ಮೈಸೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆಗೆ ಜನರನ್ನು ಕರೆದುಕೊಂಡುಬರುವ ಕುರಿತು ಈಗಾಗಲೆ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಮುಂದುವರಿದಿರುವ ಬೆನ್ನಲ್ಲೇ, ಮೈಸೂರು ಜಿಲ್ಲೆಯಿಂದ 15 ಸಾವಿರ ಜನರನ್ನು ಕರೆತರಬೇಕು ಎಂದು ಸೂಚಿಸಿದ್ದಾರೆ. ದೇಶವು ಉಳಿಯಲಿ ಎಂಬ ಕಾರಣಕ್ಕೆ ಸೋನಿಯಾ ಗಾಂಧಿಯವರು ಹಾಗೂ ರಾಹುಲ್ ಗಾಂಧಿಯವರು ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದರು ಎಂದು ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ಭಾರತ್ ಜೋಡೊ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಭ್ರಷ್ಟಾಚಾರದ ರಾಜಧಾನಿ ಆಗುತ್ತಿದೆ ಕರ್ನಾಟಕ. ಹೀಗಾಗಿ ರಾಹುಲ್ ಗಾಂಧಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ರಾಹುಲ್ ಗಾಂಧಿಯವರು ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದರು. ಪಿ.ವಿ. ನರಸಿಂಹರಾವ್ ಅವರಿಗೂ ಮುನ್ನವೇ ಸೋನಿಯಾ ಗಾಂಧಿಯವರು ಪ್ರಧಾನಿ ಆಗಬಹುದಿತ್ತು. ಆದರೆ ಈ ದೇಶ ಉಳಿಯಲಿ ಎಂಬ ಕಾರಣಕ್ಕೆ ನರಸಿಂಹರಾವ್, ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ಬಿಜೆಪಿಯವರು ಮಾತೆತ್ತಿದರೆ ಕುಟುಂಬ ರಾಜಕಾರಣ ಎನ್ನುತ್ತಾರೆ. ಅವರು ಯಾವುದೇ ಅಧಿಕಾರ ವಹಿಸಿಕೊಳ್ಳದೇ ಇದ್ದರೂ ಇಲ್ಲದ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಫಿಸಿದರು.
ಇದನ್ನೂ ಓದಿ | ಡಿ.ಕೆ. ಶಿವಕುಮಾರ್‌ಗೆ ED ಸಂಕಷ್ಟ | ವಾರದಲ್ಲಿ ಹಾಜರಾಗಲು ಸಮನ್ಸ್: ಖಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ
ನೋ ಸ್ಟ್ರಾಂಗ್ ನೋ ಎನಿಮಿ, ಲೆಸ್ ಸ್ಟ್ರಾಂಗ್ ಲೆಸ್ ಎನಿಮಿ, ಮೋರ್ ಸ್ಟ್ರಾಂಗ್ ಮೋರ್ ಎನಿಮಿ ಎಂಭ ಇಂಗ್ಲಿಷ್ ಮಾತನ್ನು ಉಲ್ಲೇಖಿಸಿದ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಬಲಿಷ್ಠವಾದರೆ ತಮ್ಮ ಕುರ್ಚಿಗೆ ಧಕ್ಕೆ ಆಗುತ್ತದೆ ಎಂದು ಬಿಜೆಪಿಯವರು ಈ ರೀತಿ ಕಿರುಕುಳ ನೀಡುತ್ತಿದ್ದಾರೆ. ಆದರೆ ಯಾವುದಕ್ಕೂ ಹೆದರುವುದಿಲ್ಲ ಎಂದರು.
ಕರ್ನಾಟಕದಲ್ಲಿ ಭಾರತ್ ಜೋಡೊ ಪಾದಯಾತ್ರೆ ನಡೆಯುತ್ತಿರುವ ಪೈಕಿ ಒಂದು ದೊಡ್ಡ ನಗರ ಮೈಸೂರು. ನಾಲ್ಕು ವಿಧಾನಸಭಾ ಕ್ಷೇತ್ರ ಮೈಸೂರು ನಗರದಲ್ಲಿದೆ. ದಸರಾ ಕಾರಣ ಎರಡು ದಿನ ಪಾದಯಾತ್ರೆ ಇರುವುದಿಲ್ಲ. ರಾಹುಲ್ ಗಾಂಧಿ ಬೆಳಗ್ಗೆ 7.30ಕ್ಕೆ ಪಾದಯಾತ್ರೆ ಆರಂಭಿಸುತ್ತಾರೆ. ಎಲ್ಲರೂ ವಾಕ್ ವಿಥ್ ರಾಹುಲ್ ಗಾಂಧಿ ಎಂದು ಪಾಂಪ್ಲೆಟ್ ಹಿಡಿದ ವಾಕ್ ಮಾಡಿ ಎಂದರು.
ಮೈಸೂರು ಭಾಗಕ್ಕೆ ಯಾವತ್ತೂ ಬಾರದ ದೊಡ್ಡ ಮಹಿಳಾ ನಾಯಕಿ ಬರುತ್ತಾರೆ ಎಂದ ಶಿವಕುಮಾರ್, ಅವತ್ತು ಕಾಂಗ್ರೆಸ್ ಮಹಿಳೆಯರ ಶಕ್ತಿ ಪ್ರದರ್ಶನ ಮಾಡಬೇಕು. ಈ ಭಾಗಕ್ಕೆ ಬರುತ್ತಿರುವ ನಾಯಕಿ ಯಾರು ಎಂದು ನಾನು ಈಗ ಹೇಳುವುದಿಲ್ಲ. ಆ ನಾಯಕಿ ಬಂದ ದಿನ ದೊಡ್ಡ ಶಕ್ತಿ ಪ್ರದರ್ಶನ ಮಾಡಬೇಕು ಎಂದರು.
ಸಿದ್ದರಾಮಯ್ಯ ಅಮೃತ ಮಹೋತ್ಸವ ಉಲ್ಲೇಖ ಮಾಡಿದ ಡಿ. ಕೆ. ಶಿವಕುಮಾರ್, ಆ ಸಮಾವೇಶದ ಮೂಲಕ ಬಿಜೆಪಿಯವರಲ್ಲಿ ನಡುಕ ಹುಟ್ಟಿಸಲಿಲ್ಲವಾ? ಬಸ್‌ನಲ್ಲಿ ಜನರನ್ನು ಕರೆದುಕೊಂಡು ಬರಲಿಲ್ಲವಾ? ಈ ಬಾರಿಯೂ ಯಾರಿಗೂ ನಾನು ನಿದ್ದೆ ಮಾಡಲು ಬಿಡುವುದಿಲ್ಲ. ಪ್ರತಿಯೊಬ್ಬರೂ ಕೆಲವು ದಿನ ಕಷ್ಟಪಡಿ. ದಾವಣಗೆರೆಗೆ ಹಿಂದಿನ ದಿನ ರಾತ್ರಿ ಹೊರಟಿದ್ದೀರಿ ಅಲ್ವಾ? ಅದೇ ರೀತಿ ಇಲ್ಲಿಗೂ ಬನ್ನಿ. ಮುಖ ತೋರಿಸಿ ತಿಂಡಿ ತಿಂದುಕೊಂಡು ಹೋಗುವುದಲ್ಲ.
ಕೊನೆಯವರೆಗೂ ಎಲ್ಲರೂ ಇರಬೇಕು. ಯಾರು ಬಂದರು, ಯಾರ ಬರಲಿಲ್ಲ ಎಲ್ಲವನ್ನೂ ಲೆಕ್ಕ ಹಾಕಿಸುತ್ತೇನೆ. ಎಲ್ಲದಕ್ಕೂ ಒಂದೊಂದು ಕಮಿಟಿ ಮಾಡಲಾಗಿದೆ ಎಂದು ಭಾಷಣದಲ್ಲಿ ತಿಳಿಸಿದರು.
ಜಿಲ್ಲೆಗೆ ಐದು ಸಾವಿರ ಜನರನ್ನು ಕರೆತರಬೇಕು ಎಂದು ಸಿದ್ದರಾಮಯ್ಯ ಹೇಳಿದ್ದನ್ನು ಉಲ್ಲೇಖಿಸಿದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರು ಹೇಳಿದ್ದು ದೂರದ ಜಿಲ್ಲೆಯವರಿಗೆ. ಈ ಜಿಲ್ಲೆಯವರು 10 ರಿಂದ 15 ಸಾವಿರ ಜನರನ್ನು ಕರೆದುಕೊಂಡು ಬರಬೇಕು. ಒಬ್ಬೊಬ್ಬ ನಾಯಕ ನೂರು ಜನರನ್ನು ಕರೆದುಕೊಂಡು ಬನ್ನಿ. ವಾಹನವನ್ನು ನಾಯಕರು ಕೊಡುತ್ತಾರೆ. ನೀವು ನಿಮ್ಮ ಮರ್ಯಾದೆ ಕಾಪಾಡಿಕೊಳ್ಳಿ. ನೀವು ಬರಲಿಲ್ಲ ಎಂದರೆ ಸಿದ್ದರಾಮಯ್ಯ ಮರ್ಯಾದೆ ಹೋಗುತ್ತದೆ, ನನ್ನ ಮರ್ಯಾದೆ ಹೋಗುತ್ತದೆ, ನಿಮ್ಮ ಮರ್ಯಾದೆ ಹೋಗುತ್ತದೆ. ಟಿ ಶರ್ಟ್ ಮಾಡಿಸಿದರೆ ನನ್ನ ಹಾಗೂ ಸಿದ್ದರಾಮಯ್ಯ ಪೋಟೋ ಬೇಡ. ನಿಮ್ಮದು, ರಾಹುಲ್ ಗಾಂಧಿ ಪೋಟೋ ಹಾಕಿಸಿ ಹಂಚಿ ಎಂದರು.
ನನಗೆ ಟೆಂಪ್ರೇಚರ್ ಜಾಸ್ತಿ ಆಗಿದೆ
ತಮಗೆ ಜ್ವರದ ಮುನ್ಸೂಚನೆ ಇದ್ದರೂ ಕಾರ್ಯಕ್ರಮಕ್ಕೆ ಆಗಮಿಸಿರುವುದನ್ನು ತಿಳಿಸಿದ ಶಿವಕುಮಾರ್, ನನಗೆ ಟೆಂಪರೇಚರ್ ಜಾಸ್ತಿ ಆಗುತ್ತಿದೆ. 100 ದಾಟಿದೆ, ಈಗಷ್ಟೆ ಚೆಕಪ್ ಮಾಡಿಸಿಕೊಂಡಿದ್ದೇನೆ. ಮನೆ ಬಿಟ್ಟು ಹನ್ನೊಂದು ದಿನಗಳಾಗಿವೆ ಎಂದು ಭಾಷಣವನ್ನು ಆರಂಭಿಸಿದರು.
ಇದನ್ನೂ ಓದಿ | Bharath jodo| ಭಾರತ್ ಜೋಡೋ ಒಳ್ಳೆಯ ಕಾರ್ಯಕ್ರಮ: ಪಾಕಿಸ್ತಾನ, ಬಾಂಗ್ಲಾವನ್ನೂ ಜೋಡಿಸಲಿ ಎಂದ ಈಶ್ವರಪ್ಪ