ಮೈಸೂರು: ನಾಡಹಬ್ಬ ಮೈಸೂರು ದಸರಾ ಚಾಲನೆ ನೀಡುವುದಕ್ಕಾಗಿ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಆಗಮಿಸಿದ್ದಾರೆ. ಮೈಸೂರು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರಪತಿ ಮುರ್ಮು ಅವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು. ೯.೪೫ಕ್ಕೆ ದ್ರೌಪದಿ ಮುರ್ಮು ಅವರನ್ನು 412ನೇ ವರ್ಷದ ಐತಿಹಾಸಿಕ ದಸರಾಗೆ ಚಾಲನೆ ನೀಡಲಿದ್ದಾರೆ.
ದಸರಾ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ರಾಷ್ಟ್ರಪತಿಗಳಿಂದ ಉದ್ಘಾಟನೆಗೊಳ್ಳುತ್ತಿದೆ. ಬೆಳಗ್ಗೆ 9.45ರಿಂದ 10.5ರ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ನಡೆಯಲಿದೆ. 9.30ಕ್ಕೆ ಚಾಮುಂಡಿ ಬೆಟ್ಟಕ್ಕೆ ರಾಷ್ಟ್ರಪತಿಗಳು ಆಗಮಿಸಿದ್ದು, ಪೂಜೆ ಮತ್ತು ಆದಿವಾಸಿಗಳೊಂದಿಗೆ ಫೋಟೋ ಶೂಟ್ ನಡೆಯುತ್ತಿದೆ. ರಾಷ್ಟ್ರಪತಿಗಳು 10.45ಕ್ಕೆ ಮೈಸೂರಿನಿಂದ ಧಾರವಾಡಕ್ಕೆ ನಿರ್ಗಮಿಸಲಿದ್ದಾರೆ.
ವೇದಿಕೆಯಲ್ಲಿ 9 ಗಣ್ಯರು ಸೇರಿ 13 ಮಂದಿಗೆ ಮಾತ್ರ ಅವಕಾಶವಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರ್‌ಚದ್ ಗೆಹ್ಲೋಟ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಷಿ, ಸಿಎಂ ಬಸವರಾಜ್ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಸಚಿವರಾದ ಸುನೀಲ್ ಕುಮಾರ್, ಶಶಿಕಲಾ ಜೊಲ್ಲೆ ಸೇರಿದಂತೆ 13 ಜನರಿಗೆ ಮಾತ್ರ ವೇದಿಕೆಯಲ್ಲಿ ಇರಲಿದ್ದಾರೆ. ವೇದಿಕೆ ಮುಂಭಾಗದಲ್ಲಿ 1400 ಜನರಿಗೆ ದಸರಾ ಉದ್ಘಾಟನೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ರಾಷ್ಟ್ರಪತಿ ಆಗಮನ ಹಿನ್ನಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಪೊಲೀಸರಿಂದ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಇತರ ಉದ್ಘಾಟನೆಗಳು
ಸಚಿವ ಮುರುಗೇಶ್ ಆರ್.ನಿರಾಣಿ ಮಧ್ಯಾಹ್ನ 12 ಗಂಟೆಗೆ ವಿಜ್ಞಾನ ಭವನದಲ್ಲಿ ಕೈಗಾರಿಕಾ ವಿಚಾರ ಸಂಕೀರಣವನ್ನು, ನಟ ಡಾ.ಶಿವರಾಜ್ ಕುಮಾರ್ ಮಧ್ಯಾಹ್ನ 12ಕ್ಕೆ ಕಲಾಮಂದಿರದಲ್ಲಿ ಚಲನಚಿತ್ರೋತ್ಸವವನ್ನು, ಸಚಿವ ಮುನಿರತ್ನ ಮಧ್ಯಾಹ್ನ 12.30ಕ್ಕೆ ಕುಪ್ಪಣ್ಣ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನವನ್ನು, ಸಚಿವ ಎಸ್.ಟಿ.ಸೋಮಶೇಖರ್ ಮಧ್ಯಾಹ್ನ 1 ಗಂಟೆಗೆ ಭಾರತ್ ಸ್ಕೌಟ್ & ಗೈಡ್ಸ್ ಮೈದಾನದಲ್ಲಿ ಆಹಾರ ಮೇಳವನ್ನು, ಮಧ್ಯಾಹ್ನ 3.30ಕ್ಕೆ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿಯನ್ನು, ಸಚಿವ ಆನಂದ್ ಸಿಂಗ್ ಸಂಜೆ 4 ಗಂಟೆಗೆ ಕನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದಲ್ಲಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ಇದನ್ನೂ ಓದಿ | ಇಂದು ಹುಬ್ಬಳ್ಳಿ, ಧಾರವಾಡಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು