Site icon Vistara News

PFI Banned | ಪಿಎಫ್‌ಐ ನಿಷೇಧದಿಂದ ಬಿಜೆಪಿಗಿಂತಲೂ ಕಾಂಗ್ರೆಸ್‌ಗೇ ಖುಷಿ: ಕಾರಣವೇನು? ಪರಿಣಾಮವೆಷ್ಟು?

PFI Ban

ರಮೇಶ ದೊಡ್ಡಪುರ ಬೆಂಗಳೂರು
ದೇಶದ ಭದ್ರತೆ, ಸಮಗ್ರತೆಯನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಹಾಗೂ ಅದಕ್ಕೆ ಸಂಬಂಧಿಸಿದ ಸಂಘಟನೆಗಳನ್ನು ಐದು ವರ್ಷ ನಿಷೇಧ ಮಾಡಿದೆ. ಮೇಲ್ನೋಟಕ್ಕೆ ಬಿಜೆಪಿಯಲ್ಲಿ ಈ ಕುರಿತು ಹೆಚ್ಚು ಸಂಸಸ ವ್ಯಕ್ತವಾಗುತ್ತಿದೆ. ಆದರೆ ಅಸಲಿಗೆ ಈ ನಿಷೇಧದಿಂದ ಒಳಗೊಳಗೇ ಹೆಚ್ಚು ಖುಷಿ ಪಡುತ್ತಿರುವುದು ಕಾಂಗ್ರೆಸ್‌ ನಾಯಕರು!

ಕಾಂಗ್ರೆಸ್‌ ಎಂದ ಕೂಡಲೆ, ಮುಸ್ಲಿಂ ಮತ ಬ್ಯಾಂಕ್‌ ಹೊಂದಿರುವ ಪಕ್ಷ ಎಂದು ಬಿಜೆಪಿ ಆರೋಪಿಸುತ್ತದೆ. ಇದೇ ಕಾರಣಕ್ಕೆ ಮುಸ್ಲಿಂ ತುಷ್ಟೀಕರಣದಲ್ಲಿ ಕಾಂಗ್ರೆಸ್‌ ತೊಡಗುತ್ತದೆ ಎಂಬ ಮಾತು ಕೇಳಿಬರುತ್ತದೆ. ಆದರೆ ಈ ಮುಸ್ಲಿಂ ಮತ ಬ್ಯಾಂಕ್‌ಗೆ ಲಗ್ಗೆ ಇಟ್ಟಿದ್ದೇ ಈ ಪಿಎಫ್‌ಐ ಹಾಗೂ ಅದರ ರಾಜಕೀಯ ಮುಖವಾಣಿ ಎನ್ನಲಾಗುವ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಮೂಲಕ.

೨೦೧೩ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಡಿಪಿಐನ 23 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇವರಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದ 22 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಆದರೆ ಕಾಂಗ್ರೆಸ್‌ ಹಿರಿಯ ನಾಯಕ ತನ್ವೀರ್‌ ಸೇಠ್‌ ವಿರುದ್ಧ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಡಿಪಿಐ ಪ್ರಬಲ ಪೈಪೋಟಿ ನೀಡಿತ್ತು. ತನ್ವೀರ್‌ ಸೇಟ್‌ 38,037 ಮತ ಪಡೆದರೆ, ಎಸ್‌ಡಿಪಿಐ ಅಭ್ಯರ್ಥಿ ಕೆ.ಎಚ್‌. ಅಬ್ದುಲ್‌ ಮಜೀದ್‌ 29,667 ಮತ ಪಡೆದರು. ಕೇವಲ 8,370 ಮತಗಳಿಂದ ಸೋತಿದ್ದರು. ಜೆಡಿಎಸ್‌ ಹಾಗೂ ಬಿಜೆಪಿ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದವು. ಒಟ್ಟಾರೆಯಾಗಿ ರಾಜ್ಯದಲ್ಲಿ ಚಲಾವಣೆಯಾದ ಮತಗಳಲ್ಲಿ ಎಸ್‌ಡಿಪಿಐ ಪಡೆದದ್ದು ಕೇವಲ 0.31% ಮತಗಳು. ಆದರೆ ತಾನು ಸ್ಪರ್ಧೆ ಮಾಡಿದ್ದ 23 ಕ್ಷೇತ್ರಗಳಲ್ಲಿ 3.27% ಮತ ಪಡೆಯಲು ಸಫಲವಾಗಿತ್ತು.

2018ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ ಮೂರು ಕ್ಷೇತ್ರದಲ್ಲಿ ಎಸ್‌ಡಿಪಿಐ ಸ್ಪರ್ಧೆ ಮಾಡಿತು. ಎರಡು ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡರೂ ತಾನು ಸ್ಪರ್ಧಿಸಿದ ಮೂರು ಕ್ಷೇತ್ರಗಳಲ್ಲಿ 10. 50% ಮತ ಗಳಿಸಿತು. ಈ ಬಾರಿ ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ಸ್ಥಾನ ಪಡೆಯಿತು. ಬಿಜೆಪಿಯ ಉದಯ್‌ ಬಿ. ಗರುಡಾಚಾರ್‌ 44. 46% ಮತ ಪಡೆದರೆ, ಕಾಂಗ್ರೆಸ್‌ನ ಆರ್‌. ವಿ. ದೇವರಾಜ್‌ 38.30% ಮತ ಗಳಿಸಿ ಸೋತರು. ಆದರೆ ಮೂರನೇ ಸ್ಥಾನ ಪಡೆದ ಎಸ್‌ಡಿಪಿಐ ಅಭ್ಯರ್ಥಿ ಮುಜಾಹಿದ್‌ ಪಾಷಾ 9.08% ಮತ ಗಳಿಸಿದರು. ಕಾಂಗ್ರೆಸ್‌ನಿಂದ ಎಸ್‌ಡಿಪಿಐ ಈ ಪ್ರಮಾಣದಲ್ಲಿ ಮತ ಕಿತ್ತುಕೊಳ್ಳದೇ ಇದ್ದರೆ ಕಾಂಗ್ರೆಸ್‌ ಅಭ್ಯರ್ಥಿ ಜಯಗಳಿಸುತ್ತಿದ್ದರು ಎಂದು ರಾಜಕೀಯ ವಿಶ್ಲೇಷಣೆ ನಡೆಯಿತು.

ಎಸ್‌ಡಿಪಿಐ ಎಲ್ಲೆಲ್ಲಿ ಚುನಾವಣೆಗೆ ಸ್ಪರ್ಧಿಸಿತ್ತೋ ಅದೆಲ್ಲವೂ ಬಹುತೇಕ ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳೇ ಆಗಿರುತ್ತವೆ. ಮುಸ್ಲಿಂ ಮತಗಳು ಕಾಂಗ್ರೆಸ್‌ ವೋಟ್‌ ಬ್ಯಾಂಕ್‌ ಆಗಿರುವುದರಿಂದ ಅದೇ ಮತಗಳನ್ನು ಎಸ್‌ಡಿಪಿಐ ಪಡೆಯುತ್ತದೆ. ಮೇಲ್ನೋಟಕ್ಕೆ ಎಸ್‌ಡಿಪಿಐ ಹಾಗೂ ಬಿಜೆಪಿ ಬದ್ಧ ವೈರಿಗಳು. ಆದರೆ ಎಸ್‌ಡಿಪಿಐನಿಂದ ಒಳ ಏಟು ಸಿಗುವುದು ಕಾಂಗ್ರೆಸ್‌ಗೆ ಎಂಬುದು ಕಾಂಗ್ರೆಸ್‌ನಲ್ಲೇ ಮಾತುಗಳು ಕೇಳಿಬರುತ್ತಿದ್ದವು. ಇದೇ ಕಾರಣಕ್ಕೆ ಕಾಂಗ್ರೆಸ್‌ ನಾಯಕರು ಪಿಎಫ್‌ಐ ನಿಷೇಧವನ್ನು ಅತ್ಯಂತ ಹರ್ಷದಿಂದ ಸ್ವಾಗತಿಸುತ್ತಿದ್ದಾರೆ.

ಪಿಎಫ್‌ಐ ಕಾರ್ಯಕರ್ತರ ಪ್ರಭಾವ

ಮೇಲ್ನೋಟಕ್ಕೆ ಎಸ್‌ಡಿಪಿಐ ಹಾಗೂ ಪಿಎಫ್‌ಐ ಎರಡೂ ಒಂದೇ ಎನ್ನಲಾಗುತ್ತದೆ. ಆದರೆ ತಾಂತ್ರಿಕವಾಗಿ ಪಿಎಫ್‌ಐಗಿಂತಲೂ ಎಸ್‌ಡಿಪಿಐ ಭಿನ್ನ. ಪಿಎಫ್‌ಐ ಸಾಮಾನ್ಯ ಸಂಘಟನೆಯಾಗಿದ್ದರೆ ಎಸ್‌ಡಿಪಿಐ ಎನ್ನುವುದು ರಾಷ್ಟ್ರೀಯ ಚುನಾವಣಾ ಆಯೋಗದಲ್ಲಿ ನೋಂದಾಯಿತ ರಾಜಕೀಯ ಪಕ್ಷ.

ದೇಶಾದ್ಯಂತ ಭಯೋತ್ಪಾದಕ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ 2001ರಲ್ಲಿ ನಿಷೇಧ ಮಾಡಲಾದ ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ(ಸಿಮಿ) ಪದಾಧಿಕಾರಿಗಳು, ಕಾರ್ಯಕರ್ತರೇ ನಂತರ ಕೆಎಫ್‌ಡಿ ಸೇರಿ ವಿವಿಧ ಹೆಸರುಗಳಲ್ಲಿ ಸಂಘಟನೆ ಆರಂಭಿಸಿದರು. ಆನಂತರ ಇವೆಲ್ಲವನ್ನೂ ಸೇರಿಸಿ ಪಿಎಫ್‌ಐ ಮಾಡಲಾಯಿತು. ಆದರೆ ಎಸ್‌ಡಿಪಿಐ ಮುಖ್ಯವಾಗಿ ಕೇರಳದಲ್ಲಿ ಅಬ್ದುಲ್‌ ನಾಸಿರ್‌ ಮದನಿ ಸ್ಥಾಪಿಸಿದ್ದ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ(ಪಿಡಿಪಿ) ಸಂಘಟನೆಯಿಂದ ಕಾರ್ಯಕರ್ತರನ್ನು ಹೆಚ್ಚು ಸೆಳೆಯಿತು. ಆನಂತರ ಬೇರೆ ಬೇರೆ ರಾಜ್ಯಗಳಲ್ಲಿ ವ್ಯಾಪಿಸಿತು.

ಕರ್ನಾಟಕದಲ್ಲಿ ಪಿಎಫ್‌ಐ ಕಾರ್ಯಕರ್ತರೇ ಎಸ್‌ಡಿಪಿಐನಲ್ಲೂ ಸಕ್ರಿಯವಾಗಿದ್ದರು ಎಂದು ರಾಜಕೀಯ ವಲಯದಲ್ಲಿ ಮಾತುಗಳಿವೆ. ಪಿಎಫ್‌ಐಯಲ್ಲಿ ಸಾಮಾನ್ಯ ಕಾರ್ಯಕರ್ತರಾಗಿರುವವರು ಎಸ್‌ಡಿಪಿಐಯಲ್ಲಿ ಪದಾಧಿಕಾರಿಯಾಗಿರುತ್ತಾರೆ. ಇದೀಗ ಪಿಎಫ್‌ಐ ಬ್ಯಾನ್‌ ಆಗಿರುವುದರಿಂದ, ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳ ಕಾಂಗ್ರೆಸ್‌ ನಾಯಕರು ನಿಟ್ಟುಸಿರು ಬಿಟ್ಟಿದ್ದಾರೆ. ತಮ್ಮ ಮತ ಬ್ಯಾಂಕ್‌ಗೆ ಲಗ್ಗೆ ಹಾಕಲು ಬರುತ್ತಿದ್ದ ಎಸ್‌ಡಿಪಿಐ ಶಕ್ತಿ ಉಡುಗಿರುವುದರಿಂದ ತಮ್ಮ ಗೆಲುವು ಹೆಚ್ಚು ಹತ್ತಿರ ಎಂದು ಭಾವಿಸುತ್ತಿದ್ದಾರೆ.

ಎಸ್‌ಡಿಪಿಐ ಮತ್ತಷ್ಟು ಬಲಶಾಲಿ ಆಗಲೂಬಹುದು

ಕೇಂದ್ರ ಸರ್ಕಾರ ಪಿಎಫ್‌ಐ ಸಂಘಟನೆಯನ್ನು ಬ್ಯಾನ್‌ ಮಾಡಿದೆಯಾದರೂ ಎಸ್‌ಡಿಪಿಐ ಹೆಸರನ್ನು ಉಲ್ಲೇಖಿಸಿಲ್ಲ. ಇದು ಚುನಾವಣಾ ಆಯೋಗದಿಂದ ಆಗಬೇಕಿರುವ ಕೆಲಸ. ಈಗ ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಪಿಎಫ್‌ಐ ಮೇಲೆ ಆರೋಪಗಳಿದ್ದರೂ, ನೇರವಾಗಿ ಎಸ್‌ಡಿಪಿಐ ಮೇಲೆ ಇಲ್ಲ. ಹೀಗಾಗಿ ಮುಂದಿನ ಚುನಾವಣೆಯಲ್ಲೂ ಎಸ್‌ಡಿಪಿಐ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ.

ಇದೀಗ ಪಿಎಫ್‌ಐ ನಿಷೇಧ ಮಾಡಿರುವುದರಿಂದ ಅದರಲ್ಲಿನ ಪ್ರಮುಖ ಪದಾಧಿಕಾರಿಗಳು ಬಹಿರಂಗವಾಗಿ ಚಟುವಟಿಕೆಗಳಲ್ಲಿ ಭಾಗವಹಿಸಲಾಗದು. ಅನೇಕರು ಬಂಧನಕ್ಕೂ ಒಳಗಾಗಬಹುದು. ಆದರೆ ನೇರವಾಗಿ ಪದಾಧಿಕಾರಿಗಳು ಆಗಿರದ ಬಹುದೊಡ್ಡ ಕಾರ್ಯಕರ್ತರ ತಂಡ ಪಿಎಫ್‌ಐಗೆ ಇದೆ. ಇದೀಗ ಪಿಎಫ್‌ಐ ಬ್ಯಾನ್‌ ಆಗಿರುವುದರಿಂದ ಅವರೆಲ್ಲರೂ ನೇರವಾಗಿ ಎಸ್‌ಡಿಪಿಐ ಜತೆಗೆ ಕೆಲಸ ಮಾಡಬಹುದು. ಇದರಿಂದ ಕಾಂಗ್ರೆಸ್‌ ಸಂಕಷ್ಟ ಮತ್ತಷ್ಟು ಹೆಚ್ಚಬಹುದು ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಪಿಎಫ್‌ಐ ಬ್ಯಾನ್‌ ಮಾಡಿದ್ದರಿಂದ ಕಾಂಗ್ರೆಸ್‌ಗೆ ಹೆಚ್ಚು ಖುಷಿ ಆಗಿದೆ. ಆದರೆ ಇದು ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಎಷ್ಟು ಲಾಭವಾಗುತ್ತದೆ ಎನ್ನುವುದು, ಎಸ್‌ಡಿಪಿಐನ ಮುಂದಿನ ರಾಜಕೀಯ ನಡೆ ಹಾಗೂ ಎಸ್‌ಡಿಪಿಐ ಬಗ್ಗೆ ಚುನಾವಣಾ ಆಯೋಗ ಕೈಗೊಳ್ಳಬಹುದಾದ ನಿಲುವಿನ ಮೇಲೆ ಆಧಾರಿತವಾಗಿದೆ.

ಇದನ್ನೂ ಓದಿ | PFI Banned | ಭಾರತದಲ್ಲಿ ಮತ್ತ್ಯಾವ ಸಂಘಟನೆಗಳು ನಿಷೇಧವಾಗಿವೆ? ಇಲ್ಲಿದೆ ನೋಡಿ ಪಟ್ಟಿ

Exit mobile version