ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಹುದ್ದೆಗೇರಲು ತಾವು ಪ್ರಬಲ ಆಕಾಂಕ್ಷಿ ಎಂಬುದನ್ನು ಸ್ಪಷ್ಟವಾಗಿ ಹೇಳಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪಕ್ಷದಲ್ಲಿ ಒಬ್ಬಿಬ್ಬರು ಮಾತ್ರವಲ್ಲ ಅನೇಕ ನಾಯಕರಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಚಾಟಿ ಬೀಸಿದ್ದಾರೆ.
ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಡಿ.ಕೆ. ಶಿವಕುಮಾರ್ ಅನೇಕ ವಿಚಾರಗಳ ಕುರಿತು ವಿಸ್ತೃತವಾಗಿ ಮಾತನಾಡಿದ್ದಾರೆ.
ನಾನು ಮುಖ್ಯಮಂತ್ರಿ ಆಗುವ ಎಲ್ಲ ಅವಕಾಶಗಳಿವೆ. ಈ ಹಿಂದೆ ಒಕ್ಕಲಿಗ ಸಮುದಾಯದ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದರು. ಅದಕ್ಕೂ ಮುನ್ನ ಎಸ್.ಎಂ. ಕೃಷ್ಣ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಈಗ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ನಾನೂ ಒಕ್ಕಲಿಗ ಸಮುದಾಯಕ್ಕೆ ಸೇರಿದವನು. ನಾನು ಸನ್ಯಾಸಿಯಲ್ಲ. ಒಕ್ಕಲಿಗ ಸಮುದಾಯ ನನ್ನ ಬೆನ್ನಿಗೆ ನಿಲ್ಲಬೇಕು ಅಷ್ಟೆ ಎಂದರು.
ಇದನ್ನೂ ಓದಿ | ಸಿದ್ದರಾಮಯ್ಯ ʼಆಪ್ತʼರ ಲಿಸ್ಟ್‌ನಲ್ಲಿ ಡಿ.ಕೆ. ಶಿವಕುಮಾರ್ ಹೆಸರು ಇಲ್ಲ !
ತಮ್ಮದು ಒಬ್ಬ ಅಥವಾ ಇಬ್ಬರು ವ್ಯಕ್ತಿಗಳು ಪಕ್ಷವಲ್ಲ ಎನ್ನುವುದನ್ನು ತಿಳಿಸಿದ ಡಿ.ಕೆ. ಶಿವಕುಮಾರ್, ಚುನಾವಣೆ ನಂತರ ಅಧ್ಯಕ್ಷರಾಗಿದ್ದವರು ರಾಜಿನಾಮೆ ನೀಡಿದರು. ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿ ಐವರು ಕಾರ್ಯಾಧ್ಯಕ್ಷರನ್ನು ಸೋನಿಯಾ ಗಾಂಧಿಯವರು ನೇಮಿಸಿದರು. ಸಿದ್ದರಾಮಯ್ಯ ಅವರನ್ನೂ ಸೇರಿಕೊಂಡಂತೆ ಎಲ್ಲರೂ ತಂಡವಾಗಿ ಕೆಲಸ ಮಾಡುತ್ತಿದ್ದೇವೆ.
ಇತ್ತೀಚೆಗೆ ಪಕ್ಷದ ವತಿಯಿಂದ ಸಮೀಕ್ಷೆ ನಡೆಸಲಾಗಿತ್ತು. ರಾಜ್ಯಾದ್ಯಂತ ಉತ್ತಮ ವಾತಾವರಣವಿದೆ. ನಾವು 130ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆಯಿದೆ. ಇಲ್ಲಿ ಇಬ್ಬರೇ ನಾಯಕರಿಲ್ಲ. ಬೇಕಾದಷ್ಟು ನಾಯಕರು ಪಕ್ಷದಲ್ಲಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಯುತ್ತದೆ ಎಂದರು.
ಸಿದ್ದರಾಮಯ್ಯ ಅವರ 75ನೇ ವರ್ಷದ ಕಾರ್ಯಕ್ರಮದ ಕುರಿತು ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಮನುಷ್ಯನ ಬದುಕಿನಲ್ಲಿ ಹಲವು ಮೈಲುಗಲ್ಲುಗಳಿರುತ್ತವೆ. ನನ್ನ ಹುಟ್ಟು ಹಬ್ಬವನ್ನು ಸರಳವಾಗಿ ಆಚರಣೆ ಮಾಡಿಕೊಂಡೆ. ನಾನು ಪತ್ನಿ ಸಮೇತ ಕೇದಾರನಾಥಕ್ಕೆ ಹೋಗಿದ್ದೆ. ಒಬ್ಬೊಬ್ಬರು ಒಂದೊಂದು ವಿಧದಲ್ಲಿ ಆಚರಣೆ ಮಾಡಿಕೊಳ್ಳುತ್ತಾರೆ. ಅದೇ ರೀತಿ ಸಿದ್ದರಾಮಯ್ಯನವರ ಇದುವರೆಗಿನ ಜೀವನವನ್ನು ಮೆಲುಕು ಹಾಕುವ ಸಲುವಾಗಿ ಸಿದ್ದರಾಮೋತ್ಸವ ಆಯೋಜನೆ ಮಾಡಲಾಗುತ್ತಿದೆ. ಆ ಕಾರ್ಯಕ್ರಮದಲ್ಲಿ ನಾನು ಹಾಗೂ ರಾಹುಲ್ ಗಾಂಧಿಯವರು ಭಾಗಿಯಾಗುತ್ತೇವೆ ಎಂದರು.
ಇದನ್ನೂ ಓದಿ | ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ಮೈತ್ರಿ: ಯಾವ ಸಮಸ್ಯೆಯೂ ಇಲ್ಲ ಎಂದ ನಾಯಕರು