Site icon Vistara News

D.K. Shivakumar: 12 ನೇ ಡಿಸಿಎಂ ಆದರು ಡಿ.ಕೆ. ಶಿವಕುಮಾರ್‌: ಸಿಎಂ ಸ್ಥಾನಕ್ಕೆ ಇದು ಮೆಟ್ಟಿಲು ಎನ್ನುವುದು ಎಷ್ಟು ಸತ್ಯ?

dk shivakumar

ರಮೇಶ ದೊಡ್ಡಪುರ, ಬೆಂಗಳೂರು
ಕರ್ನಾಟಕದಲ್ಲಿ ಡಿಸಿಎಂ ಆಗುವ ಸಂಪ್ರದಾಯ ಈ ಹಿಂದಿನಿಂದಲೂ ಇದೆ. ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಡಿಸಿಎಂ ಹುದ್ದೆಯನ್ನು ಸೃಷ್ಟಿಸಿದ್ದು 1993ರಲ್ಲಿ. ಎಂ. ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾದಾಗ ಎಸ್‌.ಎಂ. ಕೃಷ್ಣ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಲಾಯಿತು. 21 ಜನವರಿ 1993ರಿಂದ 9 ಡಿಸೆಂಬರ್‌ 1994ರವರೆಗೆ ಅಂದರೆ 1 ವರ್ಷ 322 ದಿನಗಳು ಉಪಮುಖ್ಯಮಂತ್ರಿ ಆಗಿದ್ದರು.

ನಂತರ 11 ಡಿಸೆಂಬರ್‌ 1994ರಲ್ಲಿ ಎಚ್‌.ಡಿ. ದೇವೇಗೌಡರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜೆ.ಎಚ್‌. ಪಟೇಲರನ್ನು ಉಪಮುಖ್ಯಮಂತ್ರಿ ಮಾಡಲಾಯಿತು. ಎಚ್‌.ಡಿ. ದೇವೇಗೌಡರು ದೇಶದ ಪ್ರಧಾನಿಯಾದ ನಂತರ ಸಿಎಂ ಕುರ್ಚಿಯನ್ನು ಅಲಂಕರಿಸುವವರೆಗೆ ಅಂದರೆ 31 ಮೇ 1996ರವರೆಗೆ ಪಟೇಲರು ಉಪಮುಖ್ಯಮಂತ್ರಿ ಆಗಿದ್ದರು.

ಪಟೇಲರ ಜಾಗಕ್ಕೆ ಸಿದ್ದರಾಮಯ್ಯ ಅವರನ್ನು ಉಪಮುಖ್ಯಮಂತ್ರಿ ಮಾಡಲಾಯಿತು, ಅವರು 22ಜುಲೈ 1999ರವರೆಗೆ 3 ವರ್ಷ 52 ದಿನ ಉಪಮುಖ್ಯಮಂತ್ರಿ ಆಗಿದ್ದರು. 2004ರಲ್ಲಿ ಚುನಾವಣೆ ನಡೆದು ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಕಾಂಗ್ರೆಸ್‌ನ ಧರ್ಮಸಿಂಗ್‌ ಮುಖ್ಯಮಂತ್ರಿಯಾದರು. ಸಿದ್ದರಾಮಯ್ಯ ಮತ್ತೆ ಉಪಮುಖ್ಯಮಂತ್ರಿಯಾದರು. 28 ಮೇ 2004ರಿಂದ 5 ಆಗಸ್ಟ್‌ 2005ರವರೆಗೆ 1 ವರ್ಷ 69 ದಿನ ಉಪಮುಖ್ಯಮಂತ್ರಿ ಆಗಿದ್ದರು. ಈ ವೇಳೆಗೆ ಎಚ್‌.ಡಿ. ದೇವೇಗೌಡರ ಜತೆಗೆ ಭಿನ್ನಾಭಿಪ್ರಾಯ ಉಂಟಾಗಿ ಪಕ್ಷದಿಂದ ಹೊರನಡೆದರು. 5 ಆಗಸ್ಟ್‌ 2005ರಿಂದ, ಧರ್ಮಸಿಂಗ್‌ ಸರ್ಕಾರ ಪತನವಾದ 28 ಜನವರಿ 2006ರವರೆಗೆ ಕೇವಲ 173 ದಿನಗಳಿಗೆ ಎಂ.ಪಿ. ಪ್ರಕಾಶ್‌ ಉಪಮುಖ್ಯಮಂತ್ರಿ ಆಗಿದ್ದರು.

ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ-ಜೆಡಿಎಸ್‌ನ 40 ಶಾಸಕರೊಂದಿಗಿನ ಮೈತ್ರಿ ಸರ್ಕಾರದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಸಿಎಂ ಆದಾಗ ಬಿ.ಎಸ್‌. ಯಡಿಯೂರಪ್ಪ ಉಪಮುಖ್ಯಮಂತ್ರಿ ಆದರು. 3 ಫೆಬ್ರವರಿ 2005ರಿಂದ 28 ಜನವರಿ 2006ರವರೆಗೆ 1 ವರ್ಷ 253 ದಿನಗಳು ಬಿ.ಎಸ್‌. ಯಡಿಯೂರಪ್ಪ ಡಿಸಿಎಂ ಆಗಿದ್ದರು.

ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ 12 ಜುಲೈ 2012ರಿಂದ 12 ಮೇ 2013ರವರೆಗೆ ಜಗದೀಶ ಶೆಟ್ಟರ್‌ ಸಿಎಂ ಆಗಿದ್ದ ಅವಧಿಯಲ್ಲಿ ಆರ್.‌ ಅಶೋಕ ಹಾಗೂ ಕೆ.ಎಸ್‌. ಈಶ್ವರಪ್ಪ ಉಪಮುಖ್ಯಮಂತ್ರಿ ಆಗಿದ್ದರು.

2018ರ ಚುನಾವಣೆ ನಂತರ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಸಿಎಂ ಆದರು. 23 ಮೇ 2018ರಿಂದ 23 ಜುಲೈ 2019ರವರೆಗೆ 1 ವರ್ಷ 61 ದಿನ ಡಾ. ಜಿ. ಪರಮೇಶ್ವರ ಸಿಎಂ ಆಗಿದ್ದರು. ಈ ಸರ್ಕಾರ ಪತನವಾಗಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ಹಿಡಿದಾಗ ಡಿಸಿಎಂಗಳ ಸಂಖ್ಯೆ ಮೂರಕ್ಕೆ ಏರಿತು. 26 ಆಗಸ್ಟ್‌ 2019ರಿಂದ 26 ಜುಲೈ 2021ರವರೆಗೆ 1 ವರ್ಷ 340 ದಿನಗಳು ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ ಹಾಗೂ ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿ ಆಗಿದ್ದರು. ನಂತರ ಬಸವರಾಜ ಬೊಮ್ಮಾಯಿ ಸಿಎಂ ಆದಾಗ ಯಾವುದೇ ಉಪಮುಖ್ಯಮಂತ್ರಿಯನ್ನು ಮಾಡಲಿಲ್ಲ.

ಮುಖ್ಯಮಂತ್ರಿಯಾಗಲು ಮೆಟ್ಟಿಲೇ?
ಇದೀಗ ಡಿ.ಕೆ. ಶಿವಕುಮಾರ್‌ ಅವರು ಕರ್ನಾಟಕದ 12ನೇ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಉಪಮುಖ್ಯಮಂತ್ರಿ ಎಂದರೆ ಮುಂದೆ ಸಿಎಂ ಆಗಲು ಸಲೀಸು ಎಂಬ ಆಲೋಚನೆಯಿದೆ. ಆದರೆ ಇಲ್ಲಿವರೆಗೆ 11 ಜನರು ಉಪಮುಖ್ಯಮಂತ್ರಿ ಆಗಿದ್ದು, ಅವರಲ್ಲಿ ಮೂವರು ಮಾತ್ರ ಸಿಎಂ ಆಗಲು ಸಾಧ್ಯವಾಗಿದೆ. ಎಸ್‌. ಎಂ. ಕೃಷ್ಣ, ಬಿ.ಎಸ್‌. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಮಾತ್ರ ಸಿಎಂ ಸ್ಥಾನ ಅಲಂಕರಿಸಿದ್ದಾರೆ. ಮೂವರೂ ಚುನಾವಣೆಗಳಲ್ಲಿ ಪಕ್ಷದ ಚುನಾವಣಾ ಕಾರ್ಯದ ಹೊಣೆ ಹೊತ್ತು ನಂತರ ಸಿಎಂ ಆದವರು. ಅಧಿಕಾರ ಬಂದ ನಂತರ ಯಾರನ್ನು ಸಿಎಂ ಮಾಡಲಾಗಿದೆಯೋ ಅವರು ಮುಂದೆ ಬರಲು ಸಾಧ್ಯವಾಗಿಲ್ಲ.

ಸಾಂವಿಧಾನಿಕ ಹುದ್ದೆಯಲ್ಲ:
ಸಂವಿಧಾನದಲ್ಲಿ ಎಲ್ಲಿಯೂ ಡಿಸಿಎಂ ಹುದ್ದೆಯ ಉಲ್ಲೇಖ ಇಲ್ಲ. ಸಾಮಾನ್ಯವಾಗಿ ಮೈತ್ರಿ ಸರ್ಕಾರದಲ್ಲಿ ಎರಡನೇ ಮಿತ್ರಪಕ್ಷವನ್ನು ಸಮಾಧಾನ ಮಾಡಲು ಈ ಸ್ಥಾನ ಸೃಷ್ಟಿಸಲಾಗುತ್ತದೆ. ಒಂದೇ ಪಕ್ಷದಲ್ಲಿ ಇಬ್ಬರು ಸಿಎಂ ಪ್ರಬಲ ಆಕಾಂಕ್ಷಿಗಳಿದ್ದರೆ ಅವರಲ್ಲಿ ಒಬ್ಬರನ್ನು ಸಮಾಧಾನ ಮಾಡಲೂ ಸೃಷ್ಟಿ ಮಾಡಲಾಗುತ್ತದೆ. ತಾವು ಸಿಎಂ ಆಗುವ ಪ್ರಬಲ ಅಭ್ಯರ್ಥಿ ಎಂಬ ಸಂದೇಶವನ್ನು ಡಿಸಿಎಂಗಳು ನೀಡಲು ಪ್ರಯತ್ನಿಸುತ್ತಾರೆ. ಆದರೆ ಅನೇಕ ಸಂದರ್ಭಗಳಲ್ಲಿ ಸಿಎಂ ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಸಂಘರ್ಷದಲ್ಲೇ ಈ ವ್ಯವಸ್ಥೆ ಪರ್ಯಾವಸಾನವಾಗುತ್ತದೆ. ಇದೀಗ ಡಿ.ಕೆ. ಶಿವಕುಮಾರ್‌ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದು, ಯಾವ ರೀತಿ ಸರ್ಕಾರ ನಡೆಯುತ್ತದೆ ಕಾದುನೋಡಬೇಕಿದೆ.

ಇದನ್ನೂ ಓದಿ: Karnataka CM: ಪದಗ್ರಹಣದ ಬೆನ್ನಿಗೇ ಮತ್ತೆ ದಿಲ್ಲಿಗೆ ಹೋಗ್ತಾರಾ ಸಿದ್ದರಾಮಯ್ಯ, ಡಿಕೆಶಿ?

Exit mobile version