ರಾಜೇಶ್ ಪುತ್ತೂರು, ಮಂಗಳೂರು
ದೇಶದಲ್ಲೇ ಪ್ರಸಿದ್ಧಿ ಪಡೆದಿರುವ ಹಾಗೂ ರಾಜ್ಯದಲ್ಲೇ ಅತಿ ಹೆಚ್ಚು ಕಾಣಿಕೆ ಸಂಗ್ರಹವಾಗುವ ಮುಜರಾಯಿ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಇದೇ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಪ್ರಮುಖವಾಗಿ ಕೃಷಿಯನ್ನೇ ಅವಲಂಬಿಸಿರುವ ಜನರು ಹೆಚ್ಚಾಗಿರುವ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ ಅಡಕೆ.
ಕೋಕೋ ಬೆಳೆಯುವುದರ ಜತೆಗೆ ಭತ್ತ, ತೆಂಗು, ವೆನಿಲಾ , ಕಾಳುಮೆಣಸು ಮೊದಲಾದ ಉಪಬೆಳೆಯನ್ನು ಬೆಳೆಯಲಾಗುತ್ತದೆ. ಸುಳ್ಯ ನಗರ ಹೊರತು ಪಡಿಸಿದರೆ ಇಲ್ಲಿ ವಾಣಿಜ್ಯ ವ್ಯವಹಾರಗಳ ಪ್ರಮುಖ ಕೇಂದ್ರ ಎಂದರೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ. ಸುಳ್ಯ, ಕಡಬ ಎರಡು ತಾಲೂಕನ್ನು ಒಳಗಂಡಿರುವ ಸುಳ್ಯ ವಿಧಾನಸಭಾ ಕ್ಷೇತ್ರ, ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಕೂಡಾ ಹೌದು. ಒಕ್ಕಲಿಗ ಗೌಡ ಹಾಗೂ ಬಂಟ ಸಮುದಾಯದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಈ ಕ್ಷೇತ್ರ ಸ್ವಾತಂತ್ರ್ಯ ಪೂರ್ವದಲ್ಲಿ, ಅಂದರೆ 1837ರಲ್ಲಿ ಮಡಿಕೇರಿ, ಪುತ್ತೂರು ಭಾಗದ ಜನರನ್ನು ಒಳಗೊಂಡಿದ್ದ ಅಮರ ಸುಳ್ಯ ಕ್ರಾಂತಿಯ ಮೂಲಕ ಬ್ರಿಟಿಷರನ್ನು ಸೋಲಿಸಿದ ಇತಿಹಾಸ ಹೊಂದಿದೆ. ರಾಜಕೀಯವಾಗಿ ಬೆಳೆದ ಇದೇ ಕ್ಷೇತ್ರದ ಡಿ.ವಿ. ಸದಾನಂದ ಗೌಡರು ರಾಜ್ಯದ ಮುಖ್ಯಮಂತ್ರಿಗಳಾಗಿ ಕೇಂದ್ರ ಸಚಿವರೂ ಆಗಿದ್ದವರು. 2011ರ ಜನಗಣತಿ ಆಧಾರಲ್ಲಿ ಇಲ್ಲಿ ಶೇಕಡಾ 85ಕ್ಕೂ ಅಧಿಕ ಹಿಂದೂ ಸಮುದಾಯದ ಜನರೇ ಇರುವ ಕ್ಷೇತ್ರವಾಗಿದ್ದು ಶೇ.13 ಮುಸ್ಲಿಂ ಹಾಗೂ ಶೇ. 1.5 ಕ್ರೈಸ್ತರು ನೆಲಸಿದ್ದಾರೆ.
ಸೋಲಿಲ್ಲದ ಸರದಾರ ಎಸ್. ಅಂಗಾರ
ಸತತ ಆರು ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಎಸ್. ಅಂಗಾರ ಇಲ್ಲಿ ಸೋಲಿಲ್ಲದ ಸರದಾರ ಎಂದೇ ಕರೆಸಿಕೊಂಡಿದ್ದಾರೆ. ಹಿಂದು ಮತದಾರರೇ ಹೆಚ್ಚಾಗಿರುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಎಸ್. ಅಂಗಾರ ಗೆದ್ದು ಬಂದಿದ್ದು ಕೇವಲ ಹಿಂದುತ್ವದ ವಿಚಾರದಲ್ಲಿ ಹೊರತು ಯಾವುದೇ ಅಭಿವೃದ್ದಿ ವಿಚಾರದಲ್ಲಿ ಅಲ್ಲ ಎನ್ನುವುದನ್ನು ಜನರೇ ಒಪ್ಪಿಕೊಳ್ಳುತ್ತಾರೆ. ಸತತ ಆರು ಬಾರಿ ಎಂದರೆ ಸರಿ ಸುಮಾರು 30 ವರ್ಷದಿಂದ ಶಾಸಕರಾಗಿರುವ ಅಂಗಾರ, ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಬಹಳವೇ ಹಿಂದಿದ್ದಾರೆ ಎನ್ನುವ ಆರೋಪವಿದೆ.
ಮೂಲಭೂತ ಸೌಕರ್ಯಗಳ ಕೊರತೆ, ಸುಳ್ಯ ನಗರದಲ್ಲಿನ ಒಳಚರಂಡಿ ವ್ಯವಸ್ಥೆ, ರಸ್ತೆಗಳು, ಕುಡಿಯುವ ನೀರಿನ ವ್ಯವಸ್ಥೆ ಹೀಗೆ ನೂರಾರು ಕೆಲಸಗಳು ಇನ್ನೂ ಜನರ ಬೇಡಿಕೆಯಾಗಿಯೇ ಉಳಿದಿವೆ. ಆದರೆ ಚುನಾವಣೆ ಬಂದಾಗ ಪಕ್ಷಕ್ಕೆ ಮಣೆ ಹಾಕುವ ಮತದಾರರು ಪ್ರತಿಬಾರಿಯೂ ಎಸ್. ಅಂಗಾರ ಅವರನ್ನ ಗೆಲ್ಲಿಸಿಕೊಂಡು ಬಂದಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೀಡಿದ 180 ಕೋಟಿ ರೂ. ಅನುದಾನದ ಕಾಮಗಾರಿಯನ್ನು ಸಮಪರ್ಕವಾಗಿ ವಿನಿಯೋಗಿಸುವಲ್ಲೂ ಶಾಸಕರು ಎಡವಿದ್ದಾರೆ ಎನ್ನುವ ಆರೋಪವಿದೆ. ಸುಬ್ರಹ್ಮಣ್ಯ ಹಾಗೂ ಮಡಿಕೇರಿ ನಡುವಿನ ಅರಂತೋಡು – ಎಲಿಮಲೆ ರಸ್ತೆಯನ್ನು ಅಭಿವೃದ್ಧಿ ಮಾಡಿ ಎನ್ನುವ ಬೇಡಿಕೆ ಹಲವಾರು ವರ್ಷಗಳಿಂದ ಬಾಕಿ ಇದೆ.
ಗ್ರಾಮೀಣ ಭಾಗದಲ್ಲಿ ಸಂಪರ್ಕ ಸೇತುವೆಗಳಿಲ್ಲದೇ ಜನರು ಇಂದಿಗೂ ಪರದಾಡುತ್ತಾ ಇದ್ದಾರೆ. ಎಸ್. ಅಂಗಾರ ವಿರುದ್ಧ ಸ್ಪರ್ಧೆ ಮಾಡಿರುವ ಕಾಂಗ್ರೆಸ್ ಅಭ್ಯರ್ಥಿ ವೈದ್ಯರಾಗಿರುವ ಡಾ. ರಘು ಸಮರ್ಥ ಅಭ್ಯರ್ಥಿಯಾಗಿದ್ದರೂ, ಗೆಲುವು ಸಾದ್ಯವಾಗಿಲ್ಲ. ಜನರಿಗೆ ಏನೇ ಆಕ್ರೋಶಗಳಿದ್ದರೂ ಅದು ಅಂಗಾರ ಅವರ ಗೆಲುವಿಗೆ ಅಡ್ಡಿಯಾಗಿಲ್ಲ ಎನ್ನುವುದು ವಿಶೇಷ.
ಮೊದಲ ಬಾರಿಗೆ ಸಚಿವ ಸ್ಥಾನ
ಆರು ಬಾರಿ ಜಯಿಸಿದ್ದರೂ ಅಂಗಾರ ಅವರಿಗೆ ಸಚಿವ ಸ್ಥಾನ ಸಿಕ್ಕಿರಲೇ ಇಲ್ಲ. ಬಿಜೆಪಿ ಸರ್ಕಾರ ರಚನೆಯಾದಾಗಲೆಲ್ಲ ಅಂಗಾರ ಹೆಸರು ಕೇಳಿಬರುತ್ತಿತ್ತಾದರೂ ಅಂತಿಮ ಹಂತದಲ್ಲಿ ಕೈತಪ್ಪುತ್ತಿತ್ತು. ಅತ್ಯಂತ ಹಿರಿಯ ನಾಯಕನಿಗೆ ಸಚಿವ ಸ್ಥಾನ ನೀಡಬೇಕು ಎಂದು ಅಂಗಾರ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದರಾದರೂ, ಪಕ್ಷ ನಿಷ್ಠ ಅಂಗಾರ ಈ ಕುರಿತು ಒಂದು ಬಾರಿಗೂ ಆಕ್ಷೇಪ ಎತ್ತಿರಲಿಲ್ಲ. ಅಂಗಾರ, ಸುಳ್ಯದ ಬಂಗಾರ ಎಂಬ ಜನರ ಮಾತಿಗೆ ತಕ್ಕಂತೆ ಈ ವಿಷಯದಲ್ಲಿ ಮೌನ ಬಂಗಾರ ಎಂದು ಸುಮ್ಮನೆ ಕುಳಿತಿದ್ದರು. ಯಡಿಯೂರಪ್ಪ ನೇತೃತ್ವದಲ್ಲಿ ಸಂಪುಟ ರಚನೆಯಾದಾಗಲೂ ಎಂದಿನಂತೆ ಹೆಸರು ಚಾಲ್ತಿಯಲ್ಲಿತ್ತು. ಆದರೆ 2021ರಲ್ಲಿ ಸಚಿವರಾಗುವ ಮೂಲಕ, ಸುಳ್ಯ ಕ್ಷೇತ್ರದಿಂದ ಮೊದಲ ಸಚಿವ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಬಂದರು, ಮೀನುಗಾರಿಕೆ, ಒಳನಾಡು ಜಲಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
2023ರಲ್ಲಿ ಆಕಾಂಕ್ಷಿಗಳು
ಸದ್ಯದ ಪರಿಸ್ಥಿತಿಯಲ್ಲಿ ಸಚಿವ ಎಸ್. ಅಂಗಾರ ಬಿಜೆಪಿಯಲ್ಲೇ ಮತ್ತೊಮ್ಮೆ ಸ್ಪರ್ಧೆ ಮಾಡಿದರೆ ಕಾಂಗ್ರೆಸ್ ನಿಂದ ಮತ್ತೆ ಡಾ. ರಘು ಅವರೇ ಸ್ಪರ್ಧೆ ಮಾಡಲಿದ್ದಾರೆ. ಇದುವರೆಗೂ ಹಿಂದುತ್ವದ ಟ್ರಂಪ್ ಕಾರ್ಡ್ ವರ್ಕೌಟ್ ಆಗುವ ಮೂಲಕ ಬಿಜೆಪಿಯ ಎಸ್ . ಅಂಗಾರ ಸತತವಾಗಿ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಆದರೆ 2023ರ ಚುನಾವಣೆಯಲ್ಲಿ ಅಂಗಾರ ಅವರಿಗೆ ದೊಡ್ಡ ಸವಾಲು ಎದುರಾಗಿದ್ದು, ಒಂದು ಕಡೆ ಅಭಿವೃದ್ದಿ ವಿಚಾರದಲ್ಲಿ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ವಿರುದ್ದ ಸಮರ ಸಾರಿದ್ದಾರೆ.
ಮತ್ತೊಂದು ಕಡೆ ಜುಲೈ 26ರಂದು ಕೊಲೆಯಾದ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯನ ವಿಚಾರದಲ್ಲಿ ನಡೆದುಕೊಂಡ ರೀತಿಯೂ ಹಿಂದು ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಹಿಂದುತ್ವ ಹಾಗೂ ಅಭಿವೃದ್ದಿ ಎರಡೂ ವಿಚಾರಗಳು ಅಂಗಾರ ಅವರಿಗೆ ಹಿನ್ನಡೆಯಾಗಲಿದೆ ಎಂಬ ಲೆಕ್ಕಾಚಾರ ನಡೆದಿದೆ. ಕೇವಲ ಶಾಸಕರು ಮಾತ್ರವಲ್ಲದೆ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರ ಮೇಲೂ ಇಲ್ಲಿನ ಕಾರ್ಯಕರ್ತರಿಗೆ ಆಕ್ರೋಶ ಇದೆ. ಈ ಆಕ್ರೋಶವನ್ನು ಶಮನ ಮಾಡುವ ನಿಟ್ಟಿನಲ್ಲಿ ಬಿಜೆಪಿ ಸಾಕಷ್ಟು ಪ್ಲ್ಯಾನ್ ರೂಪಿಸಿದೆ. ಅಭಿವೃದ್ಧಿ ವಿಚಾರ ಒಂದೆಡೆಯಾದರೆ, ಅಂಗಾರ ಅವರ ಸರಳ ಸಜ್ಜನಿಕೆ ಕುರಿತು ಸಾಮಾನ್ಯ ಜನರಲ್ಲಿ ಅಭಿಮಾನವಿದೆ.
ಒಂದು ವೇಳೆ ಕಾರ್ಯಕರ್ತರನ್ನು ಮತ್ತೆ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ದಿ ಹಾಗೂ ಹಿಂದುತ್ವವನ್ನು ಉಳಿಸುವ ಭರವಸೆಯ ಜತೆಗೆ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಬಿಜೆಪಿಗೆ ಪ್ಲಸ್ ಆಗಬಹುದು. ಒಂದು ಕಡೆ ಅಭಿವೃದ್ದಿ ವಿಚಾರ ಹಾಗೂ ಮತ್ತೊಂದು ಕಡೆ ಬಿಜೆಪಿ ಮೇಲೆ ಇರುವ ಆಕ್ರೋಶ ಇವೆರಡನ್ನೂ ಸಮರ್ಥವಾಗಿ ಬಳಸಿಕೊಂಡಲ್ಲಿ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಭದ್ರ ಕೋಟೆಯನ್ನು ಛಿದ್ರ ಮಾಡುವ ಮೂಲಕ ಸೋಲಿಲ್ಲದ ಸರದಾರರನ ಸೋಲಿಲ್ಲದ ಓಟಕ್ಕೆ ಕಡಿವಾಣ ಹಾಕಬಹುದು.
2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಎಸ್. ಅಂಗಾರ (ಬಿಜೆಪಿ)
2. ಡಾ. ರಘು (ಕಾಂಗ್ರೆಸ್)
ಇದನ್ನೂ ಓದಿ | ಎಲೆಕ್ಷನ್ ಹವಾ | ಮಂಗಳೂರು ಉತ್ತರ | ಕೈಗಾರಿಕೆಗಳ ಕ್ಷೇತ್ರದಲ್ಲಿ ಹಿಂದುತ್ವವೇ ಟ್ರಂಪ್ ಕಾರ್ಡ್ ಆಗುವ ಮುನ್ಸೂಚನೆ