ಬೆಂಗಳೂರು: ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳನ್ನು ತಡೆಯಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ‘ವಾಮ ಮಾರ್ಗ’ ಅನುಸರಿಸುತ್ತಿರುವುದು ಖಂಡನೀಯ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಕಿಡಿಕಾರಿದ್ದಾರೆ.
ರಾಮನಗರದಲ್ಲಿ ಶನಿವಾರ ಬೆಳಗ್ಗೆ ಜೆಡಿಎಸ್ ಕಾರ್ಯಕರ್ತರು ನಡೆಸಿದ ಗಲಾಟೆಗೆ ಸಂಬಂಧಪಟ್ಟಂತೆ ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿರುವ ಸಚಿವರು, ಮಾಜಿ ಮುಖ್ಯಮಂತ್ರಿ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಅಭಿವೃದ್ಧಿ ಕಾರ್ಯಕ್ಕೆ ತಡೆಯೊಡ್ಡಲಾಗುತ್ತಿದೆ ಎಂದು ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನಪರ ಕಾರ್ಯಕ್ಕೆ ಬೆಂಬಲಿಸಿ- ಸಚಿವ
“ಮಾನ್ಯ ಕುಮಾರಸ್ವಾಮಿ ಅವರೇ, ಅಧಿಕಾರ ಬರುತ್ತದೆ, ಹೋಗುತ್ತದೆ. ಇದ್ದಷ್ಟು ದಿನ ಎಷ್ಟು ಜನಪರ ಕೆಲಸ ಮಾಡಿದ್ದೇವೆ ಎಂಬುದಷ್ಟೇ ಶಾಶ್ವತವಾಗಿ ಉಳಿಯುತ್ತದೆ. ‘ಅಧಿಕಾರವೂ ತಪ್ಪಬಾರದು, ಅಭಿವೃದ್ಧಿಯೂ ಆಗಬಾರದು’ ಎಂಬ ಸಿದ್ಧಾಂತಕ್ಕೆ ಕಟ್ಟುಬೀಳುವ ಬದಲು ನಾವು ಮಾಡುತ್ತಿರುವ ಜನಪರ ಕಾರ್ಯಗಳನ್ನು ಬೆಂಬಲಿಸಿ. ನಮ್ಮ ಸರ್ಕಾರದ ಅವಧಿಯಲ್ಲಿ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾರ್ಯ ಜಿಲ್ಲೆಯಲ್ಲಿ ನಡೆಯುತ್ತಿವೆ ಎಂಬುದು ನಿಮಗೂ ತಿಳಿದಿದೆ. ಆತ್ಮಸಾಕ್ಷಿಗೆ ವಿರುದ್ಧವಾದ ದ್ವೇಷದ ರಾಜಕಾರಣ ಬೇಡ” ಎಂದು ಸಚಿವ ಅಶ್ವತ್ಥನಾರಾಯಣ ಆಕ್ರೋಶ ಹೊರಹಾಕಿದ್ದಾರೆ.
ಏನಿದು ಪ್ರಕರಣ?
ರಾಮನಗರದ ೫ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಭೂಮಿ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಉನ್ನತ ಶಿಕ್ಷಣ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಉದ್ಘಾಟಕರಾಗಿದ್ದರು. ವಿಧಾನ ಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್ ಪರಿಷತ್ ಸದಸ್ಯರ ಖೋಟಾದಲ್ಲಿ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಎಂದು ಆಮಂತ್ರಣ ಪತ್ರದಲ್ಲಿ ಹಾಕಲಾಗಿದೆ. ಈ ಬಗ್ಗೆ ಗರಂ ಆಗಿದ್ದ ಮಾಜಿ ಮುಖ್ಯಮಂತ್ರಿ, ರಾಮನಗರ ಶಾಸಕ ಎಚ್.ಡಿ. ಕುಮಾರಸ್ವಾಮಿ, “ನನ್ನ ಹಕ್ಕುಚ್ಯುತಿ ಆಗಿದೆ. ನನಗೆ ಆಹ್ವಾನ ನೀಡಲಾಗಿಲ್ಲ” ಎಂದು ಆರೋಪಿಸಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ಸಂಬಂಧ ಜೆಡಿಎಸ್ ಕಾರ್ಯಕರ್ತರು ಬೆಳಗ್ಗೆ ಭೂಮಿ ಪೂಜೆ ನಡೆಯುವ ಸ್ಥಳಗಳಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಲ್ಲದೆ, ಸಿ.ಪಿ.ಯೋಗೇಶ್ವರ್ ಕಾರಿನ ಮೇಲೆ ಕಲ್ಲು ಹಾಗೂ ಮೊಟ್ಟೆ ಎಸೆಯಲಾಗಿತ್ತು. ಅಲ್ಲದೆ, ಅವರ ಕಾರಿಗೆ ಘೇರಾವ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಇಡೀ ಕಾರ್ಯಕ್ರಮವನ್ನು ರದ್ದುಪಡಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.
ಇದನ್ನೂ ಓದಿ | ಗುದ್ದಲಿ ಪೂಜೆ ಗದ್ದಲ | ಬಾರದ ಎಚ್‌ಡಿಕೆ, ಸಿಡಿದೆದ್ದ ಜೆಡಿಎಸ್; ಸಿಪಿವೈ ಕಾರಿಗೆ ಕಲ್ಲು, ಮೊಟ್ಟೆ ಎಸೆತ, ರಾಮನಗರ ಉದ್ರಿಕ್ತ