Site icon Vistara News

ಡಿ.ಕೆ. ಶಿವಕುಮಾರ್‌ ನನ್ನ ವೈರಿ ಅಲ್ಲ, ಅವರ ಬಗ್ಗೆ ಸಿಂಪಥಿಯೂ ಇಲ್ಲ ಎಂದ ಕುಮಾರಸ್ವಾಮಿ

hdk dks

ಮೈಸೂರು: ಡಿ.ಕೆ.ಶಿವಕುಮಾರ್ ನನ್ನ ವೈರಿ ಅಲ್ಲ. ಹಾಗಂತ ನಂಗೆ ಅವರ ಮೇಲೆ ಸಿಂಪಥಿಯೂ ಇಲ್ಲ- ಇದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಮಾತು.
ಹುಣಸೂರಿನಲ್ಲಿ ಆಯೋಜನೆಗೊಂಡಿರುವ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರೂ ಜತೆಯಾಗಿ ವೇದಿಕೆ ಹಂಚಿಕೊಳ್ಳುತ್ತಿರುವ ಬಗ್ಗೆ ಮೈಸೂರಿನಲ್ಲಿ ಪತ್ರಕರ್ತರು ಪ್ರಶ್ನಿಸಿದಾಗ ಕುಮಾರಸ್ವಾಮಿ ಈ ಮಾತು ಹೇಳಿದರು. ಇತ್ತೀಚೆಗಷ್ಟೇ ಅವರಿಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.

ʻʻಅವರು ಒಂದು ಪಕ್ಷದ ರಾಜ್ಯಾಧ್ಯಕ್ಷ, ನಾನು ಒಂದು ಪಕ್ಷದ ನಾಯಕ. ಇದು ಇಂಡಿಯಾ- ಪಾಕಿಸ್ತಾನ ಅಲ್ಲ. ಅವರು ನನ್ನ ವೈರಿಯೂ ಅಲ್ಲʼʼ ಎಂದು ಹೇಳಿದರು ಕುಮಾರಸ್ವಾಮಿ.
ʻʻಡಿಕೆಶಿ ಕಂಡ್ರೆ ನಂಗ್ಯಾಕೆ ಸಿಂಪಥಿ? ನಂಗೆ ಅವರ ಬಗ್ಗೆ ನನಗೆ ಯಾವ ಸಿಂಪಥಿಯೂ ಇಲ್ಲʼʼ ಎಂದ ಅವರು,
ʻʻಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಸಮಾಜದ ಎಲ್ಲಾ ಮುಖಂಡರನ್ನು ಆಹ್ವಾನಿಸುತ್ತಾರೆ. ನನ್ನನ್ನೂ ಕರೆಯುತ್ತಾರೆ, ಡಿ.ಕೆ.ಶಿವಕುಮಾರ್ ಅವರನ್ನೂ ಕರೆಯುತ್ತಾರೆ. ಹಾಗಾಗಿ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಇರುತ್ತೇವೆ ಅಷ್ಟೆʼʼ ಎಂದರು ಕುಮಾರಸ್ವಾಮಿ.

ʻʻನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ಮುಖ್ಯಮಂತ್ರಿ ಆಗುವುದಕ್ಕೆ ಚಾಮುಂಡೇಶ್ವರಿ ದೇವಿಯ ದಯೆ ಬೇಕು. ಭಗವಂತನ ಆಶೀರ್ವಾದ ಬೇಕು. ಕಳೆದ ಬಾರಿ ನಾವು ಗೆದ್ದದ್ದು 37 ಶಾಸಕರು ಮಾತ್ರ. ಆದರೂ ನಾನು ಸಿಎಂ ಆಗಲಿಲ್ಲವೇ? ಈ ಬಾರಿಯೂ ತಾಯಿ ಆಶೀರ್ವಾದ ನನಗೇ ಮಾಡಿದರೆʼʼ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಈ ಮೂಲಕ ಅವರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸರಕಾರದ ಅಸ್ತಿತ್ವದ ಬಗ್ಗೆ ಮತ್ತೊಮ್ಮೆ ಸೂಚನೆ ನೀಡಿದರು.
ಈ ಇಬ್ಬರು ನಾಯಕರ ಜತೆಗೆ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಜಿ.ಟಿ.ದೇವೇಗೌಡ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ವಿಶೇಷ. ಜತೆಗೆ ಸಚಿವ ಎಸ್.ಟಿ. ಸೋಮಶೇಖರ್ ಸಂಸದ ಪ್ರತಾಪ್ ಸಿಂಹ ಅವರಿಗೂ ಆಹ್ವಾನ ನೀಡಲಾಗಿದೆ. ಹುಣಸೂರಿನ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.

ಇದನ್ನೂ ಓದಿ| ಪವರ್‌ ಪಾಯಿಂಟ್‌ with HPK | ಎಚ್‌ಡಿಕೆ- ಡಿಕೆ ಪ್ರೀತಿ ಪ್ರೇಮದ ಒಳಗುಟ್ಟು ಇದು!

Exit mobile version