ಯ ಶಿಫ್ಟ್?