Site icon Vistara News

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ; ರಾಜ್ಯದ ವಿವಿಧೆಡೆ ಶನಿವಾರವೂ ಮುಂದುವರಿದ ಕಾಂಗ್ರೆಸ್‌ ಪ್ರತಿಭಟನೆ

ಬೆಂಗಳೂರು: ಮಡಿಕೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ವಿರೋಧಿಸಿ ಶನಿವಾರವೂ ರಾಜ್ಯದ ವಿವಿಧೆಡೆ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಹಲವೆಡೆ ಸಂಚಾರ ತಡೆ, ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಮಾಜಿ ಸಿಎಂಗೆ ಭದ್ರತೆ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ, ಕೃತ್ಯ ಎಸಗಿದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯ ಮಾಡಿದರು.

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ತಡೆ
ಮಾಜಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ವಿರೋಧಿಸಿ ರಾಮನಗರದ ಐಜೂರು ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಿ, ಬಿಜೆಪಿ ಹಾಗೂ ಆರ್‌ಎಸ್ಎಸ್ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಲಾಯಿತು, ಕಾಂಗ್ರೆಸ್ ಕಚೇರಿಯಿಂದ ಐಜೂರು ವೃತ್ತದವರೆಗೂ ನೂರಾರು ಕಾರ್ಯಕರ್ತರು ಸಂಚಾರ ತಡೆ ನಡೆಸಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದರಿಂದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟಿತು.

ಮಾಜಿ ಸಿಎಂಗೆ ರಕ್ಷಣೆ ಒದಗಿಸುವಲ್ಲಿ ಪೊಲೀಸರ ವೈಫಲ್ಯ
ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದ ಪ್ರಕರಣ ಖಂಡಿಸಿ ತುಮಕೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಭದ್ರಮ್ಮಚೌಟ್ರಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು. ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ, ಮಾಜಿ ಸಿಎಂ ಸಿದ್ದರಾಮಯ್ಯಗೆ ರಕ್ಷಣೆ ಒದಗಿಸುವಲ್ಲಿ ಪೊಲೀಸರ ವೈಫಲ್ಯ ಎದ್ದುಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮೊಟ್ಟೆ ಎಸೆದ ಬಿಜೆಪಿ ಕೀಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಾಗೂ ಬಜರಂಗದಳ ಸಂಘಟನೆಯನ್ನು ಬ್ಯಾನ್ ಮಾಡುವಂತೆ ಆಗ್ರಹಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ, ಮಾಜಿ ಶಾಸಕ ಶಫಿ ಅಹಮದ್, ಪಾಲಿಕೆ ಸದಸ್ಯ ನಯಾಜ್ ಅಹಮದ್ ಸೇರಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.

ಇದನ್ನೂ ಓದಿ | ಮೊಟ್ಟೆ ಎಸೆದ ಸಂಪತ್‌ ಕೈ ಕಾರ್ಯಕರ್ತ ಅಲ್ಲ, ಬಿಜೆಪಿ ಬೆಂಬಲಿಗ: ಗಣವೇಷ, ಚಿತ್ರ ದಾಖಲೆ ನೀಡಿದ ಕಾಂಗ್ರೆಸ್‌

ತುಮಕೂರಿನಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಯಿತು.

ಬಾಗಲಕೋಟೆಯಲ್ಲಿ ಮಾನ ಸರಪಳಿ ನಿರ್ಮಿಸಿ ಆಕ್ರೋಶ
ಮಾಜಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ವಿರೋಧಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಮಾಜಿ‌ ಸಚಿವ ಎಚ್.ವೈ.ಮೇಟಿ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಹಾಗೆಯೇ ಜಿಲ್ಲೆಯ ಮುಧೋಳ, ಜಮಖಂಡಿ ಹಾಗೂ ತೇರದಾಳ ತಾಲೂಕು ಕೇಂದ್ರಗಳಲ್ಲೂ ಕಾರ್ಯಕರ್ತರು ಬಿಜೆಪಿ‌ ಸರ್ಕಾರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಬಾಗಲಕೋಟೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಲಿಂಗಸುಗೂರಿನಲ್ಲಿ 2 ಸಾವಿರ ಮೊಟ್ಟೆ ವಿತರಣೆ
ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು 2 ಸಾವಿರ ಮೊಟ್ಟೆ ವಿತರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಪಟ್ಟಣದ ವಾರ್ಡ್ 15ರಲ್ಲಿ ಮನೆ ಮನೆಗೆ ಮೊಟ್ಟೆ ವಿತರಿಸಿದ ಕಾರ್ಯಕರ್ತರು ಮೊಟ್ಟೆ ಪೌಷ್ಟಿಕ ಆಹಾರ, ವ್ಯರ್ಥ ಮಾಡಬೇಡಿ ಎಂದು ಘೋಷಣೆ ಕೂಗುವ ಮೂಲಕ ಜಾಥಾ ನಡೆಸಿದರು.

ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿ
ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೃಣಾಲ್ ಹೆಬ್ಬಾಳ್ಕರ್, ಶಾಸಕ ಫಿರೋಜ್ ಸೇಠ್ ಪುತ್ರ ಫೈಜಾನ್ ಸೇಠ್ ಸೇರಿ ಹಲವರು ಕೈಯಲ್ಲಿ ಮೊಟ್ಟೆ ಹಿಡಿದು ಆಕ್ರೋಶ ಹೊರಹಾಕಿದರು. ‌

ಇದನ್ನೂ ಓದಿ | Non Veg | ದೇವಸ್ಥಾನ ಭೇಟಿ ಮುನ್ನ ನಾಟಿಕೋಳಿ ತಿಂದಿದ್ದರೇ ಸಿದ್ದರಾಮಯ್ಯ?; ಮತ್ತೆ ವಿವಾದ ಸೃಷ್ಟಿ!

ಮೃಣಾಲ್ ಹೆಬ್ಬಾಳ್ಕರ್ ಮಾತನಾಡಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದು ಅಪಮಾನ ಮಾಡಿರುವುದು ರಾಜ್ಯದ ಜನರ ಮೇಲೆ ಮೊಟ್ಟೆ ಎಸೆದಂತೆ. ಬಿಜೆಪಿಯವರು ಮೊದಲು ಮಳೆಯಿಂದ ಬಿದ್ದ ಮನೆಗಳಿಗೆ ಪರಿಹಾರ ಕೊಡಬೇಕು, ರಾಜ್ಯದಲ್ಲಿ ಪ್ರತಿ ಹಂತದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಬಿಜೆಪಿ ಕಾರ್ಯಕರ್ತರಿಗೆ ಸಮಾಜದ ಬಗ್ಗೆ ನಿಜವಾದ ಕಳಕಳಿ ಇದ್ದರೆ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲಿ ಎಂದು ಹೇಳಿದರು.

ಸಿಂದಗಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸಿಂದಗಿಯಲ್ಲಿ ರಸ್ತೆ ತಡೆದು ಪ್ರತಿಭಟನೆ
ವಿಜಯಪುರ ಜಿಲ್ಲೆಯ ಸಿಂದಗಿ ನಗರದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು ರಸ್ತೆ ತಡೆದು ಪ್ರತಿಭಟನೆ ನಡೆಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಮಾತನಾಡಿ, ವಿಪಕ್ಷ ನಾಯಕರ ಕಾರಿನ ಮೇಲೆ ಮೊಟ್ಟೆ ಹೊಡೆದು ಅವಮಾನಗೊಳಿಸಿದ್ದು ಖಂಡನೀಯ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೋಮು ಗಲಭೆ ಎಬ್ಬಿಸಿದ್ದು ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಕಾರ್ಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ವಕ್ತಾರ ಎಸ್.ಎಮ್.ಪಾಟೀಲ ಗಣಿಹಾರ‌ ಮಾತನಾಡಿ, ವಿಪಕ್ಷ ನಾಯಕ ಎಂಬ ಹುದ್ದೆಗೆ ಮುಖ್ಯಮಂತ್ರಿಗಿರುವ ಗೌರವ ಇದೆ. ಆದರೆ ಅಹಿಂದ ನಾಯಕರ ಕಾರಿನ ಮೇಲೆ ಮೊಟ್ಟೆ ಎಸೆದು ಅವಮಾನ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಇಂತಹ ಕುಚೋದ್ಯದ ಕೆಲಸ ಮಾಡಲಾಗಿದೆ ಎಂದು ಹೇಳಿದರು. ಪುರಸಭೆ ಅಧ್ಯಕ್ಷ ಶಾಂತವೀರ ಮನಗೂಳಿ, ಉಪಾಧ್ಯಕ್ಷ ಹಾಸೀಂ ಆಳಂದ, ಕಾಂಗ್ರೆಸ್ ಮುಖಂಡರಾದ ಸುರೇಶ ಪೂಜಾರಿ, ಚನ್ನು ವಾರದ, ರಮೇಶ ಬಂಟನೂರ, ಶರಣಮ್ಮ ರಾಠೋಡ, ನೂರ್ ಅಹ್ಮದ್‌ ಅತ್ತಾರ, ಬಸವರಾಜ ಶಿರಸಗಿ, ರಮೇಶ ನಡುವಿನಕೇರಿ, ಅನೀಲ ಉಡಚಾಣ, ಸಂತೋಷ ಹರನಾಳ ಮತ್ತಿತರರು ಇದ್ದರು.

ಇದನ್ನೂ ಓದಿ | Egg episode| ಆಪರೇಷನ್‌ ಕಮಲ ಶಾಸಕರಿಗಷ್ಟೇ ಅಲ್ಲ, ಪುಂಡರಿಗೂ ಇದ್ಯಾ? ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

Exit mobile version