Site icon Vistara News

Death in stage | ನಾಟಕ ಆಡುವಾಗಲೇ ಕುಸಿದು ಬಿದ್ದು ಪ್ರಾಣ ಬಿಟ್ಟ ಕಲಾವಿದ: ಸಾರ್ಥಕಿ ಬದುಕು ಸಾರ್ಥಕವಾಯ್ತಾ?

Drama nanjayya

ಮಂಡ್ಯ: ಮೊದಲೆಲ್ಲ ಒಬ್ಬ ಕಲಾವಿದ ರಂಗದಲ್ಲಿ ಪಾತ್ರ ನಿರ್ವಹಣೆ ಮಾಡುತ್ತಿದ್ದಾಗಲೇ ಪ್ರಾಣ ಕಳೆದುಕೊಂಡರೆ ಅದೊಂದು ಸಾರ್ಥಕ ಬದುಕು, ಕಲೆಗೆ ನಿಜವಾಗಿ ಸಮರ್ಪಿತವಾದ ಬದುಕು ಎಂದೆಲ್ಲ ವ್ಯಾಖ್ಯಾನ ಮಾಡಲಾಗುತ್ತಿತ್ತು. ಕಲಾ ಸರಸ್ವತಿಯ ಸೇವೆ ಮಾಡುತ್ತಿರುವಾಗಲೇ ಉಸಿರು ನಿಲ್ಲುವುದೇ ಕಲಾ ಜೀವನದ ಪರಮ ವೈಭವ ಎಂದೆಲ್ಲ ಹೇಳಲಾಗುತ್ತಿತ್ತು. ಅದರೆ, ಈಗ ವೇದಿಕೆಯಲ್ಲೇ ಪ್ರಾಣ ಕಳೆದುಕೊಳ್ಳುವ ಘಟನೆಗಳು (Death in stage) ಹೆಚ್ಚುತ್ತಿದ್ದು ಆತಂಕ ಮೂಡಿಸಿದೆ. ಅದರಲ್ಲೂ ಸಣ್ಣ ವಯಸ್ಸಿನ ಕಲಾವಿದರು ಪಾತ್ರ ನಿರ್ವಹಣೆ ಮಾಡುತ್ತಲೇ ಜೀವ ಚೆಲ್ಲುವುದು ನಿಜಕ್ಕೂ ಬೇಸರ ಮೂಡಿಸುತ್ತಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಂಡೂರಿನಲ್ಲಿ ಇಂಥಹುದೇ ಘಟನೆಯೊಂದು ನಡೆದಿದೆ. ಬಂಡೂರಿನ ಬಸವನಗುಡಿಯಲ್ಲಿ ನಡೆಯುತ್ತಿದ್ದ ನಾಟಕದ ವೇಳೆ ಸಾರ್ಥಕಿ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದರೊಬ್ಬರು ರಂಗದಲ್ಲೇ ಕುಸಿದು ಅಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಸಾರ್ಥಕಿ ಪಾತ್ರದಲ್ಲಿದ್ದ ನಂಜಯ್ಯ ಕುಸಿದು ಬಿದ್ದಾಗ
ಸಾರ್ಥಕಿ ಪಾತ್ರದಲ್ಲಿ ನಂಜಯ್ಯ ಕುಸಿದು ಬೀಳುವ ಮುನ್ನ

ದುಗ್ಗನ ಹಳ್ಳಿ ಗ್ರಾಮದ ನಂಜಯ್ಯ (46) ಸಾವಿಗೀಡಾದ ಕಲಾವಿದ. ಅವರು ಕುರುಕ್ಷೇತ್ರ ಅಥವಾ ಕೃಷ್ಣ ಸಂಧಾನ ನಾಟಕದಲ್ಲಿ ಸಾರ್ಥಕಿ ಪಾತ್ರ ನಿರ್ವಹಿಸುತ್ತಿದ್ದರು. ರಂಗದಲ್ಲಿ ಮಾತನಾಡುತ್ತಿದ್ದ ಅವರು ಒಂದೆರಡು ಹೆಜ್ಜೆ ಮುಂದಿಟ್ಟು ಬಳಿಕ ಅಲ್ಲೇ ಕುಸಿದು ಬೀಳುತ್ತಾರೆ. ಕೂಡಲೇ ಪ್ರೇಕ್ಷಕರು ವೇದಿಕೆಗೆ ಧಾವಿಸಿ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸುತ್ತಾರಾದರೂ ಅಷ್ಟು ಹೊತ್ತಿಗೆ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಕಲಾವಿದನ‌ ಸಾವಿನ ನಂತರ ಸಹ ಕಲಾವಿದರು ನಾಟಕ‌ ಆಡುವುದನ್ನು ನಿಲ್ಲಿಸಿದರು.

ಕೆಲವೇ ದಿನಗಳ ಹಿಂದೆ ಗುರುವಪ್ಪ ಬಾಯಾರು ಎಂಬ ಕಲಾವಿದರು ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸುತ್ತಲೇ ರಂಗಸ್ಥಳದಿಂದ ಕೆಳಗೆ ಉರುಳಿ ಪಾಣ ಕಳೆದುಕೊಂಡಿದ್ದರು.

ಇದನ್ನೂ ಓದಿ | ರಂಗಸ್ಥಳದಲ್ಲೇ ಹೃದಯಾಘಾತ, ಯಕ್ಷಗಾನ ಕಲಾವಿದ ಗುರುವಪ್ಪ ಬಾಯಾರು ನಿಧನ

Exit mobile version