ಕರ್ನಾಟಕ
Karnataka CM: ಪದಗ್ರಹಣದ ಬೆನ್ನಿಗೇ ಮತ್ತೆ ದಿಲ್ಲಿಗೆ ಹೋಗ್ತಾರಾ ಸಿದ್ದರಾಮಯ್ಯ, ಡಿಕೆಶಿ?
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕಾರ ಸಮಾರಂಭದ ಬಳಿಕ ದಿಲ್ಲಿಗೆ ಪ್ರಯಾಣಿಸುವ ಸಾಧ್ಯತೆಗಳಿವೆ.
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ (Karnataka CM) ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಅವರ ಪದಗ್ರಹಣ ಸಮಾರಂಭ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ (Kanteerava stadium) ಶನಿವಾರ ಮಧ್ಯಾಹ್ನ 12.30ಕ್ಕೆ ನಡೆಯಲಿದ್ದು, ಅದಾದ ಬಳಿಕ ಸಂಜೆಯ ಹೊತ್ತಿಗೆ ಈ ಇಬ್ಬರೂ ನಾಯಕರು ದಿಲ್ಲಿಗೆ ಪ್ರಯಾಣ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಕನಿಷ್ಠ 25 ಜನ ಸಚಿವರನ್ನು ಸೇರಿಸಿಕೊಂಡು ಪ್ರಮಾಣವಚನ ಸ್ವೀಕರಿಸಬೇಕು ಎನ್ನುವುದು ಸಿದ್ದರಾಮಯ್ಯ ಅವರ ಅಪೇಕ್ಷೆಯಾಗಿತ್ತು. ಆದರೆ, ಸಿದ್ದು ಮತ್ತು ಡಿಕೆಶಿ ನಡುವೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ವಿಚಾರದಲ್ಲಿ ಉಂಟಾದ ಸಂಘರ್ಷದಿಂದ ಅಂತಿಮವಾಗಿ ಕೇವಲ 10 ಮಂದಿ ಮಾತ್ರ ಮೊದಲ ಹಂತದಲ್ಲಿ ಸಂಪುಟ ಸೇರಲಿದ್ದಾರೆ.
ಎಂ.ಬಿ ಪಾಟೀಲ್ (ಲಿಂಗಾಯತ)
ಡಾ. ಜಿ ಪರಮೇಶ್ವರ್ (ದಲಿತ ಬಲ)
ಪ್ರಿಯಾಂಕಾ ಖರ್ಗೆ (ದಲಿತ ಬಲ)
ಕೆ.ಎಚ್ ಮುನಿಯಪ್ಪ (ದಲಿತ ಎಡ)
ಕೆ.ಜೆ ಜಾರ್ಜ್ (ಕ್ರಿಶ್ಚಿಯನ್)
ಸತೀಶ್ ಜಾರಕಿಹೊಳಿ (ಎಸ್‌ಟಿ- ವಾಲ್ಮೀಕಿ)
ಜಮೀರ್ ಅಹಮದ್ ಖಾನ್ (ಮುಸ್ಲಿಂ)
ರಾಮಲಿಂಗಾ ರೆಡ್ಡಿ (ರೆಡ್ಡಿ ಸಮುದಾಯ)
ಇವರು ಪ್ರಸಕ್ತ ಸಂಪುಟ ಸೇರಲಿರುವ ಶಾಸಕರು. ಆದರೆ, ಇವರಿಗೆ ಸಚಿವ ಖಾತೆ ಕೊಡುವ ವಿಚಾರದಲ್ಲೂ ಇನ್ನೂ ಗೊಂದಲವಿದೆ. ಹೀಗಾಗಿ ಇನ್ನೊಂದು ಸುತ್ತಿನ ಚರ್ಚೆ ಮತ್ತು ಸಚಿವರ ಪಟ್ಟಿ ಅಂತಿಮಗೊಳಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ದಿಲ್ಲಿಗೆ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ.
ಮುಗಿಯದ ಪಟ್ಟಿ ಜಟಾಪಟಿ
ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನಿವಾಸದಲ್ಲಿ ರಾತ್ರಿ ಎರಡು ಗಂಟೆಯವರೆಗೂ ಪಟ್ಟಿ ಜಟಾಪಟಿ ಮುಂದುವರಿದಿತ್ತು. ಇಬ್ಬರೂ ತಮ್ಮ ಪಟ್ಟು ಬಿಡದ ಹಿನ್ನೆಲೆಯಲ್ಲಿ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಬೇಕಾಯಿತು. ಇಷ್ಟಾದರೂ ಪರಿಸ್ಥಿತಿ ಬದಲಾಗದೆ ಇದ್ದಾಗ ಅಂತಿಮವಾಗಿ ಮೊದಲ ಹಂತದಲ್ಲಿ ಕೇವಲ ಎಂಟು ಮಂದಿ ಸಚಿವರಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಯಿತು.
ಬೆಳಗ್ಗೆ ಆಗಮಿಸಿದ ನಾಯಕರು
ಇದಾದ ಬಳಿಕವೇ ಸಿದ್ದರಾಮಯ್ಯ ಅವರು ದಿಲ್ಲಿಯಿಂದ ಹೊರಟು ಬೆಳಗ್ಗೆ 6.00 ಗಂಟೆಗೆ ಬೆಂಗಳೂರು ತಲುಪಿದ್ದಾರೆ. 6.30ರ ಹೊತ್ತಿಗೆ ಮನೆ ತಲುಪಿರುವ ಅವರು ಬಳಿಕ ವಿಶ್ರಾಂತಿ ಪಡೆಯುತ್ತಿದ್ದಾರೆ. ಬೆಳಗ್ಗೆ 11 ಗಂಟೆಯ ಬಳಿಕವಷ್ಟೇ ಅವರು ಮನೆಯಿಂದ ಹೊರಬರುವ ಸಾಧ್ಯತೆ ಇದೆ. ಈ ನಡುವೆ, ಬೆಳಗ್ಗೆ 9 ಗಂಟೆಯ ಹೊತ್ತಿಗೆ ದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರು ಕೂಡಾ ವಿಶ್ರಾಂತಿ ಪಡೆಯುತ್ತಿದ್ದಾರೆ.
ಗ್ಯಾರಂಟಿ ಭಾಗ್ಯಗಳ ಘೋಷಣೆಯಾಗಬೇಕು
ಈ ನಡುವೆ, ಪದಗ್ರಹಣ ಸಮಾರಂಭದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮೂರನೇ ಮಹಡಿಗೆ ತೆರಳಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ನಂತರ ಮೊದಲ ಸಚಿವ ಸಂಪುಟ ಸಭೆಯನ್ನು ನಡೆಸಲಿದ್ದು, ಅದರಲ್ಲಿ ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿ ಭಾಗ್ಯಗಳನ್ನು ಸಿದ್ದರಾಮಯ್ಯ ಪ್ರಕಟಿಸುವ ನಿರೀಕ್ಷೆ ಇದೆ.
ಇದೆಲ್ಲ ಆದ ನಂತರವಷ್ಟೇ ಅವರು ದಿಲ್ಲಿಗೆ ತೆರಳುವ ಸಾಧ್ಯತೆ. ಶನಿವಾರದ ಚಟುವಟಿಕೆಗಳು ವಿಳಂಬವಾದರೆ ಭಾನುವಾರ ದಿಲ್ಲಿಗೆ ತೆರಳಬಹುದು. ಅಂತೂ ಸಂಪುಟವನ್ನು ತ್ವರಿತ ಗತಿಯಲ್ಲಿ ವಿಸ್ತರಿಸಬೇಕು ಎಂದು ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.
ಇದನ್ನೂ ಓದಿ: Karnataka CM: ಸಿದ್ದರಾಮಯ್ಯ ಪದಗ್ರಹಣಕ್ಕೆ ಶ್ರೀರಾಮ ಪಟ್ಟಾಭಿಷೇಕದ ಟಚ್; ಕಂಠೀರವದಲ್ಲಿ ರಾಮನ ಮೂರ್ತಿ
ಕರ್ನಾಟಕ
Shivamogga News: ಸೊರಬ ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸಿದ ಅನಿತಾ ಮಧು ಬಂಗಾರಪ್ಪ
Shivamogga News: ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಅವರಿಗೆ ಪಕ್ಷವು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ಜವಾಬ್ದಾರಿಯನ್ನು ನೀಡಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಮತ್ತು ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯ ಮಕ್ಕಳಿಗೆ ದೊರೆಯಬೇಕು ಎಂಬ ಅಭಿಲಾಷೆಯನ್ನು ಅವರು ಹೊಂದಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಅವರ ಪತ್ನಿ ಅನಿತಾ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸೊರಬ: ಕ್ಷೇತ್ರದಲ್ಲಿ ಮಹಿಳಾ (women) ಮತ್ತು ಯುವ ಮತದಾರರು (youth voters) ಹೆಚ್ಚಿನ ಸಂಖ್ಯೆಯಲ್ಲಿ ಒಲವು ತೋರಿದ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ಅವರು ಅತ್ಯಧಿಕ ಮತಗಳ (Votes) ಅಂತರದಿಂದ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಪತ್ನಿ ಅನಿತಾ ಮಧು ಬಂಗಾರಪ್ಪ ತಿಳಿಸಿದರು.
ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ಕಲ್ಯಾಣ ಮಂಟಪದಲ್ಲಿ ಬುಧವಾರ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Season Fashion: ಸೆಲೆಬ್ರೆಟಿ ಲುಕ್‌ಗಾಗಿ ಹೈ ಫ್ಯಾಷನ್ ಲೋಕಕ್ಕೆ ಬಂತು ಒನ್ ಶೋಲ್ಡರ್ ಡ್ರೆಸ್!
ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರದ ಜನತೆ ಕೊಟ್ಟ ಮಾತಿನಂತೆ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಿದ್ದಾರೆ, ಕ್ಷೇತ್ರದ ಮತದಾರರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದ ಅವರು, ಪ್ರಚಾರದ ವೇಳೆ ಜನತೆ ಅನೇಕ ಸಮಸ್ಯೆಗಳನ್ನು ಸಹ ತಮ್ಮ ಗಮನಕ್ಕೆ ತಂದಿದ್ದರು. ಅವುಗಳನ್ನು ಪತಿ ಮಧು ಬಂಗಾರಪ್ಪ ಅವರಿಗೆ ತಿಳಿಸಿ, ಹಂತ-ಹಂತವಾಗಿ ಸಮಸ್ಯೆಗಳನ್ನು ಪರಿಹರಿಸಲು ಕೇಳಿಕೊಳ್ಳುತ್ತೇನೆ ಎಂದರು.
ಪಕ್ಷವು ಮಧು ಬಂಗಾರಪ್ಪ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ಜವಾಬ್ದಾರಿಯನ್ನು ನೀಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಮತ್ತು ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯ ಮಕ್ಕಳಿಗೆ ದೊರೆಯಬೇಕು ಎಂಬ ಅಭಿಲಾಷೆಯನ್ನು ಅವರು ಹೊಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿಯು ಸೇರಿದಂತೆ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವರು ಎಂದು ತಿಳಿಸಿದರು.
ಸರ್ಕಾರವು ಸಹ ಚುನಾವಣೆಯ ಸಂದರ್ಭದಲ್ಲಿ ಘೋಷಣೆ ಮಾಡಿದ ಗ್ಯಾರಂಟಿ ಕಾರ್ಡ್‌ನಲ್ಲಿನ ಅಂಶಗಳನ್ನು ಜಾರಿಗೆ ತರುತ್ತಿದೆ. ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವುದು ಮತ್ತು ಆನವಟ್ಟಿ-ಸೊರಬ ಭಾಗದ ಯುವಜನತೆಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಉತ್ಸಾಹ ಹೊಂದಿದ್ದಾರೆ. ತಾವು ಸಹ ಮಧು ಬಂಗಾರಪ್ಪ ಅವರ ಜತೆಗಿದ್ದು, ಕ್ಷೇತ್ರದ ಜನತೆಯೊಂದಿಗೆ ಸದಾ ಇರುತ್ತೇನೆ ಮತ್ತು ಜನತೆಯ ಧ್ವನಿಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಜೋತಾಡಿ ಮಾತನಾಡಿ, ಕ್ಷೇತ್ರದ ಮಹಿಳಾ ಮತದಾರರು ಒಗ್ಗಟ್ಟಿನಿಂದ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಪ್ರಚಾರಕ್ಕೆ ಪಕ್ಷದ ಮುಖಂಡರು ಸಹಕಾರ ನೀಡಿದರು. ಮುಖ್ಯವಾಗಿ ಮಾಜಿ ಸಿಎಂ ಎಸ್. ಬಂಗಾರಪ್ಪ ಅವರ ಪುತ್ರಿಯರಾದ ಸುಜಾತಾ ತಿಲಕ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಮತ್ತು ಮಧು ಬಂಗಾರಪ್ಪ ಅವರ ಪತ್ನಿ ಅನಿತಾ ಅವರು ಕೈ ಜೋಡಿಸಿದ್ದು ಪಕ್ಷಕ್ಕೆ ಆನೆ ಬಲ ಬಂದಂತಾಯಿತು.
ಮಹಿಳಾ ಮತದಾರರನ್ನು ನಮ್ಮತ್ತ ಸೆಳೆಯಲು ಸಹಕಾರಿಯಾಗಿದ್ದು, ಇದರ ಪರಿಣಾಮ ಮಧು ಬಂಗಾರಪ್ಪ ಅವರು ಅತ್ಯಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು. ಜನತೆ ಸಾಕಷ್ಟು ನಿರೀಕ್ಷೆಯೊಂದಿಗೆ ಮತ ಚಲಾಯಿಸಿದ್ದಾರೆ. ಜನತೆಯ ನಿರೀಕ್ಷೆಗಳನ್ನು ಕ್ರಮೇಣವಾಗಿ ಪೂರ್ಣಗೊಳಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಅನಿತಾ ಮಧು ಬಂಗಾರಪ್ಪ ಅವರನ್ನು ಅಭಿನಂದಿಸಲಾಯಿತು.
ಇದನ್ನೂ ಓದಿ: Sugar Vs Salt: ಸಕ್ಕರೆ ಮತ್ತು ಉಪ್ಪು: ಕಿಡ್ನಿಗೆ ಯಾವುದು ಹಿತಕರ?
ಈ ವೇಳೆ ಜಿಪಂ ಮಾಜಿ ಸದಸ್ಯೆ ರಾಜೇಶ್ವರಿ ಗಣಪತಿ, ತಾಪಂ ಮಾಜಿ ಸದಸ್ಯೆ ಜ್ಯೋತಿ ನಾರಾಯಣಪ್ಪ, ಪುರಸಭೆ ಸದಸ್ಯೆ ಪ್ರೇಮಾ, ಚಂದ್ರಗುತ್ತಿ ಗ್ರಾಪಂ ಅಧ್ಯಕ್ಷೆ ಶಿಲ್ಪಾ ಗಿರೀಶ್ ಗೌಡ, ಉಪಾಧ್ಯಕ್ಷೆ ಲಕ್ಷ್ಮೀ ಚಂದ್ರಪ್ಪ, ಸದಸ್ಯರಾದ ಸರಿತಾ, ಲಕ್ಷ್ಮೀ ರವಿ, ಶ್ರೀಮತಿ ಚಂದ್ರಕಾಂತ್, ಮಹಿಳಾ ಪ್ರಮುಖರಾದ ಮಂಜುಳಾ ಕೆರಿಯಪ್ಪ, ಲಕ್ಷ್ಮಮ್ಮ, ಶಕುಂತಲಾ ಪಿ. ಶೇಟ್, ಎಂ. ಲಲಿತಾ, ಮುಖಂಡರಾದ ಜಯಶೀಲಗೌಡ, ಸುನೀಲ್‌ಗೌಡ, ಎನ್.ಜಿ. ನಾಗರಾಜ್, ಪ್ರದೀಪ್ ಬಾಡದಬೈಲು, ಎಂ.ಪಿ. ರತ್ನಾಕರ, ರೇಣುಕಾಪ್ರಸಾದ್, ಮಾರ್ಯಪ್ಪ ಬೆನ್ನೂರು, ಗಣೇಶ್ ಮರಡಿ, ಧರ್ಮಪ್ಪ ದ್ಯಾವಾಸ, ಸುಧಾಕರ ನಾಯ್ಕ್, ಪ್ರಶಾಂತ್ ನಾಯ್ಕ್ ಸೇರಿದಂತೆ ಇತರರಿದ್ದರು.
ಕರ್ನಾಟಕ
Tumkur News: ಶಿರಾ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಟಿ.ಬಿ. ಜಯಚಂದ್ರ ಭೇಟಿ, ಪರಿಶೀಲನೆ
Tumkur News: ಶಿರಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಇದ್ದು, ಶೀಘ್ರವಾಗಿ ವೈದ್ಯರ ಕೊರತೆಯನ್ನು ನೀಗಿಸಲು ಕ್ರಮವಹಿಸುವುದಾಗಿ ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಶಿರಾ: ನಗರದ ಸಾರ್ವಜನಿಕ ಆಸ್ಪತ್ರೆಗೆ (Public Hospital) ಶಾಸಕ ಟಿ.ಬಿ.ಜಯಚಂದ್ರ ಭೇಟಿ (visit) ನೀಡಿ, ಪರಿಶೀಲಿಸಿ ರೋಗಿಗಳ ಸಮಸ್ಯೆಗಳನ್ನು (Patient problem) ಆಲಿಸಿದರು.
ಆಸ್ಪತ್ರೆಯಲ್ಲಿ ಅಗತ್ಯವಿರುವ ಔಷಧಗಳನ್ನು ತರಿಸಿಕೊಂಡು ರೋಗಿಗಳಿಗೆ ನೀಡಬೇಕು. ಹೊರಗೆ ತರುವಂತೆ ಚೀಟಿ ಬರೆಯುವುದನ್ನು ನಿಲ್ಲಿಸಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: Season Fashion: ಸೆಲೆಬ್ರೆಟಿ ಲುಕ್‌ಗಾಗಿ ಹೈ ಫ್ಯಾಷನ್ ಲೋಕಕ್ಕೆ ಬಂತು ಒನ್ ಶೋಲ್ಡರ್ ಡ್ರೆಸ್!
ಆಸ್ಪತ್ರೆಯಲ್ಲಿ ಸ್ಚಚ್ಛತೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ ಅವರು, ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಇದ್ದು, ಶೀಘ್ರವಾಗಿ ವೈದ್ಯರ ಕೊರತೆಯನ್ನು ನೀಗಿಸಲು ಕ್ರಮವಹಿಸುವುದಾಗಿ ಇದೇ ವೇಳೆ ತಿಳಿಸಿದರು.
ಶಿರಾ ಆಸ್ಪತ್ರೆಯಲ್ಲಿ ಅಪಘಾತ ಮತ್ತು ತುರ್ತು ಚಿಕಿತ್ಸಾ ಘಟಕದ ಕಾಮಗಾರಿಯು ನಿಧಾನಗತಿಯಲ್ಲಿ ಸಾಗುತ್ತಿದ್ದು ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಇತ್ತೀಚೆಗೆ ಯುವ ಜನತೆ ಹೃದಯದ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಆತಂಕವನ್ನು ಉಂಟು ಮಾಡುವ ವಿಷಯವಾಗಿದೆ ಎಂದ ಅವರು, ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಚಿಕಿತ್ಸಾ ಕೇಂದ್ರ ಮತ್ತು 30 ಹಾಸಿಗೆಯ ಆಸ್ಪತ್ರೆಯನ್ನು ನಗರದಲ್ಲಿ ತೆರೆಯಲು ಚಿಂತನೆ ನಡೆಸಿದ್ದು, ಶೀಘ್ರವಾಗಿ ಅನುಷ್ಠಾನಕ್ಕೆ ತರುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: Sugar Vs Salt: ಸಕ್ಕರೆ ಮತ್ತು ಉಪ್ಪು: ಕಿಡ್ನಿಗೆ ಯಾವುದು ಹಿತಕರ?
ಬಳಿಕ ನಗರದ ಮಿನಿ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಕ್ಷೇತ್ರದ ವ್ಯಾಪ್ತಿಯ ಹಲವಾರು ಮಾಹಿತಿ ವಿನಿಮಯ ಮಾಡಿಕೊಂಡರು.
ಕರ್ನಾಟಕ
Farooq Abdullah: ಮಾಜಿ ಪಿಎಂ ದೇವೇಗೌಡ, ಸಿಎಂ ಸಿದ್ದರಾಮಯ್ಯ ಜತೆ ಫಾರೂಕ್ ಅಬ್ದುಲ್ಲಾ ʼಲೋಕಾʼಭಿರಾಮ!
HD Devegowda: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ ಅವರ ಕರ್ನಾಟಕ ಭೇಟಿ ರಾಜಕೀಯವಾಗಿ ಮಹತ್ವವನ್ನು ಪಡೆದುಕೊಂಡಿದೆ. ಬಿಜೆಪಿಯೇತರ ಸರ್ಕಾರ ರಚನೆಗಾಗಿ ನಾನಾ ಕಸರತ್ತುಗಳು ನಡೆಯುತ್ತಿರುವ ಮಧ್ಯೆಯೇ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರು: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ (Farooq Abdullah) ಬುಧವಾರ (ಜೂನ್ 7) ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Devegowda) ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರು ಈ ಭೇಟಿ ನೀಡಿದ್ದಾರೆ ಎಂದು ಹೇಳಲಾಗಿದ್ದು, ಹಲವು ರಾಜಕೀಯ ಲೆಕ್ಕಾಚಾರಗಳು ಇದರ ಹಿಂದೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಲೋಕಸಭಾ ಚುನಾವಣೆಯು ರಾಜ್ಯಗಳ ವಿಧಾನಸಭಾ ಚುನಾವಣೆಗಿಂತ ತುಸು ಭಿನ್ನ. ಇಲ್ಲಿ ಮತ ಹಾಕುವಾಗ ನಾನಾ ವಿಚಾರಗಳು ಪರಿಗಣಿಸಲ್ಪಡುತ್ತದೆ. ಅಲ್ಲದೆ, ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ ಹವಾ ಇದೆ. ಹೀಗಾಗಿ ಪ್ರತಿಪಕ್ಷಗಳು ಒಗ್ಗೂಡಿ ಹೋರಾಟ ನಡೆಸಬೇಕಿದೆ. ಇದಕ್ಕಾಗಿ ಬಿಜೆಪಿಯೇತರ ರಂಗ ರಚನೆಯ ಅವಶ್ಯಕತೆಯೂ ಇದೆ ಎಂಬುದು ಇತರ ರಾಜಕೀಯ ಪಕ್ಷಗಳ ಕೂಗಾಗಿದೆ. ಅದರ ಭಾಗವಾಗಿ ಈಗ ಫಾರೂಕ್ ಅಬ್ದುಲ್ಲಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
ಶುರುವಾಗಿದೆ ಒಗ್ಗಟ್ಟಿನ ಮಂತ್ರ
ಜೂನ್ 12ರಂದು ಬಿಹಾರದ ಪಟನಾದಲ್ಲಿ ವಿರೋಧ ಪಕ್ಷಗಳ ಸಭೆಯನ್ನು ಕರೆಯಲಾಗಿತ್ತು. ಜೆಡಿಯು ನಾಯಕ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಸಭೆಯ ಮುಂದಾಳತ್ವವನ್ನು ವಹಿಸಿದ್ದರು. ಆದರೆ, ಈ ಸಭೆಗೆ ಜೆಡಿಎಸ್ ಅನ್ನು ಆಹ್ವಾನ ಮಾಡಿರಲಿಲ್ಲ. ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರ ಕೆಲವು ಪ್ರಮುಖ ವಿರೋಧ ಪಕ್ಷದ ನಾಯಕರಿಗೆ ಸಭೆಗೆ ಬರಲು ಅಸಾಧ್ಯವಾಗಲಿರುವ ಕಾರಣ ಈ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ. ಈಗಾಗಲೇ ನಿತೀಶ್ ಕುಮಾರ್ ಅವರು ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ಎಡಪಕ್ಷಗಳ ಹೊರತಾಗಿ ಹಲವಾರು ಪ್ರಾದೇಶಿಕ ಪಕ್ಷಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: MLC Election: ಕಾಂಗ್ರೆಸ್ ಸರ್ಕಾರಕ್ಕೆ 3ನೇ ಸವಾಲು: 3 ಪರಿಷತ್ ಸ್ಥಾನಕ್ಕೆ 19 ಆಕಾಂಕ್ಷಿಗಳು, ನಾಲ್ಕೈದು ಬಣಗಳು!
ಅಲ್ಲದೆ, ಕಾಂಗ್ರೆಸ್ ಪಕ್ಷದಿಂದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ, ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಎನ್‌ಸಿಪಿಯ ಶರದ್ ಪವಾರ್ ಸೇರಿದಂತೆ ಅನೇಕ ಪಕ್ಷಗಳ ನಾಯಕರೊಂದಿಗೆ ಅವರು ಪ್ರತ್ಯೇಕ ಸಭೆಗಳನ್ನು ಸಹ ನಿತೀಶ್ ಕುಮಾರ್ ನಡೆಸಿದ್ದಾರೆ. ಈಗ ಬಿಜೆಪಿಯೇತ ಸರ್ಕಾರ ರಚನೆಯಾಗಬೇಕು, ಆ ಪಕ್ಷವನ್ನು ಎಲ್ಲರೂ ಒಗ್ಗಟ್ಟಾಗಿ ಮಣಿಸಬೇಕು ಎಂಬ ನಿಟ್ಟಿನಲ್ಲಿ ಹಲವು ತಂತ್ರಗಾರಿಕೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಫಾರುಕ್ ಅಬ್ದುಲ್ಲ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ, ಬಿಜೆಪಿಯೇತರ ರಾಜಕೀಯ ಪಕ್ಷಗಳ ಸಂಘಟನೆ ಬಗ್ಗೆ ಪ್ರಸ್ತಾಪವನ್ನು ಮಾಡಿದ್ದಾರೆ. ಜತೆಗೆ ಬಿಜೆಪಿ ದೇಶ ವಿಭಜನೆ ಮಾಡುತ್ತಿದೆ ಎಂದು ಆರೋಪ ಮಾಡಿರುವ ಅವರು, ಆ ಸರ್ಕಾರದ ಜತೆ ಕೈಜೋಡಿಸದಂತೆಯೂ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಎಲ್ಲವೂ ಸರಿಹೋಗಲಿದೆ: ಫಾರುಕ್ ಅಬ್ದುಲ್ಲಾ
ಎಚ್.ಡಿ. ದೇವೇಗೌಡರನ್ನು ಪದ್ಮನಾಭನಗರ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಬಿಜೆಪಿಯೇತರ ರಾಜಕೀಯ ಪಕ್ಷಗಳ ರಂಗ ರಚನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. “ನಾನು ಎಲ್ಲರಿಗೆ ಸಲಹೆ ನೀಡುತ್ತೇನೆ. ಭಾರತ ವಿವಿಧತೆಯಲ್ಲಿ ಏಕತೆ ಇರುವ ದೇಶವಾಗಿದೆ. ದೇಶವನ್ನು ರಕ್ಷಣೆ ಮಾಡಬೇಕಿದೆ. 2024ರ ಲೋಕಸಭಾ ಚುನಾವಣಾ ದೃಷ್ಟಿಯಿಂದ ವಿರೋಧ ಪಕ್ಷಗಳು ಒಂದಾಗುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಜೂನ್ 12ರಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕರೆದಿರುವ ಸಭೆಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಏಕೆ ಆಹ್ವಾನಿಸಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಫಾರೂಕ್ ಅಬ್ದುಲ್ಲಾ, ಈ ಸಭೆ ಬಹಳ ಮುಖ್ಯವಾಗಿದೆ. ನಿಧಾನವಾಗಿ ಎಲ್ಲ ದಾರಿಯೂ ಸಿಗುತ್ತದೆ. ಒಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋಗುವುದು ಬಹಳ ಮುಖ್ಯವಾದ ವಿಚಾರವಾಗಿದೆ ಎಂದು ಹೇಳಿದರು.
ಕಾಶ್ಮೀರಿ ಫೈಲ್ಸ್, ಕೇರಳ ಫೈಲ್ಸ್ ಸಿನಿಮಾಗಳಂತಹ ಸಿನಿಮಾಗಳು ದೇಶವನ್ನು ವಿಭಜನೆ ಮಾಡುವುದಕ್ಕೆ ಮಾಡಿರುವ ಚಿತ್ರಗಳಾಗಿವೆ. ಭಾರತದ ವಿಭಜನೆ ಮಾಡುವ ಇಂತಹ ಚಿತ್ರಗಳಿಂದ ಸಂವಿಧಾನವೂ ವಿಭಜನೆ ಆಗುತ್ತದೆ. ಹಿಂದು, ಮುಸ್ಲಿಂ ಇರಲಿ, ಯಾವುದೇ ಸಮಾಜ, ರಾಜ್ಯಗಳೇ ಆಗಿರಲಿ, ಈ ರೀತಿಯ ಚಿತ್ರಗಳು ದೇಶಕ್ಕೆ ಮಾರಕ ಎಂದು ಫಾರೂಕ್ ಅಬ್ದುಲ್ಲಾ ಅಭಿಪ್ರಾಯಪಟ್ಟರು.
ಸೌಹಾರ್ದಯುತ ಭೇಟಿ: ಎಚ್‌ಡಿ ಕುಮಾರಸ್ವಾಮಿ
ಫಾರುಕ್ ಅಬ್ದುಲ್ಲಾ ಅವರು ನಮ್ಮ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿದ್ದಾರೆ. ಇದೊಂದು ಸೌಹಾರ್ದಯುತ ಭೇಟಿ ಅಷ್ಟೇ. ಗೌಡರ ಆರೋಗ್ಯ ವಿಚಾರಿಸಲು ಬಂದಿದ್ದರು. ಪ್ರಧಾನಿ ಆಗಿದ್ದಾಗ ಕಾಶ್ಮೀರಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಅವರು ಸ್ಮರಿಸಿಕೊಂಡಿದ್ದಾರೆ. ದೇಶದ ಹಿತದೃಷ್ಟಿಯಿಂದ ಒಳ್ಳೆಯ ವಾತಾವರಣ ಬೇಕು ಎಂಬುದು ಅವರ ಅಭಿಪ್ರಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ಮಹಾರಾಷ್ಟ್ರದಲ್ಲೂ ಟಿಪ್ಪು ವಿವಾದ; ಕೊಲ್ಹಾಪುರದಲ್ಲಿ ಹಿಂದು ಸಂಘಟನೆಗಳ ಪ್ರತಿಭಟನೆ, ಪರಿಸ್ಥಿತಿ ಉದ್ವಿಗ್ನ
ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಫಾರೂಕ್
ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು (Siddaramaiah) ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಫಾರೂಕ್ ಅಬ್ದುಲ್ಲಾ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್, ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಗೋವಿಂದರಾಜು ಇತರರಿದ್ದರು. ಈ ವೇಳೆ ಸಿದ್ದರಾಮಯ್ಯ ಅವರ ಜತೆ ಫಾರೂಕ್ ಕೆಲವು ಸಮಯ ಮಾತುಕತೆ ನಡೆಸಿದ್ದಾರೆ. ಆದರೆ, ಮಾತುಕತೆಯ ವಿಷಯ ಇನ್ನೂ ಬಹಿರಂಗಗೊಂಡಿಲ್ಲ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ
BJP Karnataka: ಸೋತು 25 ದಿನದ ನಂತರ ಅವಲೋಕನ ನಡೆಸಲಿದೆ ಬಿಜೆಪಿ!: ಗೆದ್ದ-ಸೋತವರ ಸಭೆ ಗುರುವಾರ
ನೂತನ ಶಾಸಕರ ಸಭೆಯು ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ. ಮಧ್ಯಾಹ್ನದ ನಂತರ 3.00 ಗಂಟೆಗೆ ಎಲ್ಲ ಪರಾಜಿತ ಅಭ್ಯರ್ಥಿಗಳ ಸಭೆ ಆಯೋಜನೆಯಾಗಿದೆ.
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡ ನಂತರದಲ್ಲಿ ಬಹುತೇಕ ಮೌನವಾಗಿರುವ ಬಿಜೆಪಿ ಇದೀಗ ವಿಧಾನಸಭೆ ಚುನಾವಣೆಯ ಅವಲೋಕನಕ್ಕೆ ಮುಂದಾಗಿದೆ. ನೂತನ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳ ಸಭೆಯನ್ನು ಗುರುವಾರ ಬೆಂಗಳೂರಿನಲ್ಲಿ ಆಯೋಜಿಸಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ನೂತನವಾಗಿ ಚುನಾಯಿತರಾದ 66 ಶಾಸಕರ ಮತ್ತು ಪರಾಜಿತ ಅಭ್ಯರ್ಥಿಗಳ ಸಭೆಯು ಗುರುವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ನೂತನ ಶಾಸಕರ ಸಭೆಯು ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ. ಮಧ್ಯಾಹ್ನದ ನಂತರ 3.00 ಗಂಟೆಗೆ ಎಲ್ಲ ಪರಾಜಿತ ಅಭ್ಯರ್ಥಿಗಳ ಸಭೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಎಲ್ಲ ಪರಾಜಿತ ಅಭ್ಯರ್ಥಿಗಳು ಭಾಗವಹಿಸುವಂತೆ ಅವರು ವಿನಂತಿಸಿದ್ದಾರೆ.
ಸಂಜೆ ರಾಜ್ಯ ಕೋರ್ ಕಮಿಟಿ ಸಭೆ
ಬುಧವಾರ ಸಂಜೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಗುರುವಾರ ನಡೆಯುವ ಎಲ್ಲ ಸಭೆಗಳಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ರಾಜ್ಯದ ಪ್ರಭಾರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಆರ್. ಅಶೋಕ್ ಅವರು ಭಾಗವಹಿಸಿ ಸಭೆಯಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ.
ಈ ಸಭೆಯಲ್ಲಿ ರಾಜ್ಯದ ಚುನಾವಣೆಯ ಕುರಿತು ಅವಲೋಕನ, ಕೇಂದ್ರ ಸರ್ಕಾರದ 9 ವರ್ಷಗಳ ಯೋಜನೆ, ಜುಲೈ 03 ರಂದು ನಡೆಯಲಿರುವ ಅಧಿವೇಶನ, ತೆರವಾಗಿರುವ 3 ಸ್ಥಾನಗಳ ವಿಧಾನ ಪರಿಷತ್ ಚುನಾವಣೆ ಇತ್ಯಾದಿಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Text Book: ಹೊಸ ಪಠ್ಯಕ್ರಮ ರಚನೆಗೆ ಸಮಿತಿ; ಬಿಜೆಪಿ ಅವಧಿಯ ಅಧ್ಯಾಯಗಳಿಗೆ ಕೊಕ್?
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ10 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ12 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಕರ್ನಾಟಕ23 hours ago
Fraud Case: ಬೆಳದಿಂಗಳ ಬಾಲೆಯ ಮೋಹಕ್ಕೆ ಬಿದ್ದರೇ ಸ್ವಾಮೀಜಿ? 35 ಲಕ್ಷ ರೂಪಾಯಿ ದೋಖಾ!
-
ಅಂಕಣ23 hours ago
ವಿಧಾನಸೌಧ ರೌಂಡ್ಸ್: ರೌಂಡ್ ಟೇಬಲ್ ಸ್ನೇಹಿತರು ಮತ್ತು ವಿಧಾನಸೌಧದಲ್ಲಿ ಬದಲಾಗದ 40 % ಬ್ರಾಂಡ್!
-
ಉತ್ತರ ಕನ್ನಡ20 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ24 hours ago
PhonePe : ಸುಲಭ ಸಾಲ, ಹಣಕಾಸು, ವಿಮೆ ಪಡೆಯಲು ಫೋನ್ಪೇಯಿಂದ ಹೊಸ ಅಗ್ರಿಗೇಟರ್ ಸರ್ವೀಸ್, ಏನಿದು?
-
ಪ್ರಮುಖ ಸುದ್ದಿ15 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!