ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣದ ಫಲವಾಗಿ ಜಾರಿ ನಿರ್ದೇಶನಾಲಯವು (ಇ.ಡಿ.) ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮುಖಂಡ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಕೊಟ್ಟಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡರು, ದೇಶಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲೂ ಪ್ರತಿಭಟನೆ ಜೋರಾಗಿದ್ದು, ಲಾಲ್‌ಬಾಗ್ ಮುಖ್ಯ ದ್ವಾರದ ಬಳಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಜಮಾಯಿಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ (National herald case) ತಮ್ಮ ಪಕ್ಷದ ವರಿಷ್ಠರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದು ಕಾಂಗ್ರೆಸ್ ನಾಯಕರ ಆರೋಪ.
ಬಿಜೆಪಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ಕಾರ್ಯಕರ್ತರು ʼʼನಾವು ಬಿಜೆಪಿಯ ಕುತಂತ್ರಕ್ಕೆ ಬಗ್ಗುವುದಿಲ್ಲ. ನಮ್ಮ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ವಿರೋಧ ಪಕ್ಷಗಳನ್ನ ನಾಶ ಮಾಡುವುದೇ ಬಿಜೆಪಿ ಸರ್ಕಾರದ ಉದ್ದೇಶʼʼ ಎಂದು ಕಿಡಿಕಾರಿದರು. ಲಾಲ್‌ಬಾಗ್ ಮುಖ್ಯದ್ವಾರದಿಂದ ಶಾಂತಿನಗರದ ಇಡಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದೆ. ಇನ್ನೊಂದೆಡೆ ಕರ್ನಾಟಕ ಕಾಂಗ್ರೆಸ್ ಕಿಸಾನ್ ಘಟಕದ ವತಿಯಿಂದ ಬಾರುಕೋಲು ಚಳವಳಿ ನಡೆಯುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು “ಹೊಡಿ ಹೊಡಿ ಮೋದಿ ಓಡ್ಸಿʼʼ ಎಂದು ಕೂಗುತ್ತ ಪ್ರತಿಭಟಿಸಿದರು.
ಇದನ್ನೂ ಓದಿ | ಇಂದು ರಾಹುಲ್ ಗಾಂಧಿ ಇಡಿ ವಿಚಾರಣೆ: ಕಾಲ್ನಡಿಗೆಯಲ್ಲಿ ಹೊರಟ ಕಾಂಗ್ರೆಸಿಗರು ಪೊಲೀಸ್ ವಶಕ್ಕೆ
ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಮಾಜಿ ಸಚಿವ ಕೆ.ಜೆ. ಜಾರ್ಜ್, ಆರ್.ವಿ. ದೇಶಪಾಂಡೆ, ಶಾಸಕರಾದ ಹ್ಯಾರಿಸ್, ರಂಗನಾಥ್, ಎಂಎಲ್ಸಿ ಯು.ಬಿ. ವೆಂಕಟೇಶ್ ಮತ್ತಿತರ ಮುಖಂಡರು ಭಾಗವಹಿಸಿದ್ದರು. ಲಾಲ್ ಬಾಗ್ ನಿಂದ ಪ್ರತಿಭಟನೆ ಆರಂಭವಾಗಲಿರುವ ಹಿನ್ನೆಲೆ ಸ್ಥಳದಲ್ಲಿ 200 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ..
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಮ್ಮ ಆಟ ತೋರಿಸುತ್ತೇವೆ: ಬಿ.ಕೆ ಹರಿಪ್ರಸಾದ್
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಮ್ಮ ಆಟ ತೋರಿಸುತ್ತೇವೆ ಅಂತ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಸುಳ್ಳು ಆಪಾದನೆ ಮಾಡಿ ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ತಲೆಕೆಟ್ಟ ಸುಬ್ರಹ್ಮಣ್ಯ ಸ್ವಾಮಿ ಕಂಪ್ಲೆಂಟ್ ಕೊಟ್ಟಿದ್ರು. ಇಂತಹ ಬಹಳ ಸ್ವಾಮಿಗಳನ್ನು ನೋಡಿದ್ದು, ಇವ್ರನ್ನ ಬಳಸಿಕೊಂಡು ಸೋನಿಯಾ, ರಾಹುಲ್ ಗೆ ಕಿರುಕುಳ ಕೊಡುತ್ತಿದ್ದಾರೆ. ಕಾಂಗ್ರೆಸ್ ನಿಮ್ಮ ಹಾಗೇ ಹೆದರುವ ಪಕ್ಷವಲ್ಲ. ಈ ಹಿಂದೆ ಇಂದಿರಾಗಾಂಧಿ ಅವರನ್ನು ಮುಟ್ಟಿದಾಗ ಏನ್ ಆಯ್ತು? ಎಚ್ಚರಿಕೆ ಕೊಡುತ್ತಿದ್ದೇವೆ, ಇದೀಗ ಸೋನಿಯಾ, ರಾಹುಲ್ ಮುಟ್ಟಿದ್ರೆ ಏನ್ ಆಗುತ್ತೆ ಅಂತ ತೋರಿಸುವುದಕ್ಕೆ ಸೇರಿದ್ದೇವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಅವಾಗ ನಾವು ತೋರಿಸುತ್ತೇವೆ ಅಂತ ಎಚ್ಚರಿಕೆ ನೀಡಿದ್ರು.
ಎಲೆಕ್ಷನ್ ಹತ್ತಿರ ಬಂದಾಗ ಬಿಜೆಪಿಯವ್ರ ಕಿರುಕುಳ ಶುರು: ಎಂ. ಬಿ. ಪಾಟೀಲ್
2015 ರಲ್ಲೇ ಈ ಕೇಸ್ ಮುಕ್ತಾಯ ಆಗಿದ್ದು, ಈಗ ಚುನಾವಣೆಗೆ ಎರಡು ವರ್ಷಗಳು ಇದೆ ಎನ್ನುವಾಗ ಮತ್ತೆ ಕಿರುಕುಳ ಕೊಡುತ್ತಿದ್ದಾರೆ.. ಸೋನಿಯಾ, ರಾಹುಲ್ , ಕಾಂಗ್ರೆಸ್ ಕಾರ್ಯಕರ್ತರು ಈ ಗೊಡ್ಡು ಬೆದರಿಕೆಗೆ ಹೆದರಲ್ಲ. ಮೋದಿ ಅವರ ಬಿಜೆಪಿ ಸರ್ಕಾರದ ಬೆದರಿಕೆ , ಆತ್ಮ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ. ಒಗ್ಗಟ್ಟಿನಿಂದ ಈ ಷಡ್ಯಂತ್ರದ ವಿರುದ್ಧ ರಾಷ್ಟ್ರವ್ಯಾಪಿ ಹೋರಾಟ ಮಾಡುತ್ತೇವೆ ಅಂತ ಎಂ ಬಿ ಪಾಟೀಲ್ ಕಿಡಿಕಾರಿದ್ರು.
ಪ್ರತಿಭಟನೆ ಎಫೆಕ್ಟ್ ಟ್ರಾಫಿಕ್ ಕಿರಿಕಿರಿ
ಇತ್ತ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದು, ಲಾಲ್ ಬಾಗ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗ್ತಿದೆ. ಇತ್ತ ಟ್ರಾಫಿಕ್ ಕ್ಲಿಯರ್ ಮಾಡಲು ಟ್ರಾಫಿಕ್ ಪೊಲೀಸ್ರು ಹರಸಾಹಸ ಪಡುತ್ತಿದ್ದಾರೆ. ಪ್ರತಿಭಟನೆ ರ‍್ಯಾಲಿ ಬಿಸಿಯಿಂದಾಗಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುವುದಂತೂ ಸತ್ಯ..