ರಾಮನಗರ: ಶ್ರೀರಾಮ ತಂಗಿದ ನಾಡಾಗಿರುವ ರಾಮನಗರ ಜಿಲ್ಲೆಯನ್ನು (Ramanagar District) ಬೆಂಗಳೂರು ದಕ್ಷಿಣ ಜಿಲ್ಲೆ (Bangalore South District) ಎಂದು ಮರುನಾಮಕರಣ ಮಾಡಬಾರದು ಎಂದು ಬೆಂಗಳೂರು ಗ್ರಾಮಾಂತರ (Bangalore Rural) ಕ್ಷೇತ್ರದ ಸಂಸದ ಡಾ. ಸಿ ಎನ್ ಮಂಜುನಾಥ್ (Dr CN Manjunath) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡೋದು ಸಮಂಜಸವಲ್ಲ. ರಾಮನಗರಕ್ಕೆ ಭಾವನಾತ್ಮಕ, ಧಾರ್ಮಿಕ, ಐತಿಹಾಸಿಕ ಹಾಗೂ ಪೌರಾಣಿಕ ಇತಿಹಾಸವಿದೆ. ಶ್ರೀರಾಮ ರಾಮಗಿರಿಯಲ್ಲಿ ತಂಗಿರುವ ಇತಿಹಾಸವಿದೆ. ಕ್ಲೋಸ್‌ಪೇಟೆಗೆ ರಾಮನಗರವೆಂದು ಮರುನಾಮಕರಣ ಮಾಡಲಾಗಿದೆ. ರಾಮನಗರವು ರೇಷ್ಮೆ ನಾಡೆಂದೇ ಪ್ರಸಿದ್ದಿಯಾಗಿದೆ. ಇಲ್ಲಿರೋ ರಾಮನಗರ, ಚನ್ನಪಟ್ಟಣ ಎಲ್ಲಾ ಜಾಗಗಳು ಆಯಾ ಹೆಸರಿನಿಂದಲೇ ಮಹತ್ವ ಪಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ಬೆಂಗಳೂರು ದಕ್ಷಿಣ ತಾಲ್ಲೂಕು ಅಸ್ತಿತ್ವದಲ್ಲಿದ್ದು ಬೆಂಗಳೂರು ನಗರ ಜಿಲ್ಲೆಗೆ ಸೇರಿರುತ್ತದೆ. ಹೀಗಿರುವಾಗ ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿದರೆ ಹೆಚ್ಚು ಗೊಂದಲ ಸೃಷ್ಟಿಯಾಗುತ್ತದೆ. ಅಲ್ಲದೆ ಮುಂಬರುವ ದಿನಗಳಲ್ಲಿ ಕೋಲಾರ ಜಿಲ್ಲೆಗೆ ಬೆಂಗಳೂರು ಪೂರ್ವ ಜಿಲ್ಲೆಯೆಂದು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆಯೆಂದು ಮರುನಾಮಕರಣ ಮಾಡುವ ಪ್ರಸ್ತಾವನೆಗಳು ಬಂದು ಇನ್ನಷ್ಟು ಗೊಂದಲ ಸೃಷ್ಟಿಸಲಿವೆ ಎಂದಿದ್ದಾರೆ.
ರಾಮನಗರ ಜಿಲ್ಲೆಯು ರೈತರ ಜಿಲ್ಲೆಯಾಗಿ ಉಳಿಯಬೇಕೇ ಹೊರತು ರಿಯಲ್ ಎಸ್ಟೇಟ್ ಬಿಲ್ಡರ್‌ಗಳ ತಾಣವಾಗಬಾರದು. ರೈತರ ಬಾಳು ಹಸನಾಗಬೇಕಾದರೆ ಭೂಮಿಯ ಬೆಲೆ ಅಧಿಕವಾಗುವುದಕ್ಕಿಂತ ರೈತರು ಬೆಳೆದ ಬೆಳೆಯ ಬೆಲೆಯು ಅಧಿಕವಾಗಬೇಕು. ದಯವಿಟ್ಟು ಸನ್ಮಾನ್ಯ ಮುಖ್ಯಮಂತ್ರಿಯವರು ಈ ಪ್ರಸ್ತಾವನೆಯನ್ನು ತಿರಸ್ಕರಿಸಬೇಕಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಅವರು ಮನವಿ ಮಾಡಿದ್ದಾರೆ.
ಬ್ರಾಂಡ್ ರಾಮನಗರ ಬೆಳೆಸಿ
ಇಂದು ಮಾಗಡಿಯಲ್ಲಿ ಮಾತನಾಡಿರುವ ಸಂಸದ ಮಂಜುನಾಥ್, ಹೆಸರು ಬದಲಾವಣೆಗೆ ತಮ್ಮ ಖಂಡತುಂಡವಾದ ವಿರೋಧವನ್ನು ವ್ಯಕ್ತಪಡಿಸಿದರು. ಯಾವುದೇ ಡಿಕ್ಷನರಿ ನೋಡಿದ್ರೂ ರಾಮನಗರಕ್ಕಿಂತ ಒಳ್ಳೆ ಪದ ಬೇರೊಂದು ಸಿಗೋದಿಲ್ಲ. ಆ ಹೆಸರಿಗೆ ಭಾವನಾತ್ಮಕ, ಧಾರ್ಮಿಕ, ಪೌರಾಣಿಕ ಸಂಬಂಧ ಇದೆ. ಕೇವಲ ಹೆಸರು ಬದಲಾವಣೆ ಮಾಡೋದ್ರಿಂದ ಅಭಿವೃದ್ಧಿ ಆಗಲ್ಲ. ಈ ರೀತಿ ಮಾಡೋದಾದ್ರೆ ಬ್ರಾಂಡ್ ರಾಮನಗರ ಅಂತ ಡೆವಲಪ್ ಮಾಡಿ ಎಂದು ಅವರು ಹೇಳಿದ್ದಾರೆ.
ಬೆಂಗಳೂರು ಬೃಹತ್ತಾಗಿ ಬೆಳೆದು ಅಲ್ಲೇ ಸಾಕಷ್ಟು ಮೂಲಭೂತ ಸಮಸ್ಯೆಗಳಿವೆ. ಭೂಮಿಗೆ ಬೆಲೆ ಜಾಸ್ತಿ ಆದರೆ ಪ್ರಯೋಜನ ಇಲ್ಲ. ಭೂಮಿಯಲ್ಲಿ ಬೆಳೆಯುವ ಬೆಳೆಗೆ ಬೆಲೆ ಜಾಸ್ತಿ ಆಗಬೇಕು. ಯಾವ ಉದ್ದೇಶಕ್ಕೆ ಈ ರೀತಿ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ. ಬದಲಾವಣೆ ಮಾಡಬಾರದು ಅಂತ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಇದು ರೇಷ್ಮೆ ನಾಡಾಗಿಯೇ ಉಳಿಯಬೇಕು. ರೈತರ ಜಿಲ್ಲೆಯಾಗಿಯೇ ಉಳಿಯಬೇಕು. ಬದಲಾವಣೆ ವೈಜ್ಞಾನಿಕವಾಗಿಯೂ ಸಮಂಜಸ ಅಲ್ಲ ಎಂದಿದ್ದಾರೆ ಮಂಜುನಾಥ್.
ʼಜಿಲ್ಲೆ ಮರು ನಾಮಕರಣಕ್ಕೆ ಹಾಸನದವರದು ಮಾತ್ರ ವಿರೋಧʼ ಎಂಬ ಶಾಸಕ ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ʼನಾವು 40 ವರ್ಷದಿಂದ ಬೆಂಗಳೂರಲ್ಲೆ ಇದ್ದೇವೆ. ಈ ಹೇಳಿಕೆ ಕೊಟ್ಟವರೇ ಬೆಂಗಳೂರಿನಲ್ಲಿ ಇರಲಿಲ್ಲ. ಹಿಂದೆ ರಾಮನಗರ ಬೆಂಗಳೂರು ಗ್ರಾಮಾಂತರ ಜಿಲ್ಲೆಯೆ ಆಗಿತ್ತು. ಒಂದು ಸರಿಯಾದ ಮೆಡಿಕಲ್ ಕಾಲೇಜು ಮಾಡಲು ಆಗಿಲ್ಲ. ವೈದ್ಯರ ನೇಮಕ ಮಾಡಲು ಆಗಿಲ್ಲ. ಮೊದಲು ಅದನ್ನು ಮಾಡಿʼ ಎಂದು ಬಾಲಕೃಷ್ಣಗೆ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: DK Shivakumar: ರಾಮನಗರ ಜಿಲ್ಲೆ ಹೆಸರು ಬದಲಾವಣೆ; ಡಿಕೆಶಿ- ಎಚ್‌ಡಿಕೆ ನಡುವೆ ಮತ್ತೊಂದು ಮಹಾಸಮರಕ್ಕೆ ಮುನ್ನುಡಿ!